Pope Francis Funeral: ಅಂತ್ಯಕ್ರಿಯೆ ಶನಿವಾರ ನಡೆಸಲು ನಿರ್ಧಾರ; ಇಂದಿನಿಂದ ಪಾರ್ಥಿವ ಶರೀರ ಸಾರ್ವಜನಿಕರ ದರ್ಶನ

Published : Apr 23, 2025, 10:53 AM ISTUpdated : Apr 23, 2025, 11:10 AM IST
Pope Francis Funeral: ಅಂತ್ಯಕ್ರಿಯೆ ಶನಿವಾರ ನಡೆಸಲು ನಿರ್ಧಾರ; ಇಂದಿನಿಂದ ಪಾರ್ಥಿವ ಶರೀರ ಸಾರ್ವಜನಿಕರ ದರ್ಶನ

ಸಾರಾಂಶ

ಕ್ರೈಸ್ತರ ಪರಮೋಚ್ಚ ಗುರುಗಳಾದ ಪೋಪ್‌ ಫ್ರಾನ್ಸಿಸ್‌ ಅವರ ಅಂತ್ರಕ್ರಿಯೆಯನ್ನು ಶನಿವಾರ ನಡೆಸಲು ನಿರ್ಧರಿಸಲಾಗಿದೆ. ಪೋಪ್‌ರ ಮೃತದೇಹವನ್ನು ಬುಧವಾರದಿಂದ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಪೋಪ್‌ ಫ್ರಾನ್ಸಿಸ್‌ ಅವರು 2026ರಲ್ಲಿ ಭಾರತಕ್ಕೆ ಭೇಟಿ ನೀಡಬೇಕಿತ್ತು, ಆದರೆ ಅದು ಈಡೇರಲಿಲ್ಲ.

ವ್ಯಾಟಿಕನ್‌ ಸಿಟಿ: ಸೋಮವಾರ ನಿಧನರಾದ ಕ್ರೈಸ್ತರ ಪರಮೋಚ್ಚ ಗುರುಗಳಾದ ಪೋಪ್‌ ಫ್ರಾನ್ಸಿಸ್‌ ಅವರ ಅಂತ್ರಕ್ರಿಯೆಯನ್ನು ಶನಿವಾರ ಬೆಳಗ್ಗೆ 10 ಗಂಟೆಗೆ ನಡೆಸಲು ನಿರ್ಧರಿಸಲಾಗಿದೆ.

ವ್ಯಾಟಿಕನ್‌ನಲ್ಲಿ ಮಂಗಳವಾರ ನಡೆದ ಕಾರ್ಡಿನಲ್‌ಗಳ ಮೊದಲ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಂತೆಯೇ, ಪೋಪ್‌ರ ಮೃತದೇಹವನ್ನು ಸೇಂಟ್ ಪೀಟರ್ಸ್ ಬೆಸಿಲಿಕಾಗೆ ತಂದ ಬಳಿಕ ಬುಧವಾರದಿಂದ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು.  ಪೋಪ್‌ರ ಅಂತ್ಯಕ್ರಿಯೆಯಲ್ಲಿ ತಾವು ಹಾಗೂ ಪತ್ನಿ ಮೆಲಾನಿಯಾ ಭಾಗಿಯಾಗುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಘೋಷಿಸಿದ್ದಾರೆ. ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್‌ ಮಿಲೀ ಕೂಡ ಆಗಮಿಸುವ ನಿರೀಕ್ಷೆಯಿದೆ. 

ಬಹುಕಾಲದಿಂದ ನ್ಯುಮೋನಿಯಾದಿಂದ ಬಳಲುತ್ತಿದ್ದ ಪೋಪ್‌ ಫ್ರಾನ್ಸಿಸ್‌ ಅವರು ಇತ್ತೀಚೆಗಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿ ಚೇತರಿಸಿಕೊಳ್ಳುತ್ತಿದ್ದರು. ಭಾನುವಾರದ ಈಸ್ಟರ್‌ನಂದು ಸಾರ್ವಜನಿಕವಾಗಿ ಕಾಣಿಸಿಕೊಂಡು ಆಶೀರ್ವದಿಸಿದ್ದರು. ಅದರ ಮರುದಿನ ಸ್ಟ್ರೋಕ್‌ನಿಂದಾಗಿ ಕೋಮಾಗೆ ಜಾರಿದ್ದು, ಹೃದಯಾಘಾತದಿಂದ ತಮ್ಮ 88ನೇ ವಯಸ್ಸಿನಲ್ಲಿ ನಿಧನರಾದರು.

