ಟ್ವಿಟ್ಟರ್ ಬಳಸೋಕೆ ನೀವು ದುಡ್ಡುಕಟ್ಟೋ ಕಾಲ ಬರ್ತಿದೆಯಾ?

By Suvarna News  |  First Published Jul 25, 2020, 9:44 AM IST

ಯಾವುದೇ ಆಗಲಿ ಒಮ್ಮೆ ಅಭ್ಯಾಸವಾಗಿಬಿಟ್ಟರೆ ಸಾಕು ಕೊನೆಗೆ ಆ ವಸ್ತು ಇಲ್ಲದಿದ್ದರೆ ಏನೋ ಒಂದು ರೀತಿ ಚಡಪಡಿಕೆ. ಅಷ್ಟರಮಟ್ಟಿಗೆ ನಾವು ಅದಕ್ಕೆ ಅಡಿಕ್ಟ್ ಆಗಿಬಿಟ್ಟಿರುತ್ತೇವೆ. ಅದು ಉಚಿತವಾಗಿರಲಿ ಇಲ್ಲವೇ ದುಡ್ಡು ಕೊಟ್ಟು ಬಳಸುವುದಿರಲಿ. ಈಗ ಈ ಅಂಶದ ಲಾಭ ಪಡೆಯಲು ಹೆಸರಾಂತ ಟೆಕ್ ದೈತ್ಯ ಕಂಪನಿ ಟ್ವಿಟ್ಟರ್ ಮುಂದಾಗಿದೆಯೇ ಎಂಬ ಅನುಮಾನ ಮೂಡಿದೆ. ಕಾರಣ, ಈ ಸಂಸ್ಥೆ ಈಗ ಪೇಯ್ಡ್ ಸರ್ವಿಸ್‌ನತ್ತ ದೃಷ್ಟಿ ನೆಟ್ಟಿದೆ. ಇದಕ್ಕೋಸ್ಕರ ಈಗಾಗಲೇ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಬಗ್ಗೆ ಟ್ವಿಟ್ಟರ್ ಸಿಇಒ ಏನು ಹೇಳಿದ್ದಾರೆ? ಸದ್ಯ ಯಾವ ಪರಿಸ್ಥಿತಿ ಇದೆ ಎಂಬಿತ್ಯಾದಿಗಳ ಬಗ್ಗೆ ನೋಡೋಣ...


ಈಗಾಗಲೇ ವಿಶ್ವದ ಕೋಟ್ಯಂತರ ಬಳಕೆದಾರರ ಮನಗೆದ್ದಿರುವ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್ ದೊಡ್ಡ ಶಾಕ್ ಕೊಡಲು ಮುಂದಾಗಿದೆ. ಅದು ತನ್ನ ಬಳಕೆದಾರರಿಗೆ ಪೇಯ್ಡ್ ಸರ್ವಿಸ್ ಕೊಡುವ ಬಗ್ಗೆ ಚಿಂತನೆ ಮಾಡಿದ್ದು, ಈ ಸಂಬಂಧ ಪರೀಕ್ಷಾರ್ಥ ಸೇವೆ ಕೊಡುವ ನಿಟ್ಟಿನಲ್ಲಿ ಯೋಜನೆಗಳು ನಡೆಯುತ್ತಿವೆ ಎಂದು ಟ್ವಿಟ್ಟರ್‌ನ ಅಧಿಕೃತ ಮೂಲಗಳು ಹೇಳಿವೆ. ಹಾಗಂತ ಎಲ್ಲ ಬಳಕೆದಾರರೂ ದುಡ್ಡು ಕೊಟ್ಟು ಬಳಸಬೇಕೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. 

