54 ವರ್ಷದ ಬಳಿಕ ಮತ್ತೆ ಬಂದಿದೆ 'ಮಾಂಸ ತಿನ್ನುವ ಭಯಾನಕ ಹುಳ'! ಗಾಯದ ಮೂಲಕ ದೇಹ ಪ್ರವೇಶಿಸುವ ಕೀಟ!

Published : Jun 04, 2026, 08:13 PM IST
New World Screworm

ಸಾರಾಂಶ

ದಶಕಗಳ ನಂತರ 'ನ್ಯೂ ವರ್ಲ್ಡ್ ಸ್ಕ್ರೂವರ್ಮ್' ಎಂಬ ಮಾಂಸ ತಿನ್ನುವ ಪರಾವಲಂಬಿ ಹುಳ ಮತ್ತೆ ಕಾಣಿಸಿಕೊಂಡಿದೆ. ಇದು ಗಾಯಗಳಲ್ಲಿ ಮೊಟ್ಟೆಯಿಟ್ಟು, ಮಾಂಸವನ್ನು ತಿನ್ನುವ ಮೂಲಕ ಮಾರಣಾಂತಿಕವಾಗಬಲ್ಲದು. ಇದನ್ನು ನಿಯಂತ್ರಿಸಲು ಕೃಷಿ ಇಲಾಖೆ ಕ್ವಾರಂಟೈನ್ ಮತ್ತು ಸಂತಾನಶಕ್ತಿಹೀನ ನೊಣಗಳ ತಂತ್ರವನ್ನು ಬಳಸುತ್ತಿದೆ.

ಇತ್ತೀಚಿನ ದಿನಗಳಲ್ಲಿ ಒಂದು ಭಯಾನಕ ಹುಳ ಮತ್ತೆ ಕಾಣಿಸಿಕೊಂಡಿದೆ. ಇದರ ಹೆಸರು 'ನ್ಯೂ ವರ್ಲ್ಡ್ ಸ್ಕ್ರೂವರ್ಮ್'. ಇದು ಮನುಷ್ಯರು ಮತ್ತು ಪ್ರಾಣಿಗಳ ಗಾಯಗಳಲ್ಲಿ ಮೊಟ್ಟೆ ಇಟ್ಟು, ಮಾಂಸವನ್ನೇ ತಿಂದು ಬದುಕುವ ಒಂದು ರೀತಿಯ ಪರಾವಲಂಬಿ ನೊಣದ ಲಾರ್ವಾ ಆಗಿದೆ.

ಅಮೆರಿಕದ ದಕ್ಷಿಣ ಟೆಕ್ಸಾಸ್‌ನಲ್ಲಿ ಈ ಸ್ಕ್ರೂವರ್ಮ್ ಪತ್ತೆಯಾಗಿರುವುದಾಗಿ ಯು.ಎಸ್. ಕೃಷಿ ಇಲಾಖೆ ಖಚಿತಪಡಿಸಿದೆ. ಟೆಕ್ಸಾಸ್‌ನ ಲಾ ಪ್ರಯೋರ್‌ನಲ್ಲಿರುವ ಮೂರು ವಾರಗಳ ಕರುವಿನ ಮೇಲೆ ಇದನ್ನು ಮೊದಲು ಪತ್ತೆಹಚ್ಚಲಾಗಿದೆ. ಕರುವಿನಿಂದ ತೆಗೆದ ಸ್ಯಾಂಪಲ್‌ ಅನ್ನು ಆಯೋವಾದಲ್ಲಿರುವ ನ್ಯಾಷನಲ್ ವೆಟರಿನರಿ ಸರ್ವಿಸಸ್ ಲ್ಯಾಬೊರೇಟರಿಗೆ ಕಳುಹಿಸಲಾಗಿತ್ತು. ಅಲ್ಲಿನ ತಜ್ಞರು ಇದು ನ್ಯೂ ವರ್ಲ್ಡ್ ಸ್ಕ್ರೂವರ್ಮ್ ಎಂದು ದೃಢಪಡಿಸಿದ್ದಾರೆ. ದಶಕಗಳ ಹಿಂದೆ ಅಮೆರಿಕದಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿದ್ದ ಈ ಪರಾವಲಂಬಿ ಜೀವಿ ಈಗ ಮತ್ತೆ ಬಂದಿದೆ.

