*ಇನ್ನೂ 3 ದೇಶಗಳಿಗೆ ‘ಒಮಿಕ್ರೋನ್’
*ಬ್ರಿಟನ್, ಚೆಕ್, ಜರ್ಮನಿಗೂ ಕಾಲಿಟ್ಟ ರೂಪಾಂತರಿ
*ಹೊಸ ತಳಿ ಕಾಣಿಸಿದ ದೇಶಗಳ ಸಂಖ್ಯೆ 9ಕ್ಕೇರಿಕೆ
ನವದೆಹಲಿ(ನ.28): ಭಾರತದಲ್ಲಿ ಕೊರೋನಾ 2ನೇ ಅಲೆ ಭುಗಿಲೇಳಲು ಕಾರಣವಾಗಿದ್ದ ಡೆಲ್ಟಾಪ್ರಬೇಧಕ್ಕಿಂತ (Delta Variant) ಅಪಾಯಕಾರಿಯಾಗಿರುವ ಮತ್ತು ಅತ್ಯಂತ ವೇಗವಾಗಿ ಹರಡುವ, ಯಾವುದೇ ಲಸಿಕೆಗೂ ಬಗ್ಗದ ‘ಒಮಿಕ್ರೋನ್’ (Omicron) ರೂಪಾಂತರಿ ತಳಿ ಶನಿವಾರ ಮತ್ತೆ 3 ದೇಶದಲ್ಲಿ ದೃಢಪಟ್ಟಿದೆ. ಈ ಮೂಲಕ ಈ ತಳಿ ಕಾಣಿಸಿಕೊಂಡ ದೇಶಗಳ ಸಂಖ್ಯೆ 9ಕ್ಕೇರಿದೆ. ಈ ನಡುವೆ, ನೆದರ್ಲೆಂಡ್‌ನಲ್ಲೂ (netherlands) ಈ ತಳಿ ಕಾಣಿಸುವ ಆತಂಕ ಸೃಷ್ಟಿಯಾಗಿದ್ದು, ಅಲ್ಲೂ ದೃಢಪಟ್ಟರೆ 9ನೇ ದೇಶ ಎನ್ನಿಸಿಕೊಳ್ಳಲಿದೆ.
ಇದರ ನಡುವೆಯೇ, ‘ಕೊರೋನಾ ಹಾವಳಿ ನಿಯಂತ್ರಣದಲ್ಲಿರುವ ಭಾರತ ಸೇರಿದಂತೆ ಆಗ್ನೇಯ ಏಷ್ಯಾ ದೇಶಗಳಿಗೂ ಒಮಿಕ್ರೋನ್ ಹರಡುವ ಆತಂಕವಿದೆ. ಹೀಗಾಗಿ ಈ ಎಚ್ಚರ ವಹಿಸಬೇಕು. ಕೋವಿಡ್ ಸನ್ನಡತೆಯನ್ನು ತಪ್ಪದೇ ಪಾಲಿಸಬೇಕು ಹಾಗೂ ಲಸಿಕಾಕರಣ ತೀವ್ರಗೊಳಿಸಬೇಕು’ ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ಆಗ್ನೇಯ ಏಷ್ಯಾ ನಿರ್ದೇಶಕಿ ಡಾ ಪೂನಂ ಖೇತ್ರಪಾಲ್ ಸಿಂಗ್ ಅವರು ಆಗ್ನೇಯ ದೇಶಗಳಿಗೆ ಎಚ್ಚರಿಕೆ ನೀಡಿದ್ದಾರೆ.
undefined
ಎಲ್ಲಿ ಪತ್ತೆ?:
ಶನಿವಾರ ಬ್ರಿಟನ್‌ನಲ್ಲಿ 2, ಚೆಕ್ ರಿಪಬ್ಲಿಕ್ ಹಾಗೂ ಜರ್ಮನಿಯಲ್ಲಿ ತಲಾ 1 ‘ಒಮಿಕ್ರೋನ್’ ಪ್ರಕರಣಗಳು ಪತ್ತೆಯಾಗಿವೆ. ಈ ಮೊದಲು ಬೋಟ್ಸ್‌ವಾನಾ, ದಕ್ಷಿಣ ಆಫ್ರಿಕಾ, ಬೆಲ್ಜಿಯಂ, ಇಸ್ರೇಲ್, ಸಿಂಗಾಪುರ, ಹಾಂಕಾಂಗ್‌ನಲ್ಲಿ ಕಂಡುಬಂದಿತ್ತು. ಈ ನಡುವೆ, ನೆದರ್ಲೆಂಡ್‌ನಲ್ಲಿ ದಕ್ಷಿಣ ಆಫ್ರಿಕಾದಿಂದ ಬಂದಿಳಿದ 61 ಜನರಲ್ಲಿ ಹೊಸದಾಗಿ ಕೋವಿಡ್ ದೃಢಪಟ್ಟಿದ್ದು, ಇದು ಒಮಿಕ್ರೋನ್ ತಳಿಯೇ ಎಂಬ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲಾಗುತ್ತಿದೆ.
