ಉಗ್ರರ ಮನೆಗೆ ನುಗ್ಗಿ ಹೊಡೆಯಲಾಗುವುದು... ಪ್ರಧಾನಿ ಮೋದಿ ಹೇಳಿಕೆಗೆ ಅಮೆರಿಕಾ ರಿಯಾಕ್ಷನ್

By Anusha Kb  |  First Published Apr 17, 2024, 11:31 AM IST

'ಹಮ್‌ ಘರ್‌ ಮೇ ಗುಸ್‌ ಕೆ ಮಾರೇಂಗೆ' ಪುಲ್ವಾಮಾ ಭಯೋತ್ಪಾದಕ ದಾಳಿಯ ಬಳಿಕ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಈ ಹೇಳಿಕೆ ಇತ್ತೀಚೆಗಷ್ಟೇ ಸಾಕಷ್ಟು ಸದ್ದು ಮಾಡುತ್ತಿದ್ದು, ಈಗ ಈ ಹೇಳಿಕೆಗೆ ಅಮೆರಿಕಾ ಪ್ರತಿಕ್ರಿಯಿಸಿದೆ. 


ವಾಷಿಂಗ್ಟನ್‌: ಪುಲ್ವಾಮಾ ಭಯೋತ್ಪಾದಕ ದಾಳಿಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ  'ಇದು ಹಿಂದಿನ ಸರ್ಕಾರವಲ್ಲ. ನಮ್ಮ ಸರ್ಕಾರ, ಇದು ನಮ್ಮ ಸಿದ್ಧಾಂತ, ನಾವು ಅವರ ಮನೆ ಹೊಕ್ಕು ಸಾಯಿಸುತ್ತೇವೆ', 'ಯೇ ಹಮಾರಾ ಸಿದ್ಧಾಂತ್‌ ಹೇ, ಹಮ್‌ ಘರ್‌ ಮೇ ಗುಸ್‌ ಕೆ ಮಾರೇಂಗೆ' ಎಂದು ಹೇಳಿಕೆ ನೀಡಿದ್ದರು. ಆಗ ನೀಡಿದ್ದ ಈ ಹೇಳಿಕೆ ಇತ್ತೀಚೆಗಷ್ಟೇ ಸಾಕಷ್ಟು ಸದ್ದು ಮಾಡುತ್ತಿದ್ದು,   ಇತ್ತೀಚೆಗೆ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕೂಡ ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಆದರೆ ಈಗ ಈ ಹೇಳಿಕೆಗೆ ಅಮೆರಿಕಾ ಪ್ರತಿಕ್ರಿಯಿಸಿದೆ. 

ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಈ ಹೇಳಿಕೆಯ ಬಗ್ಗೆ ಬೈಡೆನ್ ಸರ್ಕಾರ ಕಳವಳ ವ್ಯಕ್ತಪಡಿಸುತ್ತದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಮೆರಿಕಾ ರಾಜ್ಯ ಇಲಾಖೆಗಳ ವಕ್ತಾರ, ಮ್ಯಾಥಿವ್‌ ಮಿಲ್ಲರ್, ನಾನು ಈ ಮೊದಲೇ ಹೇಳಿದಂತೆ ಅಮೆರಿಕಾವೂ ಈ ವಿಚಾರದಲ್ಲಿ ತಲೆ ಹಾಕಲು  ಬಯಸುವುದಿಲ್ಲ, ಆದರೆ ಈ ವಿಚಾರ ಮತ್ತಷ್ಟು ವಿಕೋಪಕ್ಕೆ ಹೋಗುವುದನ್ನು ತಡೆಯಲು ಎರಡು ದೇಶಗಳಿಗೆ ಮಾತುಕತೆ ಮೂಲಕ ಸಮಸ್ಯೆ ಬಹೆಗರಿಸಿಕೊಳ್ಳಿ ಎಂದು ಹೇಳಲು ಬಯಸುವೆ ಎಂದು ಪ್ರತಿಕ್ರಿಯಿಸಿದ್ದಾರೆ.

