ಅಮೆರಿಕಾದಲ್ಲಿ ಅಪಘಾತವೊಂದು ಆಕಾಶವನ್ನೇ ಬೆಳಗುವಂತೆ ಮಾಡಿದೆ. 4,500 ಕೆ.ಜಿ ಪಟಾಕಿಯನ್ನು ಸಾಗಿಸುತ್ತಿದ್ದ ಟ್ರಕ್ಕೊಂದರಲ್ಲಿ ರಸ್ತೆ ಮಧ್ಯೆ ಚಲಿಸುತ್ತಿದ್ದಾಗಲೇ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಇದ್ದಕ್ಕಿದ್ದಂತೆ ಪಟಾಕಿಗಳು ಟ್ರಕ್‌ನಿಂದ ಮೇಲೆ ಹಾರಿ ಸಿಡಿಯಲು ಆರಂಭಿಸಿದ್ದು, ಇಡೀ ಆಕಾಶದಲ್ಲಿ ಬೆಳಕಿನ ಚಿತ್ತಾರ ಮೂಡಿಸಿದವು. ಅಮೆರಿಕಾದ ನ್ಯೂಜೆರ್ಸಿಯಲ್ಲಿ ಭಾನುವಾರ (ಜೂನ್ 26) ಈ ಘಟನೆ ನಡೆದಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟ್ರಕ್‌ನ ಹಿಂದೆ ಸಿಲುಕಿದ್ದ ವಾಹನಗಳ ಚಾಲಕರು ಟ್ರಾಫಿಕ್ ತೆರವಿಗೆ ಕಾಯುತ್ತಿರುವಾಗ ರಾತ್ರಿಯ ಆಕಾಶದಲ್ಲಿ ಸಾವಿರಾರು ಕೆಜಿ ಪಟಾಕಿಗಳು ಮೇಲೇರಿ ಬೆಳಗುವ ಸುಂದರ ದೃಶ್ಯವನ್ನು ಚಿತ್ರೀಕರಿಸಿದ್ದಾರೆ.
ಸುಮಾರು 10,000 ಪೌಂಡ್ ತೂಕದ (4535 ಕೆಜಿ) ಪಟಾಕಿಗಳು ಒಮ್ಮಿಂದೊಮ್ಮೆಲೆ ಸಿಡಿಯಲು ಆರಂಭಿಸಿವೆ. ಜುಲೈ 4 ರಂದು ನಡೆಯಲಿರುವ ಅಮೆರಿಕಾ ಸ್ವಾತಂತ್ರ್ಯ ದಿನಾಚರಣೆ ನಡೆಯಲಿದ್ದು, ಅದಕ್ಕೂ ಕೆಲವೇ ದಿನಗಳ ಮೊದಲು ರಸ್ತೆಯಲ್ಲಿ ವಾಹನ ಸವಾರರಿಗೆ ಇದರ ಆಚರಣೆಯನ್ನು ನೋಡುವ ಅವಕಾಶ ಸಿಕ್ಕಂತಾಗಿದೆ.
ಪಟಾಕಿಯಿಂದ ಉಂಟಾದ ಬೆಂಕಿಯಿಂದಾಗಿ ಹೆದ್ದಾರಿಯನ್ನು ಮುಚ್ಚಲಾಗಿತ್ತು. ಪರಿಣಾಮ ರಸ್ತೆಯಲ್ಲಿ ಸೋಮವಾರ ಬೆಳಗಿನ ಜಾವದವರೆಗೂ ಮೈಲುಗಟ್ಟಲೆ ವಾಹನಗಳ ಸರತಿ ಸಾಲುಗಳು ಕಂಡು ಬಂದವು ಎಂದು ವರದಿಯಾಗಿದೆ. ಪೊಲೀಸರ ಪ್ರಕಾರ, ಟ್ರಕ್‌ನ ಚಾಲಕ ಭಾನುವಾರ ರಾತ್ರಿ 10:30ಕ್ಕೆ ಡೋಲಿ ಟೈರ್ ಸುಡುವುದನ್ನು ಗಮನಿಸಿ ಟ್ರಕ್ ಅನ್ನು ನಿಲ್ಲಿಸಿ ಟ್ರಕ್‌ನಿಂದ ಹೊರ ಬಂದಿದ್ದು, ಅವರ ತೋಳಿಗೆ ಸುಟ್ಟ ಗಾಯಗಳಾಗಿವೆ. ಆದರೆ ಬೆಂಕಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬರು ದೊಡ್ಡ ಪಟಾಕಿಯನ್ನು ಟ್ರಕ್‌ಗೆ ಎಸೆದ ಪರಿಣಾಮ ಈ ಭಯಾನಕ ಘಟನೆಗೆ ನಡೆಯಿತು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಬೆಂಗಳೂರಲ್ಲಿ ಪಟಾಕಿ ಸಿಡಿದು 47 ಮಂದಿಗೆ ಕಣ್ಣಿಗೆ ಗಾಯ
ಪಟಾಕಿ ಸಾಗಿಸುತ್ತಿದ್ದ ಟ್ರಕ್‌ಗೆ ಬೆಂಕಿ ತಗುಲಿರುವುದು ಇದೇ ಮೊದಲಲ್ಲ. ಕಳೆದ ವರ್ಷ ನವೆಂಬರ್‌ನಲ್ಲಿ, ಓಹಿಯೋದಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಪಟಾಕಿಗಳನ್ನು ಸಾಗಿಸುತ್ತಿದ್ದ ಟ್ರಕ್‌ಗೆ ಬೆಂಕಿ ಹತ್ತಿಕೊಂಡು ಸ್ಫೋಟ ಸಂಭವಿಸಿತ್ತು. ಆ ಘಟನೆಯಲ್ಲಿ ಮೂವರು ಗಾಯಗೊಂಡಿದ್ದರು.
Viral News: ವರನಿದ್ದ ಕುದುರೆ ಗಾಡಿಗೆ ತಗುಲಿದ ಬೆಂಕಿ, ಮುಂದೇನಾಯ್ತು? ವಿಡಿಯೋ ವೈರಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