
ಟೆಹ್ರಾನ್ (ಜೂ.3): ಇರಾನ್‌ನ ಮಾಜಿ ಸರ್ವೋಚ್ಚ ನಾಯಕ (Supreme Leader) ಆಯತೊಲ್ಲಾ ಅಲಿ ಖಮೇನಿ ಅವರ ಮೃತದೇಹವನ್ನು ಅವರು ಮರಣ ಹೊಂದಿದ ಸುಮಾರು ನಾಲ್ಕು ತಿಂಗಳ ನಂತರ ಜೂನ್ ತಿಂಗಳ ಅಂತ್ಯದಲ್ಲಿ ಮಣ್ಣು ಮಾಡಲಾಗುವುದು ಎಂದು ವರದಿಯಾಗಿದೆ. ಖಮೇನಿ ಅವರ ಕೊನೆಯ ಇಚ್ಛೆಯಂತೆ, ಶಿಯಾ ಇಸ್ಲಾಂ ಧರ್ಮದ ಅತ್ಯಂತ ಪೂಜನೀಯ ಹಾಗೂ ಪ್ರಸಿದ್ಧ ವ್ಯಕ್ತಿಯಾದ ಇಮಾಮ್ ರೆಜಾ ಅವರ ಪವಿತ್ರ ದರ್ಗಾ (Shrine Complex) ಇರುವ ಮಶಹದ್ ನಗರದಲ್ಲೇ ಅವರ ಅಂತ್ಯಕ್ರಿಯೆ ಜರುಗಲಿದೆ.
ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಖಮೇನಿ ಅವರ ಪಾರ್ಥಿವ ಶರೀರವನ್ನು ಜೂನ್ 21 ರ ಸುಮಾರಿಗೆ ದಫನ್ ಮಾಡುವ ನಿರೀಕ್ಷೆಯಿದೆ. ಕಳೆದ ಫೆಬ್ರವರಿ 28 ರಂದು ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿರುವ ಅವರ ನಿವಾಸದ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಖಮೇನಿ ಹತರಾಗಿದ್ದರು.
ನಿಜವಾಗಿ ಖಮೇನಿ ಅವರ ಸರ್ಕಾರಿ ಅಂತ್ಯಸಂಸ್ಕಾರವನ್ನು ಮಾರ್ಚ್ 4 ರಂದೇ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ದೇಶದಲ್ಲಿ ಉಂಟಾಗಿದ್ದ ಯುದ್ಧದ ಪರಿಸ್ಥಿತಿಯಿಂದಾಗಿ ಇದನ್ನು ಮುಂದೂಡಲಾಗಿತ್ತು. ಪ್ರಸ್ತುತ ಇರಾನ್ ರಾಜಧಾನಿ ತೆಹರಾನ್, ಖೋಮ್ ಮತ್ತು ಮಶಹದ್ ನಗರಗಳಲ್ಲಿ ನಡೆಯಲಿರುವ ಅಂತಿಮ ನಮನ ಸಲ್ಲಿಸುವ ಕಾರ್ಯಕ್ರಮಗಳಲ್ಲಿ ಬರೋಬ್ಬರಿ 2 ಕೋಟಿಗೂ ಅಧಿಕ ಜನಸ್ತೋಮ ಭಾಗವಹಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಸಾರ್ವಜನಿಕರು ತಮ್ಮ ನೆಚ್ಚಿನ ನಾಯಕನಿಗೆ ಅಂತಿಮ ಗೌರವ ಸಲ್ಲಿಸಲು ಒಟ್ಟು ಮೂರು ಪೂರ್ಣ ದಿನಗಳನ್ನು ಮೀಸಲಿಡಲಾಗಿದೆ.
