
ಕಾಠ್ಮಂಡು (ಆ.29): ಒಂದು ಕಡೆ ಪ್ರವಾಹದ ಹೊಡೆತಕ್ಕೆ ಸಿಕ್ಕಿ ಅವಶೇಷಗಳಡಿ ಸಿಲುಕಿರುವವರ ರಕ್ಷಣೆಗೆ ಕಾರ್ಯಾಚರಣೆಗಳು ನಡೆಯುತ್ತಿದ್ದರೆ, ಇನ್ನೊಂದು ಕಡೆ ಕೆಲ ಹೃದಯಹೀನರು ಶವಗಳ ಆಭರಣ ಕದಿಯುವ ಕೆಲಸದಲ್ಲಿ ವ್ಯಸ್ತರಾಗಿದ್ದಾರೆ. ಇಂಥ ನೀಚ ಕೃತ್ಯದಲ್ಲಿ ತೊಡಗಿದ್ದ ಇಬ್ಬರನ್ನು ನೇಪಾಳ ಪೊಲೀಸರು ಬಂಧಿಸಿದ್ದಾರೆ. ಯುವಕರಿಬ್ಬರು, ನಾರಾಯಣಿ ನದಿಯಲ್ಲಿ ಕೊಚ್ಚಿಕೊಂಡು ಬಂದಿದ್ದ ಮಹಿಳೆಯೊಬ್ಬರ ದೇಹವನ್ನು ಕಟ್ಟಿಗೆ ತುಂಡನ್ನು ಬಳಸಿಕೊಂಡು ದಡದತ್ತ ಎಳೆದು, ಕೂದಲನ್ನು ಹಿಡಿದುಕೊಂಡು, ಚಿನ್ನದ ಓಲೆಗಳನ್ನು ಬಿಚ್ಚಿಕೊಳ್ಳುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಆ ಇಬ್ಬರನ್ನು ಬಂಧಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತರನ್ನು ಮದನ್ ಗುರುಂಗ್ (25) ಮತ್ತು ಉಮೇಶ್ ಚೌಧರಿ (38) ಎಂದು ಗುರುತಿಸಲಾಗಿದೆ.
ಕಾಠ್ಮಂಡು: ಪ್ರವಾಹಕ್ಕೆ ಸಿಕ್ಕಿ ಮೃತಪಟ್ಟವರ ದೇಹಗಳು ಶೋಧಿಸಿದಷ್ಟೂ ಸಿಗುತ್ತಿದ್ದು, ನೇಪಾಳದ ಶವಾಗಾರಗಳು ಭರ್ತಿಯಾಗಿವೆ. ಪರಿಸ್ಥಿತಿ ನಿಭಾಯಿಸಲೆಂದು ಹೆಣಗಳನ್ನು ಕೆಡದಂತೆ ಇಡಲು ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ. ನುವಾಕೋಟ್, ಧಾಡಿಂಗ್ ಮತ್ತು ನವಲಪರಾಸಿಯ ಚಿತಾಗಾರಗಳಲ್ಲಿ ಜಾಗದ ಕೊರತೆ ಉದ್ಭವಿಸಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ದೇಹಗಳನ್ನು ಪಕ್ಕದ ಜಿಲ್ಲೆಗಳಿಗೆ ರವಾನಿಸಲಾಗಿದೆ. 50 ಶವಗಳನ್ನಿಟ್ಟುಕೊಳ್ಳುವ ಸಾಮರ್ಥ್ಯದ ಚಿತ್ವಾನ್‌ನ ಸ್ಥಳೀಯ ಆಸ್ಪತ್ರೆ ತುಂಬಿರುವ ಕಾರಣ, ಭರತಪುರದಲ್ಲಿರುವ ಬಳಕೆಯಾಗದ ಕಟ್ಟಡದಲ್ಲಿ 250 ಶವಗಳನ್ನಿಡಲು ವ್ಯವಸ್ಥೆ ಮಾಡಲಾಗಿದೆ. ಇದೂ ಭರ್ತಿಯಾದಲ್ಲಿ, ವಿದ್ಯುತ್ ಚಿತಾಗಾರಗಳನ್ನು ಬಳಸಲು ತೀರ್ಮಾನಿಸಲಾಗಿದೆ. ದೇಹಗಳನ್ನು ಗುರುತಿಸಲು, ಅವುಗಳ ಮಾಹಿತಿ ಇರುವ ಕ್ಯುಆರ್ ಕೋಡ್‌ಗಳನ್ನು ಬಳಸಲಾಗುತ್ತಿದೆ. ಸದ್ಯ ದೇಹಗಳನ್ನು 2-6 ಡಿಗ್ರಿ ತಾಪಮಾನದಲ್ಲಿ 10-14 ದಿನಗಳ ಕಾಲ ಶೇಖರಿಸಿಡಲಾಗುತ್ತಿದೆ. ಇನ್ನೂ ದೀರ್ಘಾವಧಿಗೆ ಕಾಪಿಟ್ಟುಕೊಳ್ಳಬೇಕಾಗಿ ಬಂದಲ್ಲಿ ತಾಪಮಾನವನ್ನು ಶೂನ್ಯಕ್ಕಿಂತ ಕೆಳಗಿಳಿಸಬೇಕಾಗುವುದು.
