Weekly Horoscope: ಮೇಷಕ್ಕೆ ಸವಾಲಿನ ವಾರ, ಸಿಂಹಕ್ಕೆ ಜವಾಬ್ದಾರಿಗಳ ಭಾರ

By Suvarna News  |  First Published Apr 24, 2022, 10:35 AM IST

ತಾರೀಖು 24ರಿಂದ 30 ಏಪ್ರಿಲ್ 2022ರವರೆಗೆ ನಿಮ್ಮ ಭವಿಷ್ಯ ಹೇಗಿದೆ?
ನಿಮ್ಮ ರಾಶಿಗೆ ಈ ವಾರದ ಫಲ ಏನಿದೆ ನೋಡಿ
ಈ ರಾಶಿಗೆ ಹಳೆಯ ಪ್ರೀತಿ ಮತ್ತೆ ಚಿಗುರಲಿದೆ..


ಮೇಷ(Aries)
ಈ ವಾರ ಸವಾಲುಗಳು ಹೆಚ್ಚು. ಸ್ವಾತಂತ್ರ್ಯದಿಂದ ಇರಬೇಕು ಎಂಬ ಯೋಚನೆಯಿಂದಲೇ ಸಮಸ್ಯೆ ಉದ್ಭವಿಸಬಹುದು. ಈ ವಾರದ ಕೊನೆಯಲ್ಲಿ ಬರುವ ಸೂರ್ಯಗ್ರಹಣ ನಿಮ್ಮ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ. ಹಣಕಾಸಿನ ವಿಚಾರಗಳಲ್ಲಿ ಏರಿಳಿತ ಉಂಟಾಗಬಹುದು. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಜೊತೆಗೆ ನಿಮ್ಮ ಸ್ಥಾನಮಾನದಲ್ಲಿ ಬದಲಾವಣೆಯಾಗಲಿದೆ. ಮಾನಸಿಕ ಸಮಸ್ಯೆಗಳೂ ಬಾಧಿಸಬಹುದು.

ವೃಷಭ(Taurus)
ಈ ವಾರ ಸವಾಲು ಅನಿಸುವ ಕೆಲಸಕ್ಕೆ ಕೈ ಹಾಕದಿದ್ದರೆ ಕ್ಷೇಮ. ಇರುವ ಕೆಲಸವನ್ನೇ ಶ್ರದ್ಧೆಯಿಂದ ಮಾಡಿದರೆ ಒಳ್ಳೆಯದು. ಬದಲಾವಣೆ ಅಂಥಾ ಉತ್ತಮ ಫಲ ಕೊಡಲಾರದು. ಜೊತೆಗೆ ಆತ್ಮೀಯರು ದೂರ ಹೋಗುವುದರಿಂದ ಮನಸ್ಸಿಗೆ ಬೇಸರ ಉಂಟಾಗಬಹುದು. ಮಕ್ಕಳ ಕಾರಣಕ್ಕೆ ಕೆಲವೊಂದು ವಿಚಾರಗಳಲ್ಲಿ ಸಂಕಷ್ಟಕ್ಕೆ ಸಿಲುಕಬಹುದು. ಹಣಕಾಸಿನ ವಿಚಾರದಲ್ಲಿ ಮಿಶ್ರಫಲ. ಸಹನೆಯಿಂದ ವರ್ತಿಸುವುದು ಬಹಳ ಮುಖ್ಯ.

Tap to resize

Latest Videos

ಮಿಥುನ(Gemini)
ನೀವಂದುಕೊಂಡ ಕೆಲಸ ಕಾರ್ಯಗಳು ದಿಕ್ಕು ಬದಲಿಸಬಹುದು. ಈ ಬದಲಾವಣೆಯನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಲೇಬೇಕಾದ ಒತ್ತಡಕ್ಕೆ ನೀವು ಒಳಗಾಗಬಹುದು. ಆದರೆ ಬದಲಾವಣೆ ಸಹಜ ನಿಯಮ ಅಂದುಕೊಂಡು ಮುಂದುವರಿಯಿರಿ. ಜೊತೆಗೆ ನಿಮ್ಮ ಸಾಮರ್ಥ್ಯ ಏನು ಅನ್ನೋದು ತಿಳಿದಿರಲಿ. ಆಗದ ಕೆಲಸಕ್ಕೆ ಕೈ ಹಾಕುವುದರಿಂದ ಪ್ರಯೋಜನವಿಲ್ಲ. ಹಳೆಯ ನೋವಿಗೆ ಚಿಕಿತ್ಸೆ ಪಡೆಯುವಿರಿ.