ಟ್ವಿಟ್ಟರ್ ಸಿಇಒ ಜಾಕ್ ಡೋರ್ಸೆ ಅವರಿಗೆ ಇಂಥ ಹೊಸ ಚಿಂತನೆ ಮೂಡಿದ್ದು, ಅವರೂ ಸಹ ಇದು ಚಿಂತನಾ ಮಟ್ಟದಲ್ಲಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಕಂಪನಿಯ ಸಿಇಒ ಹೇಳುತ್ತಿದ್ದಾರೆಂದರೆ ಈ ಬಗ್ಗೆ ತುಸು ದೃಷ್ಟಿ ಹರಿಸುವುದು ಸೂಕ್ತ. ಈ ಮೂಲಕ ಟೆಕ್ ದೈತ್ಯ ಕಂಪನಿಯು ಸಾಮಾಜಿಕ ಜಾಲತಾಣಗಳ ವೇದಿಕೆಯಲ್ಲಿ ಹೊಸ ಪಥವನ್ನು ಹಾಕಲಿದೆಯೇ ಎಂಬುದು ಟೆಕ್ ವಿಶ್ಲೇಷಕರ ಪ್ರಶ್ನೆಯಾಗಿದೆ.



ಇದನ್ನು ಓದಿ: ಟಿಕ್‌ಟಾಕ್ ಗೆ ಪರ್ಯಾಯವಾಗಿ ರೀಲ್ಸ್ ಬಿಟ್ಟ ಇನ್‌ಸ್ಟಾಗ್ರಾಂ!

“ಸಂಸ್ಥೆ ಹೆಚ್ಚಿನ ಸಮಯ ಬಾಳಬೇಕೆಂದರೆ ಆದಾಯದ ಮೂಲದ ಅವಶ್ಯಕತೆ ಇರುತ್ತದೆ. ಈ ನಿಟ್ಟಿನಲ್ಲಿ ನಾವು ಹೆಚ್ಚು ಕೇಂದ್ರೀಕರಿಸಿದ್ದು, ಆದಾಯದ ಮೂಲಗಳತ್ತ ಗಮನಹರಿಸುವುದು ಅನಿವಾರ್ಯವಾಗಿದೆ. ಹೀಗಾಗಿ ವಿವಿಧ ಮಾರ್ಗಗಳತ್ತ ದೃಷ್ಟಿ ನೆಟ್ಟಿದ್ದೇವೆ. ಈ ಮೂಲಕ ನಮ್ಮ ಜಾಹೀರಾರು ವ್ಯವಹಾರಕ್ಕೂ ಪೂರಕವಾಗಿ ಬಳಸಿಕೊಳ್ಳಬೇಕಿದೆ. ಹೀಗಾಗಿ ಚಂದಾದಾರಿಕೆಯತ್ತ ಗಮನಹರಿಸುತ್ತಿದ್ದೇವೆ” ಎಂದು ಟ್ವಿಟ್ಟರ್ ಸಿಇಒ ಹೇಳಿಕೆ ನೀಡಿದ್ದಾರೆ.

ಈಗಾಗಲೇ ಅನೇಕ ಹೊಸ ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಿರುವ ಟ್ವಿಟ್ಟರ್, ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಮುಂದಾಗುತ್ತಿವೆ. ತೀರಾ ಇತ್ತೀಚೆಗೆ ವಾಯ್ಸ್ ಟ್ವೀಟ್ ಅನ್ನು ಪರಿಚಯಿಸುವ ಮೂಲಕ ಬಳಕೆದಾರ ಸ್ನೇಹಿಯಾಗುವತ್ತ ಹೆಜ್ಜೆ ಹಾಕಿತ್ತು. ಈಗ ಎಲ್ಲ ಸೇವೆಗೂ ಬೆಲೆ ಎಂಬ ನಿಟ್ಟಿನಲ್ಲಿ ಚಿಂತನೆ ಮಾಡುತ್ತಿದೆ.

