75 ವರ್ಷದ ವೃದ್ಧ ತಾಯಿಯೊಬ್ಬರು ತನ್ನ 40 ಹಾಗೂ 42 ವರ್ಷದ ಮಕ್ಕಳಿಬ್ಬರ ವಿರುದ್ಧ ಕೋರ್ಟ್ ಕೇಸು ಗೆದ್ದಿದ್ದು, ಇದರಿಂದಾಗಿ ಈ ಮಕ್ಕಳು ತಾಯಿಯ ಮನೆ ತೊರೆದು ಹೋಗಲೇಬೇಕಿದೆ.
ಇಟಲಿ: 75 ವರ್ಷದ ವೃದ್ಧ ತಾಯಿಯೊಬ್ಬರು ತನ್ನ 40 ಹಾಗೂ 42 ವರ್ಷದ ಮಕ್ಕಳಿಬ್ಬರ ವಿರುದ್ಧ ಕೋರ್ಟ್ ಕೇಸು ಗೆದ್ದಿದ್ದು, ಇದರಿಂದಾಗಿ ಈ ಮಕ್ಕಳು ತಾಯಿಯ ಮನೆ ತೊರೆದು ಹೋಗಲೇಬೇಕಿದೆ. ಈ ಮಕ್ಕಳಿಬ್ಬರಿಗೆ ಡಿಸೆಂಬರ್ 18ರೊಳಗೆ ತಾಯಿಯ ಮನೆಯನ್ನು ಬಿಟ್ಟು ಹೊರ ನಡೆಯುವಂತೆ ಇಟಲಿಯ ಜಿಲ್ಲಾ ಕೋರ್ಟೊಂದು ಆದೇಶಿಸಿದೆ. ಈ ಇಬ್ಬರು ಮಕ್ಕಳು ಯಾವುದೇ ಹಣಕಾಸಿನ ನೆರವು ಒದಗಿಸದೇ ತನ್ನ ಮನೆಯಲ್ಲಿ ವಾಸವಿದ್ದಾರೆ ಎಂದು ತಾಯಿ ಪರ ಕೋರ್ಟ್‌ನಲ್ಲಿ ವಾದ ಮಂಡಿಸಲಾಗಿತ್ತು.
ಇಟಲಿಯ ಉತ್ತರ ಭಾಗದಲ್ಲಿರುವ ಪವಿಯಾ ನಗರದಲ್ಲಿ ಈ 75 ವರ್ಷದ ವೃದ್ಧೆ ತನ್ನ ಮನೆಯಲ್ಲಿ ವಾಸ ಮಾಡುತ್ತಿದ್ದರು. ಈ ಕುಟುಂಬದ ಮನೆಯಿಂದ ಹೊರ ಹೋಗುವಂತೆ ಹಲವು ಬಾರಿ ತಾಯಿ ಮಕ್ಕಳಿಗೆ ಹೇಳಿದರೂ ಅವರು ಹೊರಟು ಹೋಗದ ಹಿನ್ನೆಲೆಯಲ್ಲಿ ತಾಯಿ ಮಕ್ಕಳ ವಿರುದ್ಧ ಪವಿಯಾದ ಜಿಲ್ಲಾ ಕೋರ್ಟ್ ಮೆಟ್ಟಿಲೇರಿದ್ದರು. ಈ ಮಕ್ಕಳು ಯಾವುದೇ ಹಣಕಾಸಿನ ಸಹಾಯ ಮಾಡದೇ ತನ್ನ ಮನೆಯಲ್ಲಿ ವಾಸ ಮಾಡುವ ಮೂಲಕ ಪರಾವಲಂಬಿಗಳಾಗಿ ಬದುಕುತ್ತಿದ್ದಾರೆ ಎಂದು ತಾಯಿ ವಾದಿಸಿದ್ದರು.
