*ಡೆಲ್ಟಾ, ಒಮಿಕ್ರೋನ್ ಒಟ್ಟಾಗಿ ದಾಳಿ ಕಾರಣ ಪ್ರಕರಣ ಹೆಚ್ಚಳ
*ಬ್ರಿಟನ್, ಅಮೆರಿಕ, ಜರ್ಮನಿ ದೇಶದಲ್ಲಿ ಡೆಲ್ಮಿಕ್ರೋನ್ ಹಾವಳಿ
*ಡೆಲ್ಟಾದಷ್ಟು ಒಮಿಕ್ರೋನ್ ರೂಪಾಂರಿ ಅಪಾಯ ಅಲ್ಲ
*ಮರು ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ 60% ಕಮ್ಮಿ
ನವದೆಹಲಿ (ಡಿ. 24) : ಅಮೆರಿಕಾ, ಯುರೋಪ್ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವುದಕ್ಕೆ ಡೆಲ್ಮಿಕ್ರೋನ್ (Delmicron) ಕಾರಣ ಎಂದು ಹೇಳಲಾಗುತ್ತಿದೆ. ಕೋವಿಡ್‌ನ ರೂಪಾಂತರಿಗಳಾದ ಡೆಲ್ಟಾ (Delta) ಮತ್ತು ಒಮಿಕ್ರೋನ್‌ಗಳನ್ನು (Omicron) ಸೇರಿಸಿ ಈ ಹೊಸ ಪದವನ್ನು ಸೃಷ್ಟಿಮಾಡಲಾಗಿದೆ.
ಡೆಲ್ಟಾಮತ್ತು ಒಮಿಕ್ರೋನ್ ಸೋಂಕು ವೇಗವಾಗಿ ಹರಡುತ್ತಿರುವುದರಿಂದ 2022ನೇ ಇಸವಿ ಸಾಂಕ್ರಾಮಿಕದಿಂದ (Pandemic) ದೂರವಾಗುತ್ತದೆ ಎಂಬ ನಿರೀಕ್ಷೆಗಳು ಹುಸಿಯಾಗುತ್ತಿದೆ.
ಈ ಎರಡೂ ರೂಪಾಂತರಿಗಳು ಸೋಂಕಿಗೆ ಕಾರಣವಾಗಿರುವುದರಿಂದ ಕೋವಿಡ್ ಸುನಾಮಿ ಉಂಟಾಗಿದೆ ಎಂದು ಮಹಾರಾಷ್ಟ್ರ ಕೋವಿಡ್ ಟಾಸ್ಕ್‌ಫೋರ್ಸ್‌ನ ಸದಸ್ಯ ಶಶಾಂಕ್ ಜೋಷಿ ಹೇಳಿದ್ದಾರೆ. ಡೆಲ್ಟಾದ ನಂತರ ರೂಪುಗೊಂಡ ಒಮಿಕ್ರೋನ್ ಅತಿ ವೇಗವಾಗಿ ಹರಡುತ್ತಿದೆ. ಡೆಲ್ಟಾದ ಜಾಗವನ್ನು ಒಮಿಕ್ರೋನ್ ಆಕ್ರಮಿಸಿಕೊಳ್ಳುತ್ತಿದೆ ಭಾರತದಲ್ಲೂ ಇದೇ ಪರಿಸ್ಥಿತಿ ತಲೆದೋರಬಹುದು ಎಂದು ಅವರು ಹೇಳಿದ್ದಾರೆ.
ಕೊವಿಡ್‌ನ ಹೊಸ ರೂಪಾಂತರಿ ಒಮಿಕ್ರೋನ್ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಕೋರೋನಾದ ಇತರ ರೂಪಾಂತರಿಗಳಿಗಿಂತ ವೇಗವಾಗಿ ಇದು ಜಗತ್ತನ್ನು ಆಕ್ರಮಿಸಿಕೊಳ್ಳುತ್ತಿದೆ. ಈಗಾಗಲೇ 106 ದೇಶಗಳಲ್ಲಿ ಒಮಿಕ್ರೋನ್ ರೂಪಾಂತರಿಯ ಸೋಂಕಿತರನ್ನು ಗುರುತಿಸಲಾಗಿದೆ.
