
ಕ್ರಿಪ್ಟೋಕರೆನ್ಸಿ ಉದ್ಯಮಿ ಜಸ್ಟಿನ್ ಸನ್ ಅವರು ಈಗ ಸಕತ್ ಸದ್ದುಮಾಡುತ್ತಿದ್ದಾರೆ. ಇದಕ್ಕೆ ಕಾರಣ ಅವರು 52 ಕೋಟಿ ರೂಪಾಯಿ ಬಾಳೆಹಣ್ಣನ್ನು ಗುಳುಂ ಮಾಡಿದ್ದಾರೆ! ಹೌದು. ಇದೇನು ವಿಶೇಷ ತಳಿಯ ಬಾಳೆಹಣ್ಣಲ್ಲ, ಮಾಮೂಲಿ ಹಣ್ಣೆ. ಆದರೂ ಇದಕ್ಕೆ ಇಷ್ಟೊಂದುಬೆಲೆ ಯಾಕೆ ಎನ್ನುವ ಹಿಂದಿಗೆ ಕುತೂಹಲದ ಕಥೆ. ಅಷ್ಟಕ್ಕೂ ಇದು ಗೋಡೆ ಮೇಲೆ ಟೇಪ್ ಹಾಕಿ ಅಂಟಿಸಿದ್ದ ಬಾಳೆಹಣ್ಣಷ್ಟೇ. ಇದು ಕೆಲ ವಾರಗಳ ಹಿಂದೆ 52 ಕೋಟಿಗೆ ಹರಾಜಿನಲ್ಲಿ ಮಾರಾಟವಾಗಿತ್ತು. ನ್ಯೂಯಾರ್ಕ್‌ನಲ್ಲಿ ನಡೆದ ಈ ಹರಾಜು ಪ್ರಕ್ರಿಯೆಯಲ್ಲಿ ಜಸ್ಟಿನ್ ಸನ್ 6.2 ಮಿಲಿಯನ್ ಡಾಲರ್ ಅಂದರೆ ಸುಮಾರು 52 ಕೋಟಿ 45 ಲಕ್ಷದ 89 ಸಾವಿರದ 440 ಕೋಟಿ ಕೊಟ್ಟು ಖರೀದಿಸಿದ್ದರು. ಅವರು ಈ ಹಿಂದೆ ಅದನ್ನು ಸಾರ್ವಜನಿಕರ ಎದುರು ತಿನ್ನುವುದಾಗಿ ತಿಳಿಸಿದ್ದರು. ಅದರಂತೆ ಈಗ ನಡೆದುಕೊಂಡಿದ್ದಾರೆ. ಮೌರಿಜೀಯೋ ಕ್ಯಾಟೆಲನ್ ಅವರ ಕಲಾಕೃತಿಯಾಗಿರುವ ಹಿನ್ನೆಲೆಯಲ್ಲಿ ಅದಕ್ಕೆ ಇಷ್ಟು ಡಿಮಾಂಡ್ ಅಷ್ಟೇ. ಇವರು ಇದಾಗಲೇ ಸಾಕಷ್ಟು ಕುತೂಹಲ ಹಾಗೂ ಭಾರಿ ಬೇಡಿಕೆಯಿರುವ ಬೆಲೆ ಬಾಳುವ ಕಲಾಕೃತಿಗಳನ್ನೂ ರಚಿಸಿದವರು. ಅದರಲ್ಲಿ ಒಂದು ಚಿನ್ನದ ಟಾಯ್ಲೆಟ್ ಸೀಟ್. ಇದನ್ನು ಅವರು ಅಮೆರಿಕದ ಅಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಉಡುಗೊರೆ ನೀಡುವ ಮೂಲಕ ಸದ್ದು ಮಾಡಿದ್ದರು. ಇಟಲಿಯಲ್ಲಿ 1960ರಲ್ಲಿ ಜನಿಸಿರುವ ಇವರು ಇದಾಗಲೇ ಸಾಕಷ್ಟು ಈ ರೀತಿಯ ಕಲಾಕೃತಿಗಳನ್ನು ರಚಿಸಿರುವ ಹಿನ್ನೆಲೆಯಲ್ಲಿ ಅವರು ಏನೇ ಮಾಡಿದರೂ ಅದಕ್ಕೆ ಅಷ್ಟು ಡಿಮಾಂಡ್!
