
ಮೆಕ್ಸಿಕೋ (ಡಿ.10): ಮೆಕ್ಸಿಕೋದಲ್ಲಿ (Mexico) ಗುರುವಾರ ಭೀಕರ ಟ್ರಕ್ (truck) ದುರಂತವಾಗಿದ್ದು, 53 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಘಟನೆಯಲ್ಲಿ 58ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಸ್ಥಳೀಯ ಮಾದ್ಯಮಗಳು ವರದಿ ಮಾಡಿವೆ. ಚಿಯಾಪಾಸ್ (Chiapas) ರಾಜ್ಯದ ಆಗ್ನೇಯ ಮೆಕ್ಸಿಕನ್ ನಗರದ ಟಕ್ಸಾಟ್ಲಾ ಗುಟೈರೆಜ್ (Tuxtla Gutierrez) ಬಳಿ ಈ ಘಟನೆ ನಡೆದಿದ್ದು, 100 ಕ್ಕೂ ಹೆಚ್ಚು ಜನರಿದ್ದ ಸರಕು ಸಾಗಣೆ ಟ್ರಕ್ ಹೆದ್ದಾರಿಯಲ್ಲಿ ಪಾದಚಾರಿ ಸೇತುವೆಯ ಮೇಲಿಂದ ಉರುಳಿಬಿದ್ದು ಈ ದುರಂತ ನಡೆದಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟ್ರಕ್ ನಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಮಧ್ಯ ಅಮೆರಿಕದಿಂದ (Central America) ವಲಸೆ ಬಂದವರೆಂದು ಹೇಳಲಾಗುತ್ತಿದೆ, ಮೃತರ ಗುರತು ಪತ್ತೆಯಾಗಿಲ್ಲ. ಆದರೆ ಅವರ ರಾಷ್ಟ್ರೀಯತೆಯನ್ನು ಅಲ್ಲಿನ ಸರ್ಕಾರ ದೃಢಪಡಿಸಿಲ್ಲ. ಅಪಘಾತದಲ್ಲಿ ಬದುಕುಳಿದ ಕೆಲವರು ಗ್ವಾಟೆಮಾಲಾದಿಂದ ಬಂದವರು ಎಂದು ಚಿಯಾಪಾಸ್ ರಾಜ್ಯದ ಸಿವಿಲ್ ಡಿಫೆನ್ಸ್ ಕಛೇರಿಯ ಮುಖ್ಯಸ್ಥ ಲೂಯಿಸ್ ಮ್ಯಾನುಯೆಲ್ ಮೊರೆನೊ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಚಿಯಾಪಾಸ್ ಗವರ್ನರ್ ರುಟಿಲಿಯೊ ಎಸ್ಕಾಂಡನ್ ಮೃತರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ಅಪಘಾತಕ್ಕೆ ಕಾರಣವನ್ನು ಶೀಘ್ರದಲ್ಲೇ ಪತ್ತೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಸರಕು ಸಾಗಣೆ ಟ್ರಕ್ನಲ್ಲಿ ಅತಿ ಹೆಚ್ಚು ಜನರನ್ನು ತುಂಬಲಾಗಿತ್ತು. ದುರಂತಕ್ಕೆ ಇದೇ ಕಾರಣ ಎನ್ನಲಾಗಿದೆ. ಘಟನೆ ವೇಳೆ ಸುಮಾರು 107 ಮಂದಿ ಟ್ರಕ್ನಲ್ಲಿದ್ದರು ಎಂದು ತಿಳಿದುಬಂದಿದೆ. ದಕ್ಷಿಣ ಮೆಕ್ಸಿಕೋದಲ್ಲಿ ಸರಕು ಸಾಗಣೆ ಟ್ರಕ್ಗಳಲ್ಲಿ ವಲಸಿಗರ ಕಳ್ಳಸಾಗಣೆ ಸಾಮಾನ್ಯವಾಗಿದೆ.
Article 370 Abrogation: 1,678 ವಲಸಿಗರು ಜಮ್ಮು ಕಾಶ್ಮೀರಕ್ಕೆ ವಾಪಸ್!
ಘಟನೆ ನಡೆದ ಸ್ಥಳಕ್ಕೆ ರಕ್ಷಣಾ ತಂಡಗಳು ಬಂದಾಗ ಸಾಕಷ್ಟು ಮಂದಿ ವಲಸಿಗರಿದ್ದರು. ಪೊಲೀಸರನ್ನು ನೋಡಿದ ತಕ್ಷಣ ಕೆಲವರು ಬಂಧನ ಭೀತಿಯಿಂದ ಸ್ಥಳದಿಂದ ಪರಾರಿಯಾಗಿದ್ದಾರೆ. ಇನ್ನೂ ಕೆಲವರು ಚಿಕಿತ್ಸೆ ಪಡೆದು, ಗಾಯಗಳಿದ್ದರೂ ಸಹ ಪೊಲೀಸರಿಂದ ತಪ್ಪಿಸಿಕೊಳ್ಳಲು ಪರಾರಿಯಾಗಿದ್ದಾರೆ ಎಂದು ವೈದ್ಯರೊಬ್ಬರು ಹೇಳಿಕೆ ನೀಡಿದ್ದಾರೆ.