ವಿಮಾನ ಸಂಚಾರ ನಿಷೇಧ:
ಅಪಾಯಕಾರಿ ರೂಪಾಂತರಿಗೆ ಇಡೀ ಜಗತ್ತೇ ತಲ್ಲಣಗೊಂಡಿದ್ದು ಮುಂಜಾಗ್ರತಾ ಕ್ರಮವಾಗಿ ಅಮೆರಿಕ, ಬ್ರಿಟನ್, ರಷ್ಯಾ, ಸಿಂಗಾಪುರ ಸೇರಿದಂತೆ ಹಲವಾರು ದೇಶಗಳು ದಕ್ಷಿಣ ಆಫ್ರಿಕಾ ಸೇರಿದಂತೆ ಸುತ್ತಮುತ್ತಲಿನ ದೇಶಗಳ ನಡುವಿನ ವಿಮಾನ ಸಂಚಾರವನ್ನು ನಿಷೇಧಿಸಿವೆ.
ಏಕಾಏಕಿ ವಿಮಾನ ನಿಷೇಧ: ಪ್ರಯಾಣಿಕರ ಪರದಾಟ
ಡೆಲ್ಟಾಗಿಂತ ಅಪಾಯಕಾರಿ ವೈರಸ್ ಬೋಟ್ಸ್‌ವಾನಾ ತಳಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಹಲವಾರು ದೇಶಗಳು ಏಕಾಏಕಿ ದಕ್ಷಿಣ ಆಫ್ರಿಕಾದಿಂದ (South Africa) ಬರುವ ಮತ್ತು ಹೋಗುವ ಪ್ರಯಾಣಿಕ ವಿಮಾನಗಳನ್ನು ನಿಷೇಧಿಸಿವೆ. ಹೀಗಾಗಿ ದಕ್ಷಿಣ ಆಫ್ರಿಕಾ ಪ್ರವಾಸ ಅಥವಾ ಬ್ಯುಸಿನೆಸ್ ಟ್ರಿಪ್‌ನಲ್ಲಿರುವ (Business trip) ನೂರಾರು ವಿದೇಶಿಗರು ಸ್ವದೇಶಕ್ಕೆ ವಾಪಸಾಗಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಉಂಟಾಗಿದೆ. ಪ್ರಯಾಣಕ್ಕೆ ನಿಗದಿಯಾಗಿದ್ದ ವಿಮಾನಗಳು ಏಕಾಏಕಿ ರದ್ದಾಗಿದ್ದರಿಂದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದಾರೆ.
Omicron Variant: ವಿದೇಶದಿಂದ ಬಂದವರ ಮೇಲೆ ನಿಗಾ ವಹಿಸಿ : ಪ್ರಧಾನಿ ಮೋದಿ ಸೂಚನೆ!
ಶುಕ್ರವಾರದಿಂದಲೇ ದಕ್ಷಿಣ ಆಫ್ರಿಕಾದಿಂದ ಬರುವ ಮತ್ತು ಹೋಗುವ ಎಲ್ಲಾ ವಿಮಾನಗಳನ್ನು ನಿಷೇಧಿಸುವುದಾಗಿ ಬ್ರಿಟನ್ ಮತ್ತಿತರ ನೆರೆಯ 5 ದೇಶಗಳು ಘೋಷಿಸಿವೆ. ಇತರೆ ಹಲವು ದೇಶಗಳೂ ಇದೇ ರೀತಿಯ ನಿರ್ಬಂಧ ಹೇರುತ್ತಿವೆ. ತಮ್ಮ ದೇಶದ ಪ್ರಜೆಗಳು ಮಾತ್ರ ವಾಪಸ್ ಮರಳಲು ಮಾತ್ರ ಅವಕಾಶ ನೀಡುವುದಾಗಿಯೂ, ಅವರನ್ನು ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿ ಇಡುವುದಾಗಿಯೂ ತಿಳಿಸಿವೆ. ಭಾರತ ಸಹ ದಕ್ಷಿಣ ಆಫ್ರಿಕಾ, ಹಾಂಕಾಂಗ್, ಬೋಟ್ಸವಾನಾಗಳಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಗರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಿ, ಕ್ವಾರಂಟೈನ್ ಮಾಡಲು ಸೂಚಿಸಿದೆ.