ಆದರೆ ಆಕೆಯ ಇಬ್ಬರು ಮಕ್ಕಳು ಉದ್ಯೋಗವನ್ನು ಹೊಂದಿದ್ದರು. ಕಾನೂನು ದಾಖಲೆಗಳ ಪ್ರಕಾರ, ತಾಯಿಯ ಪರವಾಗಿ ಜಡ್ಜ್ ಸಿಮೊನ್ ಕ್ಯಾತರ್ಬಿ ಅವರು ಈಗ ತೀರ್ಪು ನೀಡಿದ್ದಾರೆ. ತಾಯಿಗೆ ಬರುವ ಪೆನ್ಸನ್ ಹಣದಿಂದ ಮನೆ ನಡೆಯುತ್ತಿತ್ತು. ಮನೆಯವರ ಆಹಾರ ಹಾಗೂ ಇತರ ಖರ್ಚುಗಳಿಗಾಗಿಯೇ ಇಡೀ ಹಣ ವೆಚ್ಚವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಮನೆಗೆ ಒಂದು ರೂಪಾಯಿ ಹಣವನ್ನು ನೀಡದೇ ತಾಯಿಯ ಜೊತೆಯೇ ವಾಸವಿದ್ದ ಈ ವಯಸ್ಕ ಮಕ್ಕಳನ್ನು ಅಣಕಿಸುತ್ತಾ ಕೋರ್ಟ್ ಅವರನ್ನು bamboccionis ಎಂದು ಕರೆದಿದೆ. ಜೊತೆಗೆ ಡಿಸೆಂಬರ್ 18ರೊಳಗೆ ತಾಯಿ ಮನೆಯನ್ನು ಬಿಡುವಂತೆ ಮಕ್ಕಳಿಗೆ ಆದೇಶ ನೀಡಿದೆ. (bamboccionis ಎಂದರೆ ದೊಡ್ಡ ಮಗು, ವಯಸ್ಕ ಮಕ್ಕಳಾಗಿದ್ದು, ಆಹಾರ ಹಾಗೂ ಉಚಿತ ವಸತಿಗಾಗಿ ತಮ್ಮ ಪೋಷಕರೊಂದಿಗೆಯೇ ವಯಸ್ಸಾದ ನಂತರವೂ ವಾಸ ಮಾಡುವ ಮಕ್ಕಳು)
ವಯಸ್ಕ ಮಕ್ಕಳು, ಅವರ ಪೋಷಕರಿಗೆ ಇಷ್ಟವಿಲ್ಲದಿದ್ದರೂ, ತಾಯಿ ಮನೆಯಲ್ಲೇ ವಾಸ ಮಾಡುತ್ತಾ ಅಲ್ಲಿನ ಎಲ್ಲಾ ಸವಲತ್ತುಗಳನ್ನು ಪಡೆಯುವುದಕ್ಕೆ ಸಹಕಾರಿಯಾಗುವಂತಹ ಷರತ್ತುಗಳಿಲ್ಲದ ಯಾವುದೇ ಕಾನೂನು ನಮ್ಮಲ್ಲಿ ಇಲ್ಲ ಎಂದು ನ್ಯಾಯಾಲಯ ಈ ಮಕ್ಕಳಿಗೆ ಹೇಳಿದೆ. ಆದರೆ ಇಟಾಲಿಯನ್ ಕಾನೂನು ಪಾಲಕರು ತಮ್ಮ ಮಕ್ಕಳನ್ನು ನೋಡಿಕೊಳ್ಳುವುದನ್ನು ಕಡ್ಡಾಯಗೊಳಿಸುತ್ತದೆ ಎಂಬ ವಿಚಾರವನ್ನು ಆಧರಿಸಿ ಈ ಮಕ್ಕಳು ಮನೆ ಬಿಟ್ಟು ಹೋಗಬೇಕೆಂಬ ತಾಯಿಯ ಅರ್ಜಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.
ಅಸ್ತಿತ್ವದಲ್ಲಿರುವ ಕಾನೂನು ಪೋಷಕರ ಮೇಲಿರುವ ಮಕ್ಕಳ ನಿರ್ವಹಣೆಯ ಹೊಣೆಗಾರಿಕೆಯನ್ನು ಆಧರಿಸಿರುವುದರಿಂದ ಪುತ್ರರು ತಮ್ಮ ತಾಯಿಯ ಮನೆಯಲ್ಲಿ ಉಳಿಯುವುದು ಸಂಪೂರ್ಣವಾಗಿ ತಪ್ಪು ಅಲ್ಲ ಎಂಬುದನ್ನು ನ್ಯಾಯಾಧೀಶರಾದ ಕ್ಯಾತರ್ಬಿ ಒಪ್ಪಿಕೊಂಡರು. ಆದರೆ ಮಕ್ಕಳಿಬ್ಬರು 40ರ ಪ್ರಾಯದಲ್ಲಿರುವುದನ್ನು ಗಮನಿಸಿದ ನ್ಯಾಯಾಲಯ ಇಷ್ಟು ವಯಸ್ಸಾದ ನಂತರವೂ ನೀವು ನಿಮ್ಮ ನಿರ್ವಹಣೆಯ ಹೊಣೆಯನ್ನು ಪೋಷಕರಿಂದ ನಿರೀಕ್ಷಿಸುವಂತಿಲ್ಲ ಎಂದು ತೀರ್ಪು ನೀಡಿದ್ದಾರೆ.