ಗಾಜಾ ನಗರ ಪೂರ್ಣ ಸುತ್ತುವರಿದ ಇಸ್ರೇಲ್‌ಗೆ ಕನಿಷ್ಠ 1 ಲಕ್ಷ ಭಾರತೀಯ ಕಟ್ಟಡ ಕಾರ್ಮಿಕರು?

By Kannadaprabha News  |  First Published Nov 7, 2023, 7:19 AM IST

ಹಮಾಸ್ ಜೊತೆಗಿನ ಯುದ್ಧದ ಬಳಿಕ ಕಟ್ಟಡ ಕಾರ್ಮಿಕರ ತೀವ್ರ ಕೊರತ ಎದುರಿಸುತ್ತಿರುವ ಇಸ್ರೇಲ್, ಕನಿಷ್ಠ 1 ಲಕ್ಷ ಕಟ್ಟಡ ನಿರ್ಮಾಣ ಕಾರ್ಮಿಕರಿಗಾಗಿ ಭಾರತದತ ಮುಖ ಮಾಡಿದೆ.


ಡೇರ್‌ ಅಲ್‌ ಬಲಾಹ್‌ (ಗಾಜಾ): ಕಳೆದೊಂದು ತಿಂಗಳಿನಿಂದ ನಡೆಯುತ್ತಿರುವ ಗಾಜಾಪಟ್ಟಿ ಪ್ರದೇಶದ ಮೇಲಿನ ಪ್ರತಿದಾಳಿಯಲ್ಲಿ ಮಹತ್ವದ ಗೆಲುವು ಸಾಧಿಸಿರುವ ಇಸ್ರೇಲಿ ಪಡೆಗಳು, ಸೋಮವಾರ ಇಡೀ ಗಾಜಾ ನಗರವನ್ನು ಸುತ್ತುವರೆದಿದ್ದು, ಅದನ್ನು ಗಾಜಾಪಟ್ಟಿಯ ಇತರೆ ಪ್ರದೇಶಗಳೊಂದಿಗೆ ಸಂಪರ್ಕ ಕಡಿತಗೊಳಿಸುವಲ್ಲಿ ಯಶಸ್ವಿಯಾಗಿವೆ.

ಗಾಜಾ ನಗರದ (Gaza City) ಹಮಾಸ್‌ ಉಗ್ರರ (Hamas militants) ಪ್ರಮುಖ ಕೇಂದ್ರ ಸ್ಥಾನವಾಗಿದ್ದು, ಅವರ ಬಹುತೇಕ ಎಲ್ಲಾ ಚಟುವಟಿಕೆಗಳು ಇಲ್ಲೇ ನಡೆಯುತ್ತಿದ್ದವು. ಆದರೆ ಕಳೆದ ಅ.7ರಂದು ಉಗ್ರರು ತನ್ನ ದೇಶದೊಳಗೆ ನುಗ್ಗಿ 1400 ಅಮಾಯಕರನ್ನು ಹತ್ಯೆಗೈದ ಬಳಿಕ ಇಸ್ರೇಲಿ ಪಡೆಗಳು ವಾಯು ಮತ್ತು ಭಾರೀ ಪ್ರಮಾಣದ ಭೂದಾಳಿ ಆರಂಭಿಸಿದ್ದವು. ಇದರಲ್ಲಿ ಗಾಜಾ ಸೇರಿದಂತೆ ಉತ್ತರ ಗಾಜಾದ ಹಮಾಸ್‌ ಉಗ್ರರ ಕಾರ್ಯಾಚರಣೆಯ ಬಹುತೇಕ ಕಟ್ಟಡಗಳನ್ನು ಪಡೆಗಳು ಧ್ವಂಸಗೊಳಿಸಿವೆ.

