
ಹಲ್ಲು ನೋವು ಒಂದು ಭಯಾನಕ ಅನುಭವ ಯಾವ ನೋವನ್ನಾದರು ಸಹಿಸಬಹುದು ಆದರೆ ಹಲ್ಲುನೋವನ್ನು ಸಹಿಸುವ ಸಾಧ್ಯವಿಲ್ಲ. ಹಲ್ಲುನೋವಿನ ಬಾಧೆ ಅನುಭವಿಸಿದ ಪ್ರತಿಯೊಬ್ಬರ ಮಾತು ಇದು. ಇನ್ನು ಮಕ್ಕಳ ಹಲ್ಲುನೋವಿಗೆ ಚಿಕಿತ್ಸೆ ನೀಡುವುದು ಎಲ್ಲಕ್ಕಿಂತ ಕಷ್ಟದ ಕೆಲಸ. ಅದರಲ್ಲೂ ಪುಟ್ಟ ಮಕ್ಕಳಿಗೆ ಹಲ್ಲು ನೋವು ಬಂದರೆ ದೇವರೇ ಗತಿ. ಅವರನ್ನು ವೈದ್ಯರ ಬಳಿ ಹಿಡಿದು ಕೂರಿಸುವುದು ಕೂಡ ಅಷ್ಟೇ ಕಷ್ಟದ ಕೆಲಸ. ಜೊತೆಗೆ ದಂತವೈದ್ಯರು ಬಳಸುವ ಸಾಧನಗಳು ಕೂಡ ನೋಡುಗರಲ್ಲಿ ಭಯ ಹುಟ್ಟಿಸುತ್ತವೆ. ಇನ್ನು ಪುಟ್ಟ ಮಕ್ಕಳ ಹಲ್ಲನ್ನು ಕೀಳುವುದು ಕೂಡ ಒಂದು ಸಾಹಸವೇ ಹಳೆಯ ಹಲ್ಲುಗಳನ್ನು ಕೀಳದೇ ಹೋದರೆ ಹೊಸ ಹಲ್ಲುಗಳು ಬರುವುದಕ್ಕೆ ಜಾಗವಿಲ್ಲದೇ ತಿರುಗು ಮುರುಗಾಗಿ ಬೆಳೆಯಲು ಶುರು ಮಾಡುತ್ತವೆ. ಕೀಳುವುದಕ್ಕೆ ಮಕ್ಕಳು ಹೆದರಿ ಗೋಳಾಡುತ್ತಾರೆ. ಇದರಿಂದ ಪೋಷಕರಿಗೆ ಪೀಕಲಾಟ ಶುರುವಾಗುತ್ತದೆ.
ದಂತವೈದ್ಯರಿಂದ ತಪ್ಪಿಸಿಕೊಂಡು ಓಡಿದ ಬಾಲಕ:
ಹೀಗಿರುವಾಗ ಇಲ್ಲೊಂದು ಕಡೆ ಹಲ್ಲಿನ ಚಿಕಿತ್ಸೆಗಾಗಿ ದಂತವೈದ್ಯರ ಬಳಿ ಬಂದ ಬಾಲಕನೋರ್ವ ವೈದ್ಯರ ಇಕ್ಕಳ ಸೇರಿದಂತೆ ಅವರ ಸಾಧನಗಳನ್ನು ನೋಡಿ ಹೆದರಿಕೊಂಡು ಚಿಕಿತ್ಸೆ ಮಧ್ಯದಲ್ಲೇ ಕ್ಲಿನಿಕ್‌ನಿಂದ ತಪ್ಪಿಸಿಕೊಂಡು ಓಡಿದ ಘಟನೆ ನಡೆದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರಿಗೂ ಅವರ ಹಲ್ಲು ನೋವಿನ ಅನುಭವಗಳನ್ನು ನೆನಪು ಮಾಡಿದೆ.
