ಒಬ್ಬ ಯೋಧನಿಗಾಗಿ ₹1000 ಕೋಟಿ ವಿಮಾನಕ್ಕೆ ಬೆಂಕಿ; ಅಮೆರಿಕ ಇತಿಹಾಸದಲ್ಲೇ ರೋಚಕ ಸೇನಾ ಕಾರ್ಯಾಚರಣೆ

Published : Apr 06, 2026, 06:11 AM IST
us f15 rescue mission iran

ಸಾರಾಂಶ

ಇರಾನ್‌ನಲ್ಲಿ ಹೊಡೆದುರುಳಿಸಲಾದ ಯುದ್ಧವಿಮಾನದ ಪೈಲಟ್‌ನನ್ನು ರಕ್ಷಿಸಲು ಅಮೆರಿಕವು ರೋಚಕ ಕಾರ್ಯಾಚರಣೆ ನಡೆಸಿತು. ಈ ಸಾಹಸಮಯ ಕಾರ್ಯಾಚರಣೆಯಲ್ಲಿ ಯೋಧನನ್ನು ಸುರಕ್ಷಿತವಾಗಿ ಕರೆತರಲಾಯಿತು, ಆದರೆ ರಹಸ್ಯ ಕಾಪಾಡಲು ಅಮೆರಿಕ ತನ್ನದೇ ಎರಡು ವಿಮಾನಗಳಿಗೆ ಬೆಂಕಿ ಹಚ್ಚಬೇಕಾಯಿತು.

ವಾಷಿಂಗ್ಟನ್‌/ಟೆಹ್ರಾನ್‌: 2 ದಿನದ ಹಿಂದೆ ಇರಾನ್‌ ಹೊಡೆದುರುಳಿಸಿದಾಗ ನಾಪತ್ತೆ ಆಗಿದ್ದ ‘ಎಫ್‌-15ಇ ಸ್ಟ್ರೈಕ್‌ ಈಗಲ್‌ ಯುದ್ಧವಿಮಾನ’ದ 2ನೇ ವಾಯುಸೇನಾ ಸಿಬ್ಬಂದಿಯನ್ನು ಮೈನವಿರೇಳಿಸುವ ರೋಚಕ ಕಾರ್ಯಾಚರಣೆ ಮೂಲಕ ಸುರಕ್ಷಿತವಾಗಿ ವಾಪಸ್‌ ಕರೆತರುವಲ್ಲಿ ಅಮೆರಿಕ ಸೇನೆ ಯಶಸ್ವಿಯಾಗಿದೆ. ‘ಇದು ಶುತ್ರದೇಶದೊಳಗೇ ನುಗ್ಗಿ ಅಮೆರಿಕ ನಡೆಸಿರುವ ದೇಶದ ಇತಿಹಾಸದ ಅತೀ ಅಪಾಯಕಾರಿ ರೋಚಕ ರಕ್ಷಣಾ ಕಾರ್ಯ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ.

‘ಅತ್ಯಂತ ಸಾಹಸಮಯ ರಕ್ಷಣೆ ಮತ್ತು ಹುಡುಕಾಟ ಕಾರ್ಯಾಚರಣೆಯಲ್ಲಿ ಇರಾನ್‌ನ ಗುಡ್ಡದಲ್ಲಿ ಸಿಕ್ಕಿಹಾಕಿಕೊಂಡಿದ್ದ ನಮ್ಮ ಎರಡನೇ ವಾಯುಪಡೆ ಸಿಬ್ಬಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದೇವೆ. ನನ್ನ ನಿರ್ದೇಶನದ ಮೇರೆಗೆ ಸೇನೆಯು ವಿಶ್ವದಲ್ಲೇ ಅತ್ಯಂತ ಘಾತಕ ಅಸ್ತ್ರಗಳನ್ನು ಹೊಂದಿದ್ದ ಹಲವು ವಿಮಾನಗಳನ್ನು ಕಳುಹಿಸಿಕೊಟ್ಟು ಪವಾಡಸದೃಶ ರೀತಿಯಲ್ಲಿ ರಕ್ಷಿಸಿ ನಮ್ಮ ಯೋಧನನ್ನು ಸುರಕ್ಷಿತವಾಗಿ ಕರೆತಂದಿದೆ. ಪೈಲಟ್‌ಗೆ ಗಾಯಗಳಾಗಿದ್ದು, ಸದ್ಯ ಆರೋಗ್ಯವಾಗಿದ್ದಾನೆ’ ಎಂದಿದ್ದಾರೆ.