ಅಂದಹಾಗೆ, 2019 ರಲ್ಲಿ ಕಲಾಲೋಕವನ್ನು ಬೆಚ್ಚಿಬೀಳಿಸಿದ ಒಂದು ಪ್ರದರ್ಶನ ನಡೆಯಿತು. ಮೌರಿಜೀಯೋ ಕ್ಯಾಟೆಲನ್ ಈ ಕಲಾಕೃತಿಯ ಮಾಲೀಕರಾಗಿದ್ದರು. 'ಕಾಮಿಡಿಯನ್' ಎಂದು ಹೆಸರಿಸಲಾಗಿದ್ದ ಈ ಕಲಾಕೃತಿಯು ಕಪ್ಪು ಡಕ್ಟ್ ಟೇಪ್ ಬಳಸಿ ಗೋಡೆಗೆ ಅಂಟಿಸಲಾಗಿದ್ದ ಬಾಳೆ ಹಣ್ಣಾಗಿತ್ತು. ಆಶಯಾತ್ಮಕ ಕಲೆ (Conceptual art) ಎಂಬ ಗುಂಪಿಗೆ ಸೇರಿದ ಈ ಕಲಾಕೃತಿ ಆಗ ಕಲಾಲೋಕದ ಹೊರಗೂ ಸಾಕಷ್ಟು ಗಮನ ಸೆಳೆಯಿತು. ಮಿಯಾಮಿಯ ದಿನಸಿ ಅಂಗಡಿಯಿಂದ 30 ಸೆಂಟ್ ಕೊಟ್ಟು ಈ ಹಣ್ಣನ್ನು ಖರೀದಿಸಿದ್ದಾಗಿ ಅವರು ಹೇಳಿದ್ದರು. ಆಗ ನಡೆದ ಹರಾಜಿನಲ್ಲಿ ಈ ಬಾಳೆಹಣ್ಣನ್ನು 35 ಡಾಲರ್‌ಗೆ (2,958 ರೂಪಾಯಿ) ಅಪರಿಚಿತ ಕಲಾಭಿಮಾನಿ ಖರೀದಿಸಿದ್ದರು. ಆದರೆ, ಐದು ವರ್ಷಗಳ ನಂತರ, ಈ ಹಣ್ಣಿನೊಂದಿಗೆ ಇದ್ದ, ಕಲಾಕೃತಿಯನ್ನು ವಿವರಿಸುವ ಪೋಸ್ಟರ್ ಅನ್ನು ಹರಾಜು ಹಾಕಿದಾಗ, ಯಾವ ಹಣ್ಣಿಗೂ ಇಲ್ಲಿಯವರೆಗೆ ಸಿಗದ ಬೆಲೆ ಸಿಕ್ಕಿತು. ಜೊತೆಗೆ ಆ ಬೆಲೆ ಕೇಳಿ ಇಡೀ ಜಗತ್ತೇ ಬೆಚ್ಚಿಬಿದ್ದಿತು. ಒಂದೂ ಎರಡೂ ಅಲ್ಲ, 52.4 ಕೋಟಿ ರೂಪಾಯಿಗೆ (6.2 ಮಿಲಿಯನ್ ಡಾಲರ್) ಹರಾಜು ನಡೆಯಿತು. ನವೆಂಬರ್ 20 ರ ಬುಧವಾರ ನಡೆದ ಹರಾಜಿನಲ್ಲಿ ಬೆಲೆ ತುಂಬಾ ಬೇಗ ಏರಿತು. ಕ್ರಿಪ್ಟೋಕರೆನ್ಸಿ ವೇದಿಕೆ ಟ್ರೋನ್‌ನ ಸ್ಥಾಪಕ ಜಸ್ಟಿನ್ ಸನ್, ಅದರ ನಿಜವಾದ ಅಂದಾಜಿಗಿಂತ ನಾಲ್ಕು ಪಟ್ಟು ಹೆಚ್ಚಿನ ಬೆಲೆಗೆ ಕಲಾಕೃತಿಯನ್ನು ಖರೀದಿಸಿದರು. ಇದರಿಂದ ಈ ವಿಚಿತ್ರ ಕಲಾಕೃತಿ ಮತ್ತೆ ಚರ್ಚೆಯ ವಿಷಯವಾಯಿತು. ಕ್ಯಾಟಲನ್‌ರ ಲೇಖನ, ಕಲೆ, ಮೀಮ್ಸ್, ಕ್ರಿಪ್ಟೋಕರೆನ್ಸಿಯ ಜಗತ್ತು ಇವುಗಳ ವಿಶಿಷ್ಟ ವಿಭಜನೆಯನ್ನು 'ಕಾಮಿಡಿಯನ್' ಖರೀದಿಸುವ ತನ್ನ ನಿರ್ಧಾರ ಹೇಗೆ ಪ್ರತಿಬಿಂಬಿಸುತ್ತದೆ ಎಂದು ಜಸ್ಟಿನ್ ಸನ್ ವಿವರಿಸಿದರು.
ವೆಡ್ಡಿಂಗ್ ಕಾರ್ಡ್ ಬಂತೆಂದು ಲಿಂಕ್ ಓಪನ್ ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆ ಖಾಲಿ! ಏನಿದು ಹೊಸ ವಂಚನೆ?