ಖಮೇನಿ ಅಂತ್ಯಸಂಸ್ಕಾರದ ವಿಧಿವಿಧಾನಗಳು ಟೆಹ್ರಾನ್‌ನಲ್ಲಿಯೇ ಜರುಗಲಿದ್ದು, ಇದು ಕನಿಷ್ಠ 24 ಗಂಟೆಗಳ ಕಾಲ ಸಾಗುವ ನಿರೀಕ್ಷೆಯಿದೆ. ತದನಂತರ ಅವರ ಪಾರ್ಥಿವ ಶರೀರವನ್ನು ಧಾರ್ಮಿಕ ನಗರಿ ಖೋಮ್‌ಗೆ (Qom) ಕೊಂಡೊಯ್ದು, ಅಲ್ಲಿಂದ ಅಂತಿಮವಾಗಿ ಮಶಹದ್‌ಗೆ ಸಾಗಿಸಲಾಗುವುದು. ಅಲ್ಲಿನ ಇಮಾಮ್ ರೆಜಾ ದರ್ಗಾ ಸಂಕೀರ್ಣದಲ್ಲಿ ಇವರನ್ನು ದಫನ್ ಮಾಡಲಾಗುತ್ತದೆ. ಟೆಹ್ರಾನ್ ಮುನ್ಸಿಪಲ್ ಅಧಿಕಾರಿಯೊಬ್ಬರು ತಿಳಿಸಿರುವಂತೆ, ದಫನ್ ಮಾಡುವ ಮುನ್ನ ಖಮೇನಿ ಅವರ ಶವಯಾತ್ರೆಯನ್ನು ಖೋಮ್ ಮತ್ತು ಮಶಹದ್ ನಗರಗಳ ಪ್ರಮುಖ ಬೀದಿಗಳಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಅತ್ಯಂತ ಭವ್ಯವಾಗಿ ಮೆರವಣಿಗೆ ಮಾಡಲಾಗುವುದು ಎಂದು ಐಆರ್‌ಜಿಸಿ ಪ್ರಕಟಣೆ ತಿಳಿಸಿದೆ.
ಒಂದು ವೇಳೆ ಖಮೇನಿ ಅವರ ಅಂತ್ಯಸಂಸ್ಕಾರಕ್ಕೆ ಅಧಿಕಾರಿಗಳು ಅಂದಾಜಿಸಿದಂತೆ 2 ಕೋಟಿ ಜನ ಸೇರಿದ್ದೇ ಆದಲ್ಲಿ, ಇದು ಇಸ್ಲಾಮಿಕ್ ಗಣರಾಜ್ಯದ ಸಂಸ್ಥಾಪಕ ಆಯತೊಲ್ಲಾ ರುಹೊಲ್ಲಾ ಖೊಮೇನಿ ಅವರ ಅಂತ್ಯಕ್ರಿಯೆಯ ಹೆಸರಲ್ಲಿದ್ದ ಹಳೆಯ ವಿಶ್ವ ದಾಖಲೆಯನ್ನು ಮುರಿಯಲಿದೆ. 1989 ರಲ್ಲಿ ನಡೆದ ಆಯತೊಲ್ಲಾ ರುಹೊಲ್ಲಾ ಖೊಮೇನಿ ಅವರ ಅಂತ್ಯಸಂಸ್ಕಾರದಲ್ಲಿ ಸುಮಾರು 1 ಕೋಟಿ (10 ಮಿಲಿಯನ್) ಜನ ಭಾಗವಹಿಸಿದ್ದರು. ಇದು ಆ ಕಾಲದ ಇರಾನ್‌ನ ಒಟ್ಟು ಜನಸಂಖ್ಯೆಯ ಆರನೇ ಒಂದು ಭಾಗದಷ್ಟಾಗಿತ್ತು. ಆ ಘಟನೆಯು ಇಂದಿಗೂ ಜಗತ್ತಿನ ಅತಿ ದೊಡ್ಡ ಅಂತ್ಯಸಂಸ್ಕಾರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಆದರೆ ಅಂದು ಜನದಟ್ಟಣೆ ಎಷ್ಟಿತ್ತೆಂದರೆ ಭೀಕರ ತುಳಿತ (Stampede) ಸಂಭವಿಸಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದರು ಮತ್ತು ಸಾವಿರಾರು ಮಂದಿ ಗಾಯಗೊಂಡಿದ್ದರು.
ಈ ಬಾರಿ ಅದಕ್ಕಿಂತಲೂ ದುಪ್ಪಟ್ಟು ಅಂದರೆ 2 ಕೋಟಿ ಜನರನ್ನು ನಿಭಾಯಿಸುವುದು ಮತ್ತು ಯಾವುದೇ ಅಪಘಾತಗಳು ಸಂಭವಿಸದಂತೆ ತಡೆಯುವುದು ಇರಾನ್ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ. ಅದೂ ಅಲ್ಲದೆ, ಯುದ್ಧದ ಹೊಡೆತದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ದೇಶದಲ್ಲಿ ಇಂತಹ ಬೃಹತ್ ಕಾರ್ಯಕ್ರಮ ಆಯೋಜಿಸುವುದು ಅತ್ಯಂತ ಕಠಿಣ ಕೆಲಸವಾಗಿದೆ.
