*ಫಲ ನೀಡಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ದೋವಲ್ ಸಂಧಾನ
*ಭಾರತಕ್ಕೆ ಬಂದ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಜತೆ ಚರ್ಚೆ
*15 ಸುತ್ತಿನ ಸೇನಾ ಮಾತುಕತೆಯಲ್ಲಿ ಸಾಧ್ಯವಾಗದಿದ್ದುದು ಈಗ ಇತ್ಯರ್ಥ
*2 ವರ್ಷದ ಪೂರ್ವ ಲಡಾಖ್ ಸಂಘರ್ಷಕ್ಕೆ ಉಭಯ ದೇಶಗಳ ಇತಿಶ್ರೀ?
ನವದೆಹಲಿ (ಮಾ. 26) : ಮಹತ್ವದ ಬೆಳವಣಿಗೆಯೊಂದರಲ್ಲಿ ಎರಡು ವರ್ಷದಿಂದ ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಗಡಿ ಸಂಘರ್ಷ ಕೊನೆಗೂ ಇತ್ರ್ಯವಾಗುವ ಕ್ಷಣ ಸನ್ನಿಹಿತವಾಗಿದ್ದು, ಉಭಯ ದೇಶಗಳು ಈ ಪ್ರದೇಶದಿಂದ ತಮ್ಮ ಸೇನಾಪಡೆಗಳನ್ನು ಪೂರ್ಣ ಪ್ರಮಾಣದಲ್ಲಿ ಹಿಂದಕ್ಕೆ ಕರೆಸಿಕೊಳ್ಳಲು ಒಪ್ಪಿವೆ. ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ನಡುವೆ ಈ ಒಪ್ಪಂದವಾಗಿದೆ ಎಂದು ತಿಳಿದುಬಂದಿದೆ.
ತನ್ಮೂಲಕ 2020ರ ನಂತರ ಈವರೆಗೆ ಉಭಯ ದೇಶಗಳ ಸೇನಾಪಡೆಗಳ ನಡುವೆ ನಡೆದ 15 ಸಭೆಗಳಲ್ಲಿ ಸಾಧ್ಯವಾಗದೆ ಇದ್ದುದು ದೋವಲ್ ಮತ್ತು ವಾಂಗ್ ಯಿ ನಡುವಿನ ಒಂದೇ ಭೇಟಿಯಲ್ಲಿ ಸಾಧ್ಯವಾದಂತಾಗಿದೆ.
ಅಜಿತ್ ದೋವಲ್ ಮತ್ತು ವಾಂಗ್ ಯಿ ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದ ಇತ್ಯರ್ಥಕ್ಕೆ ಆಯಾ ದೇಶಗಳಿಂದ ನಿಯೋಜಿಸಲ್ಪಟ್ಟಅತ್ಯುನ್ನತ ವ್ಯಕ್ತಿಗಳಾಗಿದ್ದಾರೆ. ಇದೀಗ ವಾಂಗ್ ಯಿ ಎರಡು ವರ್ಷದ ನಂತರ ಭಾರತಕ್ಕೆ ಆಗಮಿಸಿದ್ದು, ಶುಕ್ರವಾರ ಅಜಿತ್ ದೋವಲ್ ಮತ್ತು ಅವರ ನಡುವೆ ಸುದೀರ್ಘ ಮಾತುಕತೆ ನಡೆಯಿತು.
ಇದನ್ನೂ ಓದಿ: Zojila Pass ದಾಖಲೆಯ 73 ದಿನದಲ್ಲಿ ಶ್ರೀನಗರ-ಲೇಹ್ ಹೈವೇ ಸಂಚಾರಕ್ಕೆ ಮುಕ್ತ!
ಈ ವೇಳೆ ದೋವಲ್ ಲಡಾಖ್ ಗಡಿಯಲ್ಲಿ ಈಗಿರುವ ಪರಿಸ್ಥಿತಿಯಿಂದ ಎರಡೂ ದೇಶಗಳಿಗೆ ಪ್ರಯೋಜನವಿಲ್ಲ. ಅಲ್ಲಿಂದ ಸಂಪೂರ್ಣ ಸೇನೆ ಹಿಂದಕ್ಕೆ ಪಡೆದು, ಮೊದಲಿನ ಸ್ಥಿತಿ ಸ್ಥಾಪನೆಯಾಗುವಂತೆ ನೋಡಿಕೊಳ್ಳಬೇಕು. ನಂತರ ಗಡಿ ವಿವಾದವನ್ನು ಮಾತುಕತೆ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಮನವರಿಕೆ ಮಾಡಿಕೊಟ್ಟರು.
