ಗೂಗಲ್ ಮೀಟ್ ವೇಳೆ ಬ್ಯಾಕ್ ಗ್ರೌಂಡ್ ಶಬ್ದ ವನ್ನು ಮ್ಯೂಟ್ ಮಾಡೋದು ಹೇಗೆ?

By Suvarna NewsFirst Published Jul 28, 2020, 7:05 PM IST
Highlights

ವರ್ಕ್ ಫ್ರಂ ಹೋಂ ಅಂದ ಮೇಲೆ ವಿಡಿಯೋ ಕಾನ್ಫರೆನ್ಸ್‌ಗಳು ಇದ್ದೇ ಇರುತ್ತವೆ. ಆದರೆ, ಇಂತಹ ಸಂದರ್ಭದಲ್ಲಿ ಮನೆಯ ಕೊಠಡಿಯ ಬಾಗಿಲು ತೆಗೆಯುವ-ಮುಚ್ಚುವ ಶಬ್ದ, ಇಲ್ಲವೇ ಕೀಬೋರ್ಡ್ ಟೈಪಿಂಗ್ ಶಬ್ದಗಳು ಸ್ವಲ್ಪ ಕಿರಿಕಿರಿ ಹಾಗೂ ಮುಜುಗರವನ್ನುಂಟು ಮಾಡುತ್ತವೆ. ಈ ನಿಟ್ಟಿನಲ್ಲಿ ಗೂಗಲ್ ಮೀಟ್ ಈಗ ನೂತನ ಫೀಚರ್ ಒಂದನ್ನು ಹೊರತಂದಿದ್ದು, ಅದನ್ನು ಆ್ಯಕ್ಟಿವೇಟ್ ಮಾಡಿಕೊಂಡರೆ ಇಂತಹ ಶಬ್ದಗಳು ಕೇಳಿಸುವುದಿಲ್ಲ. ಹಾಗಾದರೆ, ಯಾವುದು ಆ ನೂತನ ಫೀಚರ್ ಎಂಬ ಬಗ್ಗೆ ನೋಡೋಣ ಬನ್ನಿ...

ಕೊರೋನಾ ಬಂದ ಮೇಲೆ ಜೀವನ ಪ್ರಕ್ರಿಯೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪ್ರತಿದಿನದ ಚಟುವಟಿಕೆಯ ಸ್ವರೂಪವೂ ಬದಲಾಗಿದೆ. ಅದರಲ್ಲೂ ನೌಕರಿ (ಕಚೇರಿ ಕೆಲಸ)ವೆಂದರೆ ಅದಕ್ಕೆ ಸಿಗುತ್ತಿದ್ದ ಪ್ರಾಶಸ್ತ್ಯವೂ ಅಷ್ಟೇ ಬಲವಾಗಿತ್ತು. ಹೀಗಾಗಿ ಮೊದಲು ಪ್ರತಿ ಕೆಲಸವೂ ತುಂಬಾ ಇಂಪಾರ್ಟೆಂಟ್ ಎಂಬ ರೀತಿಯಲ್ಲಿತ್ತು. ಅವುಗಳನ್ನು ಸ್ವತಃ ಕಚೇರಿಗಳಿಗೆ ಹೋಗಿ ಮಾಡಬೇಕು, ಇಲ್ಲದಿದ್ದರೆ ಆಗಲ್ಲ ಎಂಬ ಸ್ಥಿತಿ ಇತ್ತು. ಈಗ ಎಲ್ಲ ಪ್ರಯಾರಿಟಿಗಳು ಬದಲಾಗಿವೆ. ವರ್ಕ್ ಫ್ರಂ ಹೋಂ ಬಂದಿದೆ. ಅದಕ್ಕೆ ತಕ್ಕಂತೆ ತಂತ್ರಜ್ಞಾನಗಳೂ ಅಪ್ಡೇಟ್ ಆಗತೊಡಗಿವೆ.