ಗಾಯದ ಮೇಲೆ ಮೊಟ್ಟೆ ಇಡುವ ನೊಣ

ಬೆಚ್ಚಗಿನ ರಕ್ತದ ಪ್ರಾಣಿಗಳ ದೇಹದ ಮೇಲಿರುವ ಹೊಸ ಗಾಯಗಳಲ್ಲಿ ಹೆಣ್ಣು ನೊಣಗಳು ಮೊಟ್ಟೆ ಇಡುತ್ತವೆ. ಈ ಮೊಟ್ಟೆಗಳಿಂದ ಹೊರಬರುವ ಲಾರ್ವಾಗಳು ಆ ಪ್ರಾಣಿಯ ಮಾಂಸವನ್ನೇ ತಿನ್ನುತ್ತವೆ. ಇದರಿಂದ ಪ್ರಮುಖ ಅಂಗಾಂಗಗಳಿಗೆ ಹಾನಿಯಾಗಿ, ಬ್ಯಾಕ್ಟೀರಿಯಾ ಸೋಂಕು ಉಂಟಾಗುತ್ತದೆ. ಕೆಲವೊಮ್ಮೆ ಇದು ಸಾವಿಗೂ ಕಾರಣವಾಗಬಹುದು ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಮನುಷ್ಯರಿಗೂ ಈ ಸೋಂಕು ತಗುಲುವ ಸಾಧ್ಯತೆ ಇದೆ, ಆದರೆ ಇದು ತುಂಬಾ ಅಪರೂಪ. ಒಂದು ವೇಳೆ ಮನುಷ್ಯರಿಗೆ ಬಂದರೆ, ಅದು ಮಾರಣಾಂತಿಕವಾಗಬಹುದು. 

ಜಾನುವಾರು ಸಾಕುವವರಿಗೆ ಅಪಾಯ

ಸದ್ಯಕ್ಕೆ ಇದು ಮನುಷ್ಯರಿಗೆ ದೊಡ್ಡ ಅಪಾಯವಲ್ಲ, ಆದರೆ ಜಾನುವಾರುಗಳಿಗೆ ಇದು ತುಂಬಾ ಅಪಾಯಕಾರಿ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಜಾನುವಾರುಗಳ ಜೊತೆ ಕೆಲಸ ಮಾಡುವವರು, ಹೊರಗಡೆ ಮಲಗುವವರು, ಮತ್ತು ದೇಹದ ಮೇಲೆ ತೆರೆದ ಗಾಯಗಳಿರುವವರಿಗೆ ಈ ಸೋಂಕು ತಗುಲುವ ಅಪಾಯ ಹೆಚ್ಚು. ಚರ್ಮದ ಮೇಲಿನ ಸಣ್ಣ ಗೀರುಗಳು ಕೂಡ ಈ ನೊಣಗಳನ್ನು ಆಕರ್ಷಿಸಬಹುದು ಎಂದು ಯು.ಎಸ್. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ (CDC) ಎಚ್ಚರಿಸಿದೆ.