Bipin Rawat Death ಹೆಲಿಕಾಪ್ಟರ್ ಅಪಘಾತದಲ್ಲಿ ಮಡಿದ 13 ಸೇನಾಧಿಕಾರಿಗಳಿಗೆ ಮೋದಿ ಗೌರವ ನಮನ!
ಹಾಳಾದ ಸರಕುಗಳನ್ನು ಸಾಗಿಸುವ ಟ್ರಕ್ ನಲ್ಲಿ ವಲಸಿಗರನ್ನು (Migrant) ಸಾಗಿಸಲಾಗುತ್ತಿತ್ತು. ದಾಖಲೆ ಇಲ್ಲದೆ ಸಾಗುವ ವಲಸಿಗರಿಗೆ ಚಿಯಾಪಾಸ್ ಒಂದು ದೊಡ್ಡ ಕೇಂದ್ರವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮಧ್ಯ ಅಮೆರಿಕದಿಂದ ಮೆಕ್ಸಿಕೋ ಮೂಲಕ ಯುಎಸ್ ಗೆ ಸಾಗುವ ವಲಸಿಗರ ಸಂಖ್ಯೆ ಹೆಚ್ಚಾಗಿದೆ. ಒಂದು ವರ್ಷದಲ್ಲಿ 17 ಲಕ್ಷ ವಲಸಿಗರು ಯುಎಸ್ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಮೆಕ್ಸಿಕೋದಲ್ಲಿ ಅಕ್ರಮ ವಲಸೆಯ ಆತಂಕ: ಅಮೆರಿಕ ಮೂಲತಃ ವಲಸಿಗರ ದೇಶ. ಸ್ಪೇನ್‌ನ ಯಾತ್ರಿಕ ಕೊಲಂಬಸ್, ಅಮೆರಿಕವನ್ನು ಶೋಧಿಸಿ, ಅಲ್ಲಿಂದ ಮೂಲ ಇಂಡಿಯನ್ನರನ್ನು ಯೂರೋಪಿನ ಶ್ವೇತವರ್ಣೀಯ ವಲಸಿಗರು ನಾಶಪಡಿಸಿದ ಬಳಿಕ, ಅಮೆರಿಕ ನಿಜಾರ್ಥದಲ್ಲಿ ವಲಸಿಗರ ನಾಡೇ ಆಗಿಬಿಟ್ಟಿತು. ಆದ್ದರಿಂದಲೇ ಇಂದಿಗೂ 'ಅಮೆರಿಕನ್ ಡ್ರೀಮ್' ಇಟ್ಟುಕೊಂಡು ಲಕ್ಷಾಂತರ ವಿದೇಶೀಯರು ಅಲ್ಲಿಗೆ ಸಕ್ರಮವಾಗಿ, ಅಕ್ರಮವಾಗಿ ತೆರಳುತ್ತಾರೆ. ಸದ್ಯಕ್ಕೆ ಅಮೆರಿಕ ಬಿಳಿಯರಿಗೆ ಆತಂಕ ತಲೆನೋವು ಹುಟ್ಟಿಸಿರುವ ಅಕ್ರಮ ವಲಸೆಯೆಂದರೆ ಮೆಕ್ಸಿಕೋ ಕಡೆಯಿಂದ ಆಗುತ್ತಿರುವ ಮೆಕ್ಸಿಕನ್ನರು, ಮಧ್ಯ ಅಮೆರಿಕನ್ನರು, ಲ್ಯಾಟಿನ್ ಅಮೆರಿಕನ್ನರ ದೊಡ್ಡ ಪ್ರಮಾಣದ ಆಗಮನ.
ಈ ಹಿಂದೆಯೂ ಮೆಕ್ಸಿಕೋ ವಲಸಿಗರ ಕ್ಯಾರವಾನ್‌ಗಳು ನಡೆದಿವೆ. ಇವರೆಲ್ಲ ಯಾರು? ಮಧ್ಯ ಅಮೆರಿಕದ ಹೊಂಡುರಾಸ್, ನಿಕರಾಗುವ, ಗ್ವಾಟೆಮಾಲ ಮುಂತಾದ ದೇಶಗಳಿಂದ ಇವರೆಲ್ಲ ಬರುತ್ತಿದ್ದಾರೆ. ಇವರನ್ನು ತಡೆಯಲು ಮೆಕ್ಸಿಕೋ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಮೆಕ್ಸಿಕೋ ಮತ್ತು ಅಮೆರಿಕದ ಗಡಿಯನ್ನು ಮುಚ್ಚಿಬಿಡುವುದಾಗಿ ಹಿಂದಿನ ಅಧ್ಯಕ್ಷ ಟ್ರಂಪ್ ಬೆದರಿಕೆ ಕೂಡ ಹಾಕಿದ್ದರು. ಆದರೆ ಮೆಕ್ಸಿಕೋ ಕೂಡ ಈ ಸಮಸ್ಯೆಯ ಮುಂದೆ ಅಸಹಾಯಕ. ಅಮೆರಿಕಕ್ಕೆ ತೆರಳುವ ಅಕ್ರಮ ವಲಸಿಗರ ಪಟ್ಟಿಯಲ್ಲಿ ಮೆಕ್ಸಿಕನ್ನರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