ಗಾಜಾ ಮೇಲೆ ಪರಮಾಣು ಬಾಂಬ್ ಹಾಕೋದೂ ಒಂದು ಆಯ್ಕೆ ಎಂದ ಇಸ್ರೇಲ್‌ ಸಚಿವ: ಪ್ರಧಾನಿ ನೆತನ್ಯಾಹು ಹೇಳಿದ್ದೀಗೆ..

By BK Ashwin  |  First Published Nov 5, 2023, 4:22 PM IST

ಇಸ್ರೇಲ್‌ಗೆ ಗಾಜಾ ಪಟ್ಟಿಯ ಮೇಲೆ ಪರಮಾಣು ಬಾಂಬ್ ಅನ್ನು ಹಾಕುವುದು ಸಹ ಸಾಧ್ಯವಾದ ಆಯ್ಕೆಗಳಲ್ಲಿ ಒಂದಾಗಿದೆ ಎಂದು ಇಸ್ರೇಲ್‌ ಸಚಿವ ಅಮಿಚೈ ಎಲಿಯಾಹು ಹೇಳಿದ್ದಾರೆ.


ಜೆರುಸಲೇಂ (ನವೆಂಬರ್ 5, 2023): ಹಮಾಸ್‌ನೊಂದಿಗೆ ಇಸ್ರೇಲ್‌ ಯುದ್ಧ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣಿಸ್ತಿಲ್ಲ. ಈ ನಡುವೆ ಹಮಾಸ್ ಭಯೋತ್ಪಾದಕ ಗುಂಪಿನೊಂದಿಗೆ ನಡೆಯುತ್ತಿರುವ ಯುದ್ಧದಲ್ಲಿ ಇಸ್ರೇಲ್‌ ಪರಮಾಣು ಅಥವಾ ನ್ಯೂಕ್ಲಿಯರ್‌ ಬಾಂಬ್ ಹಾಕುತ್ತಾ ಎಂಬ ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣ ಇಸ್ರೇಲ್‌ ಸಚಿವರೊಬ್ಬರ ಹೇಳಿಕೆ.

ಇಸ್ರೇಲ್‌ಗೆ ಗಾಜಾ ಪಟ್ಟಿಯ ಮೇಲೆ ಪರಮಾಣು ಬಾಂಬ್ ಅನ್ನು ಹಾಕುವುದು ಸಹ ಸಾಧ್ಯವಾದ ಆಯ್ಕೆಗಳಲ್ಲಿ ಒಂದಾಗಿದೆ ಎಂದು ಇಸ್ರೇಲ್‌ ಹೆರಿಟೇಜ್ ಸಚಿವ ಅಮಿಚೈ ಎಲಿಯಾಹು ಹೇಳಿದ್ದಾರೆ. ಇಸ್ರೇಲ್‌ನ ಓಟ್ಜ್ಮಾ ಯೆಹುದಿತ್ ಪಕ್ಷದ ಸದಸ್ಯ ಎಲಿಯಾಹು ರೇಡಿಯೋ ಸಂದರ್ಶನದಲ್ಲಿ ಈ ಹೇಳಿಕೆಗಳನ್ನು ನೀಡಿದ್ದಾರೆ.

Tap to resize

Latest Videos

ಇದನ್ನು ಓದಿ: ಇಸ್ರೇಲ್‌ ಭಾರಿ ದಾಳಿ ಮಾಡಿದ್ರೂ ಹಮಾಸ್‌ ಸುರಂಗ ಸೇಫ್‌: ಪೂರ್ಣ ಪ್ರಮಾಣದ ಭೂದಾಳಿ ಹಿಂದೇಟಿಗೂ ಇದೇ ಕಾರಣ!

ಆದರೆ, ತಮ್ಮದೇ ಸರ್ಕಾರದ ಸಚಿವನ ಹೇಳಿಕೆಯನ್ನು ಇಸ್ರೇಲ್‌ ಪ್ರಧಾನಿ  ನೆತನ್ಯಾಹು ಖಂಡಿಸಿದ್ದಾರೆ. ಎಲಿಯಾಹು ಅವರ ಕಾಮೆಂಟ್‌ ವಾಸ್ತವವನ್ನು ಆಧರಿಸಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ. ಇಸ್ರೇಲ್ ಮತ್ತು ಐಡಿಎಫ್ ಅಮಾಯಕರಿಗೆ ಹಾನಿಯಾಗದಂತೆ ಅಂತಾರಾಷ್ಟ್ರೀಯ ಕಾನೂನಿನ ಅತ್ಯುನ್ನತ ಮಾನದಂಡಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿವೆ. ನಮ್ಮ ವಿಜಯದವರೆಗೂ ನಾವು ಅದನ್ನು ಮುಂದುವರಿಸುತ್ತೇವೆ ಎಂದು ಇಸ್ರೇಲ್‌ ಪ್ರಧಾನಿ ಎಕ್ಸ್‌ನಲ್ಲಿ ಬರೆದಿದ್ದಾರೆ. 

ಹಾಗೂ, ಇಸ್ರೇಲ್‌ನ ವಿರೋಧ ಪಕ್ಷದ ನಾಯಕ ಮತ್ತು ಇಸ್ರೇಲ್‌ ಮಾಜಿ ಪ್ರಧಾನಿ ಯೇರ್‌ ಲ್ಯಾಪಿಡ್ ಕೂಡ ಅಮಿಚೈ ಎಲಿಯಾಹು ಅವರನ್ನು ಟೀಕಿಸಿದ್ದಾರೆ. ಹಾಗೂ, ಬೇಜವಾಬ್ದಾರಿ ಸಚಿವರನ್ನು ವಜಾಗೊಳಿಸುವಂತೆಯೂ ಅವರು ಕರೆ ನೀಡಿದ್ದಾರೆ. 