ರಕ್ಷಿಸಲ್ಪಟ್ಟ ಪೈಲಟ್ ಅಮೆರಿಕದ ವಾಯುಸೇನೆಯ ಕರ್ನಲ್‌ ರ್‍ಯಾಂಕ್‌ನ ಹಿರಿಯ ಶಸ್ತ್ರಾಸ್ತ್ರ ಅಧಿಕಾರಿ ಎಂದು ಹೇಳಲಾಗಿದೆ. ಜೊತೆಗೆ ಈ ಕಾರ್ಯಾಚರಣೆಗೆ ಇಸ್ರೇಲ್ ಕೂಡಾ ನೆರವು ನೀಡಿತ್ತು ಎಂದು ಟ್ರಂಪ್‌ ಹೇಳಿದ್ದಾರೆ.

ಶಾಕ್‌ ನೀಡಿದ್ದ ಇರಾನ್‌ಗೇ ಶಾಕ್‌

ಅಮೆರಿಕದ ಎಫ್‌15ಇ ಸ್ಟ್ರೈಕ್‌ ಈಗಲ್‌ ಯುದ್ಧವಿಮಾನವನ್ನು ಅಚ್ಚರಿಯ ರೀತಿಯಲ್ಲಿ ಇರಾನ್‌ ಶುಕ್ರವಾರ ಹೊಡೆದುರುಳಿಸಿತ್ತು. ಈ ವೇಳೆ ವಿಮಾನದಲ್ಲಿದ್ದ ಇಬ್ಬರೂ ಸಿಬ್ಬಂದಿ ಪ್ಯಾರಾಚೂಟ್‌ ಬಳಸಿ ಜೀವ ಉಳಿಸಿಕೊಂಡಿದ್ದು, ಇವರಲ್ಲಿ ಒಬ್ಬನನ್ನು (ಪೈಲಟ್‌) ಶುಕ್ರವಾರವೇ ರಕ್ಷಿಸಲಾಗಿತ್ತು. ಮತ್ತೊಬ್ಬ ರಕ್ಷಣಾ ಸಿಬ್ಬಂದಿ (ಶಸ್ತ್ರಾಸ್ತ್ರ ಅಧಿಕಾರಿ) ಸುರಕ್ಷಿತವಾಗಿ ಬೆಟ್ಟ ಏರಿ ಕುಳಿತಿದ್ದು ಖಚಿತವಾಗಿತ್ತು. ಕೂಡಲೇ ಅಮೆರಿಕವು ಶನಿವಾರ ರಾತ್ರಿ ಇರಾನ್‌ ನೆಲದೊಳಗೆ ಹತ್ತಾರು ವಿಮಾನ, ಕಾಪ್ಟರ್‌ಗಳು, ನೂರಾರು ವಿಶೇಷ ಕಾರ್ಯಾಚರಣಾ ಪಡೆಯ ಯೋಧರನ್ನು ಕಳಿಸಿ ರೋಚಕ ರಕ್ಷಣಾ ಕಾರ್ಯ ಆರಂಭಿಸಿತ್ತು. ಇದು ಭಾನುವಾರ ಬೆಳಗ್ಗೆ ಯಶಸ್ವಿಯಾಗಿ ಮುಗಿದಿದೆ. ಯುದ್ಧವಿಮಾನ ಪತನವಾದ 36 ಗಂಟೆ ಬಳಿಕ ಪೈಲಟ್‌ನನ್ನು ಸುರಕ್ಷಿತವಾಗಿ ರಕ್ಷಿಸುವ ಮೂಲಕ ಅಮೆರಿಕ ಮತ್ತೊಮ್ಮೆ ತನ್ನ ಸೇನಾ ಸಾಮರ್ಥ್ಯವನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ.

