Russia - Ukraine War: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಣ್ವಸ್ತ್ರ ಬಳಸುವ ಬಗ್ಗೆ ಬೆದರಿಕೆ ಹಾಕಿದ್ದರು. ಈ ಬಗ್ಗೆ ಮಾತನಾಡಿದ ಅಮೆರಿಕಾ ಅಧ್ಯಕ್ಷ ಜೋ ಬೈಡನ್, ಪುಟಿನ್ ಹಾಕಿರುವ ಬೆದರಿಕೆ ತಮಾಷೆಯಲ್ಲ ಎಂದಿದ್ದಾರೆ.
ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ರಷ್ಯಾ ಉಕ್ರೇನ್ ಯುಧ್ಧದ ಕುರಿತು ಮಾತನಾಡಿದ್ದಾರೆ. ರಷ್ಯಾ ಅಣ್ವಸ್ತ್ರ ಬಳಸುವ ಬೆದರಿಕೆ ಹಾಕಿದೆ, ಈ ಬೆದರಿಕೆ ತಮಾಷೆಯಲ್ಲ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಣ್ವಸ್ತ್ರ ಬಳಕೆ ಮಾಡಲು ಮುಂದಾಗುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ. ಯುರೋಪ್ ಮತ್ತು ಪಾಶ್ಚಿಮಾತ್ಯ ದೇಶಗಳ ಸಹಾಯದಿಂದ ರಷ್ಯಾವನ್ನು ಉಕ್ರೇನ್ ಹಿಮ್ಮೆಟ್ಟಿಸಿದೆ. ಇದೇ ರಷ್ಯಾ ಅಧ್ಯಕ್ಷ ಪುಟಿನ್‌ರನ್ನು ಅಣ್ವಸ್ತ್ರ ಪ್ರಯೋಗಿಸಲು ಮುಂದಾಗುವಂತೆ ಮಾಡಿದೆ. ಉಕ್ರೇನ್ ಬಳಿ ಯಾವುದೇ ಅಣ್ವಸ್ತ್ರವಿಲ್ಲ. ಇದ್ದ ಅಣ್ವಸ್ತ್ರಗಳನ್ನು ದಶಕದ ಹಿಂದೆ ರಷ್ಯಾಗೆ ಹಸ್ತಾಂತರಿಸಿದೆ.
ಲೈಮನ್ ಸೋಲು ಅಣುಬಾಂಬ್ ಹಾಕಲು ಪುಟಿನ್‌ಗೆ ಪ್ರೇರೇಪಿಸುತ್ತಾ?:
ಉಕ್ರೇನ್ ವಿರುದ್ಧದ ಯುದ್ಧವನ್ನು ರಷ್ಯಾ ತೀವ್ರಗೊಳಿಸಿದ ನಂತರವೂ ಉಕ್ರೇನ್ ಸೈನ್ಯ ಮುನ್ನಡೆ ಪಡೆಯುತ್ತಿದೆ. ರಷ್ಯಾ ಹಿಡಿತದಲ್ಲಿದ್ದ ಲೈಮನ್ ಪ್ರದೇಶವನ್ನು ಉಕ್ರೇನ್ ಸೈನ್ಯ ಮತ್ತೆ ಗೆದ್ದುಕೊಂಡಿದೆ. ಇದರಿಂದ ಕೋಪಗೊಂಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಣು ಬಾಂಬ್ ಪ್ರಯೋಗಕ್ಕೆ ಮುಂದಾಗಲಿದ್ದಾರ ಎಂಬ ಭಯ ಉಕ್ರೇನ್ ಮತ್ತು ಯುರೋಪ್‌ನ ಉಳಿದ ದೇಶಗಳಿಗೆ ಕಾಡ ತೊಡಗಿದೆ. ರಷ್ಯಾದ ಗಡಿ ಪ್ರದೇಶವನ್ನು ರಕ್ಷಿಸಿಕೊಳ್ಳಲು ಅಣುಬಾಂಬ್ ಪ್ರಯೋಗಕ್ಕೆ ಸಿದ್ಧ. ಇದು ತಮಾಷೆಯಲ್ಲ, ನಾನು ಗಂಭೀರವಾಗಿ ಹೇಳುತ್ತಿದ್ದೇನೆ ಎಂದು ಪುಟಿನ್ ಇತ್ತೀಚೆಗಷ್ಟೇ ಯುರೋಪ್ ಮತ್ತು ಅಮೆರಿಕಾಕ್ಕೆ ಬೆದರಿಕೆ ಹಾಕಿದ್ದರು. ಇದೀಗ, ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ತೀವ್ರ ರೂಪಕ್ಕೆ ತಲುಪಿದ್ದು, ಪುಟಿನ್ ನಿಲುವಿನ ಮೇಲೆ ಭಾರೀ ಚರ್ಚೆ ಆರಂಭವಾಗಿದೆ. ಪುಟಿನ್ ಈಗಾಗಲೇ ಉಕ್ರೇನ್‌ನ ನಾಲ್ಕು ರಾಜ್ಯಗಳನ್ನು ರಷ್ಯಾದ ಪ್ರದೇಶವೆಂದು ಘೋಷಣೆ ಮಾಡಿದ್ದಾರೆ.