ಇದನ್ನೂ ಓದಿ: ಗಾಜಾದಲ್ಲಿ ಇಸ್ರೇಲ್‌ ಸೇನೆಯಿಂದ ಭಾರಿ ಪ್ರಮಾಣದಲ್ಲಿ ಭೂದಾಳಿ, ವಾಯುದಾಳಿ: ಇಂಟರ್ನೆಟ್‌, ಮೊಬೈಲ್‌ ಸ್ತಬ್ಧ

ಗಾಜಾ ನಿವಾಸಿಗಳನ್ನು ನಾಜಿಗಳು ಎಂದು ಕರೆದ ಎಲಿಯಾಹು ಗಾಜಾ ಸ್ಟ್ರಿಪ್‌ಗೆ ಮಾನವೀಯ ನೆರವು ನೀಡ್ತಿರೋದನ್ನು ಸಹ ವಿರೋಧಿಸಿದರು ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ಅಲ್ಲದೆ, ಗಾಜಾ ಪಟ್ಟಿಯಲ್ಲಿ ಯಾವುದೇ ಸಂಬಂಧವಿಲ್ಲದ ನಾಗರಿಕರು ಇಲ್ಲ ಎಂದು ಅವರು ಹೇಳಿದ್ದು, ಕಲಹ ಪೀಡಿತ ಪ್ರದೇಶದಲ್ಲಿ ವಾಸಿಸುವ ಪ್ರತಿಯೊಬ್ಬರೂ ಹಮಾಸ್‌ನೊಂದಿಗೆ ಒಂದಲ್ಲ ಒಂದು ರೀತಿ ಸಂಪರ್ಕ ಹೊಂದಿದ್ದಾರೆ ಎಂದು ಸೂಚಿಸಿದ್ದಾರೆ.

ಅಲ್ಲದೆ, ಗಾಜಾ ಪಟ್ಟಿಯನ್ನು ಇಸ್ರೇಲ್‌ ಹಿಂಪಡೆಯಲು ಮತ್ತು ಅಲ್ಲಿ ವಸಾಹತುಗಳನ್ನು ಪುನಃಸ್ಥಾಪಿಸಲು ಸಹ ಬಲಪಂಥೀಯ ಸಚಿವರು ಬೆಂಬಲಿಸಿದರು. ಇನ್ನು, ಗಾಜಾ ಇಸ್ರೇಲ್‌ ವಶಕ್ಕೆ ಬಂದರೆ ಪ್ಯಾಲೆಸ್ತೀನ್‌ನವರು ಏನು ಮಾಡಬೇಕು ಎಂದು ಕೇಳಿದಾಗ, ಗಾಜಾದಲ್ಲಿರುವ ರಾಕ್ಷಸರು ಐರ್ಲೆಂಡ್ ಅಥವಾ ಮರುಭೂಮಿಗೆ ಹೋಗಬಹುದು ಮತ್ತು ತಮ್ಮಿಂದಲೇ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಎಲಿಯಾಹು ಹೇಳಿದರು ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ಇದನ್ನು ಓದಿ: 2024ಕ್ಕೆ ಮತ್ತೊಂದು ಯುದ್ಧ ಕಾದಿದೆಯಾ? ಹಮಾಸ್ ದಾಳಿ ಹಿಂದಿದೆ ಸೌದಿ - ಇಸ್ರೇಲ್‌ ದೋಸ್ತಿ ತರ್ಕ!

ಉತ್ತರದ ಪಟ್ಟಿಗೆ ಅಸ್ತಿತ್ವದಲ್ಲಿರಲು ಯಾವುದೇ ಹಕ್ಕಿಲ್ಲ ಎಂದೂ ರೇಡಿಯೋ ಸಂದರ್ಶನದಲ್ಲಿ ಹೇಳಿದ್ದಾರೆ. ಹಾಗೆ, ಪ್ಯಾಲೆಸ್ತೀನ್‌ ಅಥವಾ ಹಮಾಸ್ ಧ್ವಜವನ್ನು ಹಾರಿಸುವ ಯಾವುದೇ ವ್ಯಕ್ತಿ ಇನ್ನು ಮುಂದೆ ಭೂಮಿಯಲ್ಲಿ ವಾಸಿಸಬಾರದು ಎಂದೂ ಅವರು ಹೇಳಿದ್ದಾರೆ.

ಹಮಾಸ್ ದಾಳಿಯಲ್ಲಿ ಸುಮಾರು 1,400 ಇಸ್ರೇಲಿಗಳು ಬಲಿಯಾಗಿದ್ದಾರೆ. ಈ ಮಧ್ಯೆ ಯುದ್ಧದಲ್ಲಿ 9,400ಕ್ಕೂ ಹೆಚ್ಚು ಪ್ಯಾಲೆಸ್ತೀನ್‌ ಜನರು ಬಲಿಯಾಗಿದ್ದಾರೆ ಎಂದು ಹಮಾಸ್ ಹೇಳಿಕೊಂಡಿದೆ.

ಇದನ್ನು ಓದಿ: ಉತ್ತರ ಗಾಜಾ ತೊರೆಯಲು ಇಸ್ರೇಲ್‌ ಎಚ್ಚರಿಕೆ: ದಕ್ಷಿಣಕ್ಕೆ ಹೋಗದಿದ್ದರೆ ಉಗ್ರರೆಂದು ಪರಿಗಣಿಸುತ್ತೇವೆ ಎಂದು ವಾರ್ನಿಂಗ್‌

click me!