
ಲಾಹೋರ್: ಜಮ್ಮು ಕಾಶ್ಮೀರದ ಪಹಲ್ಗಾಂನಲ್ಲಿನ ಉಗ್ರ ದಾಳಿಗೆ ಪ್ರತಿಕಾರವಾಗಿ ಭಾರತವೇನಾದರೂ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ತನ್ನ ಪ್ರತ್ಯುತ್ತರ ನೀಡಲಿದ್ದೇವೆ ಎಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಚಿವೆ ಹೇಳಿದ್ದಾರೆ.ಈ ಬಗ್ಗೆ ಮಾತನಾಡಿರುವ ಅಲ್ಲಿನ ಸಚಿವೆ ಅಜ್ಮಾ ಬೊಖಾರಿ, ಸುಳ್ಳು ಆರೋಪದ ಮೇಲೆ ಭಾರತ ನಡೆಸುವ ಯಾವುದೇ ದುಸ್ಸಾಹಸವು ಭೀಕರ ಪರಿಣಾಮಗಳನ್ನು ಬೀರುತ್ತದೆ. ಕಳೆದ ಬಾರಿ ಅಭಿನಂದನ್ ವರ್ಧಮಾನ್ ಅವರಿಗೆ ಚಹಾ ನೀಡಿದ್ದೆವು. ಈ ಬಾರಿ ಅಷ್ಟು ಕನಿಕರ ತೋರುವುದಿಲ್ಲ. ಅತಿಥಿ ಒಮ್ಮೆ ಬಂದರೆ ಸಹನೀಯ. ಆದರೆ ಪ್ರತಿ ಬಾರಿ ಬಂದರೆ, ಪಾಕಿಸ್ತಾನದ ಸೇನೆ, ಸರ್ಕಾರ ಮತ್ತು ಜನರು ಅವರಿಗೆ ಸರಿಯಾಗಿ ಪಾಠ ಕಲಿಸುತ್ತಾರೆ’ ಎಂದು ಮೊಂಡುತನ ಪ್ರದರ್ಶಿಸಿದ್ದಾರೆ.
ಇಂದು ಪಾಕ್ ತುರ್ತು ಸಭೆ
ಪಹಲ್ದಾಂ ದಾಳಿ ಪರಿಣಾಮ ಸಿಂಧೂ ನದಿ ಒಪ್ಪಂದ ರದ್ದುಗೊಳಿಸಿರುವ ಭಾರತ ಸರ್ಕಾರದ ಕ್ರಮಕ್ಕೆ ಪ್ರತ್ಯುತ್ತರ ನೀಡಲು ಪಾಕಿಸ್ತಾನ ಗುರುವಾರ ತುರ್ತು ರಾಷ್ಟ್ರೀಯ ಭದ್ರತಾ ಸಮಿತಿ ಸಭೆ ಕರೆದಿದೆ. ಈ ಬಗ್ಗೆ ಮಾತನಾಡಿರುವ ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್, ಪ್ರಧಾನಿ ಶಹಬಾಜ್ ಷರೀಫ್ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಭೆಯಲ್ಲಿ ಎಲ್ಲಾ ಇಲಾಖೆಯ ಮುಖ್ಯಸ್ಥರೂ ಭಾಗಿಯಾಗಲಿದ್ದು, ಭಾರತದ ಕ್ರಮಕ್ಕೆ ಸರಿಯಾಗಿ ಉತ್ತರಿಸಲಿದ್ದೇವೆ' ಎಂದಿದ್ದಾರೆ.
ಕಾಶ್ಮೀರದಿಂದ ಪ್ರವಾಸಿಗರ ‘ವಾಪಸ್ ಪರ್ವ’
ಪಹಲ್ಗಾಮ್ ಉಗ್ರ ದಾಳಿ ಬಳಿಕ ಜಮ್ಮು ಮತ್ತು ಕಾಶ್ಮೀರದಿಂದ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಕಣಿವೆ ವಾಪಸ್ ಹೋಗುತ್ತಿದ್ದು, ಇದರಿಂದ ವಿಮಾನ ನಿಲ್ದಾಣದಲ್ಲಿ ನೂಕು-ನುಗ್ಗಲಿನ ಸ್ಥಿತಿ ನಿರ್ಮಾಣವಾಗಿದೆ. ಬೆಳಗ್ಗೆ 6ರಿಂದ ಮಧ್ಯಾಹ್ನ 12 ಗಂಟೆ ವರೆಗೆ ಸುಮಾರು ಆರು ಗಂಟೆಗಳಲ್ಲಿ 3,337 ಮಂದಿ ಪ್ರವಾಸಿಗರು ಕಾಶ್ಮೀರದಿಂದ ವಾಪಸ್ ಹೋಗಿದ್ದಾರೆ.
