ಕಜಕಿಸ್ತಾನ(ಜ.4): ಇತ್ತೀಚೆಗೆ ಮದುವೆಗೆ ಮೊದಲು ಮದುವೆಯ ನಂತರ ಫೊಟೋ ಶೂಟ್ ಮಾಡುವುದು ಸಾಮಾನ್ಯ ಎನಿಸಿದ್ದು, ಹೀಗೆ ಫೋಟೋ ಶೂಟ್ ಮಾಡಲು ಹೋದ ಜೋಡಿಯೊಂದು ಕೆಸರಿಗೆ ಬಿದ್ದ ಘಟನೆ ಕಜಕಿಸ್ತಾನದಲ್ಲಿ ನಡೆದಿದೆ. ಕಜಕಿಸ್ತಾನದ ಜೋಡಿಯಾದ ಮುರಾತ್ ಝುರಾಯೆವ್ (Murat Zhurayev) ಮತ್ತು ಅವರ ವಧು ಕಮಿಲ್ಲಾ (Kamilla) ತಮ್ಮ ಮದುವೆಯ ಫೋಟೋಶೂಟ್ ಸಮಯದಲ್ಲಿ ಆಕಸ್ಮಿಕವಾಗಿ ಕೆಸರಿನ ಕೊಚ್ಚೆ ಗುಂಡಿಯಲ್ಲಿ ಬಿದ್ದಿದ್ದಾರೆ. ಮದುವೆಯ ಛಾಯಾಗ್ರಾಹಕ ಅಸ್ಕರ್ ಬುಮಗಾ ( Askar Bumaga) ಅವರು ಈ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು ವೈರಲ್ ಆಗುತ್ತಿದೆ.
ಈ ಪೋಸ್ಟ್‌ನಲ್ಲಿ ಇವರು ಕೆಸರಿಗೆ ಬಿದ್ದ ನಂತರದ ಹಲವು ಫೋಟೋಗಳಿವೆ. ಈ ಫೋಟೋಗಳಲ್ಲಿ ಮುರತ್ ಹಾಗೂ ಕಮಿಲ್ಲಾ ಮದುವೆಯ ಡ್ರೆಸ್‌ಗಳಲ್ಲಿದ್ದು, ಮುರತ್ ಕಪ್ಪು ಬಣ್ಣದ ಸೂಟ್ ಧರಿಸಿದ್ದು, ಕಮಿಲ್ಲಾ ಸುಂದರವಾದ ಬಿಳಿ ಗವನ್ ಧರಿಸಿದ್ದಾರೆ. ಈ ಜೋಡಿಯ ಹಿಂಭಾಗದಲ್ಲಿ ಮನ ಮೋಹಕವಾದ ಪರ್ವತಗಳಿದ್ದು, ಅವುಗಳ ಮುಂದೆ ನಿಂತು ಜೋಡಿ ಫೋಟೋಗೆ ಪೋಸ್ ಕೊಡುತ್ತಿದ್ದಾರೆ. ಈ ವೇಳೆ ಇಬ್ಬರು ಕಾಲು ಜಾರಿ ಸಮೀಪದಲ್ಲೇ ಇದ್ದ ಕೆಸರಿನ ಗುಂಡಿಗೆ ಬಿದ್ದಿದ್ದಾರೆ. ಕೆಸರಿಗೆ ಬಿದ್ದರು ಈ ಫೋಟೋಗಳು ಕೆಟ್ಟದಾಗಿ ಹೊರ ಹೊಮ್ಮಿಲ್ಲ ಕೆಸರು ತುಂಬಿದ ಇವರ ಬಟ್ಟೆಗಳು ಫೋಟೋಶೂಟ್‌ಗೆ ರಂಗು ತುಂಬಿದಂತಿದೆ. ಇದು ವಿನೋದ ಮತ್ತು ಅನನ್ಯವಾಗಿ ಕಾಣುತ್ತದೆ ಎಂದು ನೋಡುಗರು ಕಾಮೆಂಟ್ ಮಾಡಿದ್ದಾರೆ.
