40 ವರ್ಷದ ಹಿಂದೆ ವಸತಿ ಶಾಲೆಗೆ ಸೇರಿಸಿದ್ದಕ್ಕೆ ಈಗ ಪೋಷಕರ ಮೇಲೆ ಅಟ್ಯಾಕ್

By Anusha KbFirst Published Dec 13, 2022, 6:06 PM IST
Highlights

ತನ್ನನ್ನು ವಸತಿ ಶಾಲೆಗೆ ಸೇರಿಸಿದರೆಂಬ ಸಿಟ್ಟಿನಿಂದ ಮಗನೋರ್ವ ತನ್ನ ಪೋಷಕರ ಮೇಲೆ ಹಲ್ಲೆ ಮಾಡಿದ್ದಾನೆ. ಅದೂ ತನ್ನನ್ನು ವಸತಿ ಶಾಲೆಗೆ ಸೇರಿಸಿ 40 ವರ್ಷಗಳು ಕಳೆದ ನಂತರ ವಿಚಿತ್ರವಾದರೂ ಇದು ಸತ್ಯ. ಇಂಗ್ಲೆಂಡ್‌ನಲ್ಲಿ ಈ ವಿಚಿತ್ರ ಘಟನೆ ನಡೆದಿದೆ.

ಇಂಗ್ಲೆಂಡ್: ಅನೇಕ ಪುಟ್ಟ ಪುಟ್ಟ ಮಕ್ಕಳಿಗೆ ವಸತಿ ಶಾಲೆಗೆ ಹೋಗುವುದಕ್ಕೆ ಸ್ವಲ್ಪವೂ ಇಷ್ಟವಿರುವುದಿಲ್ಲ. ಆದರೆ ಪೋಷಕರು ತಮ್ಮ ಮಕ್ಕಳು ಮನೆಯಲ್ಲೇ ಇದ್ದರೆ, ನಮ್ಮ ಮಾತು ಕೇಳುವುದಿಲ್ಲ, ನಾವು ಮಾಡುವ ಮುದ್ದಿನಿಂದಾಗಿ ಮಕ್ಕಳು ಹಾಳಾಗುತ್ತಾರೆ, ಆದರೆ ದೂರದ ವಸತಿ ಶಾಲೆಯಲ್ಲಿ ಓದಲು ಹಾಕಿದರೆ ಅಲ್ಲಿನ ಶಿಕ್ಷಕರಿಗೆ ಹೆದರಿಯಾದರೂ ಓದಲು ಶುರು ಮಾಡುತ್ತಾರೆ. ಜೀವನದಲ್ಲಿ ಶಿಸ್ತು ರೂಢಿಸಿಕೊಳ್ಳುತ್ತಾರೆ. ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ ಎಂದು ಪೋಷಕರು ಮಕ್ಕಳನ್ನು ದೂರದ ಊರಿನಲ್ಲಿರುವ ವಸತಿ ಶಾಲೆಗೆ ಹಾಕುವುದುಂಟು. ಆದರೆ ಮಕ್ಕಳಿಗೆ ಇದು ಇಷ್ಟವಿಲ್ಲದಿದ್ದರೂ ಸಹ ಪೋಷಕರನ್ನು ವಿರೋಧಿಸುವಷ್ಟು ಸ್ವತಂತ್ರವಿಲ್ಲದ ಕಾರಣ ಮನಸ್ಸಿಲ್ಲದ ಮನಸ್ಸಿನಿಂದ ರೆಸಿಡೆನ್ಶಿಯಲ್ ಸ್ಕೂಲ್‌ಗಳಿಗೆ ಸೇರುತ್ತಾರೆ. ಆದರೆ ಹೀಗೆ ತನ್ನನ್ನು ವಸತಿ ಶಾಲೆಗೆ ಸೇರಿಸಿದರೆಂಬ ಸಿಟ್ಟಿನಿಂದ ಮಗನೋರ್ವ ತನ್ನ ಪೋಷಕರ ಮೇಲೆ ಹಲ್ಲೆ ಮಾಡಿದ್ದಾನೆ. ಅದೂ ತನ್ನನ್ನು ವಸತಿ ಶಾಲೆಗೆ ಸೇರಿಸಿ 40 ವರ್ಷಗಳು ಕಳೆದ ನಂತರ ವಿಚಿತ್ರವಾದರೂ ಇದು ಸತ್ಯ.