ಕಟಕ(Cancer)
ನಿಮ್ಮ ಸ್ವಂತ ಪ್ರಯತ್ನದಿಂದ ನೀವು ಹೊಸ ಉತ್ತುಂಗ ತಲುಪಲಿದ್ದೀರಿ. ಆದರೆ ವಾರದ ಕೊನೆಯಲ್ಲಿ ವೈಯುಕ್ತಿಕವಾಗಿ ಒಂದಿಷ್ಟು ಸಮಸ್ಯೆ ಉಂಟಾಗಬಹುದು. ಇದರಿಂದ ಮನಸ್ಸಿಗೆ ನೋವು, ಅಸ್ಥಿರತೆ ಉಂಟಾಗಬಹುದು. ಆತ್ಮೀಯರು, ಸಹೋದ್ಯೋಗಿಗಳು ನಿಮ್ಮ ನೆರವು ಕೇಳಿ ಬಂದರೆ ಮನಃಪೂರ್ವಕವಾಗಿ ಸಲಹೆ ನೀಡಿ. ನಿಮ್ಮ ಮಾತಿಗೆ ಹೆಚ್ಚಿನ ಬಲ ಬರಬಹುದು. ಇದರಿಂದ ನಿಮ್ಮ ಪ್ರಭಾವ ಹೆಚ್ಚಬಹುದು.

Solar eclipse: ಗ್ರಹಣ ಕಾಲದಲ್ಲಿ ಗರ್ಭಿಣಿಯರು ಹೇಗಿರಬೇಕು...?

ಸಿಂಹ(Leo)
ಹೊಸ ಜವಾಬ್ದಾರಿಗಳು ಹೆಗಲೇರಬಹುದು ಅಥವಾ ಈಗಿರುವ ಜವಾಬ್ದಾರಿಗಳಲ್ಲಿ ಅನಿರೀಕ್ಷಿತ ಬದಲಾವಣೆಗಳಾಗಬಹುದು. ಈಗಿರುವುದಕ್ಕಿಂತ ಮೇಲಿನ ಹಂತಕ್ಕೆ ಹೋಗುತ್ತೀರಿ. ಆದರೆ ಈ ಅನಿರೀಕ್ಷಿತ ಬದಲಾವಣೆ ನಿಮ್ಮಲ್ಲಿ ಆತಂಕ, ಆತುರ ಇತ್ಯಾದಿ ಹುಟ್ಟು ಹಾಕಬಹುದು. ಪ್ರಜ್ಞಾಪೂರ್ವಕವಾಗಿ ಶ್ರದ್ಧೆಯಿಂದ ನಿಭಾಯಿಸಿ. ಕೆಲಸದಲ್ಲಿ ಬಡ್ತಿ ಸಿಗಬಹುದು. ಸ್ನೇಹಿತರೆಲ್ಲ ಜೊತೆಯಾಗಿ ಖುಷಿಯಿಂದ ಕಾಲ ಕಳೆಯಬಹುದು.

ಕನ್ಯಾ(Virgo)
ಐಹಿಕ ಬದುಕಿನ ಬಗ್ಗೆ ಕೊಂಚ ವೈರಾಗ್ಯ ಉಂಟಾಗಬಹುದು. ಮನಸ್ಸು ಅಧ್ಯಾತ್ಮದತ್ತ ವಾಲಬಹುದು. ವಾರದ ಆರಂಭದಲ್ಲಿ ಶೈಕ್ಷಣಿಕವಾಗಿ ಗೊಂದಲ, ಏಕಾಗ್ರತೆಯ ಕೊರತೆ ಅನುಭವಿಸಿದರೂ ವಾರದ ಕೊನೆಗೆ ನೀವು ಹೊಸ ವಿಷಯ ಕಲಿಯುವಿರಿ. ಶಿಕ್ಷಣಕ್ಕಾಗಿ ಪ್ರವಾಸ ಮಾಡಬೇಕಾಗಿ ಬರಬಹುದು. ಮನಸ್ಸಿನ ನೆಮ್ಮದಿಯೇ ನಿಮಗೆ ಮುಖ್ಯವಾಗಲಿದೆ. ಈ ಮನಸ್ಥಿತಿ ನಿಮ್ಮ ಬೆಳವಣಿಗೆಗೆ ಅಡ್ಡಿಯಾಗಬಹುದು.