ಅಣುಬಾಂಬ್ ಹಾಕುತ್ತೇವೆ ಎಂದು ಪುಟಿನ್ ನೇರವಾಗಿ ಹೇಳದಿದ್ದರೂ, ವಿಧ್ವಂಸಕಾರಿ ಅಸ್ತ್ರ ಪ್ರಯೋಗಿಸಬೇಕಾಗುತ್ತದೆ ಎಂದು ಹೇಳಿದ್ದರು. ಲೈಮನ್ ಪ್ರದೇಶ ಇರುವುದು ಡೋಂಟೆಸ್ಕ್‌ನಲ್ಲಿ. ಡೋಂಟೆಸ್ಕ್‌ನ್ನು ರಷ್ಯಾದ ಭಾಗ ಎಂದು ಪುಟಿನ್ ಈಗಾಗಲೇ ಘೋಷಣೆ ಮಾಡಿದ್ದಾರೆ. ಹೀಗಿರುವಾಗ ಉಕ್ರೇನ್ ಸೈನ್ಯ ಪುಟಿನ್ ಘೋಷಿತ ರಷ್ಯಾದ ಭಾಗವಾದ ಡೋಂಟೆಸ್ಕ್‌ನ ಪ್ರದೇಶವೊಂದನ್ನು ವಶಪಡಿಸಿಕೊಂಡಿರುವುದನ್ನು ರಷ್ಯಾ ಗಡಿ ರಕ್ಷಣೆಯ ಮೇಲಿನ ದಾಳಿ ಎಂದು ಪರಿಗಣಿಸಬಹುದು. ಇದೇ ಕಾರಣಕ್ಕೆ, ಪುಟಿನ್ ಅಣ್ವಸ್ತ್ರ ಬಳಕೆ ಮಾಡುವ ಸಾಧ್ಯತೆಯಿದೆ ಎಂಬ ಭಯ ಮೂಡಿದೆ.
ಇದನ್ನೂ ಓದಿ: ಉಕ್ರೇನ್ ದೇಶದ ನಾಲ್ಕು ರಾಜ್ಯ ರಷ್ಯಾಕ್ಕೆ ಸೇರ್ಪಡೆ, ಒಪ್ಪಂದಕ್ಕೆ ಸಹಿ ಹಾಕಿದ ಪುಟಿನ್!
ರಷ್ಯಾದ ಅಣ್ವಸ್ತ್ರ ನೀತಿ ಏನು?:
1. ರಷ್ಯಾ ಅಥವಾ ರಷ್ಯಾ ಮಿತ್ರ ದೇಶದ ಮೇಲೆ ಬೇರೆ ಯಾವುದಾದರೂ ದೇಶ ಬ್ಯಾಲಿಸ್ಟಿಕ್ ಮಿಸೈಲ್ ಪ್ರಯೋಗ ಮಾಡಿದರೆ ರಷ್ಯಾ ತಿರುಗಿ ಅಣ್ವಸ್ತ್ರ ಪ್ರಯೋಗ ಮಾಡಬಹುದು.
