ಕ್ಯಾನ್ಸರ್ ಪೀಡಿತ ಸ್ನೇಹಿತೆಗಾಗಿ ತನ್ನ ತಲೆನೂ ಬೋಳಿಸಿಕೊಂಡ ಬಾರ್ಬರ್... ಭಾವುಕ ವಿಡಿಯೋ

By Anusha KbFirst Published Jan 18, 2023, 3:41 PM IST
Highlights

ಕ್ಯಾನ್ಸರ್ ವಿರುದ್ಧ ಹೋರಾಡುವುದು ಸುಲಭದ ಕೆಲಸವಲ್ಲ. ಇದೊಂದು ಕಠಿಣ ಪ್ರಕ್ರಿಯೆ. ಕ್ಯಾನ್ಸರ್ ಇರುವವರಿಗೆ ಇತರರಿಂದ ನಿರಂತರ ಮನೋ ಬೆಂಬಲ ಮತ್ತು ಸಹಾನುಭೂತಿಯ ಜೊತೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸವಾಗಬೇಕು.

ಕ್ಯಾನ್ಸರ್ ವಿರುದ್ಧ ಹೋರಾಡುವುದು ಸುಲಭದ ಕೆಲಸವಲ್ಲ. ಇದೊಂದು ಕಠಿಣ ಪ್ರಕ್ರಿಯೆ. ಕ್ಯಾನ್ಸರ್ ಇರುವವರಿಗೆ ಇತರರಿಂದ ನಿರಂತರ ಮನೋ ಬೆಂಬಲ ಮತ್ತು ಸಹಾನುಭೂತಿಯ ಜೊತೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸವಾಗಬೇಕು. ಬಹುತೇಕ ಕ್ಯಾನ್ಸರ್ ಪೀಡಿತರಿಗೆ ಚಿಕಿತ್ಸೆ ವೇಳೆ ಕೂದಲುದುರಿ ತಲೆ ಬೋಳಾಗುತ್ತದೆ. ಚಿಕಿತ್ಸೆಯ ಕಾರಣಕ್ಕೆ ಕೂದಲು ಬೋಳಿಸುವ ಸಂದರ್ಭ ಬರುತ್ತದೆ. ಆದರೆ ಅನೇಕರ ಆತ್ಮ ವಿಶ್ವಾಸ ಹೆಚ್ಚಿಸುವ ತಲೆಕೂದಲು, ಒಮ್ಮೆಲೆ ಇಲ್ಲವಾಗುತ್ತಿದ್ದಂತೆ ಮನಸ್ಸಿನ ನೆಮ್ಮದಿ ಕಳೆದುಕೊಳ್ಳುತ್ತಾರೆ. ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಹೀಗಾಗಿ ಅವರಿಗೆ ಸದಾ ಸಕಾರಾತ್ಮಕವಾಗಿ ಚಿಂತಿಸುವ ಸಕಾರಾತ್ಮಕತೆಯನ್ನೇ ತುಂಬುವ ಗೆಳೆಯರು ಕುಟುಂಬದವರ ಅಗತ್ಯವಿರುತ್ತದೆ. ಅದೇ ರೀತಿ ಇಲ್ಲೊಬ್ಬರು ಕ್ಯಾನ್ಸರ್ ಪೀಡಿತ ನೋವಿಗೆ ಸ್ಪಂದಿಸಿದ್ದು, ಆ ಭಾವಾನಾತ್ಮಕ ವಿಡಿಯೋವೀಗ ವೈರಲ್ ಆಗಿದೆ. 