ಕುಶಿನಗರ (ಉ.ಪ್ರ.): ನೇಪಾಳದಿಂದ ಹರಿಯುವ ನದಿಗಳಿಂದ ಭಾರತೀಯ ಅಧಿಕಾರಿಗಳು 7 ಶವಗಳನ್ನು ವಶಪಡಿಸಿಕೊಂಡಿದ್ದಾರೆ, ನೂರಾರು ಜನರನ್ನು ಬಲಿತೆಗೆದುಕೊಂಡ ಮತ್ತು 1,400 ಕ್ಕೂ ಹೆಚ್ಚು ಜನರು ಕಾಣೆಯಾಗಿರುವ ವಿನಾಶಕಾರಿ ಹಠಾತ್ ಪ್ರವಾಹಕ್ಕೆ 70 ಕಿ.ಮೀ. ದೂರದಷ್ಟು ಈ ಶವಗಳು ತೇಲಿ ಬಂದಿರಬಹುದು ಎಂದು ಅಧಿಕಾರಿಗಳು ನಂಬಿದ್ದಾರೆ.
ಉತ್ತರ ಪ್ರದೇಶದ ಮಹಾರಾಜಗಂಜ್ ಮತ್ತು ಕುಶಿನಗರ ಜಿಲ್ಲೆಗಳ ನದಿಗಳಿಂದ ಶವಗಳನ್ನು ಹೊರತೆಗೆಯಲಾಗಿದ್ದು, ಇವೆರಡೂ ನೇಪಾಳ ಗಡಿಯ ಬಳಿ ಇವೆ. ಭಾರತದಲ್ಲಿ ನೀರಿನ ಕೆಳಭಾಗದಲ್ಲಿ ಶವಗಳು ಪತ್ತೆಯಾಗಿರುವುದು, ಈ ವಾರದ ಆರಂಭದಲ್ಲಿ ನೇಪಾಳದ ಕೆಲವು ಭಾಗಗಳನ್ನು ಆವರಿಸಿದ ಪ್ರವಾಹದ ಅಗಾಧ ಶಕ್ತಿಯನ್ನು ಎತ್ತಿ ತೋರಿಸುತ್ತದೆ. ವರದಿಯ ಪ್ರಕಾರ, ಗುರುವಾರ ಮಹಾರಾಜ್‌ಗಂಜ್ ಜಿಲ್ಲೆಯಲ್ಲಿ 4 ಹಾಗೂ ಕುಶಿನಗರದಲ್ಲಿ 3 ಗುರುತಿಸಲಾಗದ ಶವಗಳು ಪತ್ತೆಯಾಗಿವೆ ಎಂದು ಮಹಾರಾಜ್‌ಗಂಜ್ಜಿ ಲ್ಲಾ ಮ್ಯಾಜಿಸ್ಟ್ರೇಟ್ ಗೌರವ್ ಸಿಂಗ್ ಸೊಗರ್ವಾಲ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