Tap to resize

Latest Videos

ತುಂಬಿದ ಸಭೆಯಲ್ಲಿ ಜರ್ಮನ್‌ ಸಚಿವೆಗೆ ಸಚಿವನಿಂದ ಚುಂಬನ: ಸುತ್ತಲಿದ್ದವರೇ ಶಾಕ್‌

ಅದರ ಮುಂದುವರೆದ ಭಾಗವಾಗಿ ಇದೀಗ ಇಡೀ ನಗರವನ್ನು ಇಸ್ರೇಲಿ ಪಡೆಗಳು ಎಲ್ಲೆಡೆಯಿಂದ ಸುತ್ತುವರೆದಿವೆ. ಈ ಮೂಲಕ ಭೂಮಿಯ ಮೇಲ್ಭಾಗದಲ್ಲಿ ಗಾಜಾಪಟ್ಟಿ ಜೊತೆಗಿನ ಸಂಪರ್ಕವನ್ನು ಗಾಜಾ ನಗರ ಕಳೆದುಕೊಂಡಿದೆ. ಮುಂದಿನ ಹಂತವಾಗಿ ಇಸ್ರೇಲಿ ಪಡೆಗಳು ಯಾವುದೇ ಕ್ಷಣದೊಳಗೆ ನಗರದೊಳಗೆ ನುಗ್ಗಿ ಇನ್ನೂ ಅಡಗಿರಬಹುದಾದ ಉಗ್ರರ ಹತ್ಯೆಗೆ ಕಾರ್ಯಾಚರಣೆ ನಡೆಸಲಿವೆ ಎನ್ನಲಾಗಿದೆ.

ಗೆರಿಲ್ಲಾ ಯುದ್ಧ:

ಗಾಜಾ ನಗರ ಇಸ್ರೇಲಿಗಳ ಕೈವಶವಾದರೂ, ನೆಲದಾಳದ ಸುರಂಗಗಳ (underground tunnels) ಮೂಲಕ ಹಮಾಸ್‌ ಉಗ್ರರು ಇನ್ನೂ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹೀಗಾಗಿ ಇಸ್ರೇಲಿ ಸೇನೆ ನಗರದೊಳಗೆ ನುಗ್ಗಿದ ಬಳಿಕ ಹಮಾಸ್‌ ಉಗ್ರರು ಗೆರಿಲ್ಲಾ (ಹೊಂಚು ದಾಳಿ) ಮಾದರಿಯಲ್ಲಿ ಅಡಗಿಕೊಂಡು ಆಯಕಟ್ಟಿನ ಸ್ಥಳಗಳಿಂದ ದಾಳಿ ನಡೆಸುವುದು ಖಚಿತ ಎನ್ನಲಾಗಿದೆ. ಇಂಥದ್ದೊಂದು ಯುದ್ಧಕ್ಕೆ ಈಗಾಗಲೇ 40 ಸಾವಿರಕ್ಕೂ ಹೆಚ್ಚು ಹಮಾಸ್‌ ಉಗ್ರರು ಅಣಿಯಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಈಗಾಗಲೇ 9500ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಮತ್ತು 1400ಕ್ಕೂ ಹೆಚ್ಚು ಇಸ್ರೇಲಿಗಳ ಸಾವಿಗೆ ಸಾಕ್ಷಿಯಾದ ಯುದ್ಧ ಮುಂದಿನ ದಿನಗಳಲ್ಲಿ ಇನ್ನಷ್ಟು ಭಾರೀ ಪ್ರಮಾಣದ ಸಾವು ನೋವಿಗೆ ಕಾರಣವಾಗಲಿದೆ ಎಂದು ಹೇಳಲಾಗಿದೆ.

ಇಸ್ರೇಲ್‌ ಕಟ್ಟಿಹಾಕಲು ಸುರಂಗದಲ್ಲೇ ಹೊಂಚು ಹಾಕಿದ 40000 ಉಗ್ರರು: ಸುರಂಗಗಳಲ್ಲಿ ಶಸ್ತ್ರಾಸ್ತ್ರ, ಆಹಾರ ಸಂಗ್ರಹ

