ಅಮೆರಿಕಾದಲ್ಲಿ ಮುಂದುವರೆದ ಖಾಲಿಸ್ತಾನಿಗಳ ಉಪಟಳ: ಭಾರತೀಯ ಪತ್ರಕರ್ತನ ಮೇಲೆ ಹಲ್ಲೆ

By Anusha KbFirst Published Mar 26, 2023, 11:11 AM IST
Highlights

ವಾಷಿಂಗ್ಟನ್ ಮೂಲದ ಭಾರತೀಯ ಪತ್ರಕರ್ತನ ಮೇಲೆ ಖಲಿಸ್ತಾನಿಗಳು ಪೌರುಷ ತೋರಿದ್ದಾರೆ. ಅಮೆರಿಕಾದ ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಹೊರಗೆ ಖಲಿಸ್ತಾನ್ ಪರ ಪ್ರತಿಭಟನೆ ನಡೆಸುತ್ತಿರುವುದನ್ನು ವರದಿ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.

ವಾಷಿಂಗ್ಟನ್: ವಾಷಿಂಗ್ಟನ್ ಮೂಲದ ಭಾರತೀಯ ಪತ್ರಕರ್ತನ ಮೇಲೆ ಖಲಿಸ್ತಾನಿಗಳು ಪೌರುಷ ತೋರಿದ್ದಾರೆ. ಅಮೆರಿಕಾದ ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಹೊರಗೆ ಖಲಿಸ್ತಾನ್ ಪರ ಪ್ರತಿಭಟನೆ ನಡೆಸುತ್ತಿರುವುದನ್ನು ವರದಿ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಭಾರತೀಯ ಸಂಜಾತ ವಾಷಿಂಗ್ಟನ್‌ ಮೂಲದ ಲಲಿತ್ ಝಾ ಹಲ್ಲೆಗೊಳಗಾದ ಪತ್ರಕರ್ತ.  ಅವಾಚ್ಯವಾಗಿ ನಿಂದಿಸಿ ನಂತರ ದೈಹಿಕವಾಗಿ ಲಲಿತ್ ಝಾ ಮೇಲೆ ಖಾಲಿಸ್ತಾನಿ ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ.  ಘಟನೆಯನ್ನು ಅಮೆರಿಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ತೀವ್ರವಾಗಿ ಖಂಡಿಸಿದೆ. 

ವಾಷಿಂಗ್ಟನ್‌ನಲ್ಲಿ ಖಲಿಸ್ತಾನ್ ಪರ ಪ್ರತಿಭಟನಾಕಾರರು (pro-Khalistan protesters) ಅಮೃತ್‌ಪಾಲ್‌ ಬೆಂಬಲಿಸಿ ಖಲಿಸ್ತಾನ್ ಧ್ವಜಗಳನ್ನು ಬೀಸಿದ್ದಾರೆ. ಅಲ್ಲದೇ ಅಮೆರಿಕಾದ ಸೀಕ್ರೆಟ್ ಸರ್ವೀಸ್ ಸಮ್ಮುಖದಲ್ಲಿ ರಾಯಭಾರ ಕಚೇರಿಗೆ ಇಳಿದ ದುಷ್ಕರ್ಮಿಗಳು, ರಾಯಭಾರ ಕಚೇರಿಯನ್ನು ಧ್ವಂಸಗೊಳಿಸುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕಿದ್ದಲ್ಲದೇ, ಭಾರತೀಯ ರಾಯಭಾರಿ (Indian Ambassador) ತರಂಜಿತ್ ಸಿಂಗ್ ಸಂಧುಗೆ (Taranjit Singh Sandhu) ಬೆದರಿಕೆ ಹಾಕಿದರು ಎಂದು ಲಲಿತ್ ಝಾ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