ಅದನ್ನು ಒಪ್ಪಿಕೊಂಡ ವಾಂಗ್ ಯಿ, ತಕ್ಷಣವೇ ಎರಡೂ ದೇಶಗಳು ಅಲ್ಲಿಂದ ಸೇನೆಯನ್ನು ಪೂರ್ಣ ಪ್ರಮಾಣದಲ್ಲಿ ಹಿಂದಕ್ಕೆ ಕರೆಸಿಕೊಳ್ಳೋಣ ಎಂದರು. ಅದಕ್ಕೆ ದೋವಲ್ ಒಪ್ಪಿದರು ಎಂದು ಮೂಲಗಳು ಹೇಳಿವೆ.
2020ರಲ್ಲಿ ಗಲ್ವಾನ್‌ನಲ್ಲಿ ಸಂಘರ್ಷ ಏರ್ಪಟ್ಟನಂತರ ಲಡಾಖ್ ಗಡಿಯಲ್ಲಿ ಎರಡೂ ದೇಶಗಳು ಭಾರಿ ಪ್ರಮಾಣದಲ್ಲಿ ಸೇನೆ ಜಮಾವಣೆ ಮಾಡಿದ್ದವು. ನಂತರ ಕೆಲ ಪ್ರದೇಶಗಳಿಂದ ಹಿಂದಕ್ಕೆ ಸರಿದಿದ್ದರೂ ಇನ್ನಷ್ಟುಪ್ರದೇಶಗಳಲ್ಲಿ ಉಭಯ ದೇಶಗಳ ಸೇನೆಗಳು ಬೀಡುಬಿಟ್ಟಿವೆ.
2 ವರ್ಷ ಬಳಿಕ ಭಾರತಕ್ಕೆ ಚೀನಾ ವಿದೇಶಾಂಗ ಸಚಿವ ಭೇಟಿ: ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಗುರುವಾರ ಭಾರತಕ್ಕೆ ಅಘೋಷಿತ ಭೇಟಿ ನೀಡಿದ್ದಾರೆ. ಪೂರ್ವ ಲಡಾಖ್‌ನಲ್ಲಿ ಚೀನಾ-ಭಾರತದ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿ ಸಂಧಾನ ಮಾತುಕತೆ ನಡೆದ ನಂತರ ಉಭಯ ದೇಶಗಳ ನಡುವಿನ ಮೊದಲ ಉನ್ನತಮಟ್ಟದ ಭೇಟಿ ಇದಾಗಿದೆ.
ಇದನ್ನೂ ಓದಿ: China Bridge On Pangong : ಅಕ್ರಮ ಸ್ಥಳದಲ್ಲಿ ಚೀನಾದಿಂದ ಸೇತುವೆ ನಿರ್ಮಾಣ ಎಂದ ಸರ್ಕಾರ!
ವಾಂಗ್ ಯಿ ಅವರು ಕಾಬೂಲ್‌ನಿಂದ ಭಾರತಕ್ಕೆ ಪ್ರಯಾಣಿಸಿದ್ದು, ಶುಕ್ರವಾರ ಬೆಳಗ್ಗೆ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
132 ಜನರ ಬಲಿ ಪಡೆದ ಚೀನಾ ವಿಮಾನದ 2ನೇ ಬ್ಲ್ಯಾಕ್ ಬಾಕ್ಸ್ ಪತ್ತೆ: 132 ಜನರ ಬಲಿ ಪಡೆದ, ಅಪಘಾತಕ್ಕೊಳಗಾದ ಚೀನಾ ವಿಮಾನ 2ನೇ ಬ್ಲ್ಯಾಕ್ ಬಾಕ್ಸ್ ಕೂಡಾ ಪತ್ತೆಯಾಗಿದೆ. ಹೀಗಾಗಿ ಅಪಘಾತಕ್ಕೆ ಕಾರಣವೇನು ಎಂಬುದರ ಬಗ್ಗೆ ಶೀಘ್ರ ಮಾಹಿತಿ ಸಿಗಬಹುದು ಎಂಬ ಆಶಾಭಾವನೆ ವ್ಯಕ್ತವಾಗಿದೆ. ವಿಮಾನದ ಕಾಕ್‌ಪೀಟ್‌ನಲ್ಲಿರುವ ಮೊದಲ ಬ್ಲ್ಯಾಕ್ ಬಾಕ್ಸ್ ಈಗಾಗಲೇ ತೀವ್ರ ನಜ್ಜುಗುಜ್ಜಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. 2ನೇ ಬ್ಲ್ಯಾಕ್ ಬಾಕ್ಸ್ ಅನ್ನು ವಿಮಾನದ ಹಿಂಬಾಗದ ರೆಕ್ಕೆಯ ಬಳಿ ಅಳವಡಿಸಲಾಗಿರುತ್ತದೆ. ಇದು ವಿಮಾನದ ವೇಗ, ಎತ್ತರ, ದಿಕ್ಕು ಮೊದಲಾದ ಅಂಶಗಳನ್ನು ದಾಖಲಿಸಿಕೊಂಡಿರುತ್ತದೆ.