
ಟೆಹ್ರಾನ್: ಇರಾನ್‌ನಲ್ಲಿ ಪತನಗೊಂಡ ತನ್ನ ವಿಮಾನದಲ್ಲಿ 2ನೇ ಯೋಧನನ್ನೂ ಯಶಸ್ವಿಯಾಗಿ ರಕ್ಷಣೆ ಮಾಡಿದ್ದಾಗಿ ಅಮೆರಿಕ ಹೇಳಿಕೊಂಡಿದ್ದರೂ, ಇರಾನ್ ಮಾತ್ರ ‘ಅಮೆರಿಕ ದಾಳಿಯನ್ನು ವಿಫಲಗೊಳಿಸಿದ್ದೇವೆ’ ಎಂದಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಇರಾನ್ ಸೇನಾ ವಕ್ತಾರ ಖತಮ್ ಅಲ್-ಅನ್ಬಿಯಾ, ‘ನಾವು ದಕ್ಷಿಣ ಇಸ್ಫಹಾನ್‌ನಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅಮೆರಿಕದ 2 ಸಿ-130 ಸೇನಾ ಸರಕು ಸಾಗಣೆ ವಿಮಾನ, ಎರಡು ಬ್ಲ್ಯಾಕ್ ಹಾಕ್ ಕಾಪ್ಟರ್ ಹೊಡೆದುರುಳಿಸಿದ್ದೇವೆ. ಅವರ ರಕ್ಷಣಾ ಕಾರ್ಯಾಚರಣೆ ವಿಫಲವಾಗಿದೆ’ ಎಂದಿದ್ದಾರೆ. ಆದರೆ, ‘ಅಮೆರಿಕ ದಾಳಿಯಲ್ಲಿ 5 ಜನ ಅಸುನೀಗಿದ್ದಾರೆ’ ಎಂದೂ ಅವರು ಹೇಳಿದ್ದಾರೆ. ಅವರಾರು ಎಂಬುದನ್ನು ಹೇಳಿಲ್ಲ.
ವಾಷಿಂಗ್ಟನ್: ಶತ್ರು ದೇಶಗಳ ವಿಮಾನವನ್ನು ಸೇನಾಪಡೆಗಳು ಹೊಡೆದುರುಳಿಸುವುದು ಮಾಮೂಲಿ. ಆದರೆ ಇರಾನ್‌ನಲ್ಲಿ ಸಿಲುಕಿದ್ದ ತನ್ನ ವಾಯುಪಡೆ ಸಿಬ್ಬಂದಿ ರಕ್ಷಣೆಗೆ ಅಮೆರಿಕ ಮುಂದಾದ ವೇಳೆ ತನ್ನದೇ 2 ವಿಮಾನಗಳನ್ನು ನಾಶ ಮಾಡಿದ ಪ್ರಸಂಗ ಶನಿವಾರ ನಡೆದಿದೆ.
ವಾಯುಪಡೆ ಸಿಬ್ಬಂದಿ ರಕ್ಷಣೆಗಾಗಿ ವಿಶೇಷ ಪಡೆಗಳನ್ನು ಕರೆತಂದಿದ್ದ 2 ಎಂಸಿ-130ಜೆ ವಿಮಾನಗಳು ಇರಾನ್‌ನ ಮರಳುಗಾಡಿನಲ್ಲಿ ಹೂತುಹೋದವು ಎನ್ನಲಾಗಿದೆ. ಹೀಗಾಗಿ ಕೈಕೊಟ್ಟಿದ್ದ ಎರಡೂ ಎಂಸಿ-130 ವಿಮಾನಗಳು ಇರಾನ್ ಸೇನೆ ಕೈಗೆ ಸಿಗಬಾರದು. ಸಿಕ್ಕರೆ ಅವುಗಳಿಗೆ ವಿಮಾನದ ತಂತ್ರಜ್ಞಾನ ದೊರಕುತ್ತದೆ ಎಂಬ ಉದ್ದೇಶದಿಂದ, ಅವುಗಳನ್ನು ಸ್ಥಳದಲ್ಲೇ ಸ್ಫೋಟಿಸಿ ನಾಶ ಮಾಡಲಾಯಿತು ಎಂದು ಹೇಳಲಾಗಿದೆ.
