ಕೆಲಸದ ಸ್ಥಳ ಬೇಗ ತಲುಪಲು ಕಾರಿಗೆ ಪೊಲೀಸ್ ಲೈಟ್ ಫಿಕ್ಸ್‌ ಮಾಡಿದ ವ್ಯಕ್ತಿಯ ಬಂಧನ

By Suvarna News  |  First Published Oct 31, 2023, 2:25 PM IST

ಕೆಲಸದ ಸ್ಥಳವನ್ನು ಬೇಗ ತಲುಪುವುದಕ್ಕಾಗಿ ತನ್ನ ಕಾರಿಗೆ ಪೊಲೀಸರು ಬಳಸುವಂತಹ ನೀಲಿ ಹಾಗೂ ಕೆಂಪು ಮಿಶ್ರಿತ ಬಣ್ಣದ ಲೈಟ್ ಆಳವಡಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ಅಮೆರಿಕಾದಲ್ಲಿ ನಡೆದಿದೆ. 


ಕನೆಕ್ಟಿಕಟ್: ಕೆಲಸದ ಸ್ಥಳವನ್ನು ಬೇಗ ತಲುಪುವುದಕ್ಕಾಗಿ ತನ್ನ ಕಾರಿಗೆ ಪೊಲೀಸರು ಬಳಸುವಂತಹ ನೀಲಿ ಹಾಗೂ ಕೆಂಪು ಮಿಶ್ರಿತ ಬಣ್ಣದ ಲೈಟ್ ಆಳವಡಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ಅಮೆರಿಕಾದಲ್ಲಿ ನಡೆದಿದೆ. ಹೀಗೆ ಪೊಲೀಸರ ಸೋಗು ಹಾಕಿ ಕಂಬಿ ಎಣಿಸುತ್ತಿರುವ ವ್ಯಕ್ತಿಯನ್ನು 43 ವರ್ಷದ ಮಿಚೆಲ್ ಮಾರ್ಷಲ್ ಎಂದು ಗುರುತಿಸಲಾಗಿದೆ.

ಈತ ತನ್ನ ನ್ಯೂ ಲಂಡನ್‌ ಕೌಂಟಿಯಲ್ಲಿರುವ ತನ್ನ ಮನೆಯಿಂದ ಗ್ರೊಟನ್‌ನಲ್ಲಿರುವ ತನ್ನ ಕಚೇರಿಗೆ ಹೋಗುವ ವೇಳೆ ಈ ರೀತಿ ಕಿತಾಪತಿ ಮಾಡಿದ್ದಾನೆ.  ಈತನಿಂದಾಗಿ  ಅಮೆರಿಕಾದ ಇಂಟರ್‌ಸ್ಟೇಟ್ ಹೆದ್ದಾರಿ 95ರಲ್ಲಿ ಸುಮಾರು ಹೊತ್ತು ಟ್ರಾಫಿಕ್‌ ದಟ್ಟಣೆ ಉಂಟಾದ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿದ್ದ ಟ್ರಾಫಿಕ್ ಪೊಲೀಸ್ ಒಬ್ಬರು ಪರಿಶೀಲನೆ ಮಾಡಿದಾಗ ಈತ ಸಿಕ್ಕಿ ಬಿದ್ದಿದ್ದಾನೆ ಎಂದು ಕನೆಕ್ಟಿಕಟ್‌ ಸ್ಟೇಟ್ ಪೊಲೀಸರು ತಿಳಿಸಿದ್ದಾರೆ. 

ರೀಲ್ಸ್‌ಗಾಗಿ ನಡುರಸ್ತೆಯಲ್ಲಿ ಕಾರ್‌ ಸ್ಟಂಟ್‌ : 3 ಇನ್ಸ್ಟಾಗ್ರಾಮ್ ಹೀರೋಗಳ ಜೈಲಿಗಟ್ಟಿದ ಪೊಲೀಸರು