Tap to resize

Latest Videos

'ಘರ್‌ ಮೆ ಗುಸ್‌ ಕೆ ಮಾರೇಂಗೆ..' ಮೋದಿ ಹೇಳಿದ್ದನ್ನು ನಿಜ ಮಾಡಿತಾ ಭಾರತದ RAW?

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮ್ಯಾಥಿವ್ ಮಿಲ್ಲರ್, ನಾವು ಯಾವುದೇ ಇಂತಹ ನಿರ್ಬಂಧ ಕ್ರಮಗಳನ್ನು ವಿಮರ್ಶಿಸುವುದಿಲ್ಲ, ಹಾಗೂ ಅಮೆರಿಕಾ ಯಾವತ್ತೂ ನಿರ್ಬಂಧಗಳನ್ನು ಬಹಿರಂಗವಾಗಿ ಚರ್ಚಿಸುವುದಿಲ್ಲ ಎಂದು ಹೇಳಿದರು. 

ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಭಾರತ ಸಂಚು ರೂಪಿಸಿತ್ತು ಎಂಬ ವರದಿ ಕುರಿತು ಅಮೆರಿಕವು ಭಾರತದ ಮೇಲೆ ಏಕೆ ಯಾವುದೇ ನಿರ್ಬಂಧಗಳನ್ನು ವಿಧಿಸಿಲ್ಲ ಎಂದು ಮತ್ತೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಯಾವುದೇ ನಿರ್ಬಂಧದ ಕ್ರಮಗಳನ್ನು ಪೂರ್ವವೀಕ್ಷಣೆ ಮಾಡಲು ಹೋಗುವುದಿಲ್ಲ, ಅದು ಬರುತ್ತಿದೆ ಎಂದು ಹೇಳುವುದೂ ಇಲ್ಲ, ಆದರೆ ನಿರ್ಬಂಧಗಳ ಬಗ್ಗೆ ಮಾತನಾಡಲು ನೀವು ನನ್ನನ್ನು ಕೇಳಿದರೆ ಅದು ನಾವು ಬಹಿರಂಗವಾಗಿ ಚರ್ಚಿಸಲಾಗದ ವಿಚಾರ ಎಂದು ಹೇಳಿದ್ದಾರೆ. 

ಗುರುಪತ್ವಂತ್ ಸಿಂಗ್ ಪನ್ನುನ್‌ನನ್ನು ಭಾರತ ಖಲಿಸ್ತಾನ ಭಯೋತ್ಪಾದಕ ಎಂದು ಗುರುತಿಸಿದ ಉಗ್ರನಾಗಿದ್ದು, ಈತ ಭಾರತದ ವಿರುದ್ಧ ಪದೇ ಪದೇ ಬೆದರಿಕೆಗಳನ್ನು ಹಾಕುತ್ತಿರುತ್ತಾನೆ.  ಅಮೆರಿಕಾ ನ್ಯಾಯಾಂಗ ಇಲಾಖೆಯ ದೋಷಾರೋಪಣೆಯ ಪ್ರಕಾರ, ಪ್ರಸ್ತುತ ಬಂಧನದಲ್ಲಿರುವ ಭಾರತೀಯ ಪ್ರಜೆ ನಿಖಿಲ್ ಗುಪ್ತಾನನ್ನು ಪನ್ನುನ್‌ ಹತ್ಯೆಗೆ ನಿಯೋಜಿಸಲಾಗಿತ್ತು ಎಂದು ಅಮೆರಿಕಾ ಆರೋಪಿಸಿತ್ತು.

ಪನ್ನುನ್ ಕೊಲೆ ಯತ್ನ, ಅಮೆರಿಕ ಆರೋಪದ ಬಗ್ಗೆ ಮೊದಲ ಬಾರಿ ಮಾತನಾಡಿದ ಪ್ರಧಾನಿ ಮೋದಿ!