ವರ್ಕ್ ಫ್ರಂ ಹೋಂಗೆ ಬಹುಮುಖ್ಯವಾಗಿ ಬೇಕಿರುವುದು ಇಂಟರ್ನೆಟ್ ಸೇವೆ. ಜೊತೆಗೆ ವಿಡಿಯೋ ಕಾಲಿಂಗ್ ಆ್ಯಪ್. ಇದಕ್ಕೋಸ್ಕರ ಈಗ ಜೂಮ್, ಜಿಯೋ ಮೀಟ್, ಗೂಗಲ್ ಮೀಟ್ ಸೇರಿದಂತೆ ಅನೇಕ ಆ್ಯಪ್‌ಗಳು ಹುಟ್ಟಿಕೊಂಡಿವೆ. ಇಲ್ಲೂ ಸಹ ಒಂದಕ್ಕೊಂದು ಪೈಪೋಟಿಗೆ ಬಿದ್ದಂತೆ ಹಲವು ಫೀಚರ್‌ಗಳನ್ನು ಪರಿಚಯಿಸುತ್ತಲೇ ಬಂದಿವೆ. ಈಗ ಗೂಗಲ್ ಮೀಟ್ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ತನ್ನ ಗ್ರಾಹಕರು ನಿರಾಂತಕವಾಗಿ ಯಾವುದೇ ಹಿನ್ನೆಲೆ ಶಬ್ದಗಳ ಕಿರಿಕಿರಿ ಇಲ್ಲದೆ, ವಿಡಿಯೋ ಕಾಲಿಂಗ್ ಆ್ಯಪ್ ಸೇವೆಯನ್ನು ನೀಡುತ್ತಿದೆ. 

ಇದನ್ನು ಓದಿ: ಬಳಸದಿದ್ದರೆ ವಾಟ್ಸಪ್ ಕೆಲವು ದಿನಗಳ ನಂತರ ಡಿ-ಆ್ಯಕ್ಟಿವೇಟ್ ಆಗುತ್ತೆ ಗೊತ್ತಾ?

ಹೌದು. ವಿಡಿಯೋ ಕಾಲಿಂಗ್ ಮಾಡಬೇಕಾದ ಸಂದರ್ಭದಲ್ಲಿ ಬಹಳಷ್ಟು ಸಮಯ ಮಾತನಾಡಿದ್ದಕ್ಕಿಂತ ಹೆಚ್ಚು ಹಿಂಬದಿಯ ಶಬ್ದಗಳೇ ಕೇಳುತ್ತಿರುತ್ತವೆ. ಇದರಿಂದ ಸಾಕಷ್ಟು ಕಿರಿಕಿರಿ ಉಂಟಾಗುವುದಲ್ಲದೆ, ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸುವುದು ಕಷ್ಟವಾಗುತ್ತದೆ. ಇಂತಹ ಸಮಸ್ಯೆ ಕೇವಲ ವರ್ಕ್ ಫ್ರಂ ಹೋಂ ಮಾಡುತ್ತಿರುವವರಿಗಷ್ಟೇ ಅಲ್ಲದೆ, ಶೈಕ್ಷಣಿಕ ಚಟುವಟಿಕೆಯಲ್ಲಿ ನಿರತವಾಗಿರುವವರಿಗೂ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಗೂಗಲ್ ಮೀಟ್ ತನ್ನ ಪ್ರಯತ್ನ ಹಾಗೂ ಪರಿಶ್ರಮವನ್ನು ಹಾಕಿದ್ದರಿಂದ ಈಗ ನೂತನ ಫೀಚರ್ ಸಿದ್ಧವಾಗಿದೆ. ಅದೇ ನಾಯ್ಸ್ ಕ್ಯಾನ್ಸಲೇಶನ್ ಫೀಚರ್ ಆಗಿದ್ದು, ಅದರ ಮೂಲಕ ಬ್ಯಾಗ್ರೌಂಡ್ ಶಬ್ದಗಳು ಮ್ಯೂಟ್ ಆಗಲಿವೆ. ಏನಿದ್ದರೂ ಬಳಕೆದಾರರ ವಾಯ್ಸ್ ಹಾಗೂ ವಿಡಿಯೋ ಮಾತ್ರ ನಿರಾಯಾಸವಾಗಿ ಪ್ರಸಾರವಾಗಲಿದ್ದು, ಹಿನ್ನೆಲೆ ಶಬ್ದಗಳು ಕೇಳಿಸದಂತೆ ಸಾಫ್ಟ್‌ವೇರ್ ಅನ್ನು ಅಭಿವೃದ್ಧಿಪಡಿಸಲಾಗಿದೆ. 