ಹೀಗಾಗಿ ಹೊಸದಾಗಿ ಮತ್ತೆ ಮೂರು ವಿಮಾನಗಳನ್ನು ತರಿಸಿಕೊಳ್ಳಬೇಕಾಯಿತು. ಆ ವಿಮಾನಗಳ ಮೂಲಕ, ರಕ್ಷಣೆಗೆ ಒಳಗಾದ ವಾಯುಪಡೆ ಸಿಬ್ಬಂದಿ ಜತೆಗೆ ವಿಶೇಷ ಕಾರ್ಯಾಚರಣಾ ತಂಡ ವಾಪಸ್ ತೆರಳಿತು ಎಂದು ವರದಿಗಳು ಹೇಳಿವೆ.
ಕುವೈತ್ ಸಿಟಿ: ಕೊಲ್ಲಿಯಲ್ಲಿನ ಅಮೆರಿಕ ಮಿತ್ರದೇಶಗಳ ಮೇಲೆ ಇರಾನ್ ತನ್ನ ದಾಳಿ ಮುಂದುವರಿಸಿದ್ದು, ಡ್ರೋನ್ ದಾಳಿ ನಡೆಸಿ 2 ವಿದ್ಯುತ್, 2 ತೈಲ ಘಟಕ ಮತ್ತು ನೀರು ನೈರ್ಮಲೀಕರಣ ಸ್ಥಾವರಗಳಿಗೆ ಹಾನಿಯನ್ನುಂಟುಮಾಡಿದೆ.
ದಾಳಿಯ ಕಾರಣ ಎರಡು ತೈಲ ಸೌಲಭ್ಯಗಳಲ್ಲೂ ಬೆಂಕಿ ಹೊತ್ತಿಕೊಂಡಿದೆ. ಆದರೆ ಯಾವುದೇ ಗಾಯಗಳಾಗಿಲ್ಲ ಎಂದು ಕುವೈತ್ ಸರ್ಕಾರ ಹೇಳಿದೆ.
ಕುವೈತ್‌ನಲ್ಲಿ ನಾಗರಿಕ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ಮಾಡುತ್ತಿದೆ. ರಾತ್ರಿಯಿಡೀ ನಡೆದ ಇತರ ಡ್ರೋನ್ ದಾಳಿಗಳು ಶುವೈಖ್ ತೈಲ ವಲಯ ಸಂಕೀರ್ಣದಲ್ಲಿ ಬೆಂಕಿ ಉಂಟುಮಾಡಿದೆ ಮತ್ತು ಸರ್ಕಾರಿ ಕಚೇರಿ ಸಂಕೀರ್ಣಕ್ಕೆ ಗಮನಾರ್ಹ ಹಾನಿ ಉಂಟುಮಾಡಿದೆ ಎದು ಅದು ಹೇಳಿದೆ.
ದಕ್ಷಿಣ ಲೆಬನಾನ್‌ನ ಕ್ಫರ್ ಹಟ್ಟಾ ಮೇಲೆ ಇಸ್ರೇಲಿ ದಾಳಿಯಲ್ಲಿ ಲೆಬನಾನಿನ ಸೈನಿಕ ಸಾವನ್ನಪ್ಪಿದ್ದಾನೆ. ಇನ್ನು ಕಳೆದ 24 ಗಂಟೆಗಳಲ್ಲಿ ಇರಾನ್‌ನಿಂದ ಬಂದ 9 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು 50 ಡ್ರೋನ್‌ಗಳನ್ನು ಯುಎಇ ತಡೆಹಿಡಿದಿದೆ, ಯಾವುದೇ ಸಾವುನೋವು ವರದಿಯಾಗಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