ಪೋಪ್‌ರ ಪಾರ್ಥಿವ ಶರೀರದ ಮೊದಲ ಫೋಟೋ ಬಿಡುಗಡೆ
ಕ್ರೈಸ್ತರ ಪರಮೋಚ್ಚ ಧರ್ಮಗುರುಗಳಾದ ಪೋಪ್‌ ಫ್ರಾನ್ಸಿಸ್‌ ಅವರ ನಿಧನಾನಂತರದ ಮೊದಲ ಫೋಟೋವನ್ನು ಬಿಡುಗಡೆ ಮಾಡಲಾಗಿದೆ.ಪೋಪ್‌ ಅವರು ವಾಸವಿದ್ದ ಡೊಮಸ್ ಸಾಂತಾ ಮಾರ್ಟಾ ಹೋಟೆಲ್‌ನಲ್ಲಿ, ಕೆಂಪು ವಸ್ತ್ರ ಹಾಗೂ ಕಿರೀಟ ತೊಡಿಸಿರುವ ಫ್ರಾನ್ಸಿಸ್‌ರ ಪಾರ್ಥಿವ ಶರೀರವನ್ನು ಕಟ್ಟಿಗೆಯ ಶವಪೆಟ್ಟಿಗೆಯಲ್ಲಿ ಇರಿಸಲಾಗಿದ್ದು, ಅದರ ಎದುರು ವ್ಯಾಟಿಕನ್‌ನ ರಾಜ್ಯ ಕಾರ್ಯದರ್ಶಿ ಪ್ರಾರ್ಥಿಸುತ್ತಿರುವುದನ್ನು ಆ ಫೋಟೋದಲ್ಲಿ ಕಾಣಬಹುದಾಗಿದೆ.

ಹೊಸ ಪೋಪ್‌ ಆಯ್ಕೆ ಹೇಗೆ?
ಪೋಪ್‌ ನಿಧನದ 15-20 ದಿನ ಬಳಿಕ ನೂತನ ಪೋಪ್‌ ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತದೆ. 80 ವರ್ಷದೊಳಗಿನ ಕಾರ್ಡಿನಲ್‌ಗಳು ವ್ಯಾಟಿಕನ್‌ಗೆ ಆಗಮಿಸುತ್ತಾರೆ. ರಹಸ್ಯ ಮತದಾನ ಉದ್ದೇಶ ಸಲುವಾಗಿ ಅವರನ್ನು ಒಂದು ಸ್ಥಳಕ್ಕೆ ಸೇರಿಸಿ ಹೊರಗಿನಿಂದ ಬೀಗ ಹಾಕಲಾಗುತ್ತದೆ. ಬಾಹ್ಯ ಪ್ರಪಂಚದಿಂದ ಅವರು ಸಂಪರ್ಕ ಕಳೆದುಕೊಳ್ಳುತ್ತಾರೆ. ದೂರವಾಣಿ ಕರೆ ಸೌಲಭ್ಯೂ ಇರುವುದಿಲ್ಲ. ಹಲವು ಸುತ್ತಿನ ಮತದಾನ ಪ್ರಕ್ರಿಯೆ ನಡೆಯುತ್ತದೆ.

ಪೋಪ್‌ ಭಾರತ ಭೇಟಿ ಕನಸು ಈಡೇರಲೇ ಇಲ್ಲ
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಪೋಪ್‌ ಫ್ರಾನ್ಸಿಸ್‌ ಅವರು ಈ ವರ್ಷ ಭಾರತಕ್ಕೆ ಭೇಟಿ ನೀಡಬೇಕಿತ್ತು. ಅವರ ಭೇಟಿಗಾಗಿ ಭಾರತದ ಕ್ರಿಶ್ಚಿಯನ್‌ ಸಮುದಾಯ 10 ವರ್ಷಗಳಿಂದ ಎದುರು ನೋಡುತ್ತಿತ್ತು. ಆದರೆ, ಆ ಆಸೆ ಕೊನೆಗೂ ಈಡೇರಲೇ ಇಲ್ಲ!

ಇದನ್ನೂ ಓದಿ: Pope Francis: ಪೋಪ್ ಫ್ರಾನ್ಸಿಸ್ ನಿಧನ: ಕ್ರೈಸ್ತರ ಮುಂದಿನ ಪರಮೋಚ್ಛ ಗುರುವಿನ ನೇಮಕ ಹೇಗಿರುತ್ತದೆ?