ಹೇಗಿತ್ತು ಕಾರ್ಯಾಚರಣೆ?:

ನಾಪತ್ತೆ ಆಗಿದ್ದ 2ನೇ ಸಿಬ್ಬಂದಿಯ ಹುಡುಕಾಟಕ್ಕೆ ಅಮೆರಿಕ ಸೇನೆ ಒಂದೆಡೆ ಯತ್ನಿಸುತ್ತಿದ್ದರೆ, ಆತನನ್ನು ಹಿಡಿಯಲು ಇರಾನ್‌ ಕೂಡ ತೀವ್ರ ಪ್ರಯತ್ನ ನಡೆಸಿತ್ತು. ಆತನ ಸುಳಿವಿತ್ತರೆ 50 ಲಕ್ಷ ರು. ಬಹುಮಾನದ ಆಮಿಷವನ್ನೂ ಇರಾನ್‌ ಸರ್ಕಾರ ಘೋಷಿಸಿತ್ತು. ಇದರ ನಡುವೆಯೇ ಆತ ಬದುಕುಳಿದಿರುವುದು ಖಚಿತವಾಗುತ್ತಿದ್ದಂತೆ ಅಡಗಿ ಕೂತಿದ್ದ ದಕ್ಷಿಣ ಇಸ್ಫಹಾನ್‌ನ ಗುಡ್ಡಪ್ರದೇಶದ ಮೇಲೆ ಅಮೆರಿಕ ದಿನದ 24 ಗಂಟೆಯೂ ಕಣ್ಗಾವಲಿಟ್ಟಿತ್ತು. ಇದರ ಜತೆ ಜತೆಗೇ ರಕ್ಷಣಾ ತಂತ್ರಗಾರಿಕೆ ರೂಪಿಸಲಾಗುತ್ತಿತ್ತು.

ಸುಳ್ಳು ಸುದ್ದಿ ಹರಡಿದ್ದ ಸಿಐಎ:

ಈ ಮಧ್ಯೆ, ನಾಪತ್ತೆಯಾಗಿದ್ದ 2ನೇ ಸಿಬ್ಬಂದಿಯನ್ನು ಪತ್ತೆ ಮಾಡಿದ ಅಮೆರಿಕದ ಸಿಐಎ(ಅಮೆರಿಕದ ಗುಪ್ತಚರ ಸಂಸ್ಥೆ), ‘ಭೂಮಾರ್ಗದ ಮೂಲಕ ಸುರಕ್ಷಿತವಾಗಿ ವಾಪಸ್‌ ಕರೆಯೊಯ್ಯಲಾಗುತ್ತಿದೆ’ ಎಂದು ಸುಳ್ಳು ಸುದ್ದಿ ಹಬ್ಬಿಸಿತು. ಆಗ ಆತ ದೇಶ ಬಿಟ್ಟು ಹೋಗಿರಬಹುದು ಎಂದು ನಂಬಿ ಇರಾನ್‌ ಸೇನೆ ತಣ್ಣಗಾಗಿತ್ತು.