ಡೆಲ್ಟಾದಷ್ಟುಒಮಿಕ್ರೋನ್ ಅಪಾಯ ಅಲ್ಲ
ಕೊರೋನಾದ ಹೊಸ ರೂಪಾಂತರಿ ಒಮಿಕ್ರೋನ್ ಅತ್ಯಂತ ವೇಗವಾಗಿ ಪಸರಿಸುತ್ತದೆಯಾದರೂ ಇದು ಅಪಾಯಕಾರಿ ಇದ್ದಂತಿಲ್ಲ ಎಂಬ ವಾದಗಳಿಗೆ ಈಗ ಪುಷ್ಟಿಸಿಕ್ಕಿದೆ. ವಿಶ್ವದ ಮೂರು ಕಡೆ ನಡೆದ ಅಧ್ಯಯನಗಳ ಪ್ರಕಾರ, ವಿಶ್ವಾದ್ಯಂತ ಅಪಾರ ಸಾವು ಸೃಷ್ಟಿಸಿದ ಕೊರೋನಾ ಡೆಲ್ಟಾರೂಪಾಂತರಿಗೆ ಹೋಲಿಸಿದರೆ ಒಮಿಕ್ರೋನ್ ಅಪಾಯಕಾರಿ ಅಲ್ಲ. ಆದರೆ ಲಸಿಕೆಯನ್ನೇ ಪಡೆದವರಿಗೆ ಇದು ಅಪಾಯಕಾರಿ.
ಬ್ರಿಟನ್‌ನ ಇಂಪೀರಿಯಲ್ ಕಾಲೇಜು ಲಂಡನ್, ಸ್ಕಾಟ್ಲೆಂಡ್‌ನ ಎಡಿನ್‌ಬರೋ ವಿಶ್ವವಿದ್ಯಾಲಯದ ಸಂಶೋಧಕರು, ಇನ್ನಿತರೆ ತಜ್ಞರು ಮತ್ತು ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಸಾಂಕ್ರಾಮಿಕ ರೋಗ ಸಂಸ್ಥೆಯ ಅಧ್ಯಯನ, ಅಂಕಿ-ಅಂಶಗಳು ಇದನ್ನು ಒತ್ತಿ ಹೇಳಿವೆ. ಹೀಗಾಗಿ ಒಮಿಕ್ರೋನ್ ಮತ್ತೊಂದು ಸುತ್ತಿನ ಕೊರೋನಾ ಗಂಡಾಂತರವನ್ನು ಹೊತ್ತು ತರಬಹುದು ಎಂಬ ಆತಂಕ ಕೊಂಚ ಕಡಿಮೆಯಾಗುವಂತಾಗಿದೆ.
