
ಕಾಠ್ಮಂಡು (ಆ.29): ಟಿಬೆಟ್ ಬದಿಯಲ್ಲಿರುವ ನೀರಿನ ಅಣೆಕಟ್ಟು ಮತ್ತೆ ಒಡೆದಿದೆ ಎಂಬ ಮಾಹಿತಿ ಬಂದಿದೆ. ಹೀಗಾಗಿ ಮತ್ತೊಮ್ಮೆ ಪ್ರವಾಹ ಉಂಟಾಗುವ ಸಾಧ್ಯತೆ ಇದ್ದು, ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ನೇಪಾಳ ಸರ್ಕಾರ ಎಚ್ಚರಿಸಿದೆ. ಅಲ್ಲದೆ, ಹಿಂದಿನ ಸ್ಥಳದಲ್ಲೇ ಮತ್ತೆ ಪ್ರವಾಹದ ಆತಂಕ ಸೃಷ್ಟಿ ಆಗಿರುವ ಕಾರಣ ರಕ್ಷಣಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಆದೇಶಿಸಿದೆ.
ಇದೇ ವೇಳೆ, ಟಿಬೆಟ್‌ನ ಗೈರಾಂಗ್‌ನಲ್ಲಿ ಪ್ರವಾಹದ ಅಪಾಯ ಹೆಚ್ಚಿದ ಹಿನ್ನೆಲೆಯಲ್ಲಿ ಚೀನಾ ಕೂಡ ಶುಕ್ರವಾರ ರಕ್ಷಣಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಚೀನಾದ ಜಲಸಂಪನ್ಮೂಲ ಸಚಿವಾಲಯವು ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದು, ಚೋಚೆನ್ ಖೋಲಾ ಮತ್ತು ಪುರೆಪು ತ್ಸಾಂಗ್ಪೊ ನದಿಗಳ ಸಂಗಮದ ಬಳಿ ರೂಪುಗೊಂಡ ಸರೋವರದಿಂದ ಉಂಟಾಗುವ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದೆ. ಈ ನದಿಗಳು ಟಿಬೆಟ್‌ನಲ್ಲಿ ಹುಟ್ಟಿ ಭೋಟೆ ಕೋಶಿ ನದಿ ವ್ಯವಸ್ಥೆಯ ಭಾಗವಾಗಿ ನೇಪಾಳಕ್ಕೆ ಹರಿಯುತ್ತವೆ.
ನೇಪಾಳ ಹೈ ಅಲರ್ಟ್: ಈ ವಾರದ ಆರಂಭದಲ್ಲಿ ನೇಪಾಳದಲ್ಲಿ ಭೀಕರ ಹಠಾತ್ ಪ್ರವಾಹ ಸಂಭವಿಸಿದ ಭೋಟೆ ಕೋಶಿ ಮತ್ತು ತ್ರಿಶೂಲಿ ಪ್ರದೇಶಗಳಲ್ಲಿ ಪುನಃ ನೀರಿನ ಮಟ್ಟ ಹೆಚ್ಚಾಗಿದೆ. ಹೀಗಾಗಿ ಆ ಪ್ರದೇಶದ ಜನರು ಮತ್ತು ರಕ್ಷಣಾ ಕಾರ್ಯಕರ್ತರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನೇಪಾಳದ ಅಧಿಕಾರಿಗಳು ಒತ್ತಾಯಿಸಿದ್ದಾರೆ. ಅದೇ ಸ್ಥಳದಲ್ಲಿ ನೀರಿನ ಮಟ್ಟದಲ್ಲಿನ ಏರಿಕೆಯು ಆ ಪ್ರದೇಶದಲ್ಲಿ ಮತ್ತೊಂದು ಪ್ರವಾಹದ ಅಪಾಯವನ್ನು ಹೆಚ್ಚಿಸಿದೆ ಎಂದು ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಆರ್‌ಆರ್‌ಎಂಎ) ತಿಳಿಸಿದೆ.
ಬುಧವಾರ ರಸುವಾ ಮತ್ತು ಮಧ್ಯ ನೇಪಾಳದ ಇತರ ಭಾಗಗಳಲ್ಲಿ ಭಾರಿ ಪ್ರಮಾಣದ ಹಠಾತ್ ಪ್ರವಾಹ ಉಂಟಾಗಿ ನೂರಾರು ಜನರು ಸಾವನ್ನಪ್ಪಿದರು ಮತ್ತು ವಸಾಹತುಗಳು, ರಸ್ತೆಗಳು, ಸೇತುವೆಗಳು ಮತ್ತು ಜಲವಿದ್ಯುತ್ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿ ಆಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