15 ಲಕ್ಷ ಜನರು ನಿರಾಶ್ರಿತ

ಗಾಜಾ ನಗರ ಮತ್ತು ಉತ್ತರ ಗಾಜಾದ 15 ಲಕ್ಷಕ್ಕೂ ಹೆಚ್ಚು ಜನರು ಈಗಾಗಲೇ ತಮ್ಮ ಮನೆಗಳನ್ನು ತೊರೆದು ದೇಶದ ದಕ್ಷಿಣ ಭಾಗಗಳತ್ತ ವಲಸೆ ಹೋಗಿದ್ದಾರೆ. ಅವರೆಲ್ಲಾ ವಿಶ್ವಸಂಸ್ಥೆಯ ನಿರಾಶ್ರಿತ ಶಿಬಿರಗಳಲ್ಲಿ ವಾಸಿಸುತ್ತಿದ್ಧಾರೆ. ಮೊದಲೇ ವಿಶ್ವದ ಅತ್ಯಂತ ಜನದಟ್ಟಣೆಯ ಪ್ರದೇಶ ಎಂಬ ಕುಖ್ಯಾತಿ ಹೊಂದಿದ್ದ ಗಾಜಾಪಟ್ಟಿಯಲ್ಲಿ ಇದೀಗ ಭಾರೀ ಆಹಾರ, ವಸತಿ, ವೈದ್ಯಕೀಯ ನೆರವಿನ ಕೊರತೆ ಕಾಣಿಸಿಕೊಂಡಿದೆ. 23 ಲಕ್ಷ ಜನರ ಪೈಕಿ ಅಂದಾಜು 15 ಲಕ್ಷ ಜನರು ಉತ್ತರ ಗಾಜಾ ತೊರೆದು ದಕ್ಷಿಣ ಗಾಜಾಕ್ಕೆ ತೆರಳಿದ್ದಾರೆ. ಅಲ್ಲಿ ತಂಗಲು ಕಟ್ಟಡಗಳು ಇಲ್ಲದೆ ಜನತೆ ಬೀದಿಯಲ್ಲೇ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ಈ ಯುದ್ಧದಲ್ಲಿ ಸಾವನ್ನಪ್ಪಿದ ಪ್ಯಾಲೆಸ್ತೀನೀಯರ (Palestinians) ಸಂಖ್ಯೆ 10 ಸಾವಿರ ದಾಟಿದೆ ಎಂದು ಗಾಜಾ ಆಡಳಿತ ಹೇಳಿದೆ.

ಇಸ್ರೇಲ್‌ಗೆ ಲಕ್ಷ ಭಾರತೀಯ ಕಟ್ಟಡ ಕಾರ್ಮಿಕರು?

ಟೆಲ್‌ ಅವಿವ್: ಹಮಾಸ್ ಜೊತೆಗಿನ ಯುದ್ಧದ ಬಳಿಕ ಕಟ್ಟಡ ಕಾರ್ಮಿಕರ ತೀವ್ರ ಕೊರತ ಎದುರಿಸುತ್ತಿರುವ ಇಸ್ರೇಲ್, ಕನಿಷ್ಠ 1 ಲಕ್ಷ ಕಟ್ಟಡ ನಿರ್ಮಾಣ ಕಾರ್ಮಿಕರಿಗಾಗಿ ಭಾರತದತ ಮುಖ ಮಾಡಿದೆ.  ಯುದ್ಧ ಆರಂಭಕ್ಕೂ ಮುನ್ನ 93000 ಪ್ಯಾಲೆಸ್ತೀನಿಯರಿಗೆ ಕೆಲಸದ ಲೈಸೆನ್ಸ್‌ ನೀಡಿತ್ತು.  ಆದರೆ ಯುದ್ಧದ ಬಳಿಕ ಈ ಲೈಸೆನ್ಸ್ ರದ್ದಾದ ಬಳಿಕ ಕಟ್ಟಡ ನಿರ್ಮಾಣ ಕಾರ್ಮಿಕರ ತೀವ್ರ ಕೊರತೆ ಎದುರಿಸುತ್ತಿದೆ. ಹೀಗಾಗಿ 1 ಲಕ್ಷ ಭಾರತೀಯರ ನೇಮಕ ಮಾಡಿಕೊಳ್ಳಲು ಅನುಮತಿ ನೀಡುವಂತೆ ಇಸ್ರೇಲ್ ಕಟಡ ನಿರ್ಮಾಣಕಾರರ ಸಂಘ ಸರ್ಕಾರಕ್ಕೆ ಮನವಿ ಮಾಡಿದೆ.