ತುಲಾ(Libra)
ಆ ವ್ಯಕ್ತಿ ಹೇಗೆ ಎಂದು ಮನಸ್ಸಲ್ಲೇ ಅಳೆದು ಮಾತನಾಡುವ ಕ್ರಮದಿಂದ ಈವರೆಗೆ ಒಳ್ಳೆಯದೇ ಆಗಿರಬಹುದು. ಆದರೆ ಈ ಬಾರಿ ಇಂಥಾ ಯೋಚನೆ ಬುಡಮೇಲಾಗಬಹುದು. ಇದರಿಂದ ನಿಮಗೆ ಕೊಂಚ ಮುಜುಗರವಾದರೂ ನಿರಾಸೆಯಾಗದು. ಆರ್ಥಿಕ ಬೆಳವಣಿಗೆ ಇದೆ. ಆದರೆ ಕೆಲವೊಮ್ಮೆ ಸಮಸ್ಯೆಗಳಾದಾಗ ನೀವು ಊಹಿಸಿಯೂ ಇರದ ಜಾಗದಿಂದ ನಿಮಗೆ ಸಹಾಯ ಹರಿದು ಬರಬಹುದು. ಇದನ್ನು ಸದ್ಬಳಕೆ ಮಾಡಿ.

ವೃಶ್ಚಿಕ(Scorpio)
ನೀವು ಮಾಡುವ ಕೆಲವು ಎಡವಟ್ಟುಗಳು ಜೊತೆಗಿರುವವರಿಗೆ ನೋವು ತರಬಹುದು. ಒಂದು ವಿಚಾರದ ಬಗ್ಗೆ ಮಾತಾಗುವಾಗ ಮನಸ್ಸನ್ನು ಅಲ್ಲೇ ನೆಡಲು ಪ್ರಯತ್ನಿಸಿ. ಇಲ್ಲವಾದರೆ ನಿಮ್ಮ ತಡವರಿಕೆಯನ್ನೇ ಇತರರು ಅನಾಸಕ್ತಿ ಎಂದು ತಿಳಿಯುವ ಸಾಧ್ಯತೆ ಇದೆ. ಪ್ರೇಮ, ಪ್ರಣಯ ವಿಚಾರಗಳಲ್ಲಿ ದೊಡ್ಡ ಬದಲಾವಣೆ ಆಗಬಹುದು. ಸದ್ಯಕ್ಕೆ ಬೇರೆಯವರ ಬಗ್ಗೆ ಯೋಚಿಸುವುದು ಬಿಟ್ಟು ನಿಮಗೆ ನೀವು ಸಮಯ ನೀಡಿ.

Vastu for prosperity: ಈ ವಸ್ತುಗಳನ್ನು ಮನೆಯಲ್ಲಿಟ್ಟರೆ ಸಂಪತ್ತು ಎಂದೂ ಖಾಲಿಯಾಗೋಲ್ಲ!

ಧನು(Sagittarius)
ಸಂಬಂಧದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಮನೆಗೆ ಸಮಯ ನೀಡುವುದನ್ನು ತಪ್ಪಿಸಿದರೆ ಬದುಕಿನ ಕೆಲವು ಅಪರೂಪದ ಅನುಭವಗಳಿಂದ ವಂಚಿತರಾಗುವಿರಿ. ಮುಂದೆ ಬೇಕೆಂದರೂ ಈ ಅನುಭವಗಳು ನಿಮಗೆ ಸಿಗಲಿಕ್ಕಿಲ್ಲ. ನಿಮ್ಮ ಕೆಲಸದಲ್ಲಿ ಕೊನೆಯ ಕ್ಷಣದಲ್ಲಿ ಬದಲಾವಣೆಗಳಾಗಬಹುದು. ಬದುಕಿನ ಅಸ್ಥಿರತೆ ನಿಮ್ಮನ್ನು ಕಂಗಾಲು ಮಾಡಬಹುದು. ಧನ ಬಲವಿದೆ. ಬಂದ ಹಣವನ್ನು ಎಚ್ಚರಿಕೆಯಿಂದ ಬಳಸಿ.

