ಇದು ಜೈಲಲ್ಲ ಗುರು... ಚೀನಾದ ಕೋವಿಡ್ ಐಸೊಲೇಷನ್ ಸೆಂಟರ್

Published : Oct 16, 2022, 02:22 PM IST
ಇದು ಜೈಲಲ್ಲ ಗುರು... ಚೀನಾದ ಕೋವಿಡ್ ಐಸೊಲೇಷನ್ ಸೆಂಟರ್

ಸಾರಾಂಶ

ಚೀನಾ ಕೋವಿಡ್ ಐಸೋಲೇಷನ್ ರೂಮ್‌ಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರನ್ನು ದಂಗುಬಡಿಸುತ್ತಿದೆ. ಜೊತೆ ಜೊತೆಗೆ ಭಾರತೀಯರಾದ ನಾವು ಅದೆಷ್ಟು ಸ್ವತಂತ್ರರು ಪುಣ್ಯವಂತರು ಎಂದು ಯೋಚಿಸುವಂತಾಗಿದೆ.

ಬೀಜಿಂಗ್: ತನ್ನಲ್ಲಿ ಕೋವಿಡ್ ಸೃಷ್ಟಿಸಿ ಜಗತ್ತಿಗೆಲ್ಲಾ ಪ್ರಸಾದ ಹಂಚಿದ ಚೀನಾ ಇನ್ನು ಆ ಕೋವಿಡ್ ಭಯದಿಂದ ಹೊರಗೆ ಬಂದಿಲ್ಲ. ಕೋವಿಡ್‌ನಿಂದ ಬಳಲಿ ಬೆಂಡಾಗಿ ಮತ್ತೆ ಸಹಜ ಸ್ಥಿತಿಗೆ ಜಗತ್ತಿನ ಉಳಿದೆಲ್ಲಾ ರಾಷ್ಟ್ರಗಳು ಬಂದಿದ್ದರೂ, ಚೀನಾ ಮಾತ್ರ ಆ ಕಹಿ ನೆನಪಿನಲ್ಲೇ ಇದ್ದು, ದೇಶದ ಹಲವು ಭಾಗಗಳಲ್ಲಿ ಮತ್ತೆ ಮತ್ತೆ ಕೋವಿಡ್ ಲಾಕ್‌ಡೌನ್‌ ಘೋಷಿಸುತ್ತಿದೆ. ಒಂದು ಎರಡು ಕೇಸುಗಳು ಸಿಕ್ಕರೂ ಇಡೀ ನಗರವನ್ನೇ ಬಂದ್ ಮಾಡುತ್ತಿದೆ. ಕೆಲ ತಿಂಗಳ ಹಿಂದಷ್ಟೇ ಚೀನಾ ಕೋವಿಡ್ ಸೋಂಕಿನ ಪ್ರಕರಣವೊಂದು ಪತ್ತೆಯಾದ ಹಿನ್ನೆಲೆಯಲ್ಲಿ ಅಲ್ಲಿನ ಐಕಿಯಾ ಮಾಲ್ ಒಂದನ್ನು ಜನರಿರುವಾಗಲೇ ದಿಢೀರ್ ಮುಚ್ಚಲು ಮುಂದಾಗಿದ್ದು, ಸುದ್ದಿ ತಿಳಿದ ಜನ ಕಿರುಚುತ್ತಾ ಬೊಬ್ಬೆ ಹೊಡೆಯುತ್ತಾ ಸೆಕ್ಯೂರಿಟಿ ಗಾರ್ಡ್‌ಗಳನ್ನು ಅಲ್ಲಿಂದ ತಳ್ಳಿ ತಪ್ಪಿಸಿಕೊಂಡು ಓಡಿ ಹೋದ ದೃಶ್ಯ ಸಾಕಷ್ಟು ವೈರಲ್ ಅಗಿತ್ತು. ಈ ಘಟನೆ ನಡೆದು  ಎರಡು ತಿಂಗಳುಗಳೇ ಕಳೆದಿವೆ. ಈ ಮಧ್ಯೆ ಚೀನಾ ಕೋವಿಡ್ ಐಸೋಲೇಷನ್ ರೂಮ್‌ಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರನ್ನು ದಂಗುಬಡಿಸುತ್ತಿದೆ. ಜೊತೆ ಜೊತೆಗೆ ಭಾರತೀಯರಾದ ನಾವು ಅದೆಷ್ಟು ಸ್ವತಂತ್ರರು ಪುಣ್ಯವಂತರು ಎಂದು ಯೋಚಿಸುವಂತಾಗಿದೆ.