2. ರಷ್ಯಾ ಅಥವಾ ಮಿತ್ರ ದೇಶದ ಮೇಲೆ ಅಣ್ವಸ್ತ್ರ ಪ್ರಯೋಗವಾದರೆ ರಷ್ಯಾ ಅಣ್ವಸ್ತ್ರ ಬಳಸಬಹುದು.
3. ರಷ್ಯಾ ಸರ್ಕಾರದ ಅಥವಾ ಸೇನಾ ನೆಲೆಯ ಮೇಲೆ ಮಾರಕ ದಾಳಿಯಾದ ಪಕ್ಷದಲ್ಲಿ ರಷ್ಯಾ ಅಣ್ವಸ್ತ್ರ ಪ್ರಯೋಗ ಮಾಡಬಹುದು.
4. ರಷ್ಯಾದ ವಿರುದ್ಧ ಮತ್ಯಾವ ದೇಶವಾದರೂ ಯುದ್ಧ ಆರಂಭಿಸಿ, ರಷ್ಯಾದ ಪರಿಸ್ಥಿತಿ ಹತೋಟಿ ಮೀರಿದರೆ ಅಣ್ವಸ್ತ್ರ ಪ್ರಯೋಗ ಮಾಡಬಹುದು.
ಇದನ್ನೂ ಓದಿ: Russia ತಂಟೆಗೆ ಬಂದರೆ ಅಣುಬಾಂಬ್ ಹಾಕಲೂ ಸಿದ್ಧ ಎಂದ Putin: Ukraine ಬೆಂಬಲಕ್ಕೆ ನಿಂತ ದೇಶಗಳಿಗೆ ಬೆದರಿಕೆ
ರಷ್ಯಾ ಮಾಜಿ ಅಧ್ಯಕ್ಷ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿ ಸದಸ್ಯ ಡಿಮಿಟ್ರಿ ಮೆಡ್ವೆಡೆವ್ ಕೂಡ ದೇಶದ ಸುರಕ್ಷತೆಯ ಪ್ರಶ್ನೆ ಬಂದರೆ ರಷ್ಯಾ ಅಣ್ವಸ್ತ್ರ ಪ್ರಯೋಗಿಸಬಹುದು ಎಂದಿದ್ದರು. ರಷ್ಯಾ ಅಧ್ಯಕ್ಷ ಪುಟಿನ್ ಅಣ್ವಸ್ತ್ರ ಪ್ರಯೋಗದ ಬೆದರಿಕೆ ಹಾಕಿದ ಬೆನ್ನಲ್ಲೇ ಮೆಡ್ವೆಡೆವ್ ಈ ಬೆದರಿಕ ಹಾಕಿದ್ದರು. hiಅಮೆರಿಕಾ ಈ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿದೆ. NATO ಮಿತ್ರ ರಾಷ್ಟ್ರಗಳ ತಂಟೆಗೆ ಬಂದರೆ ಸೇನಾ ಕಾರ್ಯಾಚರಣೆ ಮಾಡುವುದಾಗಿ ಅಮೆರಿಕಾ ಕೂಡ ಬೆದರಿಕೆ ಹಾಕಿದೆ. ಆದರೆ ಉಕ್ರೇನ್‌ಗಿನ್ನೂ NATO ಸದಸ್ಯತ್ವ ಸಿಕ್ಕಿಲ್ಲ. ಸದಸ್ಯತ್ವ ಸಿಗಬೇಕೆಂದರೆ ಎಲ್ಲಾ ಸದಸ್ಯ ರಾಷ್ಟ್ರಗಳೂ ಅನುಮತಿ ನೀಡಬೇಕು. ಅಣ್ವಸ್ತ್ರ ಪ್ರಯೋಗದ ಬೆದರಿಕೆಯನ್ನು ಮುಂದಿಟ್ಟು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ತುರ್ತು ಅರ್ಜಿ ಸಲ್ಲಿಸಿದ್ದಾರೆ.