ಲಂಡನ್‌ನಲ್ಲಿ ಮತ್ತೆ ಖಲಿಸ್ತಾನಿ ಕಿತಾಪತಿ: ಕಚೇರಿ ಮೇಲೆ ನೀರಿನ ಬಾಟಲ್‌ ಎಸೆದು ಪುಂಡಾಟ

ಪ್ರತಿಭಟನಾಕಾರರು ಟರ್ಬನ್‌ (ಶಿರವಸ್ತ್ರ) ಧರಿಸಿದ್ದು, ವಯಸ್ಸಿನ ಭೇದವಿಲ್ಲದೇ ವಯಸ್ಕ ಯುವಕರಿಂದ ವೃದ್ಧರವರೆಗೆ ಅನೇಕರು ಆಗಮಿಸಿ ಖಲಿಸ್ತಾನ್ ಪರ ಘೋಷಣೆ ಕೂಗಿದರು. ವಾಷಿಂಗ್ಟನ್ ಡಿಸಿ, ಮೇರಿಲ್ಯಾಂಡ್, ವರ್ಜಿನಿಯಾ ಮುಂತಾದ ಪ್ರದೇಶಗಳಿಂದ ಆಗಮಿಸಿದ ಇವರು ಇಂಗ್ಲೀಷ್ ಹಾಗೂ ಪಂಜಾಬಿ ಭಾಷೆಯಲ್ಲಿ ಭಾರತ ವಿರೋಧಿ ಭಾಷಣ ಮಾಡಿದ್ದಾರೆ. ಪಂಜಾಬ್‌ನಲ್ಲಿ ಮಾನವಹಕ್ಕುಗಳ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ಪಂಜಾಬ್‌ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಘಟನೆಯನ್ನು ಖಂಡಿಸಿರುವ ಭಾರತೀಯ ರಾಯಭಾರ ಕಚೇರಿ ಹೇಳಿಕೆ ಬಿಡುಗಡೆ ಮಾಡಿದ್ದು, ಹಿರಿಯ ಪತ್ರಕರ್ತರ (senior journalist) ಮೇಲಿನ ಇಂತಹ ಗಂಭೀರ ಮತ್ತು ಅನಗತ್ಯ ದಾಳಿಯನ್ನು ನಾವು ಖಂಡಿಸುತ್ತೇವೆ. ಇಂತಹ ಚಟುವಟಿಕೆಗಳು ಖಲಿಸ್ತಾನಿ ಪ್ರತಿಭಟನಾಕಾರರು ಮತ್ತು ಅವರ ಬೆಂಬಲಿಗರ ಹಿಂಸಾತ್ಮಕ ಮತ್ತು ಸಮಾಜ ವಿರೋಧಿ ಪ್ರವೃತ್ತಿಯನ್ನು ಒತ್ತಿಹೇಳುತ್ತವೆ. ಅವರು ವಾಡಿಕೆಯಂತೆ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ ಎಂದು ತಿಳಿಸಿದೆ. 

Operation Amritpal: '80 ಸಾವಿರ ಪೊಲೀಸರಿದ್ದೀರಿ ಒಬ್ಬನನ್ನು ಹಿಡಿಯೋಕೆ ಆಗಲ್ವಾ?' ಹೈಕೋರ್ಟ್‌ ಛೀಮಾರಿ!

ಇಂದು ಮುಂಜಾನೆ ವಾಷಿಂಗ್ಟನ್ ಡಿಸಿಯಲ್ಲಿ (Washington DC) ಖಲಿಸ್ತಾನ್ ಪ್ರತಿಭಟನಾಕಾರರು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದ ಹಿರಿಯ ಭಾರತೀಯ ಪತ್ರಕರ್ತರನ್ನು ನಿಂದಿಸಿ, ಬೆದರಿಕೆ ಮತ್ತು ದೈಹಿಕವಾಗಿ ಹಲ್ಲೆ ಮಾಡಿದ ಆಘಾತಕಾರಿ ದೃಶ್ಯಗಳನ್ನು ನಾವು ನೋಡಿದ್ದೇವೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಈ ವಿಷಯದಲ್ಲಿ ತ್ವರಿತವಾಗಿ ಪ್ರತಿಕ್ರಿಯಿಸಿದ ಅಮೆರಿಕಾದ ಕಾನೂನು ಜಾರಿ ಸಂಸ್ಥೆಗಳಿಗೆ ಭಾರತೀಯ ರಾಯಭಾರ ಕಚೇರಿಯು ಧನ್ಯವಾದ ತಿಳಿಸಿದೆ.  ಪತ್ರಕರ್ತನನ್ನು ಮೊದಲು ನಿಂದಿಸಿ ಬೆದರಿಸಲಾಯಿತು, ನಂತರ ದೈಹಿಕವಾಗಿ ಹಲ್ಲೆ ನಡೆಸಲಾಯಿತು. ಇದರಿಂದ ಅವರು ಭಯಭೀತರಾಗಿ ಕಾನೂನು ಜಾರಿ ಸಂಸ್ಥೆಗಳಿಗೆ ಕರೆ ಮಾಡಬೇಕಾಗಿತ್ತು, ಅವರು ತಕ್ಷಣವೇ ಪ್ರತಿಕ್ರಿಯಿಸಿದರು ಎಂದು ಭಾರತೀಯ ದೂತಾವಾಸ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. 

ಇತ್ತ ಘಟನೆ ಬಗ್ಗೆ ಝಾ ಕೂಡ ಪ್ರತಿಕ್ರಿಯಿಸಿದ್ದು, ತನ್ನ ಕರ್ತವ್ಯವನ್ನು ಮಾಡುವುದಕ್ಕೆ ಸಹಾಯ ಮಾಡಿದ್ದಕ್ಕಾಗಿ ಹಾಗೂ ತನ್ನನ್ನು ರಕ್ಷಿಸಿದ್ದಾಗಿ ಅಮೆರಿಕಾ ಸೀಕ್ರೆಟ್ ಸರ್ವಿಸ್‌ಗೆ ಧನ್ಯವಾದ ತಿಳಿಸಿದ್ದಾರೆ. ಖಲಿಸ್ತಾನಿ ಪ್ರತ್ಯೇಕ ರಾಷ್ಟಕ್ಕಾಗಿ ಹೋರಾಡುತ್ತಿರುವವರು ಎಡಕಿವಿಗೆ ಕೋಲಿನಿಂದ ಹಲ್ಲೆ ಮಾಡಿದ್ದಾಗಿ ಅವರು ಹೇಳಿದ್ದು, ವಿಡಿಯೋವನ್ನು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. 

