
ಕೊಲಂಬೋ(ನ.16): ರಾಮಾಯಣದಲ್ಲಿ ಲಂಕಾಧಿಪತಿ ರಾವಣ ಪುಷ್ಪಕ ವಿಮಾನದಲ್ಲಿ ಬಂದು ಸೀತೆಯನ್ನು ಅಪಹರಿಸಿಕೊಂಡು ಹೋಗುವ ಕತೆಯಿದೆ. ಹೀಗಾಗಿ ಜಗತ್ತಿನಲ್ಲಿ ಮೊಟ್ಟಮೊದಲು ವಿಮಾನ ಹಾರಿಸಿದವನು ರಾವಣ ಎಂದು ನಂಬಿರುವ ಶ್ರೀಲಂಕಾ, ಇದೀಗ ಈ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಲು ನಿರ್ಧರಿಸಿದೆ.
ಶ್ರೀಲಂಕಾಕ್ಕೆ ರಾವಣ ರಾಜನಾಗಿದ್ದ ಕಾಲದಲ್ಲಿ ದೇಶದಲ್ಲಿ ವಿಮಾನ ನಿಲ್ದಾಣಗಳು ಹಾಗೂ ವಿಮಾನಗಳು ಇದ್ದವು ಎಂದು ಲಂಕನ್ನರು ನಂಬುತ್ತಾರೆ. ಇದು ಕೇವಲ ಪುರಾಣದ ಕತೆಯಲ್ಲ, ಇದಕ್ಕೆ ವೈಜ್ಞಾನಿಕ ಆಧಾರಗಳಿರಬಹುದು ಎಂದು ಆ ಸ್ಥಳಗಳ ಹುಡುಕಾಟವೂ ನಡೆದಿದೆ. ಎರಡು ವರ್ಷದ ಹಿಂದೆಯೇ ಈ ಬಗ್ಗೆ ಶ್ರೀಲಂಕಾದಲ್ಲಿ ವಿಮಾನಯಾನ ತಜ್ಞರು, ಇತಿಹಾಸಕಾರರು, ಪುರಾತತ್ವ ಶಾಸ್ತ್ರಜ್ಞರು, ವಿಜ್ಞಾನಿಗಳು ಹಾಗೂ ಭೂಗರ್ಭಶಾಸ್ತ್ರಜ್ಞರ ಸಮ್ಮೇಳನವೊಂದು ನಡೆದಿತ್ತು. ಆ ಸಮ್ಮೇಳನದಲ್ಲಿ, ‘ರಾವಣನು ಜಗತ್ತಿನಲ್ಲೇ ಮೊದಲು ವಿಮಾನ ಹಾರಿಸಿಕೊಂಡು ಭಾರತಕ್ಕೆ ಹೋಗಿ ಮರಳಿ ಬಂದಿದ್ದ’ ಎಂಬ ನಿರ್ಣಯ ಕೈಗೊಳ್ಳಲಾಗಿತ್ತು.
ನಂತರ ಅಂದಿನ ಶ್ರೀಲಂಕಾ ಸರ್ಕಾರವು 50 ಲಕ್ಷ ರು. (ಶ್ರೀಲಂಕಾ ರುಪಾಯಿ) ನೆರವು ನೀಡಿ ಈ ಬಗ್ಗೆ ವೈಜ್ಞಾನಿಕ ಸಂಶೋಧನೆ ನಡೆಸಲು ಸೂಚಿಸಿತ್ತು. ಕೋವಿಡ್ ಕಾರಣದಿಂದ ಸಂಶೋಧನೆ ನಿಂತುಹೋಗಿತ್ತು. ಅದನ್ನೀಗ ಪುನಾರಂಭಿಸಲು ಹಾಲಿ ಸರ್ಕಾರದ ಅಧ್ಯಕ್ಷ ರಾಜಪಕ್ಸ ಒಲವು ತೋರಿದ್ದು, ಒಂದೆರಡು ತಿಂಗಳಲ್ಲೇ ಸಂಶೋಧನೆ ಶುರುವಾಗಲಿದೆ ಎಂದು ಮೂಲಗಳು ಹೇಳಿವೆ.
ಈ ಸಂಶೋಧನೆಯಲ್ಲಿ ಭಾರತ ಕೂಡ ಕೈಜೋಡಿಸಿ, ಪಾಶ್ಚಾತ್ಯರು ವಿಮಾನ ಕಂಡುಹಿಡಿಯುವುದಕ್ಕಿಂತ ಎಷ್ಟೋ ಶತಮಾನಗಳ ಮೊದಲೇ ಭಾರತ ಮತ್ತು ಶ್ರೀಲಂಕಾದಲ್ಲಿ ವಿಮಾನಗಳು ಇದ್ದವು ಎಂಬುದನ್ನು ಜಗತ್ತಿಗೆ ತೋರಿಸಲು ನೆರವಾಗಬೇಕು ಎಂದು ಶ್ರೀಲಂಕಾದ ನಾಗರಿಕ ವಿಮಾನಯಾನ ಸಚಿವಾಲಯದ ಮಾಜಿ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