ಸಲೂನ್‌ನಲ್ಲಿ ಬಾರ್ಬರ್ (Barber) ಆಗಿ ಕೆಲಸ ಮಾಡುವ ಯುವಕನೋರ್ವನಿಗೆ ತನ್ನ ಕ್ಯಾನ್ಸರ್ (Cancer) ಪೀಡಿತ ಗೆಳತಿಯ ತಲೆ ಬೋಳಿಸುವ ಸಂದರ್ಭ ಬರುತ್ತದೆ. ಈ ಸಂದರ್ಭ ಬೇಸರವಾದರೂ ಅನಿವಾರ್ಯವಾಗಿ ಆತ ಗೆಳತಿಯ ತಲೆ ಕೂದಲಿಗೆ ರೇಸರ್ ಹಿಡಿಯುತ್ತಾನೆ. ಇತ್ತ ಕೂದಲು ತಲೆಯಿಂದ ಮಾಯವಾಗುತ್ತಿದ್ದಂತೆ ಆಕೆ ಬಿಕ್ಕಿ ಬಿಕ್ಕಿ ಅಳಲು ಶುರು ಮಾಡುತ್ತಾಳೆ. ಗೆಳತಿಯನ್ನು ಸಂತೈಸುತ್ತಲೇ ಕೂದಲು ಕತ್ತರಿಸುವ ಆತ ಆಕೆಯ ಕೂದಲನ್ನು ಸಂಪೂರ್ಣವಾಗಿ ಶೇವ್ ಮಾಡಿದ ಬಳಿಕ ಆಕೆಗೆ ವಿಶ್ವಾಸ ತುಂಬಲು ತನ್ನ ತಲೆಗೂ ರೇಸರ್ ಹಿಡಿದು ಇಡೀ ತನ್ನ ತಲೆಯನ್ನು ಬೋಳು ಮಾಡಿಕೊಳ್ಳುತ್ತಾನೆ. ಈ ವೇಳೆಯೂ ಆತನ ಗೆಳತಿ ಜೋರಾಗಿ ಅಳಲು ಶುರು ಮಾಡಿದ್ದಲ್ಲದೇ ಮೊದಲಿಗೆ ತಡೆಯಲು ಯತ್ನಿಸುತ್ತಾಳೆ. ನಂತರ ಆತನ ಕೈ ಹಿಡಿದುಕೊಂಡು ಬಿಕ್ಕಿ ಅಳುತ್ತಾಳೆ. ಆದರೆ ಆತ ರೇಸರ್‌ನಿಂದ ತನ್ನ ಇಡೀ ತಲೆಯನ್ನು ಬೋಳು ಮಾಡಿಕೊಳ್ಳುತ್ತಾನೆ.  ನಂತರ ಆಕೆಯನ್ನು ತಬ್ಬಿ ಹಿಡಿದು ಸಂತೈಸುತ್ತಾನೆ. 

ಕ್ಯಾನ್ಸರ್‌ ಗೆದ್ದ ನಂತರ ಮತ್ತೊಂದು ರೋಗದಿಂದ ಬಳತ್ತಿರುವ 'ಜನ ಗಣ ಮನ' ನಟಿ ಮಮತಾ ಮೋಹನ್; ಭಾವುಕ ಪೋಸ್ಟ್

ಈ ಭಾವುಕ ವಿಡಿಯೋವನ್ನು ರೆಡಿಟ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು,  61,ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಅನೇಕರು ಕ್ಷೌರಿಕನ ಕಾರ್ಯವನ್ನು ಶ್ಲಾಘಿಸಿದ್ದಾರೆ.  ಈ ವಿಡಿಯೋ ನನ್ನ ಕಣ್ಣಲ್ಲಿ ನೀರು ತರಿಸಿತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.  ಜಗತ್ತಿನಾದ್ಯಂತ ಕ್ಯಾನ್ಸರ್‌ನಿಂದ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಚಿಕಿತ್ಸೆಯ ಭಾಗವಾಗಿರುವ ಕಿಮೋಥೆರಪಿ  ವೇಳೆ ಅನೇಕರು ಕೂದಲು ಉದುರಿ ಹೋಗುತ್ತದೆ. ಮಾನಸಿಕ ಸ್ಥೈರ್ಯ ಕುಸಿಯುತ್ತದೆ.  ಈ ಸಂದರ್ಭದಲ್ಲಿ ಕುಟುಂಬದವರು ಸ್ನೇಹಿತರು ತಮ್ಮ ಕೂದಲನ್ನು ಕೂಡ ಕತ್ತರಿಸಿಕೊಂಡು ಕ್ಯಾನ್ಸರ್ ಪೀಡಿತರಿಗೆ ಜೊತೆಯಾಗಿ  ಧೈರ್ಯ ತುಂಬಿದ್ದಾರೆ. ಇಂತಹ ಅನೇಕ ಭಾವುಕ ಕ್ಷಣದ ವಿಡಿಯೋಗಳು ಈ ಹಿಂದೆಯೂ ವೈರಲ್ ಆಗಿದ್ದವು.

ಚಿಕಿತ್ಸೆಗಿಂತ ಸಾಯೋಕೆ ರೆಡಿ ಆಗಿದ್ದೆ; ಕ್ಯಾನ್ಸರ್ ಎಂದಾಗ ಫಸ್ಟ್ ರಿಯಾಕ್ಷನ್ ಬಗ್ಗೆ ಸಂಜಯ್ ದತ್ ಭಾವುಕ ಮಾತು

 

click me!