ಇದೇ ಅವಕಾಶ ಬಳಸಿಕೊಂಡ ಅಮೆರಿಕ ಸೇನೆ, ಇರಾನ್‌ನ ದಕ್ಷಿಣ ಇಸ್ಫಹಾನ್‌ ಪ್ರಾಂತ್ಯದಲ್ಲಿರುವ ಬಳಕೆಯಲ್ಲಿಲ್ಲದ ಏರ್ಪೋರ್ಟ್‌ ಒಂದನ್ನು ಗುರುತಿಸಿ, ನೂರಾರು ವಿಶೇಷ ಕಾರ್ಯಾಚರಣಾ ಪಡೆಗಳನ್ನು ಇಳಿಸಿತ್ತು. ಆತನ ಸಮೀಪ ಇರಾನ್‌ ಸೇನೆ ಬರಬಾರದು ಎಂದು ಆತ ಅಡಗಿದ್ದ ಪ್ರದೇಶದ ಸುತ್ತಲೂ ಭಾರಿ ವಾಯುದಾಳಿ ನಡೆಸಿತು. ಈ ದಾಳಿ ನಡುವೆಯೇ ಪೈಲಟ್‌ ಇದ್ದ ಸ್ಥಳಕ್ಕೆ ತಲುಪಿದ ಅಮೆರಿಕ ವಿಶೇಷ ಪಡೆ, ಆತನನ್ನು ಸುರಕ್ಷಿತವಾಗಿ ವಾಪಸ್‌ ಕರೆತರುವ ಪ್ರಕ್ರಿಯೆ ಆರಂಭಿಸಿತು. ಆಗ ವಿಷಯ ತಿಳಿದ ಇರಾನ್‌ ಪಡೆಗಳು ದಾಳಿ ನಡೆಸಿದವು. ಆಗ ಚಕಮಕಿ ಏರ್ಪಟ್ಟಿತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದರ ಮಧ್ಯೆ ವಿಶೇಷ ಪಡೆಗಳನ್ನು ಕರೆತಂದಿದ್ದ ಎರಡು ಎಂಸಿ-130ಜೆ ವಿಮಾನ ಮರಳಲ್ಲಿ ಹೂತು ಕೈಕೊಟ್ಟ ಹಿನ್ನೆಲೆಯಲ್ಲಿ ಹೊಸದಾಗಿ ಮತ್ತೆ 3 ವಿಮಾನಗಳನ್ನು ತರಿಸಿಕೊಳ್ಳಬೇಕಾಯಿತು. ಆ ವಿಮಾನಗಳ ಮೂಲಕವೇ ರಕ್ಷಣೆಗೆ ಒಳಗಾದ ಅಧಿಕಾರಿಯನ್ನು ಹೊತ್ತು ವಿಶೇಷ ಕಾರ್ಯಾಚರಣಾ ತಂಡ ವಾಪಸ್‌ ತೆರಳಿತು. ಕೈಕೊಟ್ಟ ಎರಡೂ ಎಂಸಿ-130 ವಿಮಾನಗಳು ಇರಾನ್‌ ಸೇನೆ ಕೈಗೆ ಸಿಗಬಾರದೆಂದು ಸ್ಥಳದಲ್ಲೇ ಸ್ಫೋಟಿಸಿ ನಾಶ ಮಾಡಲಾಯಿತು ಎಂದು ಹೇಳಲಾಗಿದೆ.

ಸಮುದ್ರಮಟ್ಟಕ್ಕಿಂತ 7000 ಅಡಿ ಎತ್ತರದ ಗುಡ್ಡ ಹತ್ತಿದ್ದ ಪೈಲಟ್‌

ವಿಮಾನ ಪತನದ ಬಳಿಕ ಪ್ಯಾರಾಶೂಟ್‌ ಬಳಸಿ ಪಾರಾಗಿದ್ದ ಎಫ್‌-15 ವಿಮಾನದ 2ನೇ ರಕ್ಷಣಾ ಸಿಬ್ಬಂದಿ, (ಶಸ್ತ್ರಾಸ್ತ್ರ ಅಧಿಕಾರಿ) ದಕ್ಷಿಣ ಇಸ್ಫಹಾನ್‌ನಲ್ಲಿ ಸಮುದ್ರಮಟ್ಟದಿಂದ 7 ಸಾವಿರ ಅಡಿ ಎತ್ತರದ ಗುಡ್ಡ ಹತ್ತಿ ಕೂತಿದ್ದ. ತೀವ್ರ ಗಾಯಗೊಂಡ ಸ್ಥಿತಿಯಲ್ಲೇ ಆತ ಕೇವಲ ಒಂದು ಸಣ್ಣ ಪಿಸ್ತೂಲು, ಸಂವಹನ ಉಪಕರಣ ಹೊಂದಿದ್ದ. ಈ ಮೂಲಕ ಆತ ಇರಾನ್‌ ಯೋಧರ ಕೈಗೆ ಸಿಕ್ಕಿಹಾಕಿಕೊಳ್ಳುವುದರಿಂದ ತಪ್ಪಿಸಿಕೊಂಡಿದ್ದ ಎಂದು ಹೇಳಲಾಗಿದೆ.

ಇದನ್ನೂ ಓದಿ: ಅಮೆರಿಕಕ್ಕೆ ಮತ್ತೊಂದು ಮುಜುಗರ, 2ನೇ ಬಾರಿ ವಿಶ್ವದ ಅತ್ಯಾಧುನಿಕ ಸ್ಟೆಲ್ತ್ ಫೈಟರ್‌ ಜೆಟ್‌ F-35 ಧ್ವಂಸ ಮಾಡಿದ ಇರಾನ್‌

ಯಾವ್ಯಾವ ವಿಮಾನಗಳ ಬಳಕೆ?

