
ನವದೆಹಲಿ (ಅ.31): ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ 25ನೇ ದಿನಕ್ಕೆ ಕಾಲಿಟ್ಟಿದೆ. ವಿಶ್ವಸಂಸ್ಥೆ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಗಾಜಾದಲ್ಲಿ ಸುಮಾರು 420 ಮಕ್ಕಳು ಪ್ರತಿದಿನ ಇಸ್ರೇಲ್ ಸೇನೆಯಿಂದ ದಾಳಿಗೆ ಒಳಗಾಗುತ್ತಿದ್ದಾರೆ. ಮತ್ತೊಂದೆಡೆ, ಇಸ್ರೇಲಿ ಸೇನೆ ಸೋಮವಾರ ತಡರಾತ್ರಿ ಯುದ್ಧದ ಕುರಿತಾಗಿ ತನ್ನ ಸ್ಪರ್ಷಟ ಸ್ಪಷ್ಟ ನಿರ್ಧಾರವನ್ನು ತಿಳಿಸಿದೆ. ನಾವು ಹಲವಾರು ಗಂಟೆಗಳ ಕಾಲ ಗಾಜಾದಲ್ಲಿ ವಿಶೇಷ ಮತ್ತು ರಹಸ್ಯ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಿದ್ದೇವೆ. ಈ ವೇಳೆ ಹಮಾಸ್ ಭಯೋತ್ಪಾದಕರ ವಶದಲ್ಲಿದ್ದ ಮಹಿಳಾ ಸೈನಿಕರನ್ನು ರಕ್ಷಿಸಿದ್ದೇವೆ. ಸೈನಿಕ ಈಗ ತಮ್ಮ ಕುಟುಂಬದೊಂದಿಗೆ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಮುಂದಿನ ದಿನಗಳಲ್ಲಿ ಗಾಜಾದಲ್ಲಿ ಭೂ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗುವುದು ಎಂದು ಇಸ್ರೇಲ್ ಸೇನೆಯೂ ಸ್ಪಷ್ಟಪಡಿಸಿದೆ. ಮತ್ತೊಂದೆಡೆ, ಸೋಮವಾರ ತಡರಾತ್ರಿ, ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು, ಇಸ್ರೇಲ್ ಅಕ್ಟೋಬರ್ 7 ರಿಂದ ಯುದ್ಧದಲ್ಲಿದೆ. ಇಸ್ರೇಲ್ ಈ ಯುದ್ಧವನ್ನು ಪ್ರಾರಂಭಿಸಲಿಲ್ಲ. ಇಸ್ರೇಲ್ ಈ ಯುದ್ಧವನ್ನು ಬಯಸಲಿಲ್ಲ. ನಾವು ಕದನ ವಿರಾಮವನ್ನು ಘೋಷಿಸುವುದಿಲ್ಲ. ಹಾಗೇನಾದರೂ ಕದನ ವಿರಾಮ ಘೋಷಣೆ ಮಾಡಿದಲ್ಲಿ ಅದು ನಮ್ಮ ಶರಣಾಗತಿಯಂತೆ ಅನಿಸುತ್ತದೆ ಎಂದಿದ್ದಾರೆ.
'ನಾವು ಹಮಾಸ್‌ನಂತಹ ಅನಾಗರಿಕರ ವಿರುದ್ಧ ಹೋರಾಡಲು ಸಿದ್ಧರಿಲ್ಲದ ಹೊರತು ಉತ್ತಮ ಭವಿಷ್ಯದ ಭರವಸೆಯನ್ನು ಕಂಡುಕೊಳ್ಳಲು ಸಾಧ್ಯವಾಗೋದಿಲ್ಲ' ಎಂದು ನೆತನ್ಯಾಹು ಹೇಳಿದ್ದಾರೆ. ಇದೇ ವೇಳೆ ಹಮಾಸ್ ಒತ್ತೆಯಾಳುಗಳ ವಿಡಿಯೋವನ್ನು ಬಿಡುಗಡೆ ಮಾಡಿದೆ. 76 ಸೆಕೆಂಡುಗಳ ವಿಡಿಯೋದಲ್ಲಿ ಮೂವರು ಇಸ್ರೇಲಿ ಮಹಿಳೆಯರು ಕಾಣಿಸಿಕೊಂಡಿದ್ದಾರೆ. ಈ ಮಹಿಳೆಯರಲ್ಲಿ ಒಬ್ಬರು, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜನರನ್ನು ರಕ್ಷಿಸಲು ವಿಫಲರಾಗಿದ್ದಾರೆ. ಬಿಡುಗಡೆಗೆ ಕೈದಿಗಳ ವಿನಿಮಯದ ಪ್ರಸ್ತಾವನೆಯನ್ನು ಒಪ್ಪಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ಅದೇ ಸಮಯದಲ್ಲಿ, ಹಮಾಸ್ ಬಿಡುಗಡೆ ಮಾಡಿದ ವೀಡಿಯೊವನ್ನು ಇಸ್ರೇಲ್ ಪ್ರಚಾರ ಎಂದು ಕರೆದಿದೆ. ನಾವು ಒತ್ತೆಯಾಳುಗಳನ್ನು ಮರಳಿ ತರಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಹಮಾಸ್ 200-250 ಜನರನ್ನು ಒತ್ತೆಯಾಳಾಗಿ ಇರಿಸಿದೆ. ಇಲ್ಲಿಯವರೆಗೆ ಕೇವಲ 4 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದೆ.
