ಪಾಕ್‌ ಪ್ರಧಾನಿ ಇಮ್ರಾನ್‌ ಪದಚ್ಯುತಿ?: 5 ದಿನದಲ್ಲಿ ಹುದ್ದೆ ತೊರೆಯಲು ಸೇನೆ ತಾಕೀತು!

By Suvarna NewsFirst Published Nov 16, 2021, 10:09 AM IST
Highlights

* 5 ದಿನದಲ್ಲಿ ಹುದ್ದೆ ತೊರೆಯಲು ಸೇನೆ ತಾಕೀತು ಇಲ್ಲದಿದ್ದರೆ ಕೆಳಕ್ಕಿಳಿಸುವ ಬೆದರಿಕೆ

* ಪಾಕ್‌ ಪ್ರಧಾನಿ ಇಮ್ರಾನ್‌ ಪದಚ್ಯುತಿ?

* ನೂತನ ಐಎಸ್‌ಐ ಮುಖ್ಯಸ್ಥನ ನೇಮಕ ವಿಚಾರದಲ್ಲಿ ಬಿಕ್ಕಟ್ಟು ಸೃಷ್ಟಿ

ಇಸ್ಲಾಮಾಬಾದ್‌(ನ.16): ಮೂರು ವರ್ಷಗಳಿಂದ ಪಾಕಿಸ್ತಾನದ ಪ್ರಧಾನಿಯಾಗಿರುವ (Pakistan Prime Minister) ಮಾಜಿ ಕ್ರಿಕೆಟಿಗ ಇಮ್ರಾನ್‌ ಖಾನ್‌ (Imran Khan)ಹುದ್ದೆಗೆ ಸಂಚಕಾರ ಬಂದಿದೆ. ದೇಶದ ಗುಪ್ತಚರ ದಳವಾದ ಐಎಸ್‌ಐಗೆ (ISI) ನೂತನ ಮುಖ್ಯಸ್ಥರನ್ನು ನೇಮಿಸುವ ವಿಚಾರದಲ್ಲಿ ಸೇನೆ ಜೊತೆ ಇಮ್ರಾನ್‌ ಘರ್ಷಣೆ ತೀವ್ರಗೊಂಡಿದ್ದು, ನ.20ರೊಳಗೆ ನೀವೇ ರಾಜೀನಾಮೆ ನೀಡಿ, ಇಲ್ಲದಿದ್ದರೆ ನಾವು ಇಳಿಸುತ್ತೇವೆ ಎಂದು ಸೇನಾಪಡೆ (Army) ಮುಖ್ಯಸ್ಥ ಜ| ಕಮರ್‌ ಜಾವೇದ್‌ ಬಜ್ವಾ ಗಡುವು ನೀಡಿದ್ದಾರೆಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ಮೂಲಗಳ ಪ್ರಕಾರ ಇಮ್ರಾನ್‌ ಖಾನ್‌ಗೆ ಎರಡು ಆಯ್ಕೆಗಳನ್ನು ಸೇನೆ ನೀಡಿದೆ. 1.ನ.20ರೊಳಗೆ ಅವರೇ ರಾಜೀನಾಮೆ (Resignation) ನೀಡುವುದು. 2.ರಾಜೀನಾಮೆ ನೀಡದಿದ್ದರೆ ವಿರೋಧ ಪಕ್ಷಗಳು ಸಂಸತ್ತಿನೊಳಗೆ ಬದಲಾವಣೆ ತಂದು ಇಮ್ರಾನ್‌ ಖಾನ್‌ರನ್ನು ಪ್ರಧಾನಿ ಹುದ್ದೆಯಿಂದ ಇಳಿಸುತ್ತವೆ.

ಇಮ್ರಾನ್‌ (Imran Khan) ಪದತ್ಯಾಗದ ನಂತರ ಅವರದೇ ಪಿಟಿಐ ಪಕ್ಷದ ಪರ್ವೇಜ್‌ ಖಟ್ಟಕ್‌ ಅಥವಾ ಪಿಎಂಎಲ್‌ (ನವಾಜ್‌) ಪಕ್ಷದ ಶಾಬಾಜ್‌ ಶರೀಫ್‌ ಅವರ ಪೈಕಿ ಒಬ್ಬರು ಪ್ರಧಾನಿಯಾಗಲಿದ್ದಾರೆ ಎನ್ನಲಾಗಿದೆ.

ಐಎಸ್‌ಐ ಮುಖ್ಯಸ್ಥನ ನೇಮಕ ಬಿಕ್ಕಟ್ಟು:

ಭಾರತದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದಕ್ಕೆ ಕುಖ್ಯಾತಿ ಪಡೆದಿರುವ ಪಾಕಿಸ್ತಾನದ ಐಎಸ್‌ಐಗೆ (ISI) ನೂತನ ಮುಖ್ಯಸ್ಥರನ್ನು ನೇಮಿಸುವ ವಿಚಾರದಲ್ಲಿ ಇಮ್ರಾನ್‌ ಖಾನ್‌ ಹುದ್ದೆ ಸಂಕಷ್ಟಕ್ಕೆ ಸಿಲುಕಿದೆ. ಹಾಲಿ ಮುಖ್ಯಸ್ಥ ಲೆ.ಜ.ಫೈಜ್‌ ಹಮೀದ್‌ ಅವರನ್ನೇ ಮುಂದುವರೆಸಲು ಇಮ್ರಾನ್‌ ಮುಂದಾಗಿದ್ದಾರೆ. ಆದರೆ, ನ.20ಕ್ಕೆ ಸೇನೆಯ ಬೆಂಬಲದಿಂದ ಲೆ.ಜ.ನದೀಮ್‌ ಅಂಜಮ್‌ ನೂತನ ಡಿ.ಜಿ.ಯಾಗಿ (ಮುಖ್ಯಸ್ಥರಾಗಿ) ಅಧಿಕಾರ ಸ್ವೀಕರಿಸುತ್ತಿದ್ದಾರೆ. ಈ ವಿವಾದದಲ್ಲಿ ಇಮ್ರಾನ್‌ರನ್ನು ಇಳಿಸಲೇಬೇಕು ಎಂದು ಸೇನಾಪಡೆ ಪಣ ತೊಟ್ಟಿದೆ.

ಇಳಿಸಲು ರಾಜಕೀಯ ತಂತ್ರ:

ಒಂದು ವೇಳೆ ಇಮ್ರಾನ್‌ ರಾಜೀನಾಮೆ ನೀಡದಿದ್ದರೆ ಅವರ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಿರುವ ಎಂಕ್ಯುಎಂ ಹಾಗೂ ಪಿಎಂಎಲ್‌-ಕ್ಯು ಪಕ್ಷಗಳು ಬೆಂಬಲ ಹಿಂಪಡೆದಾದರೂ ಮುಂದಿನ ದಿನಗಳಲ್ಲಿ ಅವರನ್ನು ಇಳಿಸಲಿವೆ ಎಂದು ಹೇಳಲಾಗಿದೆ.

ದೇಶದಲ್ಲಿನ ಬಡತನ, ಆರ್ಥಿಕ ಸಮಸ್ಯೆ, ಬೇರೆ ಬೇರೆ ಗುಂಪುಗಳ ಪ್ರತಿಭಟನೆಗಳ ಕಾರಣದಿಂದ ಈಗಾಗಲೇ ಇಮ್ರಾನ್‌ ವಿರುದ್ಧ ಸಾಕಷ್ಟುಜನಾಕ್ರೋಶ ಕೂಡ ಸೃಷ್ಟಿಯಾಗಿದೆ.

ಪಾಕ್‌ನಲ್ಲಿ ಏನಾಗ್ತಿದೆ?

- ಪಾಕಿಸ್ತಾನದ ಪ್ರಭಾವಿ ಗುಪ್ತಚರ ಸಂಸ್ಥೆ ಐಎಸ್‌ಐ ಮುಖ್ಯಸ್ಥರ ಅಧಿಕಾರಾವಧಿ ನ.20ಕ್ಕೆ ಮುಗಿಯುತ್ತಿದೆ

- ಹಾಲಿ ಮುಖ್ಯಸ್ಥ ಲೆಫ್ಟಿನಂಟ್‌ ಜನರಲ್‌ ಫೈಜ್‌ ಹಮೀದ್‌ರನ್ನೇ ಮುಂದುವರಿಸಲು ಇಮ್ರಾನ್‌ ಒಲವು

- ಆದರೆ ಪಾಕ್‌ ಸೇನಾಪಡೆಗೆ ಈ ನಿರ್ಧಾರ ಇಷ್ಟವಿಲ್ಲ. ಹೊಸಬರಿಗೆ ಪಟ್ಟಕಟ್ಟಲು ಸೇನೆ ತೀವ್ರ ಉತ್ಸುಕ

- ಆದ ಕಾರಣ ಇಮ್ರಾನ್‌- ಪಾಕಿಸ್ತಾನ ಸೇನೆ ನಡುವೆ ಘರ್ಷಣೆ: ಪ್ರಧಾನಿ ಕೆಳಗಿಳಿಸಲು ಸೇನೆ ಸಿದ್ಧತೆ

- ಇಮ್ರಾನ್‌ ಸರ್ಕಾರಕ್ಕೆ ಬೆಂಬಲ ನೀಡಿರುವ ಎರಡು ಪಕ್ಷಗಳಿಂದ ಬೆಂಬಲ ವಾಪಸ್‌ ಸಾಧ್ಯತೆ

- ಪರ್ವೇಜ್‌ ಖಟ್ಟಕ್‌ ಅಥವಾ ಶಾಬಾಜ್‌ ಶರೀಫ್‌ ಪೈಕಿ ಒಬ್ಬರು ಪ್ರಧಾನಮಂತ್ರಿ ಹುದ್ದೆಗೆ?

ಇಮ್ರಾನ್‌ಗೆ ಸೇನೆ 2 ಆಯ್ಕೆ

1. ನ.20ರೊಳಗೆ ರಾಜೀನಾಮೆ ನೀಡುವುದು

2. ಇಲ್ಲದಿದ್ದರೆ ವಿರೋಧ ಪಕ್ಷಗಳೇ ಇಳಿಸುತ್ತವೆ

click me!