ಬಾಲಕನ ಹಿಂದೆಯೇ ಓಡಿದ ನರ್ಸ್‌ಗಳು:
ಅಂದಹಾಗೆ ಈ ಘಟನೆ ನಡೆದಿರುವುದು ಚೀನಾದಲ್ಲಿ. ಚೀನಾದ ಕಿಂಗ್ಡಾವು ಪ್ರದೇಶದಲ್ಲಿ ಸಣ್ಣ ಬಾಲಕನೋರ್ವ ತನ್ನ ಹಲ್ಲುನೋವಿಗಾಗಿ ಚಿಕಿತ್ಸೆ ಪಡೆಯಲು ದಂತವೈದ್ಯರ ಕ್ಲಿನಿಕ್‌ಗೆ ಬಂದಿದ್ದಾನೆ. ಅಲ್ಲಿ ವೈದ್ಯರು ಈತನನ್ನು ಪರೀಕ್ಷಿಸಿ ಹಲ್ಲನ್ನು ತೆಗೆಯುವುದಕ್ಕೆ ವೈದ್ಯರು ನಿರ್ಧರಿಸಿದ್ದಾರೆ. ಈ ವೇಳ ಭಯಗೊಂಡ ಬಾಲಕ ಚಿಕಿತ್ಸೆಯ ನಡುವೆಯೇ ವೈದ್ಯರಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಕೂಡಲೇ ಅಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಆತನ ಹಿಂದೆಯೇ ಆತನಷ್ಟೇ ವೇಗವಾಗಿ ಓಡಿ ಹೋಗಿ ಆತನನ್ನು ಹಿಡಿದುಕೊಂಡು ಬಂದಿದ್ದಾರೆ. ನಂತರ ಆತನನ್ನು ಹಲ್ಲಿನ ಚಿಕಿತ್ಸೆ ನೀಡುವ ಚೇರ್ ಮೇಲೆ ಮಲಗಿಸಿ ಆತನನ್ನು ಆ ಚೇರ್‌ನಿಂದ ತಪ್ಪಿಸಿಕೊಳ್ಳಲಾಗದಂತೆ ಭದ್ರವಾಗಿ ಸುತ್ತಿ ಬಳಿಕ ಆತನ ಹಲ್ಲನ್ನು ತೆಗೆಯುವ ಪ್ರಯತ್ನ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್
ಈ ವೀಡಿಯೋ ಭಾರಿ ವೈರಲ್ ಆಗಿದೆ. ವೈರಲ್ ಆದ ವೀಡಿಯೋದಲ್ಲಿ ಬಾಲಕ ಆಸ್ಪತ್ರೆಯ ಸೀಟಿನಿಂದ ಎದ್ದು ಓಡಿ ಹೋಗಿದ್ದು, ಆತನ ಹಿಂದೆಯೇ ಇಬ್ಬರು ನರ್ಸ್‌ಗಳು ಓಡಿದ್ದಾರೆ. ಅವರ ಕೈಗೆ ಸಿಗುವವರೆಗೂ ಬಾಲಕ ಅಲ್ಲಿನ ಕಾರು ಪಾರ್ಕಿಂಗ್‌ನ ಪಕ್ಕದಲ್ಲೆಲ್ಲಾ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಸಾಧ್ಯವಾಗಲಿಲ್ಲ, ನಂತರ ಇಬ್ಬರು ನರ್ಸ್‌ಗಳು ಆತನನ್ನು ಒಬ್ಬರು ತಲೆ ಬಳಿ ಇನ್ನೊಬ್ಬರು ಕಾಲಿನ ಬಳಿ ಹಿಡಿದುಕೊಂಡು ಹೊತ್ತುಕೊಂಡು ಬಂದು ಬೆಡ್ ಮೇಲೆ ಹಾಕಿ ಆತನನ್ನು ಬಿಡಿಸಲಾಗದಂತೆ ಕೈಕಾಲುಗಳನ್ನು ಸೇರಿಸಿ ಕವರ್ ಮಾಡಿ ನಂತರ ಶಸ್ತ್ರಚಿಕಿತ್ಸೆ ಮುಂದುವರಿಸಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಈ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಅಗ್ತಿದೆ.