Tap to resize

Latest Videos

ಅಲ್ಲಿನ ಡೈಲಿ ವಾಯ್ಸ್ ವರದಿ ಪ್ರಕಾರ, ಈತನ ಡೋಜ್ ಚಾಲೆಂಜರ್ ಕಾರು ಕೆಂಪು ಹಾಗೂ ನೀಲಿ ಬಣ್ಣದ ಲೈಟ್‌ಗಳನ್ನು ಹೊರಸೂಸುತ್ತಿತ್ತು. ಇದು ಟ್ರಾಫಿಕ್‌ ಕರ್ತವ್ಯದಲ್ಲಿದ್ದ ಪೊಲೀಸರಿಗೆ ಅನುಮಾನಕ್ಕೆ ಕಾರಣವಾಯಿತು. ಹೀಗಾಗಿ ಅವರು ಈ ಕಾರನ್ನು ಪಕ್ಕಕ್ಕೆ ನಿಲ್ಲಿಸಿ ನಂಬರ್‌ ಪ್ಲೇಟ್‌ ತಪಾಸಣೆ ಮಾಡಿದಾಗ ಇದು ಯಾವುದೇ ಆಡಳಿತ ಅಥವಾ ಪೊಲೀಸ್ ಇಲಾಖೆಗೆ ಸಂಬಂಧಿಸಿದ ವಾಹನ ಅಲ್ಲ ಎಂಬುದು ತಿಳಿದು ಬಂತು. 

ನಂತರ ಪೊಲೀಸರು ಮಿಚೆಲ್ ಮಾರ್ಷಲ್ ಬಳಿ ಈ ರೀತಿ ಕಿತಾಪತಿ ಮಾಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಜನ ಪೊಲೀಸ್ ಇಲಾಖೆಗೆ ಸಂಬಂಧಿಸಿದ ವಾಹನ ಎಂದು ಜಾಗ ಬಿಡುವುದರಿಂದ  ಟ್ರಾಫಿಕ್‌ನಲ್ಲಿ ವೇಗವಾಗಿ ಮುಂದೆ ಸಾಗುವುದಕ್ಕಾಗಿ ತಾನು ಈ ರೀತಿ  ಮಾಡಿದ್ದಾಗಿ ಹೇಳಿದ್ದಾನೆ. ಅಲ್ಲದೇ ತಾನು ಯಾವುದೇ ಇಲಾಖೆಗೆ ಸಂಬಂಧಿಸಿದ ಅಧಿಕಾರಿಯೂ ಅಲ್ಲ, ಪೊಲೀಸ್ ಸಿಬ್ಬಂದಿಯೂ ಅಲ್ಲ ಎಂಬುದನ್ನು ಆತ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ ಎಂದು ಆತನ ವಿಚಾರಣೆ ನಡೆಸಿದ ಪೊಲೀಸರೊಬ್ಬರು ಹೇಳಿದ್ದಾರೆ. 

ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆರೆಗೆ ಹಾರಿ ಈಜಿ ಪರಾರಿಯಾದ ಡ್ರಗ್ ಪೆಡ್ಲರ್

ಇತ್ತ ಈತನ ಡೋಜ್ ಚಾಲೆಂಜರ್ ಗಾಡಿಯನ್ನು ರಸ್ತೆಯಲ್ಲಿ ತಡೆದು ನಿಲ್ಲಿಸಿ ಈತನನ್ನು ಪೊಲೀಸರು ಕಸ್ಟಡಿಗೆ ಪಡೆದ ಹಿನ್ನೆಲೆಯಲ್ಲಿ ಈತನ ಕಾರನ್ನು ಬಳಿಕ ಟೋವ್ ಮಾಡುವ ಮೂಲಕ (ಬೇರೆ ವಾಹನದ ಮೂಲಕ ಸ್ಥಳಾಂತರ ಮಾಡುವುದು) ಬೇರೆಡೆ ತೆಗೆದುಕೊಂಡು ಹೋಗಲಾಯಿತು. ಅಲ್ಲದೇ ಆತನನ್ನು ಜೈಲಿಗೆ ಕಳುಹಿಸಲಾಯಿತು. ನಂತರ ಆತನಿಗೆ 5 ಸಾವಿರ ಡಾಲರ್ ದಂಡ ವಿಧಿಸಿ ಜಾಮೀನು ನೀಡಲಾಗಿದ್ದು, ನವಂಬರ್ 13ಕ್ಕೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಲಾಗಿದೆ. 

click me!