Tap to resize

Latest Videos



ಉಚಿತ ಸೇವೆಗೆ ಸದ್ಯಕ್ಕೆ ಸಮಸ್ಯೆ ಇಲ್ಲ
ಬಳಕೆದಾರರು ಒಮ್ಮೆಲೆ ಗಾಬರಿ ಬೀಳಬೇಕಿಲ್ಲ. ಸದ್ಯ ಏನೂ ಚಂದಾದಾರರಾಗಿ ಸೇವೆ ಪಡೆಯಬೇಕು ಎಂಬ ನಿಯಮವನ್ನು ಹೇರಿಲ್ಲ. ಇದಿನ್ನೂ ಚಿಂತನಾ ಹಂತದಲ್ಲಿದೆಯಷ್ಟೇ. ಮೊದಲು ಈ ಬಗ್ಗೆ ಸಂಪೂರ್ಣ ರೂಪುರೇಷೆ ಸಿದ್ಧಪಡಿಸಿ, ಬಳಿಕ ಪ್ರಾಯೋಗಿಕವಾಗಿ ಜಾರಿಗೆ ತರಬೇಕು. ಬಳಿಕ ಇದನ್ನು ಜಗತ್ತಿನಾದ್ಯಂತ ಇರುವ ಟ್ವಿಟ್ಟರ್ ಬಳಕೆದಾರರು ಒಪ್ಪಿಕೊಳ್ಳಬೇಕು. ಅವರು ಹಣ ಕಟ್ಟಿ ಟ್ವಿಟ್ಟರ್ ಬಳಸಲು ಮುಂದಾದರೆ ಮಾತ್ರ ಇವರ ಪ್ಲ್ಯಾನ್ ಯಶಸ್ಸು ಕಾಣುತ್ತದೆ. ಇದು ಪೈಪೋಟಿಗಳ ಯುಗವಾಗಿದ್ದರಿಂದ ಟ್ವಿಟ್ಟರ್ ರೀತಿ ಇನ್ನೊಂದು ಮೈಕ್ರೋ ಬ್ಲಾಗಿಂಗ್ ಸೈಟ್ ಹುಟ್ಟಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನುವ ಚರ್ಚೆಗಳೂ ನಡೆದಿವೆ. 

ಇದನ್ನು ಓದಿ: ನಿಮ್ಮ ಫೇಸ್ಬುಕ್ ಲಾಗಿನ್ ವಿವರ ಕದಿಯುವ ಈ ಆ್ಯಪ್ ಡಿಲೀಟ್ ಮಾಡಿ..!

ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ
ಪೇಯ್ಡ್ ಸರ್ವಿಸ್ ಯಾವ ರೀತಿ ಇದೆ ಎಂಬ ಬಗ್ಗೆ ಇನ್ನೂ ಟ್ವಿಟ್ಟರ್ ಗುಟ್ಟುಬಿಟ್ಟುಕೊಟ್ಟಿಲ್ಲ. ಈಗಿರುವ ಫೀಚರ್‌ಗಳನ್ನೇ ದುಡ್ಡು ಕಟ್ಟಿ ಪಡೆಯಬೇಕೇ? ಅಥವಾ ಇವುಗಳ ಹೊರತಾಗಿ ಎಕ್ಸ್‌ಕ್ಲೂಸಿವ್ ಆಗಿ ಬೇರೆ ಸೇವೆಗಳನ್ನು ಪರಿಚಯಿಸಿ ಅದಕ್ಕೆ ಮಾತ್ರ ಹಣ ಕಟ್ಟಿಸಿಕೊಳ್ಳಲಿದೆಯೇ? ಇಲ್ಲವೇ ಅದು ಜಾಹೀರಾತುರಹಿತ ಸೇವೆ ಆಗಿರಲಿದೆಯೇ? ಎಷ್ಟು ಹಣ ಪಾವತಿ ಮಾಡಬೇಕು? ಎಂಬಿತ್ಯಾದಿ ಯಾವ ಮಾಹಿತಿಗಳೂ ಇನ್ನೂ ಹೊರಬಿದ್ದಿಲ್ಲ. ಹೀಗಾಗಿ ಸ್ಪಷ್ಟತೆ ಇಲ್ಲದಿರುವುದರಿಂದ ಸದ್ಯಕ್ಕಂತೂ ಯಥಾಸ್ಥಿತಿ ಮುಂದುವರಿಯಲಿದೆ.

ಅಖಾಡಕ್ಕೆ ಇಳಿದಿದೆ ಟ್ವಿಟ್ಟರ್ ಕಂಪನಿ
ಇಲ್ಲಿ ಟ್ವಿಟ್ಟರ್ ಸಿಇಒ ಸುಮ್ಮನೆ ಹೇಳಿಕೆಯೊಂದನ್ನು ಹೊರಹಾಕಿಲ್ಲ. ಇದಕ್ಕೆ ಈಗಾಗಲೇ ಸಾಕಷ್ಟು ಪೂರ್ವಸಿದ್ಧತೆಗಳೂ ನಡೆದಿವೆ. ಕಳೆದ ತಿಂಗಳಷ್ಟೇ ಪೇಯ್ಡ್ ಸರ್ವಿಸ್ ಅನುಷ್ಠಾನ ಹಾಗೂ ಸಾಧಕ-ಬಾಧಕಗಳ ಬಗ್ಗೆ ತಿಳಿದುಕೊಳ್ಳಲು ಒಂದು ಸಮಿತಿಯೊಂದನ್ನು ಸಂಸ್ಥೆ ನೇಮಿಸಿದೆ. ಈ ಸಮಿತಿಯಿಂದ ಕೆಲವು ಮಂದಿಯನ್ನು ನೌಕರಿಗೂ ತೆಗೆದುಕೊಳ್ಳಲಾಗಿದೆ. ಈ ತಂಡದ ಮೂಲಕ ಅಧ್ಯಯನ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಇಲ್ಲಿ ಉಂಟಾಗುವ ಅಭಿಪ್ರಾಯಗಳ ಮೇಲೆ ಮುಂದಿನ ನಿರ್ಧಾರ ನಿಂತಿದೆ ಎನ್ನಲಾಗಿದೆ.

ಇದನ್ನು ಓದಿ: ಆ್ಯಂಡ್ರಾಯ್ಡ್ ಫೋನ್‌ನಲ್ಲಿ 10 ಫನ್ನಿ ಕೀಬೋರ್ಡ್ ಆ್ಯಪ್‌ಗಳು

ಆದಾಯದಲ್ಲಿ ಭಾರೀ ಇಳಿಕೆ
ಟ್ಟಿಟ್ಟರ್ ಆದಾಯ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಲೇ ಇದೆ. ಈಗ ಕಂಪನಿಯ ಎರಡನೇ ತ್ರೈಮಾಸಿಕ ವರದಿ ಬಿಡುಗಡೆಗೊಂಡಿದ್ದು, ಒಟ್ಟಾರೆ ಆದಾಯ 683 ಮಿಲಿಯನ್ ಡಾಲರ್ ಎಂದು ಘೋಷಿಸಿದೆ. ಅಂದರೆ ವರ್ಷದಿಂದ ವರ್ಷಕ್ಕೆ ಶೇಕಡಾ 19ರಷ್ಟು ಇಳಿಕೆಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನೂ ಜಾಹೀರಾತಿನಿಂದ ಒಟ್ಟಾರೆ 562 ಮಿಲಿಯನ್ ಡಾಲರ್ ಆದಾಯ ಬಂದಿದ್ದು, ಇದೂ ಸಹ ಶೇ.23 ರಿಂದ ಶೇ. 22ರಷ್ಟು ಇಳಿಕೆ ಕಂಡಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದೇ ಕಾರಣಕ್ಕಾಗಿಯೇ ಪರ್ಯಾಯ ಆದಾಯದತ್ತ ಮುಖ ಮಾಡಿದೆ ಎಂದು ಹೇಳಲಾಗುತ್ತಿದೆ. 

click me!