ಈ ವೀಡಿಯೋವನ್ನು mustsharenews ಎಂಬ ಇನ್ಸ್ಟಾಪೇಜ್‌ನಿಂದ ಪೋಸ್ಟ್ ಮಾಡಲಾಗಿದ್ದು, ಕೆಲವರಿಗೆ ಎತ್ತರದ ಬಗ್ಗೆ ಭಯವಿರುತ್ತದೆ ಮತ್ತೆ ಕೆಲವರಿಗೆ ಜೇಡ ಹಲ್ಲಿಗಳ ಬಗ್ಗೆ ಭಯವಿರುತ್ತದೆ ಮತ್ತೆ ಕೆಲವರಿಗೆ ದಂತವೈದ್ಯರೆಂದರೆ ಎಲ್ಲಕ್ಕಿಂತ ಹೆಚ್ಚು ಭಯವಿರುತ್ತದೆ ಎಂದು ಬರೆದು ವೀಡಿಯೋ ಪೋಸ್ಟ್ ಮಾಡಲಾಗಿದೆ. ವೀಡಿಯೋ ನೋಡಿದ ಅನೇಕರು ಹಲವು ತಮಾಷೆಯ ಕಾಮೆಂಟ್ ಮಾಡಿದ್ದಾರೆ. ಕೆಲವರು ತಮ್ಮ ಅನುಭವ ಹೇಳಿಕೊಂಡಿದ್ದಾರೆ. ನಾನು ಬಾಲ್ಯದಲ್ಲಿ ಹೀಗೆಯೇ ಮಾಡಿದೆ.ವರ್ಷಗಳ ನಂತರ ನನ್ನ ಬುದ್ಧಿವಂತಿಕೆಯ ಹಲ್ಲು(wishdomteeth) ತೆಗೆಯಲು ಅದೇ ದಂತವೈದ್ಯರ ಬಳಿಗೆ ಮತ್ತೆ ಹೋದೆ. ನನ್ನನ್ನು ನೋಡಿದ ವೈದ್ಯರು ನನಗೆ ನಿನ್ನ ನೆನಪಿದೆ ಎಂದು ಹೇಳಿದರು ನಂತರ ನನಗೆ ನಿದ್ರಾಜನಕ( sedative) ನೀಡಲು ಸೂಚಿಸಿದರು! ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇವರ ಕಾಮೆಂಟ್‌ಗೆ ಹಲವರು ಪ್ರತಿಕ್ರಿಯಿಸಿದ್ದು, ನೀವು ದೊಡ್ಡವರಾಗಿದ್ದೀರಾ ಎಂದು ಗೊತ್ತು ಆದರೂ ಸುರಕ್ಷತೆಯ ದೃಷ್ಟಿಯಿಂದ ನಿದ್ರಾಜನಕ ನೀಡ್ತಿದ್ದೇನೆ ಎಂದು ಮನದಲ್ಲೇ ಅಂದುಕೊಂಡಿರಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಬಾಲಕನ ಈ ವೀಡಿಯೋ ಅನೇಕರಿಗೆ ಅವರ ಬಾಲ್ಯದ ನೆನಪುಗಳನ್ನು ತರಿಸಿದೆ. ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.
ಇದನ್ನೂ ಓದಿ: 2ನೇ ಕ್ಲಾಸ್ ಬಾಲಕಿಯ ಒಳಗೆ ಬಿಟ್ಟು ಬೀಗ ಹಾಕಿ ಹೋದ ಶಿಕ್ಷಕರು: ಕಿಟಕಿಯಲ್ಲಿ ತಲೆ ಸಿಕ್ಕಿಸಿ ರಾತ್ರಿಯಿಡೀ ಒದ್ದಾಡಿದ ಬಾಲಕಿ!
ಇದನ್ನೂ ಓದಿ: ಮೆಟ್ರೋದಲ್ಲಿ ಯುವಕನ ಕೊಳಲ ನಾದಕ್ಕೆ ಬೆರಗಾದ ಮಗು: ಪೋಷಕರಿಂದ ಬಿಡಿಸಿಕೊಂಡು ಅಂಬೆಗಾಲಿಡುತ್ತಲೇ ಆತನ ಬಳಿ ಬಂದ ಕಂದ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