ಯುದ್ಧ ನಡುವೆ ಪಾಕಿಸ್ತಾನದ ಮಹತ್ವದ ನಡೆ, ಅಮೆರಿಕ ಇರಾನ್ ಶಾಂತಿ ಮಾತುಕತೆಗೆ ಇಸ್ಲಾಮಾಬಾದ್ ವೇದಿಕೆ?

Published : Mar 24, 2026, 01:23 PM IST
Donald Trump Shehbaz Sharif

ಸಾರಾಂಶ

ಯುದ್ಧ ನಡುವೆ ಪಾಕಿಸ್ತಾನದ ಮಹತ್ವದ ನಡೆ, ಅಮೆರಿಕ ಇರಾನ್ ಶಾಂತಿ ಮಾತುಕತೆಗೆ ಇಸ್ಲಾಮಾಬಾದ್ ವೇದಿಕೆ?ಪಾಕಿಸ್ತಾನ, ಟರ್ಕಿ ಮತ್ತು ಈಜಿಪ್ಟ್ ದೇಶಗಳು ಈ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿದ್ದು, ಪಾಕ್ ಪ್ರಧಾನಿ ಶೆಹಬಾಜ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಇಸ್ಲಮಾಬಾದ್ (ಮಾ.24) ಇರಾನ್, ಇಸ್ರೇಲ್ ಹಾಗೂ ಅಮೆರಿಕ ಯುದ್ಧದಿಂದ ಭಾರತ ಸೇರಿದಂತೆ ಹಲವು ದೇಶಗಳು ಸಂಕಷ್ಟಕ್ಕೆ ಸಿಲುಕಿದೆ. ಗ್ಯಾಸ್ ಪೂರೈಕೆ ಸಮಸ್ಯೆ, ಇಂಧನ ಬೆಲೆ ಹೆಚ್ಚಳ ಸೇರಿದಂತೆ ಹಲವು ಸಮಸ್ಯೆಗಳು ತಲೆದೋರಿದೆ. ಇತ್ತ ಯುದ್ಧ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಇದರ ನಡುವೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧಕ್ಕೆ ಅಂತ್ಯ ಹಾಡಲು ಪಾಕಿಸ್ತಾನವು ನಿರ್ಣಾಯಕ ಮಾತುಕತೆಗೆ ವೇದಿಕೆಯಾಗುವ ಸಾಧ್ಯತೆ ಇದೆ. ಇದೇ ವಾರ ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಮತ್ತು ಇರಾನ್‌ನ ಉನ್ನತ ಪ್ರತಿನಿಧಿಗಳು ಭೇಟಿಯಾಗಬಹುದು ಎಂದು ಇಸ್ರೇಲಿ ಅಧಿಕಾರಿಗಳನ್ನು ಉಲ್ಲೇಖಿಸಿ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಇರಾನ್‌ನ ಇಂಧನ ಕೇಂದ್ರಗಳ ಮೇಲೆ ನಡೆಸಬೇಕಿದ್ದ ದಾಳಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬೆನ್ನಲ್ಲೇ ಈ ಹೊಸ ರಾಜತಾಂತ್ರಿಕ ಬೆಳವಣಿಗೆ ನಡೆದಿದೆ.

ಮಾತುಕತೆಗೆ ಪಾಕಿಸ್ತಾನ ಮಧ್ಯಸ್ಥಿತಿಕೆ

ಪಾಕಿಸ್ತಾನ, ಟರ್ಕಿ ಮತ್ತು ಈಜಿಪ್ಟ್ ದೇಶಗಳು ಜಂಟಿಯಾಗಿ ಎರಡೂ ದೇಶಗಳನ್ನು ಮಾತುಕತೆಯ ಟೇಬಲ್‌ಗೆ ಕರೆತರಲು ತೆರೆಮರೆಯಲ್ಲಿ ಕೆಲಸ ಮಾಡುತ್ತಿವೆ. ಅಮೆರಿಕವನ್ನು ಪ್ರತಿನಿಧಿಸಿ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಈ ಚರ್ಚೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಮಾತುಕತೆಯಲ್ಲಿ ಸಾಕಷ್ಟು ಪ್ರಗತಿಯಾಗಿದ್ದು, ಹಲವು ವಿಷಯಗಳಲ್ಲಿ ಈಗಾಗಲೇ ಒಪ್ಪಂದಕ್ಕೆ ಬರಲಾಗಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಆದರೆ, ಈ ಬೆಳವಣಿಗೆಯ ಬಗ್ಗೆ ಇಸ್ರೇಲ್ ಅಚ್ಚರಿ ವ್ಯಕ್ತಪಡಿಸಿದೆ. ಶಾಂತಿ ಮಾತುಕತೆಯ ಬಗ್ಗೆ ತಮಗೆ ಅರಿವಿದ್ದರೂ, ಒಪ್ಪಂದಕ್ಕೆ ಬರಲಾಗಿದೆ ಎಂಬ ಟ್ರಂಪ್ ಹೇಳಿಕೆ ನಿರೀಕ್ಷೆಗಿಂತ ವೇಗವಾಗಿದೆ ಎಂಬುದು ಇಸ್ರೇಲ್‌ನ ಅಭಿಪ್ರಾಯ.