ಒಮಿಕ್ರೋನ್ ಬಗ್ಗೆ ಗಾಬರಿ ಬೇಡ, ಇದು ಮಾರಣಾಂತಿಕವಲ್ಲ: ತಜ್ಞರು
‘ಅತ್ಯಂತ ವೇಗವಾಗಿ ಹಬ್ಬುವ ಅಪಾಯಕಾರಿ ವೈರಸ್ ಎಂದು ಬಣ್ಣಿತವವಾಗಿರುವ ಹೊಸ ಒಮಿಕ್ರೋನ್ ರೂಪಾಂತರಿಯ (Omicron Varient) ಬಗ್ಗೆ ಗಾಬರಿ ಪಡುವ ಅಗತ್ಯವಿಲ್ಲ. ಕೋವಿಡ್ ಲಸಿಕೆಗಳು (Covid Vaccines) ಈ ರೂಪಾಂತರಿಯ ಮೇಲೆ ಪ್ರಭಾವ ಬೀರಬಹುದು’ ಎಂದು ಬ್ರಿಟನ್ ಸರ್ಕಾರದ (Britain Govt) ಆರೋಗ್ಯ ಸಲಹೆಗಾರ ಕಾಲಮ್ ಸೆಂಪಲ್ ಶನಿವಾರ ಹೇಳಿದ್ದಾರೆ.
Omicron Variant: ಸಿಎಂ ಸಭೆ ಬಳಿಕ ಹೊಸ ಮಾರ್ಗಸೂಚಿ : ಕರ್ನಾಟಕದಲ್ಲಿ ಕಠಿಣ ನಿಯಮ ಜಾರಿ!
‘ಈ ವೈರಸ್ ಕುರಿತು ಹೆಚ್ಚಿನ ಗಾಬರಿ ಪಡಬೇಕಾಗಿಲ್ಲ. ಆದರೆ ದಕ್ಷಿಣ ಆಫ್ರಿಕಾದಲ್ಲಿ (South Africa) ಕಾಣಿಸಿಕೊಂಡಿರುವ ಈ ಹೊಸ ರೂಪಾಂತರಿ ಹೆಚ್ಚಿನ ಹಾನಿ ಉಂಟುಮಾಡುತ್ತದೆ ಎಂದು ಹಲವರು ಹೇಳುತ್ತಿದ್ದಾರೆ. ಅವರೆಲ್ಲರೂ ಪರಿಸ್ಥಿತಿಯನ್ನು ಉತ್ಪ್ರೇಕ್ಷಿಸುತ್ತಿದ್ದಾರೆ. ಈಗಾಗಲೇ ಪಡೆದಿರುವ ಕೋವಿಡ್ ಲಸಿಕೆ ನಿಮ್ಮನ್ನು ಹೊಸ ರೂಪಾಂತರಿ ಇಂದ ರಕ್ಷಿಸಲಿದೆ. ಇದರಿಂದ ಸೀನು, ತಲೆನೋವು ಹಾಗೂ ಅತಿಯಾದ ನೆಗಡಿ ಕಾಣಿಸಿಕೊಳ್ಳಬಹುದು. ಆದರೆ ಆಸ್ಪತ್ರೆಗೆ ದಾಖಲಾಗುವ ಅಥವಾ ಐಸಿಯು ಸೇರುವ ಹಾಗೂ ಸಾವಿಗೀಡಾಗುವ ಸಾಧ್ಯತೆ ಉಂಟಾಗದಂತೆ ಲಸಿಕೆ ರಕ್ಷಣೆ ನೀಡುತ್ತದೆ’ ಎಂದು ಅವರು ಹೇಳಿದ್ದಾರೆ.