ಅಧ್ಯಯನದಲ್ಲೇನಿದೆ?:
ಇಂಪೀರಿಯಲ್ ಕಾಲೇಜು ಲಂಡನ್ ತಜ್ಞರು 56 ಸಾವಿರ ಒಮಿಕ್ರೋನ್ ಸೋಂಕಿತರು, 2.69 ಲಕ್ಷ ಡೆಲ್ಟಾಸೋಂಕಿತರನ್ನು ಅಧ್ಯಯನಕ್ಕೊಳಪಡಿಸಿ ವರದಿಯೊಂದನ್ನು ಸಿದ್ಧಪಡಿಸಿದ್ದಾರೆ. ಅದರ ಪ್ರಕಾರ, ಡೆಲ್ಟಾಸೋಂಕಿಗೆ ಹೋಲಿಸಿದರೆ ಒಮಿಕ್ರೋನ್ ಸೋಂಕಿತರು ಆಸ್ಪತ್ರೆಗೆ ದಾಖಲಾಗುವಂತಹ ಹಂತ ತಲುಪುವ ಸಾಧ್ಯತೆ ಕಡಿಮೆ. ಕೊರೋನಾ ದೃಢಪಟ್ಟವ್ಯಕ್ತಿಗಳು ಒಂದು ರಾತ್ರಿ ಅಥವಾ ಅದಕ್ಕಿಂತ ಹೆಚ್ಚು ಸಮಯವನ್ನು ಆಸ್ಪತ್ರೆಯಲ್ಲಿ ಕಳೆಯಬೇಕಾದ ಪರಿಸ್ಥಿತಿ ಸೃಷ್ಟಿಯಾಗುವ ಸಂಭವ ಶೇ.40ರಿಂದ ಶೇ.45ರಷ್ಟುಕಡಿಮೆ ಇದೆ. ಈ ಹಿಂದೆ ಕೊರೋನಾ ಸೋಂಕಿಗೆ ಒಳಗಾಗಿ ಇದೀಗ ಒಮಿಕ್ರೋನ್ ಸೋಂಕಿಗೆ ತುತ್ತಾಗಿರುವವರು ಆಸ್ಪತ್ರೆ ಸೇರುವ ಸಾಧ್ಯತೆ ಶೇ.50ರಿಂದ ಶೇ.60ರಷ್ಟುಕಡಿಮೆ ಇರುತ್ತದೆ ಎಂದು ಹೇಳಿದೆ.
ಆದರೆ, ಕೊರೋನಾದ ಯಾವುದೇ ಲಸಿಕೆಯನ್ನು ಪಡೆಯದೆ ಇರುವವರು ಆಸ್ಪತ್ರೆಗೆ ಸೇರಬೇಕಾದ ಅಪಾಯ ಹೆಚ್ಚಿದೆ ಎಂದು ಹೇಳಿದೆ. ಮತ್ತೊಂದೆಡೆ, ಎಡಿನ್‌ಬರೋ ವಿವಿ ಕೇವಲ 15 ಮಂದಿಯ ಮಾದರಿ ಸಂಗ್ರಹಿಸಿ ನಡೆದಿರುವ ಅಧ್ಯಯನದ ಪ್ರಕಾರ, ಡೆಲ್ಟಾಗೆ ಹೋಲಿಸಿದರೆ ಒಮಿಕ್ರೋನ್ ಸೋಂಕಿತರು ಆಸ್ಪತ್ರೆಗೆ ಸೇರುವ ಸಾಧ್ಯತೆ ಮೂರನೇ ಎರಡರಷ್ಟುಕಡಿಮೆ ಇದೆ ಎಂಬ ಅಭಿಪ್ರಾಯಕ್ಕೆ ಬಂದಿದೆ.
ಇನ್ನೊಂದೆಡೆ, ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರೋನ್ ದೃಢಪಟ್ಟವರು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಶೇ.80ರಷ್ಟುಕಡಿಮೆ ಇದೆ. ಡೆಲ್ಟಾಗೆ ಹೋಲಿಸಿದರೆ ಶೇ.70ರಷ್ಟುಮಂದಿಯಲ್ಲಷ್ಟೇ ರೋಗ ಉಲ್ಬಣವಾಗಿದೆ ಎಂದು ಅಲ್ಲಿನ ರಾಷ್ಟ್ರೀಯ ಸಾಂಕ್ರಾಮಿಕ ರೋಗ ಸಂಸ್ಥೆ ಹೇಳಿದೆ.
ಇದನ್ನೂ ಓದಿ:
1) China Lockdown: 1.3 ಕೋಟಿ ಜನರಿರುವ ಚೀನಾದ ಕ್ಸಿಯಾನ್ ನಗರ ಪೂರ್ಣ ಲಾಕ್ಡೌನ್!
2) Omicron Threat: ಒಮಿಕ್ರೋನ್ ತಡೆಗೆ ಇಸ್ರೇಲ್, ಜರ್ಮನಿಯಲ್ಲಿ ವಿಶಿಷ್ಟ ಕ್ರಮ!
3) Omicron In South Africa: ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರೋನ್ ಅಂತ್ಯ?, ಹೊಸ ಕೇಸು ಭಾರೀ ಇಳಿಕೆ!