ಈ ನಡುವೆ ಗಾಜಾ ನಗರದಲ್ಲಿ ವಾಸಿಸುವ ಜನರಿಗೆ ನಗರವನ್ನು ಖಾಲಿ ಮಾಡುವಂತೆ ಫೋನ್‌ನಲ್ಲಿ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಅಲ್ ಜಜೀರಾ ವರದಿ ಮಾಡಿವೆ. ಪತ್ರಕರ್ತೆ ಯುಮ್ನಾ ಅಲ್ ಸಯೀದ್ ಈ ಬಗ್ಗೆ ಮಾತನಾಡಿದ್ದು, ನನ್ನ ಕುಟುಂಬಕ್ಕೆ ಇಸ್ರೇಲಿ ಸೇನೆಯಿಂದ ಕರೆ ಬಂದಿದೆ. ತಕ್ಷಣವೇ ಗಾಜಾವನ್ನು ತೊರೆಯುವಂತೆ ತಿಳಿಸಲಾಗಿದೆ ಎಂದಿದ್ದಾರೆ. ಇದಕ್ಕೂ ಮುನ್ನ ಇಸ್ರೇಲ್ ಸೇನೆ ಆಕಾಶದಿಂದ ಕರಪತ್ರಗಳನ್ನು ಎಸೆದಿತ್ತು. ಅದರ ಮೇಲೆ, ಹಮಾಸ್ ದಾಳಿಯಿಂದಾಗಿ ಇಸ್ರೇಲಿ ಸೇನೆಯು ಪ್ರತಿಕ್ರಿಯಿಸುತ್ತಿದೆ. ಹಮಾಸ್ ಕಾರ್ಯನಿರ್ವಹಿಸುತ್ತಿರುವ ಕಟ್ಟಡಗಳು ಸಂಪೂರ್ಣವಾಗಿ ನಾಶವಾಗುತ್ತದೆ ಎಂದು ಬರೆಯಲಾಗಿತ್ತು.
ಇಸ್ರೇಲ್ ಮೇಲೆ ಮುಗಿಬೀಳಲು ರಣತಂತ್ರ: ಉಗ್ರ ಸಂಘಟನೆಗಳ ಜೊತೆ ಹಿಜ್ಬುಲ್ಲಾ ನಾಯಕರ ರಹಸ್ಯ ಸಭೆ
ಇನ್ನು ವೆಸ್ಟ್ ಬ್ಯಾಂಕ್ ಅಥವಾ ಪಶ್ಚಿಮ ದಂಡೆಯಲ್ಲೂ ಪರಿಸ್ಥಿತಿ ಹದಗೆಡುತ್ತಿದೆ. ಇಸ್ಲಾಮಿಕ್ ಜಿಹಾದ್ ನ ನಾಲ್ವರು ಇಲ್ಲಿ ಹತ್ಯೆಯಾಗಿದ್ದಾರೆ. ಇಲ್ಲಿಯವರೆಗೆ 120 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ. 600ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಇವರಲ್ಲಿ ಹಲವರು ಹಮಾಸ್ ಭಯೋತ್ಪಾದಕರು ಎನ್ನಲಾಗಿದೆ. ಅದೇ ಸಮಯದಲ್ಲಿ, ಅಕ್ಟೋಬರ್ 30 ರಂದು, ಜೆನಿನ್ ಪ್ರದೇಶಕ್ಕೆ ಪ್ರವೇಶಿಸಿದ ಇಸ್ರೇಲಿ ಟ್ಯಾಂಕ್‌ಗಳ ಮೇಲೆ ಪ್ಯಾಲೆಸ್ಟೀನಿಯಾದವರು ಕಲ್ಲು ತೂರಿದ್ದಾರೆ.
ದೇಶದಲ್ಲಿ ಯುದ್ಧ : ಅಮೆರಿಕದಲ್ಲಿ ಜಾಲಿ ಮೂಡ್‌ನಲ್ಲಿ ಇಸ್ರೇಲ್ ಅಧ್ಯಕರ ಮಗ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