ಸದ್ಯ ವೆಬ್‌ಗೆ ಮಾತ್ರ, ಮೊಬೈಲ್‌ಗೆ ಶೀಘ್ರ
ನಾಯ್ಸ್ ಕ್ಯಾನ್ಸಲೇಶನ್ ಫೀಚರ್ ಅನ್ನು ಸದ್ಯ ಡೆಸ್ಕ್‌ಟಾಪ್ ಅಂದರೆ ವೆಬ್ ವರ್ಶನ್‌ಗೆ ಮಾತ್ರವೇ ಬಿಡಲಾಗಿದೆ. ಹೀಗಾಗಿ ವೆಬ್ ಬಳಕೆದಾರರು ನಿರಾಂತಕವಾಗಿ ನಾಯ್ಸ್ ಕ್ಯಾನ್ಸಲೇಶನ್ ಮಾಡಿ ವಿಡಿಯೋ ಕಾಲಿಂಗ್ ಅನ್ನು ಆಬಾಧಿತವಾಗಿ ಬಳಸಬಹುದಾಗಿದೆ. ಆದರೆ, ಮೊಬೈಲ್‌ನಲ್ಲಿ ಫೀಚರ್ ಅಳವಡಿಸಲು ಸಿದ್ಧತೆಗಳು ಈಗಾಗಲೇ ನಡೆಯುತ್ತಿದ್ದು, ಅದರಲ್ಲೂ ಶೀಘ್ರವಾಗಿ ಪರಿಚಯಿಸಲಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಸೇವೆಯನ್ನು ಗೂಗಲ್ ಈಗಾಗಲೇ ತನ್ನ ಜಿ- ಸೂಟ್ ಎಂಟರ್ ಪ್ರೈಸ್, ಜಿ- ಸೂಟ್ ಎಂಟರ್‌ಪ್ರೈಸ್ ಫಾರ್ ಎಜುಕೇಶನ್, ಜಿ-ಸೂಟ್ ಎಂಟರ್‌ಪ್ರೈಸ ಎಸೆನ್ಶಿಯಲ್ ಅಕೌಂಟ್ ಗಳಲ್ಲಿ ಪರಿಚಯಿಸಿದೆ. 

ಇದನ್ನು ಓದಿ: ಟ್ವಿಟ್ಟರ್ ಬಳಸೋಕೆ ನೀವು ದುಡ್ಡುಕಟ್ಟೋ ಕಾಲ ಬರ್ತಿದೆಯಾ?