ಮಗನ ಹೆಸರಲ್ಲಿ ಚಂದ್ರಶೇಖರನ ಸೇರಿಸಿ ಕಾರಣ ಹೇಳಿದ ಎಲಾನ್ ಮಸ್ಕ್‌..!

ಮಧ್ಯಪ್ರಾಚ್ಯಕ್ಕೆ  ಅಮೆರಿಕಾದ ಪರಮಾಣು ಸಬ್‌ ಮರೀನ್

ವಾಷಿಂಗ್ಟನ್: ಇಸ್ರೇಲ್ - ಹಮಾಸ್ ಯುದ್ಧ ಇನ್ನಷ್ಟು ತೀವ್ರಗೊಳ್ಳುವ  ಆತಂಕದ ನಡುವೆಯೇ ಅಮೆರಿಕ ತನ್ನ ಪರಮಾಣು ಸಬ್‌ ಮರೀನ್‌ ಒಂದನ್ನು ಮಧ್ಯಪ್ರಾಚ್ಯಕ್ಕೆ ರವಾನಿಸಿದೆ. ಇದು ಪರಮಾಣು ಸಿಡಿತಲೆ ಕ್ಷಿಪಣಿಗಳನ್ನು ಹಾರಿಸಬಲ್ಲ ಸಾಮರ್ಥ್ಯ ಹೊಂದಿದೆ. ಇರಾನ್, ಲೆಬನಾನ್ ಸೇರಿದಂತೆ ಕೆಲ ದೇಶಗಳು ಉಗ್ರರ ಬೆಂಬಲಕ್ಕೆ ನಿಂತಿವೆ. ಈ  ಬೆಂಬಲ ಇನ್ನಷ್ಟು ಹೆಚ್ಚಿ ಯುದ್ಧ ತೀವ್ರ ಸ್ವರೂಪ ಪಡೆದರೆ ಇಸ್ರೇಲ್ ಒಂದಿಷ್ಟು ಹಾನಿ ಎದುರಿಸಬೇಕಾಗುತ್ತದೆ. ಹೀಗಾಗಿ ಇಸ್ರೇಲ್‌ಗೆ ಬೆಂಬಲ ಸೂಚಿಸುತ್ತಿರುವ ಅಮೆರಿಕಾ ಈಗಾಗಲೇ ಮಧ್ಯಪ್ರಾಚ್ಯದಲ್ಲಿ ಇರುವ ತನ್ನ ಯುದ್ಧನೌಕೆಗಳ ಜೊತೆಗೆ ಸಬ್‌ ಮರೀನ್‌ ಗಳನ್ನೂ ನಿಯೋಜಿಸಿದೆ.

ಸಂಘರ್ಷ ತಗ್ಗಲಿ: ಮೋದಿ, ಇರಾನ್ ಅಧ್ಯಕ್ಷ
ನವದೆಹಲಿ: ಇಸ್ರೇಲ್ ಮತ್ತು ಗಾಜಾಪಟ್ಟಿಯಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಕಡಿಮೆ ಮಾಡಬೇಕು ಮತ್ತು ಇಲ್ಲಿ ಮಾನವೀಯತೆಯ ಸಹಾಯವನ್ನು ಹೆಚ್ಚಳ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಇರಾನ್ ಅಧ್ಯಕ್ಷ ಸೈಯದ್‌ ಇಬ್ರಾಹಿಂ ರೈಸಿ ಅಭಿಪ್ರಾಯ ವ್ಯಕ್ತಪಡಿಸಿದರು.  ಸಂಘರ್ಷದ ಕುರಿತಾಗಿ ದೂರವಾಣಿಯಲ್ಲಿ ಚರ್ಚೆ ನಡೆಸಿರುವ ಇಬ್ಬರು ನಾಯಕರು, ಇಲ್ಲಾಗುತ್ತಿರುವ ಉಗ್ರ ದಾಳಿ ಹಾಗೂ ನಾಗರಿಕರ ಸಾವಿಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ.
 

click me!