ಈ ವಿಡಿಯೋವನ್ನು ಉದ್ಯಮಿ ಹರ್ಷ ಗೋಯೆಂಕಾ ಅವರು ಸಾಮಾಜಿಕ ಜಾಲತಾಣ (Social Media) ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಲಕ್ಷಾಂತರ ಜನ ಈ ವಿಡಿಯೋ ವೀಕ್ಷಿಸಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಇದು ಜೈಲು ಎಂದು ನೀವು ಅಶ್ಚರ್ಯ ಪಡುತ್ತಿದ್ದೀರೆ ಇದು ಜೈಲಲ್ಲ ಇದು ಚೀನಾದ ಕೋವಿಡ್ ಐಸೋಲೇಷನ್ ಸೆಂಟರ್ (Isolation center) ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಮೂಲತಃ ಈ ವಿಡಿಯೋವನ್ನು ವಾಲ್ ಸ್ಟ್ರೀಟ್ ಸಿಲ್ವರ್ (Wall Street Silver) ಎಂಬ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಚೀನಾದೊಳಗೆ (China) ಜೀವನ ಕೋವಿಡ್ ಐಸೋಲೇಷನ್ ಕೊಠಡಿ ಎಂದು ಬರೆದು ಈ ವಿಡಿಯೋ ಶೇರ್ ಮಾಡಲಾಗಿತ್ತು. ಮೇಲೆ ಕಬ್ಬಿಣದ ಶೀಟು ಹೊದಿಸಿದ ಈ ನಾಯಿ ಸಂಪೂರ್ಣ ಬಂದ್ ಆಗಿ ನಾಯಿ ಗೂಡುಗಳಂತಿರುವ ಈ ಐಸೋಲೇಷನ್ ಸೆಂಟರ್‌ನಲ್ಲಿ ಮಹಿಳೆಯರು (Women) ಮಕ್ಕಳು (Children) ಜೊತೆ ಗರ್ಭಿಣಿ (Pragnent) ಮಹಿಳೆಯರನ್ನು ಕೂಡ ತುಂಬಿಡಲಾಗಿದೆ ಎಂದು ವರದಿಗಳು ತಿಳಿಸಿವೆ. ಜೊತೆಗೆ ಈ ಕೊಠಡಿಗಳಿಗೆ ಹೊರಗಿನಿಂದ ಬೀಗ ಹಾಕಲಾಗಿದೆ.

ನಿಜವಾಗಿಯೂ ಅಲ್ಲಿ ಕೋವಿಡ್ ಇದೆಯೇ ಅಥವಾ ಜನರನ್ನು ನಿಯಂತ್ರಣದಲ್ಲಿರಿಸುವ ಸಲುವಾಗಿ ಹೀಗೆ ಮಾಡಲಾಗುತ್ತಿದೆಯೇ ಎಂದು ಈ ವಿಡಿಯೋ ನೋಡಿದ ಅನೇಕರು ಪ್ರಶ್ನಿಸಿದ್ದಾರೆ. ಇದರ ಹಿಂದೆ ಏನೋ ಇದೆ. ಜನರನ್ನು ಈ ರೀತಿ ಪ್ರತ್ಯೇಕವಾಗಿರಿಸಬೇಕಾದರೆ ಇದರ ಹಿಂದೆ ಏನೋ ಇದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಈ ದೃಶ್ಯ ನೋಡಿದರೆ ಅಲ್ಲಿ ಕೋವಿಡ್‌ಗಿಂತಲೂ ಬೇರಾವುದೋ ಭಯಾನಕ ರೋಗ ಇರುವಂತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 20 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಕೋವಿಡ್ ಕಿಟ್‌ ಧರಿಸಿದ ವ್ಯಕ್ತಿಯೊಬ್ಬರು ಸಾಲಾಗಿರುವ ಇಂತಹ ಒಂದೊಂದೇ ಐಸೋಲೇಷನ್ ಕೊಠಡಿಗಳ ಮುಂದೆ ಇರುವ ಕೈ ಮಾತ್ರ ತೂರಬಹುದಾದ ಕಿಂಡಿಯಲ್ಲಿ ಏನು ಹಾಕುತ್ತಾ ಹೋಗುತ್ತಾರೆ. ಒಟ್ಟಿನಲ್ಲಿ ಈ ವಿಡಿಯೋ ಚೀನಾದ ವಾಸ್ತವ ಪರಿಸ್ಥಿತಿಯ ಭಯಾನಕತೆಯನ್ನು ಜಗತ್ತಿಗೆ ತೋರಿಸುತ್ತಿದೆ. 