ಇತ್ತೀಚೆಗೆ ಏಪ್ರಿಲ್ 11 ರಂದು ಕೇಂದ್ರದಲ್ಲಿ ಬಿಜೆಪಿ ಸರ್ಕಾರಕ್ಕೆ 10 ವರ್ಷ ಪೂರ್ಣಗೊಂಡ ಹಿನ್ನೆಲೆ ಉತ್ತರಾಖಂಡ್‌ನ ರಿಷಿಕೇಶದಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಭಯೋತ್ಪಾದಕರನ್ನು ಮನೆಗೆ ನುಗ್ಗಿ ಹೊಡೆಯಲಾಗುವುದು ಎಂದಿದ್ದರು. ಇದಕ್ಕೂ ಮೊದಲು ವಿದೇಶಿ ನೆಲದಲ್ಲಿ ಉಗ್ರ ಕೃತ್ಯಗಳನ್ನು ನಡೆಸುತ್ತಿರುವ ಭಯೋತ್ಪಾದಕರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಪಾಕಿಸ್ತಾನದಲ್ಲಿ ಭಾರತ ಸರ್ಕಾರದ ನೇತೃತ್ವದಲ್ಲಿಯೇ ಸಂಘಟಿತ ಕೊಲೆಗಳು ನಡೆದಿವೆ ಎಂದು ಬ್ರಿಟನ್‌ನ ಗಾರ್ಡಿಯನ್‌ ಪತ್ರಿಕೆ ವರದಿ ಮಾಡಿತ್ತು.

ಪ್ರಧಾನಿ ಮೋದಿ ಹೇಳಿದ್ದ ಈ ಮಾತನ್ನು ಭಾರತದ ಗುಪ್ತಚರ ವಿಭಾಗ ಮಾಡಿ ತೋರಿಸಿದೆ. ದೇಶ ವಿದೇಶಗಳಿಗೆ ಕಂಟಕವಾಗಿರುವ ಪಾಕಿಸ್ತಾನದ ಭಯೋತ್ಪಾದಕರನ್ನು ಭಾರತದ ಸರ್ಕಾರವೇ ಕೊಲೆ ಮಾಡಿಸಿದೆ ಎಂದು ಗಾರ್ಡಿಯನ್‌ ಪತ್ರಿಕೆ ಗುಪ್ತಚರ ಇಲಾಖೆಯ ಮೂಲಗಳನ್ನು ಉದ್ದೇಶಿಸಿ ವರದಿ ಮಾಡಿತ್ತು. ಆದರೆ, ಭಾರತ ಮಾತ್ರ ಈ ಸುದ್ದಿಯನ್ನು ನಿರಾಕರಿಸಿದೆ. .

ವಿದೇಶಿ ನೆಲದಲ್ಲಿ ಕಾರ್ಯನಿರ್ವಹಿಸುವ ರಿಸರ್ಚ್‌ & ಅನಾಲಿಸಿಸ್‌ ವಿಂಗ್‌ (ರಾ) ಮಾಡಿರುವ ಕಾರ್ಯಚಾರಣೆಯ ಬಗ್ಗೆ ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳು ದಾಖಲೆಗಳನ್ನು ನೀಡಿದ್ದಾರೆ. ಇನ್ನು ಎರಡೂ ದೇಶದ ಅಧಿಕಾರಿಗಳು ಈ ಬಗ್ಗೆ ಮಾತನಾಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಚೇರಿಯಿಂದಲೇ ನೇರ ನಿಯಂತ್ರಣ ಹೊಂದಿರುವ ರಾ, 2019ರಿಂದ ಪಾಕಿಸ್ತಾನದ ನೆಲದಲ್ಲಿ ಇಂಥ ಕೊಲೆಗಳನ್ನು ಮಾಡುತ್ತಿದೆ ಎಂದು ಪಾಕಿಸ್ತಾನದ ಅಧಿಕಾರಿಗಳು ಆರೋಪಿಸಿದ್ದರು.

click me!