ಇಂಗ್ಲೆಂಡ್‌ನಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಇಡಿ ಲಿನ್ಸೆ (Ed Linse) ಎಂಬಾತನೇ ಹೀಗೆ ತನ್ನನ್ನು ವಸತಿ ಶಾಲೆಗೆ ಸೇರಿಸಿದ್ದಕ್ಕೆ ಪೋಷಕರ ಮೇಲೆ ಹಲ್ಲೆ ಮಾಡಿದ ವ್ಯಕ್ತಿ. ಈತನನ್ನು ಈತನ ಪೋಷಕರು 1980ರಲ್ಲಿ ಬಾಲಕರ ವಸತಿ ಶಾಲೆಯೊಂದಕ್ಕೆ ಸೇರಿಸಿದ್ದರು. ಕೇವಲ 11 ವರ್ಷದವನಿದ್ದಾಗ ತನ್ನನ್ನು ಬೋರ್ಡಿಂಗ್ ಸ್ಕೂಲ್‌ಗೆ ಸೇರಿಸಿದ ಪೋಷಕರ  ವಿರುದ್ಧ ಈತ ನಿರಂತರ ಆಕ್ರೋಶವನ್ನು ಹೊಂದಿದ್ದ, ಪ್ರಸ್ತುತ ಪೋಷಕರ ಮೇಲೆ ಹಲ್ಲೆ ಮಾಡಿದ ಇಡಿ ಲಿನ್ಸೆಗೆ 51 ವರ್ಷಗಳಾಗಿವೆ. ತನ್ನ ಭವಿಷ್ಯ ರೂಪಿಸುವ ಸಲುವಾಗಿ ತನ್ನನ್ನು ವಸತಿ ಶಾಲೆಗೆ ಹಾಕಿದ ಪೋಷಕರ ವಿರುದ್ಧ ಈತ ಕಳೆದ 40 ವರ್ಷಗಳಿಂದಲೂ ಹಗೆ ಸಾಧಿಸುತ್ತಾ ಬಂದಿದ್ದ ಎಂದು ತಿಳಿದು ಬಂದಿದೆ. ಪ್ರಸ್ತುತ  ಇಡಿ ಲಿನ್ಸೆ ಒಬ್ಬ ಸೋಲು ಕಂಡಿರುವ ಉದ್ಯಮಿಯಾಗಿದ್ದು, ಈತನ ವಿರುದ್ಧ ತಂದೆಯ ಕೊಲೆಗೆ ಯತ್ನಿಸಿದ ಆರೋಪ ಎದುರಿಸಲಾಗಿದೆ.


ಬ್ರಿಟನ್‌ನ ಮೆಟ್ರೋ ನ್ಯೂಸ್ ವರದಿಯ ಪ್ರಕಾರ, ಇಡಿ ಲಿನ್ಸೆ ತನ್ನ ನೆದರ್ ಆಲ್ಡರ್ಲಿ (Nether Alderley) ಎಂಬಲ್ಲಿರುವ ತನ್ನ ಪೋಷಕರ 1.2 ಮಿಲಿಯನ್ ಮೌಲ್ಯದ ತೋಟದ ಮನೆಯಲ್ಲಿ (farmhouse) ಪೋಷಕರೊಂದಿಗೆ ಕಾದಾಟಕ್ಕೆ ಇಳಿದಿದ್ದಾನೆ. ಅಲ್ಲದೇ ತನ್ನ 85 ವರ್ಷದ ತಂದೆ ನಿಕೋಲಸ್ ಕ್ಲಿಟನ್ (Nicholas Clayton) ಹಾಗೂ ತಾಯಿ 82 ವರ್ಷದ ಜೂಲಿಯಾ (Julia) ಮೇಲೆ ಹಲ್ಲೆ ನಡೆಸಿದ್ದಾನೆ. ತಂದೆಯ ಮೇಲೆ ಅವರು ಮಲಗಿದ್ದ ಕೊಠಡಿಯಲ್ಲೇ ಈತ ಹಲ್ಲೆ ಮಾಡಿದ್ದಾನೆ. ಇದರಿಂದ ಅವರ ತಲೆಗೆ, ಕಿವಿ ಹಾಗೂ ಕೈಗೆ ಗಂಭೀರ ಗಾಯಗಳಾಗಿವೆ. ಅಲ್ಲದೇ ಇವರ ತಂದೆಗೆ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿದ್ದು, ಐದು ವಾರಗಳ ಕಾಲ ಅವರು ಆಸ್ಪತ್ರೆಯಲ್ಲಿ ಕಳೆಯುವಂತಾಗಿದೆ. ನಂತರ ಈತ ತಾಯಿ ಮೇಲೆ ಹಲ್ಲೆ ಮಾಡಿದ್ದು, ಅವರ ತಲೆಗೆ ಹೊಡೆದು ಕೆಳಗೆ ಬೀಳಿಸಿ ಬೆನ್ನಿಗೆ ಗುದ್ದಿದ್ದಾನೆ. 