ಟಿವಿ ಧ್ವನಿ ಕೇಳಿಸುತ್ತೆ
ಹೀಗಾಗಿ ಈ ನೂತನವಾದ ನಾಯ್ಸ್ ಕ್ಯಾನ್ಸಲೇಶನ್ ಫೀಚರ್‌ನಿಂದ ಟೈಪಿಂಗ್, ಬಾಗಿಲು ತೆಗೆಯುವ- ಮುಚ್ಚುವ, ಜೊತೆಗೆ ಇನ್ನಿತರ ಹಿನ್ನೆಲೆ ಶಬ್ದಗಳನ್ನು ಕೇಳಿಸದಂತೆ ಮಾಡಬಹುದಾಗಿದೆ. ಆದರೆ, ಈ ಫೀಚರ್ ಅನ್ನು ಆ್ಯಕ್ಟೀವ್ ಮಾಡಿಕೊಂಡರೂ ಸಹ ವಿಡಿಯೋ ಶೇರಿಂಗ್ ಮಾಡಿಕೊಂಡಾಗ ಯಾವುದೇ ರೀತಿಯ ಆಡಿಯೋ ಸಮಸ್ಯೆಯಾಗುವುದಿಲ್ಲ ಎಂದು ಕಂಪನಿ ಹೇಳಿಕೊಂಡಿದೆ. ಆದರೆ, ವಿಡಿಯೋ ಕಾಲಿಂಗ್ ವೇಳೆ ನಿಮ್ಮ ಹಿಂಬದಿಯಿಂದ ಯಾರಾದರೂ ಮಾತನಾಡಿದರೆ, ಇಲ್ಲವೇ ಟಿವಿ ಧ್ವನಿ ಕೇಳುತ್ತಿದ್ದರೆ ಅವುಗಳನ್ನು ಮ್ಯೂಟ್ ಮಾಡಲು ಸಾಧ್ಯವಿಲ್ಲ. 

ಈ ಫೀಚರ್ ಅನ್ನು ಹೇಗೆ ಬಳಸಬೇಕು..?

1. ಮೀಟ್ ಹೋಂ ಪೇಜ್ ಗೆ ಭೇಟಿ ಕೊಡಿ.

2. ಹೋಂ ಪೇಜ್‌ನ ಬಲಭಾಗದ ಮೇಲಿರುವ ಸೆಟ್ಟಿಂಗ್ಸ್ ಐ ಕಾನ್ ಮೇಲೆ ಕ್ಲಿಕ್ ಮಾಡಿ.

3. ಅಲ್ಲಿ ಆಡಿಯೋ ಆಪ್ಷನ್ ಅನ್ನು ಆಯ್ಕೆ ಮಾಡಿ.

4. ಅಲ್ಲಿ ಕಾಣುವ ನಾಯ್ಸ್ ಕ್ಯಾನ್ಸಲೇಶನ್ ಅನ್ನು ಆ್ಯಕ್ಟಿವ್ ಮಾಡಿ.

5. ಬಳಿಕ ಡನ್ ಬಟನ್ ಅನ್ನು ಕ್ಲಿಕ್ ಮಾಡಿ.  

ಇದನ್ನು ಓದಿ: ಟಿಕ್‌ಟಾಕ್ ಗೆ ಪರ್ಯಾಯವಾಗಿ ರೀಲ್ಸ್ ಬಿಟ್ಟ ಇನ್‌ಸ್ಟಾಗ್ರಾಂ!

ಸದ್ಯ ಈ ನಾಯ್ಸ್ ಕ್ಯಾನ್ಸಲೇಶನ್ ಫೀಚರ್ ಆಸ್ಟ್ರೇಲಿಯಾ, ಬ್ರೆಜಿಲ್, ಭಾರತ, ಜಪಾನ್, ನ್ಯೂಜಿಲೆಂಡ್  ದೇಶಗಳಲ್ಲಿ ಹಂತ ಹಂತವಾಗಿ ಜಾರಿಗೆ ತರಲಾಗುತ್ತಿದೆ. ಕೆಲವೊಮ್ಮೆ ನಿಮ್ಮ ಜಿ-ಸೂಟ್ ಅಕೌಂಟ್‌ನಲ್ಲಿ ಇದು ಕಾಣುವುದು ವಿಳಂಬವಾಗುತ್ತಿದೆ. ಇನ್ನೊಂದೆಡೆ ಜಿ ಸೂಟ್ ಅಕೌಂಟ್ ಆಯಾ ಆರ್ಗನೈಸೇಶನ್‌ನ ಅಧೀನಕ್ಕೊಳಪಟ್ಟಿರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. 

click me!