ಕ್ವಾರಂಟೈನ್ ಟೆಕ್ನಿಕ್ ಆರಂಭಿಸಿದ ಕೃಷಿ ಇಲಾಖೆ

ಈ ಪರಾವಲಂಬಿಯನ್ನು ನಿಯಂತ್ರಿಸಲು ಮತ್ತು ನಿರ್ಮೂಲನೆ ಮಾಡಲು ಕೃಷಿ ಇಲಾಖೆ ಈಗಾಗಲೇ ಕ್ರಮಗಳನ್ನು ಕೈಗೊಂಡಿದೆ. ಸೋಂಕು ಪತ್ತೆಯಾದ ಪ್ರದೇಶದ ಸುತ್ತ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕ್ವಾರಂಟೈನ್ ಜಾರಿಗೊಳಿಸಲಾಗಿದೆ. ಪ್ರಾಣಿಗಳ ಸಾಗಾಟದ ಮೇಲೆ ನಿರ್ಬಂಧ ಮತ್ತು ನಿಗಾ ಇಡಲಾಗಿದೆ. ಜೊತೆಗೆ, ಸಂತಾನಶಕ್ತಿಹೀನಗೊಳಿಸಿದ ಗಂಡು ನೊಣಗಳನ್ನು ಪರಿಸರಕ್ಕೆ ಬಿಡುಗಡೆ ಮಾಡುವ ಪ್ರಕ್ರಿಯೆಯನ್ನೂ ಆರಂಭಿಸಿದ್ದಾರೆ.

ಸಂತಾನೋತ್ಪತ್ತಿ ತಡೆಯಲು ಈ ತಂತ್ರ ಬಳಸುತ್ತಾರೆ. ಫ್ಯಾಕ್ಟರಿಗಳಲ್ಲಿ ಬೆಳೆಸಿದ ಗಂಡು ನೊಣಗಳಿಗೆ ಗಾಮಾ ಕಿರಣಗಳನ್ನು ಹಾಯಿಸಿ ಅವುಗಳನ್ನು ಸಂತಾನಶಕ್ತಿಹೀನಗೊಳಿಸಲಾಗುತ್ತದೆ. ನಂತರ, ಈ ನೊಣಗಳನ್ನು ದೊಡ್ಡ ಸಂಖ್ಯೆಯಲ್ಲಿ ಹೊರಗೆ ಬಿಡುತ್ತಾರೆ. ಹೀಗೆ ಮಾಡಿದಾಗ, ಹೆಣ್ಣು ನೊಣಗಳು ಸಂತಾನಶಕ್ತಿಹೀನ ಗಂಡು ನೊಣಗಳೊಂದಿಗೆ ಸೇರಿದರೂ ಮೊಟ್ಟೆಗಳು ಮರಿಯಾಗುವುದಿಲ್ಲ. ಇದರಿಂದ ಅವುಗಳ ಸಂತತಿ ಬೆಳೆಯುವುದು ನಿಲ್ಲುತ್ತದೆ.

ಸ್ಕ್ರೂವರ್ಮ್ ಹರಡಿದರೆ ಆರ್ಥಿಕವಾಗಿ ದೊಡ್ಡ ನಷ್ಟ ಉಂಟಾಗಬಹುದು ಎಂದು ತಜ್ಞರು ಹೇಳುತ್ತಾರೆ. 1972ರಲ್ಲಿ ಅಮೆರಿಕದಲ್ಲಿ ಈ ರೋಗ ದೊಡ್ಡ ಮಟ್ಟದಲ್ಲಿ ಹರಡಿತ್ತು. ಆಗ ಬರೋಬ್ಬರಿ 90,000 ಪ್ರಕರಣಗಳು ವರದಿಯಾಗಿದ್ದವು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಾಖಲೆಗಳ ದೋಷ: 17 ವರ್ಷಗಳ ಬಳಿಕ ಡೆನ್ಮಾರ್ಕ್‌ನಿಂದ ಭಾರತಕ್ಕೆ ಹಾರಿದ್ದ SAS ವಿಮಾನ ಅರ್ಧದಾರಿಯಲ್ಲೇ ವಾಪಸ್!
ಆ ಅಂಗಡಿಯಲ್ಲಿ ಓನರ್ ಇಲ್ಲ, ಸಿಬ್ಬಂದಿಯೂ ಇಲ್ಲ; ಆದ್ರೂ ನಡೆಯುತ್ತೆ ವ್ಯಾಪಾರ, ಮೋಸ ಆಗೋದೇ ಇಲ್ಲ!