ಸಾಮಾನ್ಯವಾಗಿ ಇಸ್ಲಾಮಿಕ್ ಸಂಪ್ರದಾಯದ ಪ್ರಕಾರ, ವ್ಯಕ್ತಿ ಮರಣ ಹೊಂದಿದ ಒಂದೆರಡು ದಿನಗಳ ಒಳಗಾಗಿಯೇ ದಫನ್ ಮಾಡಬೇಕು. ಆದರೆ ಖಮೇನಿ ಅವರ ಅಂತ್ಯಸಂಸ್ಕಾರ 4 ತಿಂಗಳು ವಿಳಂಬವಾಗಿರುವುದು ಅತ್ಯಂತ ಅಪರೂಪದ ಹಾಗೂ ಅಸಹಜ ಘಟನೆಯಾಗಿದೆ. ನಿರೀಕ್ಷಿತ ಜನಸಾಗರ ಮತ್ತು ಯುದ್ಧದ ಉದ್ವಿಗ್ನ ಪರಿಸ್ಥಿತಿಯೇ ಈ ವಿಳಂಬಕ್ಕೆ ಕಾರಣ ಎಂದು ಇರಾನ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಟೆಹ್ರಾನ್ ಮುನ್ಸಿಪಾಲಿಟಿಯ ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಉಪ ಮುಖ್ಯಸ್ಥ ಮೊಹಮ್ಮದ್ ಅಲಿ ತವಕ್ಕೋಲಿಜಾಡೆ ಅವರು ಸಿದ್ಧತೆಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಇರಾನ್ ಸರ್ಕಾರಿ ದೂರದರ್ಶನ ವಾಹಿನಿಯೊಂದಿಗೆ ಮಾತನಾಡಿದ ಅವರು, ಖಮೇನಿ ಅವರಿಗಾಗಿ ಮೂರು ದಿನಗಳ ಸಾರ್ವಜನಿಕ ಶೋಕಯಾತ್ರೆ ಮತ್ತು ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿಸಿದ್ದಾರೆ. ಇಸ್ಲಾಮಿಕ್ ಕ್ಯಾಲೆಂಡರ್‌ನ ಮೊದಲ ತಿಂಗಳಾದ 'ಮುಹರಂ' ಆರಂಭದ ದಿನಗಳಲ್ಲಿ (ಜೂನ್ 21 ರ ಸುಮಾರಿಗೆ) ಇದು ನಡೆಯಬಹುದು ಎಂದು ಅವರು ಹೇಳಿದ್ದಾರೆ. ಈ ಇಡೀ ಮಹಾ ಕಾರ್ಯಕ್ರಮದ ಆಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಇರಾನ್‌ನ ಸೇನಾ ಪಡೆ ‘ಐಆರ್‌ಜಿಸಿ’ (IRGC) ವಹಿಸಿಕೊಂಡಿದೆ.
ಮಶಹದ್ ಇರಾನ್ ದೇಶದ ಈಶಾನ್ಯ ಭಾಗದಲ್ಲಿರುವ ಎರಡನೇ ಅತಿ ದೊಡ್ಡ ನಗರವಾಗಿದ್ದು, ಶಿಯಾ ಮುಸ್ಲಿಮರ ಪಾಲಿಗೆ ಅತ್ಯಂತ ಪವಿತ್ರ ಹಾಗೂ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಈ ನಗರದ ಪ್ರಮುಖ ಆಕರ್ಷಣೆಯೇ ಇಮಾಮ್ ರೆಜಾ ಅವರ ದರ್ಗಾ. ಇವರು ಶಿಯಾ ಇಸ್ಲಾಮಿನ ‘ಹನ್ನೆರಡು ಇಮಾಮರ’ ಪರಂಪರೆಯಲ್ಲಿ ಎಂಟನೇ ಇಮಾಮ್ ಆಗಿದ್ದಾರೆ. ಇವರ ಈ ಸಮಾಧಿ ಮತ್ತು ದರ್ಗಾ ಸಂಕೀರ್ಣವು ವಿಶ್ವದ ಅತಿ ದೊಡ್ಡ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದ್ದು, ಪ್ರತಿ ವರ್ಷ ಇರಾನ್ ಸೇರಿದಂತೆ ಪ್ರಪಂಚದ ವಿವಿಧ ದೇಶಗಳಿಂದ ಕೋಟ್ಯಂತರ ಯಾತ್ರಿಕರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ, ಮಶಹದ್ ನಗರದಲ್ಲಿ ಖಮೇನಿ ಅವರನ್ನು ದಫನ್ ಮಾಡುವುದರ ಮೂಲಕ ಅವರ ಹೆಸರನ್ನು ಶಿಯಾ ಇಸ್ಲಾಂ ಇತಿಹಾಸದ ಅತ್ಯಂತ ಪೂಜನೀಯ ಧಾರ್ಮಿಕ ನಾಯಕರೊಂದಿಗೆ ಶಾಶ್ವತವಾಗಿ ಜೋಡಿಸಲು ಇರಾನ್ ನಿರ್ಧರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