ಪ್ರೀ ವೆಡ್ಡಿಂಗ್ ವೇಳೆ ಹೀಗೆ ಅವಘಡ ಸಂಭವಿಸುವುದು ಇದೇ ಮೊದಲೇನಲ್ಲ. ಕಾವೇರಿ ನದಿಯಲ್ಲಿ ಫೋಟೋ ಶೂಟ್ ಮಾಡುತ್ತಿದ್ದ ವೇಳೆ ವಧು-ವರ ನೀರು ಪಾಲಾದ ಘಟನೆ ನಡೆದಿತ್ತು. ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಮುಡುಕುತೊರೆ ನಿಸರ್ಗಧಾಮ ರೆಸಾರ್ಟ್ ಬಳಿ ಈ ಅವಘಡ ನಡೆದಿತ್ತು. ಕಾವೇರಿ ನದಿಯಲ್ಲಿ ತೆಪ್ಪದ ಮೇಲೆ ನಿಂತು ಪೋಟೋ ಶೂಟ್ ಮಾಡಲಾಗುತ್ತಿತ್ತು. ಈ ವೇಳೆ ಆಯತಪ್ಪಿ ಹುಡುಗಿ ನದಿಗೆ ಬಿದ್ದಿದ್ದಾರೆ. ಹುಡುಗಿ ಹಿಡಿಯಲು ಹೋಗಿ ಹುಡುಗ ಸಹ ನದಿಗೆ ಬಿದ್ದಿದ್ದೇನೆ. ಪರಿಣಾಮ ವಿವಾಹವಾಗಬೇಕಾಗಿದ್ದ ಚಂದ್ರು (28), ಶಶಿಕಲಾ (20) ನೀರುಪಾಲಾಗಿದ್ದಾರೆ. ಇಬ್ಬರೂ ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಗಳಾಗಿದ್ದರು.
ಪ್ರಿ-ವೆಡ್ಡಿಂಗ್ ಫೋಟೋ ಶೂಟ್-ಗೆ ಬೇಂದ್ರೆ ಅವತಾರ
ಪ್ರೀ ವೆಡ್ಡಿಂಗ್ ಫೋಟೋಶೂಟ್ ಹೆಸರಲ್ಲಿ ಆಂಧ್ರ ಮೂಲದ ದಂಪತಿ ಹಂಪಿ ಸ್ಮಾರಕಗಳ ಮೇಲೆ ಹತ್ತಿಳಿದ ಘಟನೆಯೂ ಈ ಹಿಂದೆ ನಡೆದಿತ್ತು. ಈ ಹಿನ್ನೆಲೆ ಪುರಾತತ್ವ ಇಲಾಖೆಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ವಿಜಯ ವಿಠ್ಠಲ ದೇವಸ್ಥಾನ, ಸಪ್ತಸ್ವರ ಮಂಟಪದಲ್ಲಿ (ಕಲ್ಲಿನಲ್ಲಿ ಸರಿಗಮಪ ಬರೋ ಮಂಟಪ) ಈ ಘಟನೆ ನಡೆದಿತ್ತು. ಇಲ್ಲಿ ಯಾರಿಗೂ ಹತ್ತಲೂ ಅವಕಾಶವಿಲ್ಲ ಆದ್ರೆ ಈ ಜೋಡಿ ಮಾತ್ರ ಬಿಂದಾಸ್ ಆಗಿ ಇಲ್ಲಿ ಓಡಾಡುವ ಮೂಲಕ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಹಂಪಿಯ ಕೆಲ ಪ್ರದೇಶದಲ್ಲಿ ಡ್ರೋಣ್ ಕ್ಯಾಮರಾ ಕೂಡ ನಿಷೇಧವಿದೆ ಆದರೆ ಈ ಜೋಡಿ ಕಮಲ್ ಮಹಲ್ ಅನ್ನು ಡ್ರೋನ್‌ನಲ್ಲಿ ಶೂಟ್ ಮಾಡಿದ್ದಾರೆ.
ಆಡು ಓಡಿ ಬಂದರೆ ಏನ್ ಮಾಡ್ತೀರಿ...' ಪ್ರಿ ವೆಡ್ಡಿಂಗ್ ಸಿಕ್ಕಾಪಟ್ಟೆ ವೈರಲ್!