ಎಂದೋ ಮಾಡಿದ ಕೆಲಸಕ್ಕೆ ಹೀಗೆ ಈಗ ಸೇಡು ತೀರಿಸಲು ಮುಂದಾಗಿರುವ ಇಡಿ ಲಿನ್ಸೆಗೆ ಇಬ್ಬರು ಮಕ್ಕಳ ತಂದೆಯಾಗಿದ್ದು, ಈತ ತನ್ನನ್ನು ಹೀಗೆ ವಸತಿ ಶಾಲೆಗೆ ಸೇರಿಸಿ ಕಷ್ಟಪಡುವಂತೆ ಮಾಡಿದ್ದಕ್ಕಾಗಿ ತನಗೆ ಪರಿಹಾರ ನೀಡಬೇಕು ಎಂದು ಕೂಡ ಆಗ್ರಹಿಸಿದ್ದಾನೆ. ಆತನಿಗೆ ಈಗ ವರ್ಷ 51 ಆಗಿದ್ದರೂ ಕೂಡ ಈತ ಆ ಬೋರ್ಡಿಂಗ್ ದಿನಗಳನ್ನು ಈಗಲೂ ಹೇಳಿಕೊಂಡು ತಮಗೆ ಹಿಂಸೆ ನೀಡುತ್ತಿದ್ದಾನೆ ಎಂದು ಈತನ ತಾಯಿ ನ್ಯಾಯಾಲಯಕ್ಕೆ ಹೇಳಿದ್ದಾರೆ. ವಸತಿ ಶಾಲೆಗೆ ಸೇರಿಸಿದಾಗಿನಿಂದಲೂ ತನ್ನ ಪೋಷಕರ ವಿರುದ್ಧ ದ್ವೇಷ ಸಾಧಿಸಿಕೊಂಡು ಬಂದಿರುವ ಇಡಿ ಲಿನ್ಸೆಗೆ ಪೋಷಕರು ಹಲವು ಬಾರಿ ಆರ್ಥಿಕ ಸಹಾಯವನ್ನು ಮಾಡಿದ್ದಾರೆ. ಒಟ್ಟಿನಲ್ಲಿ ಮಗನ ಭವಿಷ್ಯ ಚೆನ್ನಾಗಿರಲಿ ಎಂದು ವಸತಿ ಶಾಲೆಗೆ ಸೇರಿಸಿದ ಪೋಷಕರು ಈಗ ತಮ್ಮ ಇಳಿವಯಸ್ಸಿನಲ್ಲಿ ಈ ಹುಚ್ಚು ಮಗನ ಕಿರುಕುಳದಿಂದಾಗಿ ಸಂಕಷ್ಟ ಪಡುವಂತಾಗಿದೆ. 

Tumakur : ವಿದ್ಯಾರ್ಥಿ ಜೀವನ ಪವಿತ್ರವಾದ ನದಿ ಇದ್ದಂತೆ
ಮೊರಾರ್ಜಿ ವಸತಿ ಶಾಲೆ ಪಿಯುವರೆಗೆ ವಿಸ್ತರಣೆಗೆ ತೀರ್ಮಾನ: ಸಚಿವ ಕೋಟ

click me!