ಮಕರ(Capricorn)
ನಿಮ್ಮ ಸಾಮರ್ಥ್ಯದ ಬಗ್ಗೆಯೇ ನಿಮ್ಮಲ್ಲಿ ಗೊಂದಲ ಮೂಡಬಹುದು. ವಾರಾಂತ್ಯಕ್ಕೆ ಇದೆಲ್ಲ ಸರಿ ಹೋಗಿ ಅದೃಷ್ಟದ ಬಾಗಿಲು ನಿಮಗಾಗಿ ತೆರೆಯಲಿದೆ. ಜನರ ಪ್ರೀತಿ, ಗೌರವಕ್ಕೆ ಪಾತ್ರರಾಗುವಿರಿ. ಹಳೆಯ ಪ್ರೀತಿ ಮತ್ತೆ ಅರಳಲಿದೆ. ಇದರಿಂದ ನಿಮ್ಮ ಬದುಕಿನಲ್ಲಿ ಹೊಸ ಹುಮ್ಮಸ್ಸು ಬರಲಿದೆ. ಸಮಯದ ಸದುಪಯೋಗ ಕಲಿತುಕೊಳ್ಳಿ. ಅನಗತ್ಯ ವಿಚಾರಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಮಿತ್ರರ ಜೊತೆ ಕಲಹ ಉಂಟಾಗಬಹುದು.

ಕುಂಭ(Aquarius)
ಸಹೋದರಿಯೊಂದಿಗೆ ಸಂಬಂಧ ಹೆಚ್ಚು ಆಪ್ತವಾಗಬಹುದು. ಹೊರಗಿನ ಯಾವ ವಿಚಾರಗಳೂ ನಿಮ್ಮ ಸಂಬಂಧವನ್ನು ಹಾಳು ಮಾಡಲಾರದು. ಇತರರ ಮಾತಿಗೆ ಹೆಚ್ಚು ಕಿವಿಗೊಡಬೇಡಿ. ಒಳ ಮನಸ್ಸಿಗೆ ಸರಿ ಅನಿಸಿದ್ದನ್ನೇ ಮಾಡಿ. ವಾಹನ ಚಲಾಯಿಸುವಾಗ ಎಚ್ಚರಿಕೆ ಅಗತ್ಯ. ಮನಸ್ಸಿನ ಅನೇಕ ಗೊಂದಲಗಳಿಗೆ ಈ ವಾರ ಪರಿಹಾರ ಸಿಗಲಿದೆ. ನಿಮ್ಮ ದೈವಪ್ರೀತಿ ನಿಮ್ಮನ್ನು ಕಾಯುವುದು. ಭಾವುಕತೆಯೂ ಹೆಚ್ಚಬಹುದು.

ಮೀನ(Pisces)
ಪ್ರೇಮದ ಹಳೆಯ ನೆನಪುಗಳು ಕಾಡಬಹುದು. ಇಂದಿನ ಸ್ಥಿತಿಯ ಬಗ್ಗೆ ಆತಂಕ, ನೋವು ಹೆಚ್ಚಾಗಬಹುದು. ವಾರದ ಮಧ್ಯಭಾಗದಲ್ಲಿ ಅನಿರೀಕ್ಷಿತ ಸುದ್ದಿಯೊಂದು ಎದುರಾಗಲಿದೆ. ನೆರೆಹೊರೆಯವರ ಸಹಾಯದಿಂದ ದೊಡ್ಡ ಸಮಸ್ಯೆಯೊಂದನ್ನು ಬಗೆಹರಿಸುವಿರಿ. ತಾಯಿಯ ಪ್ರೀತಿ ನಿಮ್ಮನ್ನು ಕಾಯುವುದು. ಇತರರ ಬಗ್ಗೆ ಅನಗತ್ಯ ಮಾತು ಬೇಡ. ನಿಮ್ಮ ಕೆಲಸದಲ್ಲಿ ಶ್ರದ್ಧೆ ಹೆಚ್ಚಬೇಕಿದೆ. ಧ್ಯಾನದಿಂದ ನೆಮ್ಮದಿ.

click me!