ಇರಾನ್‌ನಲ್ಲಿ ಸಿಲುಕಿದ್ದ ತನ್ನ ಪೈಲಟ್‌ ರಕ್ಷಿಸುವ ಅಪಾಯಕಾರಿ ಸಾಹಸಕ್ಕೆ ಅಮೆರಿಕದ ಸೇನೆಯು ಹಲವು ಅತ್ಯಾಧುನಿಕ ಎಚ್‌ಎಚ್‌-60ಡಬ್ಲ್ಯು ಜಾಲಿ ಗ್ರೀನ್‌-2 ರಕ್ಷಣಾ ಹೆಲಿಕಾಪ್ಟರ್‌, ಎ-10 ಅಟ್ಯಾಕ್‌ ಜೆಟ್‌ಗಳು, ಎಚ್‌ಸಿ-130 ವಿಮಾನ, ನೂರಾರು ವಿಶೇಷ ಕಾರ್ಯಾಚರಣಾ ಪಡೆಯ ಯೋಧರನ್ನು ಬಳಸಿಕೊಂಡಿದೆ. ಇದರ ಜತೆಗೆ ಎಫ್‌-35 ಯುದ್ಧವಿಮಾನಗಳನ್ನು ತುರ್ತು ಸನ್ನಿವೇಶಕ್ಕಾಗಿ ಸನ್ನದ್ಧ ಸ್ಥಿತಿಯಲ್ಲಿಡಲಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಯಾರ ಕಣ್ಣಿಗೂ ಕಾಣದ ಅಮೆರಿಕದ ಅತ್ಯಾಧುನಿಕ F-35 ಯುದ್ಧ ವಿಮಾನ ಇರಾನ್‌ಗೆ ಕಂಡಿದ್ದೇಗೆ?

ಇತಿಹಾಸದಲ್ಲೇ ಮೊದಲು

ಈ ರೀತಿ ಶತ್ರುದೇಶದಲ್ಲಿ ಸಿಕ್ಕಿಹಾಕಿಕೊಂಡಿದ್ದ ಇಬ್ಬರು ರಕ್ಷಣಾ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಿ ಕರೆತಂದಿರುವುದು ಅಮೆರಿಕದ ಮಿಲಿಟರಿ ಇತಿಹಾಸದಲ್ಲಿ ಇದೇ ಮೊದಲು. ನಾವು ಅಮೆರಿಕದ ಯೋಧರನ್ನು ಯಾವುದೇ ಕಾರಣಕ್ಕೂ ಏಕಾಂಗಿಯಾಗಿ ಬಿಡುವುದಿಲ್ಲ. ಯಾವುದೇ ಒಬ್ಬ ಅಮೆರಿಕ ಯೋಧನ ಸಾವು-ನೋವಿಲ್ಲದೆ ನಮ್ಮಿಬ್ಬರೂ ಪೈಲಟ್‌ಗಳನ್ನು ಸುರಕ್ಷಿತವಾಗಿ ವಾಪಸ್‌ ಕರೆತಂದಿದ್ದೇವೆ. ಈ ಮೂಲಕ ಇರಾನ್‌ ಆಕಾಶದಲ್ಲಿ ನಾವು ಮತ್ತೊಮ್ಮೆ ನಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದೇವೆ.

- ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇರಾನ್‌ನಲ್ಲಿದ್ದ ತನ್ನದೇ ಎರಡು ಅತ್ಯಾಧುನಿಕ ವಿಮಾನಗಳನ್ನು ನಾಶಪಡಿಸಿಕೊಂಡ ಅಮೆರಿಕಾ
ಇರಾನ್‌ಗೆ ಡೊನಾಲ್ಡ್ ಟ್ರಂಪ್‌ ಕಟು ಎಚ್ಚರಿಕೆ ಸಂದೇಶ: ಮಂಗಳವಾರದತ್ತ ಇಡೀ ವಿಶ್ವದ ಚಿತ್ತ