ಕೋವಿಡ್‌: ದಿಢೀರ್ ಐಕಿಯಾ ಮುಚ್ಚಲು ಮುಂದಾದ ಚೀನಾ: ಮಾಲ್‌ನಿಂದ ಜನ ಓಡುತ್ತಿರುವ ವಿಡಿಯೋ ವೈರಲ್‌

ಕೆಲ ವಾರಗಳ ಹಿಂದಷ್ಟೇ ಹೀಗೆ ಲಾಕ್‌ಡೌನ್‌ ಹೇರಿದ ನಗರಗಳ ಜನ ಆಹಾರಕ್ಕಾಗಿ ಪರದಾಡುತ್ತಾ ಸಂಕಟ ಪಡುತ್ತಿರುವ ಸುದ್ದಿಯೊಂದು ಚೀನಾ ಹೊರ ಜಗತ್ತಿನ ರಾಷ್ಟ್ರಗಳಲ್ಲಿ ಸಂಚಲನ ಮೂಡಿಸಿತ್ತು. ಚೀನಾದ ಕ್ಸಿನ್‌ಜಿಯಾಂಗ್‌ನಲ್ಲಿ (‍‍‍‍‍‍‍Xinjiang) ಕೋವಿಡ್‌ ಲಾಕ್‌ಡೌನ್‌ (Covid Lockdown) ಘೋಷಿಸಲಾಗಿತ್ತು ಇದರಿಂದ ಜನರು ಸರಿಯಾದ ಆಹಾರ, ಔಷಧಿಗಳ ಪೂರೈಕೆಯಿಲ್ಲದೇ ಹಸಿವಿನಿಂದ ತತ್ತರಿಸಿದ ಬಗ್ಗೆ ವರದಿ ಆಗಿತ್ತು. ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ಸರ್ಕಾರದ ಕಠಿಣ ಲಾಕ್‌ಡೌನ್‌ ಕ್ರಮದಿಂದಾಗಿ ಮನೆಯಲ್ಲೇ ಬಂಧಿಯಾಗಿರುವ ಗುಲ್ಜಾ ನಗರದ ಜನರು ಖಾಲಿಯಾದ ಫ್ರಿಜ್‌ಗಳು, ಜ್ವರದಿಂದ ಬಳಲುತ್ತಿರುವ ಮಕ್ಕಳು ಹಾಗೂ ಹಸಿವಿನಿಂದ ಕಿಟಕಿ ಮೂಲಕ ಆಹಾರಕ್ಕಾಗಿ ಮೊರೆ ಇಡುತ್ತಿರುವ ನಿವಾಸಿಗಳ ರೋಧನವಿರುವ ನೂರಾರು ಪೋಸ್ಟ್‌ಗಳನ್ನು ಹಂಚಿಕೊಂಡಿತ್ತು. ಇದು ಶಾಂಘೈನಲ್ಲಿ ಘೋಷಿಸಿದ ಲಾಕ್ಡೌನ್‌ ಕರಾಳತೆಯನ್ನು ಮತ್ತೆ ನೆನಪಿಸಿತ್ತು.


ಚೀನಾ ನಮ್ಮ ನಿಕಟ ಸ್ನೇಹಿತ; ಆದರೆ, ಭಾರತ ನಮ್ಮ ಸೋದರ ದೇಶ: ಶ್ರೀಲಂಕಾ ರಾಯಭಾರಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