ಈ ನಡುವೆ, ಶ್ರೀನಗರದಿಂದ ದೇಶದ ವಿವಿಧೆಡೆ ತೆರಳುವ ವಿಮಾನಗಳಿಗೆ ಭಾರೀ ಬೇಡಿಕೆ ಇದ್ದು, ಇಂಡಿಗೋ, ಏರ್ ಇಂಡಿಯಾ ಮತ್ತು ಸ್ಪೈಟ್‌ಜೆಟ್ ವಿಮಾನಯಾನ ಸಂಸ್ಥೆಗಳು ದೆಹಲಿ ಮತ್ತು ಮುಂಬೈ ನಡುವೆ ಹೆಚ್ಚುವರಿ ವಿಮಾನಗಳ ಓಡಾಟ ಆರಂಭಿಸಿವೆ.
ಇದೇ ವೇಳೆ ಶ್ರೀನಗರ ಏರ್ಪೋರ್ಟ್‌ಗೆ ಭಾರೀ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಪ್ರಯಾಣಿಕರಿಗೆ ನೀರು, ಆಹಾರದ ವ್ಯವಸ್ಥೆ ಮಾಡಲಾಗಿದೆ. ಟರ್ಮಿನಲ್ ಹೊರಗೆ ಹೆಚ್ಚುವರಿ ಟೆಂಟ್‌ಗಳನ್ನೂ ಹಾಕಿ ವಿಶ್ರಾಂತಿಗೆ ಅವಕಾಶ ಮಾಡಿಕೊಡಲಾಗಿದೆ.
ಇದನ್ನೂ ಓದಿ: ಓರ್ವ ಮುಸ್ಲಿಂ ಆಗಿ ನಾಚಿಕೆಯಾಗುತ್ತಿದೆ, ಪಹಲ್ಗಾಮ್ ದಾಳಿ ಖಂಡಿಸಿ ಭಾವುಕರಾದ ಗಾಯಕ ಸಲೀಮ್
ದರ ಏರಿಕೆಗೆ ಬ್ರೇಕ್
ವಿಮಾನ ಟಿಕೆಟ್ ದರ ಒಂದು ಹಂತದಲ್ಲಿ 20 ಸಾವಿರ ದಾಟಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು, ಪ್ರಯಾಣ ದರ ವಿಪರೀತ ಹೆಚ್ಚಿಸದಂತೆ ತಾಕೀತು ಮಾಡಿದ್ದಾರೆ. ಜತೆಗೆ ಟಿಕೆಟ್ ರದ್ದತಿ ಮತ್ತು ರೀ ಶೆಡ್ಯೂಲ್ ದರ ಹಾಕದಂತೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ಪ್ರಹ್ಲಾದ್ ಜೋಶಿ ಭೇಟಿ
ಈ ನಡುವೆ ಸಚಿವ ರಾಮಮೋಹನ್ ನಾಯ್ಡು ಅವರನ್ನು ಭೇಟಿ ಮಾಡಿದ ಇನ್ನೊಬ್ಬ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಶ್ರೀನಗರಕ್ಕೆ ಹೆಚ್ಚು ವಿಮಾನಗಳನ್ನು ಕಲ್ಪಿಸಲು ಕೋರಿದ್ದಾರೆ.
ಉಗ್ರರ ದಾಳಿ ಖಂಡನಾರ್ಹ. ಈ ದಾಳಿಗೆ ಬೆಚ್ಚಿ ನಮ್ಮ ಅತಿಥಿಗಳಾದ ಪ್ರವಾಸಿಗರು ತವರಿಗೆ ಮರಳುತ್ತಿರುವುದನ್ನು ನೋಡಿ ಬೇಸರವಾಗುತ್ತಿದೆ ಎಂದು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಹೆಡ್‌ಲೈನ್ಸ್ ಆದ ಭಾರತದ 'ಇಂಡಸ್' ನಿರ್ಧಾರ, ಸೆಕ್ಯುರಿಟಿ ಕಮಿಟಿ ಸಭೆ ಕರೆದ ಪಾಕ್ ಪ್ರಧಾನಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