ಪ್ರೀ ಇನ್‌ಸ್ಟಾಲ್ಡ್‌ ಆ್ಯಪ್‌ಗಳಿಗೆ ಕೇಂದ್ರ ಸರ್ಕಾರ ಅಂಕುಶ..? ಮೊಬೈಲ್‌ ಕಂಪನಿಗಳಿಗೆ ಶೀಘ್ರ ಮೂಗುದಾರ..!

By Kannadaprabha NewsFirst Published Mar 15, 2023, 10:37 AM IST
Highlights

ಇದರ ಜೊತೆಗೆ ಯಾವುದೇ ಆಪರೇಟಿಂಗ್‌ ಸಿಸ್ಟಮ್‌ ಹೊಸ ಅಪ್‌ಡೇಟ್‌ ಅನ್ನು ಗ್ರಾಹಕರಿಗೆ ನೀಡುವ ಮೊದಲು ಅದನ್ನು ಸರ್ಕಾರ ಸೂಚಿಸಿದ ಭದ್ರತಾ ಸಂಸ್ಥೆಗಳ ಮುಂದೆ ಪ್ರದರ್ಶನಗೊಳಿಸುವ ಅಂಶವನ್ನೂ ಹೊಸ ಕಾನೂನು ಒಳಗೊಂಡಿರಲಿದೆ ಎಂದು ಮೂಲಗಳು ತಿಳಿಸಿವೆ. 

ನವದೆಹಲಿ (ಮಾರ್ಚ್‌ 15, 2023): ಹೊಸ ಮೊಬೈಲ್‌ಗಳಲ್ಲಿ, ಖರೀದಿ ಪೂರ್ವದಲ್ಲೇ ಅಳವಡಿಕೆಯಾಗಿರುವ ಆ್ಯಪ್‌ಗಳು ದೇಶದ ಭದ್ರತಾ ವ್ಯವಸ್ಥೆಗೆ ಮಾರಕ ಎಂಬುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಇಂಥ ಪೂರ್ವ ಅಳವಡಿತ ಆ್ಯಪ್‌ಗಳನ್ನು ಅಳಿಸುವ ಅವಕಾಶವನ್ನು ಗ್ರಾಹಕರಿಗೆ ನೀಡುವುದನ್ನು ಕಡ್ಡಾಯಗೊಳಿಸಲು ಮುಂದಾಗಿದೆ. ಸ್ಯಾಮ್‌ಸಂಗ್‌, ಗೂಗಲ್‌, ಕ್ಸಿಯೋಮಿ, ವಿವೋ, ಆ್ಯಪಲ್‌ ಸೇರಿದಂತೆ ಹಲವು ಕಂಪನಿಗಳ ಮೊಬೈಲ್‌ಗಳಲ್ಲಿ ಹಲವು ಆ್ಯಪ್‌ಗಳು ಮೊದಲೇ ಅಳವಡಿಕೆಯಾಗಿರುತ್ತವೆ. ಇದನ್ನು ಗ್ರಾಹಕರು ಡಿಲೀಟ್‌ ಮಾಡುವುದು ಸಾಧ್ಯವಿಲ್ಲ. ಇಂಥ ಆ್ಯಪ್‌ಗಳು ಬಳಕೆದಾರರ ಮಾಹಿತಿ ಕದಿಯುತ್ತಿವೆ ಎಂಬ ಗಂಭೀರ ಕಳವಳ ಇದೆ. 

ಹೀಗಾಗಿ ಮೊಬೈಲ್‌ ಕಂಪನಿಗಳು (Mobile Companies) ಇಂಥ ಆ್ಯಪ್‌ಗಳನ್ನು (Apps) ರದ್ದುಗೊಳಿಸುವ ಅವಕಾಶವನ್ನು ಗ್ರಾಹಕರಿಗೆ ನೀಡುವುದನ್ನು ಕಡ್ಡಾಯಗೊಳಿಸುವ ಸಂಬಂಧ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ (Union Information Technology Ministry) ಹೊಸ ಕಾನೂನು ರೂಪಿಸುತ್ತಿದೆ ಎನ್ನಲಾಗಿದೆ. ಇದರ ಜೊತೆಗೆ ಯಾವುದೇ ಆಪರೇಟಿಂಗ್‌ ಸಿಸ್ಟಮ್‌ (Operating System) ಹೊಸ ಅಪ್‌ಡೇಟ್‌ ಅನ್ನು ಗ್ರಾಹಕರಿಗೆ ನೀಡುವ ಮೊದಲು ಅದನ್ನು ಸರ್ಕಾರ ಸೂಚಿಸಿದ ಭದ್ರತಾ ಸಂಸ್ಥೆಗಳ ಮುಂದೆ ಪ್ರದರ್ಶನಗೊಳಿಸುವ ಅಂಶವನ್ನೂ ಹೊಸ ಕಾನೂನು ಒಳಗೊಂಡಿರಲಿದೆ ಎಂದು ಮೂಲಗಳು ತಿಳಿಸಿವೆ. 

ಇದನ್ನು ಓದಿ: ಇಸ್ರೋ ಮತ್ತೊಂದು ಸಾಧನೆ: ನಿರುಪಯುಕ್ತ ಉಪಗ್ರಹವನ್ನು ಯಶಸ್ವಿಯಾಗಿ ಇಳಿಸಿದ ಬಾಹ್ಯಾಕಾಶ ಸಂಸ್ಥೆ

ಈ ಕುರಿತು ಕಾನೂನು ಸಿದ್ಧವಾಗುತ್ತಿದ್ದು ಅದು ಅಂತಿಮಗೊಂಡ ಬಳಿಕ ಜಾರಿಗೊಳಿಸಲಾಗುವುದು. ಆದರೆ ಈ ನಿಯಮ ಅಳವಡಿಸಿಕೊಳ್ಳಲು ಮೊಬೈಲ್‌ ಕಂಪನಿಗಳಿಗೆ ಒಂದು ವರ್ಷ ಕಾಲಾವಕಾಶ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಭದ್ರತಾ ಕಾರಣಕ್ಕಾಗಿಯೇ ಕಳೆದ ಕೆಲ ವರ್ಷಗಳಲ್ಲಿ ಕೇಂದ್ರ ಸರ್ಕಾರ ಚೀನಾ ಮೂಲದ 300ಕ್ಕೂ ಹೆಚ್ಚು ಆ್ಯಪ್‌ಗಳನ್ನು ನಿಷೇಧಿಸಿದೆ. ಜೊತೆಗೆ ಚೀನಾ ಮೂಲದ ತಂತ್ರಜ್ಞಾನ ಕಂಪನಿಗಳನ್ನು ಹಲವು ದೇಶಗಳು ನಿಷೇಧಿಸಿವೆ.

ಇದನ್ನೂ ಓದಿ: ಇಂದು ಉಪಗ್ರಹ ಬೀಳಿಸುವ ಕಸರತ್ತು: ಫೆಸಿಫಿಕ್‌ ಸಾಗರದಲ್ಲಿ ಪತನಕ್ಕೆ ಇಸ್ರೋ ಭಾರಿ ಸಾಹಸ

click me!