 

ಕೃತಜ್ಞತೆಗಳು ಎಂದು  ಅಮೆರಿಕಾದ @SecretService ಗೆ ಟ್ಯಾಗ್ ಮಾಡಿರುವ ಲಲಿತ್ ಝಾ, ನನ್ನ ರಕ್ಷಣೆ ಮಾಡಿದ್ದಕ್ಕೆ ಹಾಗೂ ನನ್ನ ಕೆಲಸ ಮಾಡಲು ಸಹಾಯ ಮಾಡಿದ್ದಕ್ಕೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ. ನೀವು ನನ್ನ ನೆರವಿಗೆ ಬರದಿದ್ದರೆ ನಾನು ಇದನ್ನು ಆಸ್ಪತ್ರೆಯಿಂದ ಬರೆಯುತ್ತಿದೆ. ಸಂಭಾವಿತನಂತಿದ್ದ ವ್ಯಕ್ತಿ  ನನ್ನ ಎಡಕಿವಿಗೆ ಹೊಡೆದ. ಇದರಿಂದ ನಾನು 911ಗೆ ಕರೆ ಮಾಡಬೇಕಾಗಿತ್ತು.  ಇದರಿಂದ ಎರಡು ಪೊಲೀಸ್ ವ್ಯಾನ್‌ಗಳು ನನ್ನ ರಕ್ಷಣೆಗೆ ಧಾವಿಸಿ ಬಂದವು ಎಂದು ಅವರು ಟ್ವಿಟ್‌ನಲ್ಲಿ ಬರೆದುಕೊಂಡಿದ್ದಾರೆ. 

ಒಂದು ಹಂತದಲ್ಲಿ ನಾನು 911ಗೆ ಕರೆ ಮಾಡುವಷ್ಟು ಹೆದರಿ ಹೋದೆ, ನಂತರ ನಾನು ಸೀಕ್ರೆಟ್ ಸರ್ವೀಸ್‌  ಅಧಿಕಾರಿಗಳನ್ನು ಗುರುತಿಸಿ ಅವರಿಗೆ ಘಟನೆಯನ್ನು ವಿವರಿಸಿದೆ ಎಂದು ಝಾ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.  ಆದರೆ, ತನ್ನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರಲು ಅವರು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ. 

ಭಾರತದಲ್ಲಿ ಖಲಿಸ್ತಾನ್ ಹೋರಾಟಕ್ಕಾಗಿ ಸ್ಥಾಪನೆಯಾಗಿರುವ ವಾರಿಸ್ ದೇ ಪಂಜಾಬ್‌ನ ಮುಖ್ಯಸ್ಥ ಅಮೃತಪಾಲ್ ಸಿಂಗ್ ಅವರ ಬಂಧನಕ್ಕೆ ಬಲೆ ಬೀಸಿ ಪಂಜಾಬ್‌ನಲ್ಲಿ  ಹೈ ಆಲರ್ಟ್‌ ಜಾರಿಯಾಗಿದೆ. ಇದನ್ನು ಖಂಡಿಸಿ ವಿದೇಶಗಳಲ್ಲಿ ಖಲಿಸ್ತಾನ್‌ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ.  ಲಂಡನ್‌ನಲ್ಲಿಯೂ ಭಾರತೀಯ ದೂತವಾಸದ ಮೇಲೆ ದಾಳಿ ನಡೆಸಿದ ಖಲಿಸ್ತಾನ್‌ ಉಗ್ರರು ಭಾರತದ ರಾಷ್ಟ್ರಧ್ವಜವನ್ನು ಕೆಳಗಿಳಿಸಿ ದರ್ಪ ಮರೆದಿದ್ದರು. ಆದರೆ ಇದಕ್ಕೆ ಭಾರತ ತೀವ್ರವಾಗಿ ವಿರೋಧ ವ್ಯಕ್ತಪಡಿಸಿತ್ತು. ನಂತರ ದೂತಾವಾಸದ ಅಧಿಕಾರಿಗಳು ದೊಡ್ಡದಾದ ರಾಷ್ಟ್ರಧ್ವಜವನ್ನು ಅಲ್ಲಿ ಹಾರಿಸಿದರು. ಅಲ್ಲದೇ ಅಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು. 

We have seen disturbing visuals of a senior Indian journalist from Press Trust of India being abused, threatened & assaulted physically while covering so called ‘Khalistan protest’ in Washington DC. We understand that the journalist was first verbally intimidated, then physically… https://t.co/Z3YikMu8OS pic.twitter.com/WP9eVcM08R

— ANI (@ANI)

 

click me!