ಶೆಹಬಾಜ್ ಶರೀಫ್ ಸಕ್ರಿಯ

ಈ ಭಾಗದಲ್ಲಿ ಶಾಂತಿ ಸ್ಥಾಪಿಸಲು ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್, ಇರಾನ್ ಅಧ್ಯಕ್ಷ ಮಸೂದ್ ಪೆಸೆಶ್ಕಿಯಾನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಭರವಸೆ ನೀಡಿದ್ದಾರೆ. ರಂಜಾನ್ ಮತ್ತು ಈದ್ ಸಂದರ್ಭದಲ್ಲಿ ಇಬ್ಬರೂ ನಾಯಕರು ಹಲವು ಬಾರಿ ಮಾತುಕತೆ ನಡೆಸಿದ್ದು, ಯುದ್ಧವನ್ನು ಕೊನೆಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದ್ದರು. ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಕೂಡ ಇರಾನ್ ಅಧ್ಯಕ್ಷರು ಮತ್ತು ಟ್ರಂಪ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೊಂದೆಡೆ, ವೈಟ್ ಹೌಸ್ ಪ್ರತಿನಿಧಿಗಳು ಮತ್ತು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ನಡುವೆ ನಡೆದ ಮಾತುಕತೆಗಳು ರಾಜತಾಂತ್ರಿಕ ಪ್ರಯತ್ನಗಳು ಚುರುಕಾಗಿರುವುದನ್ನು ಸೂಚಿಸುತ್ತವೆ. ಮಾತುಕತೆಗಾಗಿ ಐದು ದಿನಗಳ ಕದನ ವಿರಾಮ ಘೋಷಿಸಿರುವ ಟ್ರಂಪ್, ಇರಾನ್ ತಾನಾಗಿಯೇ ಮಾತುಕತೆಗೆ ಮುಂದೆ ಬಂದಿದೆ ಎಂದೂ ಹೇಳಿಕೊಂಡಿದ್ದಾರೆ. ಆದರೆ, ಕಳೆದ 24 ದಿನಗಳಿಂದ ಅಮೆರಿಕದೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಇರಾನ್ ವಿದೇಶಾಂಗ ಸಚಿವಾಲಯ ಅಧಿಕೃತವಾಗಿ ನಿರಾಕರಿಸಿದೆ. ಒಂದು ವೇಳೆ ಇಸ್ಲಾಮಾಬಾದ್‌ನಲ್ಲಿ ಈ ಸಭೆ ನಡೆದರೆ, ಅದು ಪಶ್ಚಿಮ ಏಷ್ಯಾ ಯುದ್ಧದ ದಿಕ್ಕನ್ನೇ ಬದಲಿಸುವ ದೊಡ್ಡ ತಿರುವಾಗಲಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

LPG, ಇಂಡಕ್ಷನ್​, PNG, ಎಲೆಕ್ಟ್ರಿಕ್​ ಸ್ಟವ್​: ಕಡಿಮೆ ಖರ್ಚಿನ ಅಡುಗೆಗೆ ಯಾವುದು ಬೆಸ್ಟ್​? ಡಿಟೇಲ್ಸ್​ ಇಲ್ಲಿದೆ ನೋಡಿ
ಕಳ್ಳರ ಟ್ರಕ್‌ನಿಂದ ತಪ್ಪಿಸಿಕೊಂಡು 17 ಕಿ.ಮಿ ನಡೆದು ಮರಳಿ ಮನೆ ಸೇರಿದ 7 ನಾಯಿಗಳ ಸಾಹಸಗಾಥೆ