2016ರಲ್ಲೇ ಪೋಪ್‌ ಫ್ರಾನ್ಸಿಸ್‌ ಅವರು ಭಾರತಕ್ಕೆ ಭೇಟಿ ನೀಡ ಬಯಸಿದ್ದರು. ಆದರೆ, ಕಾರಣಾಂತರಗಳಿಂದ ಮ್ಯಾನ್ಮಾರ್‌ ಮತ್ತು ಬಾಂಗ್ಲಾದೇಶಕ್ಕೆ ಭೇಟಿ ನೀಡಿ ವಾಪಸ್‌ ಹೋಗಿದ್ದರು. 2021ರಲ್ಲಿ ರೋಮ್‌ನಲ್ಲಿ ನಡೆದ ಜಿ20 ಸಮ್ಮೇಳನ ಹಿನ್ನೆಲೆಯಲ್ಲಿ ಪೋಪ್‌ ಫ್ರಾನ್ಸಿಸ್‌ ಮತ್ತು ಪ್ರಧಾನಿ ಮೋದಿ ಮುಖಾಮುಖಿಯಾಗಿದ್ದರು. ಈ ವೇಳೆ ಪೋಪ್‌ ಫ್ರಾನ್ಸಿಸ್‌ ಅವರಿಗೆ ಭಾರತ ಭೇಟಿಗೆ ಅಧಿಕೃತವಾಗಿ ಮೋದಿ ಆಹ್ವಾನ ನೀಡಿದ್ದರು.

2024ರ ಏಪ್ರಿಲ್‌ನಲ್ಲಿ ಮತ್ತೊಮ್ಮೆ ಜಿ7ಶೃಂಗದ ಹಿನ್ನೆಲೆಯಲ್ಲಿ ಯುರೋಪ್‌ಗೆ ತೆರಳಿದ್ದ ಮೋದಿ ಅವರು ಪೋಪ್‌ ಅವರನ್ನು ಭೇಟಿಯಾಗಿ, ಮತ್ತೆ ಭಾರತಕ್ಕೆ ಆಹ್ವಾನಿಸಿದ್ದರು. ಅದರಂತೆ ಪೋಪ್‌ ಫ್ರಾನ್ಸಿಸ್ ಅವರು 2025ರಲ್ಲಿ ಭಾರತಕ್ಕೆ ಭೇಟಿ ನೀಡಬೇಕಿತ್ತು. ಆದರೆ, 2025 ಅನ್ನು ಕ್ರಿಸ್ತನ ಜನ್ಮದಿನ ಸಂಭ್ರಮದ ವರ್ಷವಾಗಿ ಆಚರಿಸುವ ಹಿನ್ನೆಲೆಯಲ್ಲಿ 2026ರಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿತ್ತು.

ಪೋಪ್ ಫ್ರಾನ್ಸಿಸ್ ನಿಧನಕ್ಕೆ ಪ್ರಧಾನಿ ಸಂತಾಪ
‘ಪೂಜ್ಯ ಪೋಪ್ ಫ್ರಾನ್ಸಿಸ್ ಅವರ ನಿಧನದಿಂದ ಅತೀವ ದುಃಖವಾಗಿದೆ. ನೋವು ಮತ್ತು ಸ್ಮರಣೆಯ ಈ ಸಮಯದಲ್ಲಿ, ಜಾಗತಿಕ ಕ್ಯಾಥೊಲಿಕ್ ಸಮುದಾಯಕ್ಕೆ ನನ್ನ ಸಂತಾಪಗಳು. ಪೋಪ್ ಫ್ರಾನ್ಸಿಸ್ ಅವರನ್ನು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಯಾವಾಗಲೂ ಕರುಣೆ, ವಿನಮ್ರತೆ ಮತ್ತು ಆಧ್ಯಾತ್ಮಿಕ ಧೈರ್ಯದ ಸಂಕೇತವಾಗಿ ನೆನಪಿಸಿಕೊಳ್ಳುತ್ತಾರೆ. ಭಾರತದ ಜನರ ಮೇಲಿನ ಅವರ ವಾತ್ಸಲ್ಯ ಸದಾ ಸ್ಮರಣೀಯ. ದೇವರ ಸಾನ್ನಿಧ್ಯದಲ್ಲಿ ಅವರ ಆತ್ಮಕ್ಕೆ ಶಾಶ್ವತ ಶಾಂತಿ ಸಿಗಲಿ’ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: 20 ವರ್ಷಗಳಿಂದ ನಿದ್ರೆಯಲ್ಲಿರುವ ʼಸ್ಲೀಪಿಂಗ್‌ ಪ್ರಿನ್ಸ್‌ʼ ಬಗ್ಗೆ ನಿಮಗೆ ಗೊತ್ತಾ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್
ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್