ಪಿಟಿಐ ನವದೆಹಲಿ (ನ.15) : ಎರಡು ದಿನಗಳ ಕಾಲ ನಡೆಯಲಿರುವ ಮಹತ್ವದ ಜಿ20 ರಾಷ್ಟ್ರಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಇಂಡೋನೇಷ್ಯಾಕ್ಕೆ ತೆರಳಿದರು. ನ.15 ಹಾಗೂ 16ರಂದು ಶೃಂಗಸಭೆ ನಡೆಯಲಿದ್ದು, ಮೋದಿ ಅವರು ಜಾಗತಿಕ ಅಭಿವೃದ್ಧಿ, ಆಹಾರ ಮತ್ತು ಇಂಧನ ಭದ್ರತೆ, ಆರೋಗ್ಯ ಹಾಗೂ ಡಿಜಿಟಲ್ ರೂಪಾಂತರಕ್ಕೆ ಸಂಬಂಧಿಸಿದಂತೆ ಜಾಗತಿಕ ನಾಯಕರೊಂದಿಗೆ ಚರ್ಚಿಸಲಿದ್ದಾರೆ.
ಈ ಶೃಂಗ ಸಭೆಯೊಂದಿಗೆ ಇಂಡೋನೇಷ್ಯಾದ ಜಿ20 ಅಧ್ಯಕ್ಷೀಯ ಅವಧಿ ಮುಕ್ತಾಯವಾಗಲಿದ್ದು, ನ.16ರಂದು ಮುಂದಿನ ಒಂದು ವರ್ಷದ ಜಿ20 ಅಧ್ಯಕ್ಷೀಯ ಹುದ್ದೆ ಭಾರತಕ್ಕೆ ಹಸ್ತಾಂತರವಾಗಲಿದೆ. ಡಿ.1ರಿಂದ ಭಾರತವು ಜಿ20 ರಾಷ್ಟ್ರಗಳ ಸಮೂಹದ ಚೇರ್ಮನ್ ಆಗಲಿದೆ.
ಭಾರತಕ್ಕೆ ಜಿ20 ಶೃಂಗಸಭೆಯ ಅಧ್ಯಕ್ಷಗಾದಿ, ನ.8ಕ್ಕೆ ಪ್ರಧಾನಿ ಮೋದಿ ಲೋಗೋ, ವೆಬ್‌ಸೈಟ್ ಅನಾವರಣ!
ಇಂಡೋನೇಷ್ಯಾಕ್ಕೆ ತೆರಳುವ ಮುನ್ನ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಮೋದಿ, ‘ಜಾಗತಿಕ ಅಭಿವೃದ್ಧಿ ಕುರಿತ ವಿಷಯಗಳಲ್ಲಿ ಭಾರತದ ಬದ್ಧತೆಯನ್ನು ವಿಶ್ವ ನಾಯಕರಿಗೆ ಮನವರಿಕೆ ಮಾಡಿಕೊಡಲಿದ್ದೇನೆ. ಭಾರತದ ಜಿ20 ಅಧ್ಯಕ್ಷೀಯ ಅವಧಿಯಲ್ಲಿ ‘ವಸುಧೈವ ಕುಟುಂಬಕಂ’ (ಒಂದು ಭೂಮಿ, ಒಂದು ಕುಟುಂಬ) ಎಂಬ ನೀತಿಯನ್ನು ಪಾಲಿಸಲಾಗುವುದು ಎಂದು ತಿಳಿಸಿಕೊಡಲಿದ್ದೇನೆ. ಜಿ20 ಸಮೂಹದ ಅಧ್ಯಕ್ಷೀಯ ಹುದ್ದೆ ಭಾರತಕ್ಕೆ ಹಸ್ತಾಂತರವಾಗುವುದು ಭಾರತೀಯರಿಗೆ ಮಹತ್ವದ ಕ್ಷಣವಾಗಿರಲಿದೆ’ ಎಂದು ಹೇಳಿದ್ದಾರೆ.
ಮಂಗಳವಾರ ಇಂಡೋನೇಷ್ಯಾದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ.
ಉಕ್ರೇನ್ ಯುದ್ಧದ ಬಗ್ಗೆ ಚರ್ಚೆ:
ಜಿ20 ಶೃಂಗದಲ್ಲಿ ಉಕ್ರೇನ್ ಮೇಲಿನ ರಷ್ಯಾದ ಯುದ್ಧದ ಕುರಿತು ಜಾಗತಿಕ ನಾಯಕರು ಚರ್ಚಿಸಲಿದ್ದಾರೆ. ಚೀನಾ, ಅಮೆರಿಕ, ಬ್ರಿಟನ್ ಮುಂತಾದ ಪ್ರಮುಖ ರಾಷ್ಟ್ರಗಳ ಮುಖ್ಯಸ್ಥರು ಶೃಂಗದಲ್ಲಿ ಪಾಲ್ಗೊಳ್ಳಲಿದ್ದು, ರಷ್ಯಾ ಅಧ್ಯಕ್ಷ ವ್ಲಾದಿಮೀರ್ ಪುಟಿನ್ ಗೈರಾಗಲಿದ್ದಾರೆ. ಉಕ್ರೇನ್ ಜಿ20 ಸದಸ್ಯನಲ್ಲದಿದ್ದರೂ ಅಲ್ಲಿನ ಅಧ್ಯಕ್ಷರು ವಿಶೇಷ ಆಹ್ವಾನದ ಮೇಲೆ ಆನ್‌ಲೈನ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದು 17ನೇ ಜಿ20 ಶೃಂಗ:
ಜಿ20 ಸಮೂಹದಲ್ಲಿ ಜಗತ್ತಿನ ಪ್ರಮುಖ 20 ರಾಷ್ಟ್ರಗಳಿದ್ದು, ಈ ರಾಷ್ಟ್ರಗಳು ಜಗತ್ತಿನ ಒಟ್ಟು ಉತ್ಪನ್ನದಲ್ಲಿ ಶೇ.85ರಷ್ಟುಪಾಲು ಹೊಂದಿವೆ. ಜಗತ್ತಿನ ಮೂರನೇ ಎರಡರಷ್ಟುಜನಸಂಖ್ಯೆ ಈ ದೇಶಗಳಲ್ಲಿದ್ದು, ಜಾಗತಿಕ ವ್ಯಾಪಾರದ ಶೇ.75ರಷ್ಟುಈ ದೇಶಗಳಲ್ಲೇ ನಡೆಯುತ್ತದೆ. ಹೀಗಾಗಿ ಜಿ20 ಶೃಂಗಕ್ಕೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಮಹತ್ವವಿದೆ. ಇಂಡೋನೇಷ್ಯಾದಲ್ಲಿ ನಡೆಯುತ್ತಿರುವುದು 17ನೇ ಜಿ20 ಶೃಂಗವಾಗಿದೆ.
Global Technology Summit: ನ.29ರಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾಗಿ