BharOS: ಬಂದಿದೆ ಮೊಬೈಲ್‌ಗೆ ದೇಶಿ ಆಪರೇಟಿಂಗ್‌ ಸಿಸ್ಟಂ ‘ಭರೋಸ್‌’; ಆ್ಯಂಡ್ರಾಯ್ಡ್‌, ಐಒಎಸ್‌ಗೆ ಪರ್ಯಾಯ ವ್ಯವಸ್ಥೆ

By Kannadaprabha NewsFirst Published Jan 25, 2023, 9:21 AM IST
Highlights

ಮೊಬೈಲ್‌ಗೆ ದೇಶಿ ಆಪರೇಟಿಂಗ್‌ ಸಿಸ್ಟಂ ‘ಭರೋಸ್‌’ ಕಾಲಿಟ್ಟಿದ್ದು, ಯಶಸ್ವಿ ಪರೀಕ್ಷೆ ಮಾಡಲಾಗಿದೆ. ಆ್ಯಂಡ್ರಾಯ್ಡ್‌, ಐಒಎಸ್‌ಗೆ ಪರ್ಯಾಯ ವ್ಯವಸ್ಥೆ ದೊರಕಿದೆ. ಇದು ಸ್ವದೇಶಿ, ವಿಶ್ವಾಸಾರ್ಹ, ಆತ್ಮನಿರ್ಭರವಾಗಿದ್ದು, ಸುರಕ್ಷತೆಯ ಹೆಚ್ಚಿನ ಭರವಸೆ ನೀಡಿದೆ. ಈ ಬಗ್ಗೆ ಪರಿಶೀಲನೆ ನಡೆಸಿದ ಕೇಂದ್ರ ಸಚಿವರು ಹರ್ಷ ವ್ಯಕ್ತಪಡಿಸಿದ್ದಾರೆ. 

ನವದೆಹಲಿ (ಜನವರಿ 25,2023): ಆತ್ಮನಿರ್ಭರ ಭಾರತದ ಪರಿಕಲ್ಪನೆಯಲ್ಲಿ ಮತ್ತೊಂದು ಬೃಹತ್‌ ಹೆಜ್ಜೆ ಇಟ್ಟಿರುವ ಭಾರತ ಇದೀಗ ಗೂಗಲ್‌ನ ಆ್ಯಂಡ್ರಾಯ್ಡ್‌ ಮತ್ತು ಆ್ಯಪಲ್‌ ಐಒಎಸ್‌ ಮಾದರಿಯಲ್ಲಿ ತನ್ನದೇ ಆದ ಮೊಬೈಲ್‌ ಆಪರೇಟಿಂಗ್‌ ಸಿಸ್ಟಮ್‌ ಅನ್ನು ಅವಿಷ್ಕರಿಸಿದೆ. ಇದಕ್ಕೆ ‘ಭರೋಸ್‌’ ಎಂದು ಈ ಆಪರೇಟಿಂಗ್‌ ಸಿಸ್ಟಂಗೆ ಹೆಸರಿಡಲಾಗಿದೆ. ಕೇಂದ್ರ ಸಂವಹನ, ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಮಂಗಳವಾರ, ಕೇಂದ್ರದ ಸಹಯೋಗದಲ್ಲಿ ಜಂಡ್‌-ಕೆ ಎಂಬ ಸ್ಟಾರ್ಟಪ್‌ ಕಂಪನಿ ಹಾಗೂ ಮದ್ರಾಸ್‌ ಐಐಟಿಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ‘ಭರೋಸ್‌’ ಆಪರೇಟಿಂಗ್‌ ಸಿಸ್ಟಂ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದರು.

ಈ ಬಗ್ಗೆ ಹೇಳಿಕೆ ನೀಡಿರುವ ಧರ್ಮೇಂದ್ರ ಪ್ರಧಾನ್‌ (Dharmendra Pradhan), ‘8 ವರ್ಷಗಳ ಹಿಂದೆ ನಮ್ಮ ಪ್ರಧಾನಿ ನರೇಂದ್ರ ಮೋದಿ, ‘ಡಿಜಿಟಲ್ ಇಂಡಿಯಾ’ (Digital India) ಬಗ್ಗೆ ಮೊದಲ ಬಾರಿಗೆ ಮಾತನಾಡಿದಾಗ, ನಮ್ಮ ಕೆಲವು ಸ್ನೇಹಿತರು ಅವರನ್ನು ಅಪಹಾಸ್ಯ ಮಾಡಿದರು. ಆದರೆ ಇಂದು ದೇಶದ ತಂತ್ರಜ್ಞರು (Technologists), ನವೋದ್ಯಮಿಗಳು (Innovators), ಉದ್ಯಮಗಳು (businesses) ಮತ್ತು ನೀತಿ ನಿರೂಪಕರು (policy makers) ಹಾಗೂ ಶೈಕ್ಷಣಿಕ ಸಂಸ್ಥೆಗಳು (Academic Institutions) 8 ವರ್ಷಗಳ ನಂತರ ಅವರ ದೃಷ್ಟಿಕೋನವನ್ನು ಒಪ್ಪಿಕೊಂಡಿದ್ದಾರೆ’ ಎಂದು ಹರ್ಷಿಸಿದ್ದಾರೆ.

ಇದನ್ನು ಓದಿ: ನೆಮೊ ಆ್ಯಪ್ ಬಿಡುಗಡೆ ಮಾಡಿದ ಮಹೀಂದ್ರ ಎಲೆಕ್ಟ್ರಿಕ್ ಮೊಬಿಲಿಟಿ!

ಏನಿದು ಭರೋಸ್‌?
ಇದು ಹೊಸ ಮೊಬೈಲ್ ಆಪರೇಟಿಂಗ್‌ ಸಿಸ್ಟಮ್‌. ಈವರೆಗೆ ಜಗತ್ತಿನಾದ್ಯಂತ ಬಹುತೇಕ ಆಂಡ್ರಾಯ್ಡ್‌ ಮತ್ತು ಐಒಎಸ್‌ ಆಪರೇಟಿಂಗ್‌ ಸಿಸ್ಟಂ ಮಾತ್ರ ಬಳಕೆಯಾಗುತ್ತಿದೆ. ಇವೆಲ್ಲ ವಿದೇಶಿ ಆಪರೇಟಿಂಗ್‌ ಸಿಸ್ಟಂಗಳು. ಇವುಗಳನ್ನು ಬಳಸುವವರು ಅವುಗಳು ಷರತ್ತಿಗೆ ಒಪ್ಪಲೇಬೇಕು. ಇಲ್ಲದೆ ಹೋದಲ್ಲಿ ಅವುಗಳಿಗೆ ಹೆಚ್ಚಿನ ಶುಲ್ಕ ಕಟ್ಟಬೇಕು. ಇದಕ್ಕೆ ಪರ್ಯಾಯವಾಗಿ ದೇಶಿ ನಿರ್ಮಿತ ‘ಭರೋಸ್‌’ ಆಪರೇಟಿಂಗ್‌ ಸಿಸ್ಟಂ ಬಂದಿದೆ. ಇದು ಉಚಿತ.

ಭರೋಸ್‌ ನಿರ್ಮಾತೃ ಯಾರು?
ಭರೋಸ್‌ ಮೊಬೈಲ್‌ ಆಪರೇಟಿಂಗ್‌ ಸಿಸ್ಟಂ ಅನ್ನು ಭಾರತ ಸರ್ಕಾರದ ಧನಸಹಾಯದಲ್ಲಿ ಜಂಡ್‌ಕೆ ಆಪರೇಶನ್‌ ಪ್ರೈವೇಟ್‌ ಲಿ. (ಜಂಡ್‌-ಕಾಫ್ಸ್‌) ಸ್ಟಾರ್ಪಪ್‌ ಕಂಪನಿ ಇದನ್ನು ಸಿದ್ಧಪಡಿಸಿದೆ. ಇದಕ್ಕೆ ಐಐಟಿ-ಮದ್ರಾಸ್‌ ಸಹಯೋಗ ನೀಡಿದೆ. ಇದು ಸರ್ಕಾರಿ ಮತ್ತು ಸಾರ್ವಜನಿಕ ವ್ಯವಸ್ಥೆಗಳಲ್ಲಿ ಬಳಸಲು ಉಚಿತವಾಗಿದೆ.

ಇದನ್ನೂ ಓದಿ: ದಾವಣಗೆರೆ, ಶಿವಮೊಗ್ಗ ಸೇರಿ ಕರ್ನಾಟಕದ 5 ನಗರದಲ್ಲಿ ಜಿಯೋ 5ಜಿ ಸೇವೆ!

ಭರೋಸ್‌ ವೈಶಿಷ್ಟ್ಯ ಏನು?
ಈಗಿರುವ ಮೊಬೈಲ್‌ ಆಪರೇಟಿಂಗ್‌ ಸಿಸ್ಟಂಗಳಲ್ಲಿ ಕೆಲವು ಡೀಫಾಲ್ಟ್‌ ಆ್ಯಪ್‌ಗಳು ಇರುತ್ತವೆ. ಆ ಆ್ಯಪ್‌ಗಳ ಬಗ್ಗೆ ಬಳಕೆದಾರನಿಗೆ ಗೊತ್ತಿರದೇ ಇದ್ದರೂ, ಅವುಗಳನ್ನು ಆತ ಕಡ್ಡಾಯವಾಗಿ ಸ್ವೀಕರಿಸಬೇಕಾಗುತ್ತದೆ. ಆದರೆ ‘ಭರೋಸ್‌’ ಆಪರೇಟಿಂಗ್‌ ಸಿಸ್ಟಂನಲ್ಲಿ ಇಂಥ ಯಾವುದೇ ಡೀಫಾಲ್ಟ್‌ ಆ್ಯಪ್‌ಗಳಿಲ್ಲ. ಇದರರ್ಥ, ತಮಗೆ ಗೊತ್ತಿಲ್ಲದ ಅಥವಾ ವಿಶ್ವಾಸಾರ್ಹ ಎನ್ನಿಸದ ಆ್ಯಪ್‌ಗಳನ್ನು ಆತ ಕಡ್ಡಾಯವಾಗಿ ತನ್ನ ಮೊಬೈಲ್‌ನಲ್ಲಿ ಸ್ವೀಕರಿಸಲೇಬೇಕು ಎಂದಿಲ್ಲ. ಬಳಕೆದಾರನು ವಿಶ್ವಾಸ ಹೊಂದಿದ ಆ್ಯಪ್‌ಗಳನ್ನು ಮಾತ್ರ ಹೊಂದುವಂತಾಗಲು ‘ಓನ್ಲಿ ಅಲೋ ಆ್ಯಫ್ಸ್‌’ ಎಂಬ ಫೀಚರ್‌ ಇರುತ್ತದೆ. ಅವುಗಳನ್ನು ಮಾತ್ರ ಆತ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

‘ಭರೋಸ್‌’ ಬಲು ಸುರಕ್ಷಿತ
‘ಭರೋಸ್‌’ ಸಿಸ್ಟಂನಲ್ಲಿ ‘ನೇಟಿವ್‌ ಓವರ್‌ ದ ಏರ್‌’ (ನೋಟಾ) ಎಂಬ ಅಪ್‌ಡೇಟಿಂಗ್‌ ವ್ಯವಸ್ಥೆ ಇರುತ್ತದೆ. ನೋಟಾ ಅಪ್‌ಡೇಟ್‌ಗಳು ಸ್ವಯಂಚಾಲಿತವಾಗಿ ಡೌನ್‌ಲೋಡ್‌ ಆಗಿ ಮೊಬೈಲ್‌ನಲ್ಲಿ ಇನ್‌ಸ್ಟಾಲ್‌ ಆಗುತ್ತವೆ. ಇದರಿಂದ ಬಳಕೆದಾರನು ಮ್ಯಾನ್ಯುವಲ್‌ ವಿಧಾನದಲ್ಲಿ ಅಪ್‌ಡೇಟ್‌ ಮಾಡುವ ಅವಶ್ಯಕತೆ ಇರದು. ಇದು ಹೊಸ ಸೆಕ್ಯುರಿಟಿ ಫೀಚರ್‌ ಹಾಗೂ ವೈರಸ್‌ ನಿರೋಧಕ ಹೊಸ ಆಪರೇಟಿಂಗ್‌ ಸಿಸ್ಟಂ ವರ್ಷನ್‌ನಲ್ಲಿ ಮೊಬೈಲ್‌ ಸಾಧನ ಇರುವಂತೆ ನೋಡಿಕೊಳ್ಳುತ್ತದೆ. ಮೊಬೈಲ್‌ ಸುರಕ್ಷಿತವಾಗಿರುತ್ತದೆ.

ಇದನ್ನೂ ಓದಿ: ಗೂಗಲ್‌ನಿಂದ 12,000 ಉದ್ಯೋಗಿಗಳ ಕಡಿತ, ಸಿಇಒ ಸುಂದರ್ ಪಿಚೈ ಭಾವುಕ ಸಂದೇಶ!

ಸದ್ಯ ಸರ್ಕಾರಿ ಬಳಕೆಗೆ
ಮೊದಲ ಹಂತದಲ್ಲಿ ಸರ್ಕಾರದ ಸೂಕ್ಷ್ಮ ಮಾಹಿತಿಗಳನ್ನು ನಿರ್ವಹಣೆ ಮಾಡುವ ಅಧಿಕಾರಿಗಳ ಮೊಬೈಲ್‌ಗಳಿಗೆ ಮಾತ್ರ ಇದನ್ನು ಅಳವಡಿಸಲಾಗಿದೆ. ಹಂತಹಂತವಾಗಿ ಇದನ್ನು ಎಲ್ಲರಿಗೂ ವಿಸ್ತರಿಸಲು ಉದ್ದೇಶಿಸಲಾಗಿದೆ.

click me!