2019 ರ 'ಕಾಮಿಡಿಯನ್' ಕಲಾಕೃತಿಯನ್ನು ಹೊಸ ಡಿಜಿಟಲ್ ಸಂಸ್ಕೃತಿ ಮತ್ತು ಉತ್ತಮ ಕಲೆಯ ನಡುವಿನ ಸಂಬಂಧದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಕಲಾಕೃತಿಯನ್ನು ಕಲಾಲೋಕಕ್ಕೂ ಮೀರಿ ಪ್ರಸ್ತುತ ಸಾಂಸ್ಕೃತಿಕ ಕಲಾಲೋಕದ ಸಂಕೇತವಾಗಿಯೂ ವ್ಯಾಖ್ಯಾನಿಸಲಾಗಿದೆ. ಇದು ಜಸ್ಟಿನ್ ಸನ್‌ರಂತಹ ಹೊಸ ತಲೆಮಾರಿನ ತಾಂತ್ರಿಕ ಉದ್ಯಮಿಗಳನ್ನೂ ಆಕರ್ಷಿಸಿದೆ. ಮೀಮ್ಸ್, ಇಂಟರ್ನೆಟ್ ಹಾಸ್ಯಗಳು, ಕ್ರಿಪ್ಟೋಕರೆನ್ಸಿಯಂತಹ ಡಿಜಿಟಲ್ ಆಸ್ತಿಗಳು ಕೂಡ ಕಲಾಲೋಕದಲ್ಲಿ ಪ್ರಾಬಲ್ಯ ಸಾಧಿಸುತ್ತಿವೆ. 2016 ರಲ್ಲಿ ಗುಗೆನ್‌ಹೈಮ್ ಮ್ಯೂಸಿಯಂನಲ್ಲಿರುವ ಶೌಚಾಲಯದಲ್ಲಿ ಚಿನ್ನದ ಟಾಯ್ಲೆಟ್ ಅಳವಡಿಸುವ ಮೂಲಕ ಮತ್ತು ಇನ್ನೊಮ್ಮೆ ಗ್ಯಾಲರಿಯ ಗೋಡೆಯ ಮೇಲೆ ತನ್ನದೇ ಆದ ವ್ಯಾಪಾರಿಯನ್ನು ಅಂಟಿಸುವ ಮೂಲಕ 64 ವರ್ಷದ ಕ್ಯಾಟಲನ್ ಕಲಾಲೋಕವನ್ನು ಹಲವು ಬಾರಿ ಬೆಚ್ಚಿಬೀಳಿಸಿದ್ದಾರೆ.
ಅವರು ಇಲ್ಲಿ ನಿಜವಾದ ಬಾಳೆಹಣ್ಣು ಇಡುವ ಮೊದಲು ಕಂಚಿನ ಬಾಳೆಹಣ್ಣನ್ನು ತಯಾರಿಸಿದ್ದರಂತೆ. ಆದರೆ ಅದು ಸರಿ ಕಾಣಲಿಲ್ಲವೆಂದು ಕೊನೆಗೆ ನಿಜವಾದ ಬಾಳೆಹಣ್ಣನ್ನು ಖರೀದಿಸಿ ಅದನ್ನು ಡಕ್ಟ್ ಟೇಪ್ನಿಂದ ಅಂಟಿಸಿದ್ದಾರೆ. ಅದು ಇಷ್ಟು ಬೆಲೆಗೆ ಹರಾಜು ಆಗಿದೆ. ಇನ್ನು ಕಲಾವಿದ ಮೌರಿಜೀಯೋ ಕ್ಯಾಟೆಲನ್ ಕುರಿತು ಹೇಳುವುದಾದರೆ, ಅವರ ತಾಯಿ ಸ್ವಚ್ಛತಾ ಸಿಬ್ಬಂದಿ ಮತ್ತು ತಂದೆ ಟ್ರಕ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು. 1980ರ ದಶಕದ ಆರಂಭದಲ್ಲಿ ಮರದ ಪೀಠೋಪಕರಣಗಳನ್ನು ವಿನ್ಯಾಸಗೊಳಿಸುವ ಮತ್ತು ಉತ್ಪಾದಿಸುವ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು. ಬಳಿಕ ಯಾವುದೇ ಔಪಚಾರಿಕ ತರಬೇತಿ ಪಡೆದೆಯೂ ಜನಪ್ರಿಯ ಕಲಾವಿದರಾಗಿ ಗುರುತಿಸಿಕೊಂಡರು.
ನೀಲಿ ಚಿತ್ರದ ಮಧ್ಯೆ ಶಿಲ್ಪಾ ಶೆಟ್ಟಿಯನ್ನು ಎಳೆದು ತರಬೇಡಿ ಪ್ಲೀಸ್: ಉದ್ಯಮಿ ರಾಜ್ ಕುಂದ್ರಾ ಕಣ್ಣೀರು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