ಕನ್ನಡ ಕಟ್ಟಿದವರು:ಐಟಿ ಮಂದಿಯನ್ನು ಸಾಹಿತ್ಯದೆಡೆಗೆ ಸೆಳೆಯುತ್ತಿರುವ 'ಕಹಳೆ'!

By Kannadaprabha News  |  First Published Nov 26, 2019, 10:15 AM IST

‘ನಾನೊಬ್ಬ ಐಟಿ ಉದ್ಯೋಗಿ. ವಾರದ ಐದು ದಿನ ದುಡಿಮೆಯಲ್ಲಿ ಮುಳುಗಿರುತ್ತೇನೆ. ಉಳಿದ ಎರಡು ದಿನ ಪೇಪರ್‌ ಪೆನ್ನು ಹಿಡಿದು ಕಹಳೆಗಾಗಿ ಏನು ಮಾಡಬಹುದು ಎನ್ನುವುದನ್ನು ಯೋಚಿಸುತ್ತೇನೆ’ ಹೀಗೆ ಹೇಳಿದ್ದು ವಿನಯ್‌ ಸಜ್ಜನಾರ್‌. ಎರಡೂವರೆ ವರ್ಷದಿಂದ ಕನ್ನಡದ ‘ಕಹಳೆ’ಯನ್ನು ಮೊಳಗಿಸುತ್ತಿರುವ ಇವರು ಮತ್ತು ಇವರ ತಂಡದ ಬಸವರಾಜು, ವಾರಿಜಾ, ಅಕ್ಷಯ್‌, ರಶ್ಮಿ, ಕುಮಾರ್‌ ಸಾವಿರಮಠ, ಸುಹಾಸ್‌ ಮತ್ತು ಮದನ್‌ ಅವರು ‘ಕಹಳೆ’ ಎನ್ನುವ ಕನ್ನಡದ ವಿನೂತನ ವೇದಿಕೆಯನ್ನು ನಿರ್ಮಾಣ ಮಾಡಿಕೊಂಡು ಐಟಿಯಲ್ಲಿ ಕೆಲಸ ಮಾಡುತ್ತಿರುವ ಹುಡುಗ, ಹುಡುಗಿಯರನ್ನು ಕನ್ನಡದ ಕಡೆಗೆ, ಸಾಹಿತ್ಯದೆಡೆಗೆ ಸೆಳೆಯುತ್ತಿದ್ದಾರೆ. ಅವರ ಪ್ರಯತ್ನ ಮೆಚ್ಚುಗೆಗೆ ಅರ್ಹ.


ಕೆಂಡಪ್ರದಿ

‘2017ರ ಯುಗಾದಿ ವೇಳೆ ಕಥಾ ಸ್ಪರ್ಧೆ ಏರ್ಪಡಿಸುವುದರ ಮೂಲಕ ಕಹಳೆಯನ್ನು ಶುರು ಮಾಡಿದೆವು. ಈ ವೇಳೆ ನಮಗೆ ಸಾವಣ್ಣ ಪ್ರಕಾಶದ ಜಮೀಲ್‌ ಸಾವಣ್ಣ ಸೇರಿ ಸಾಕಷ್ಟುಮಂದಿ ಬೆಂಬಲ ನೀಡಿದರು. ಪ್ರಾರಂಭದಲ್ಲಿ ಕಥೆಗಳನ್ನು ಆಹ್ವಾನಿಸಿ ಅಗ್ರ 30 ಕತೆಗಾರರಿಗೆ ಪ್ರಮಾಣ ಪತ್ರ, ಮೊದಲ ಸ್ಥಾನಿಗೆ ಕಹಳೆ ಕತೆಗಾರ ಪ್ರಶಸ್ತಿ ನೀಡಿದೆವು. ಇಲ್ಲಿಂದ ಪ್ರಾರಂಭವಾದ ಕಹಳೆ ಇಂದು ಹತ್ತು ಹಲವು ವಿಶಿಷ್ಟರೀತಿಯ ಕಾರ್ಯಕ್ರಮಗಳನ್ನು ಮಾಡುವ ಹಂತಕ್ಕೆ ಬಂದು ಮುಟ್ಟಿದೆ’ ಎಂದು ಕಹಳೆಯ ಪ್ರಾರಂಭದ ದಿನಗಳ ಬಗ್ಗೆ ಹೇಳುತ್ತಾರೆ ವಿನಯ್‌.

Latest Videos

undefined

ಇಲ್ಲಿಂದ ಸ್ಫೂರ್ತಿ

ಐಟಿ ಉದ್ಯೋಗಿ ವಿನಯ್‌ ಅವರಿಗೆ ಕನ್ನಡ ಸಾಹಿತ್ಯದಲ್ಲಿ ಕೃಷಿ ಮಾಡುವ ತುಡಿತವಿದೆ. ಅದರಂತೆಯೇ ಕತೆ, ಕವಿತೆ ರಚನೆ ಮಾಡಿಕೊಂಡು ತೆರೆ ಮರೆಯಲ್ಲಿಯೇ ಇರುವಾಗ ಒಂದು ಕಡೆ ಕವನ ವಾಚನ ಕಾರ್ಯಕ್ರಮ ಇದೆ ಎನ್ನುವುದು ಗೊತ್ತಾಗಿ ಅಲ್ಲಿಗೆ ಹೋಗುತ್ತಾರೆ. ಆದರೆ ಅಲ್ಲಿ ಆಗಿದ್ದೇ ಬೇರೆ. ನಾವು ಕೇವಲ ಇಂಗ್ಲಿಷ್‌ ಮತ್ತು ಹಿಂದಿ ಭಾಷೆಯ ಕವನಗಳ ವಾಚನಕ್ಕೆ ಮಾತ್ರ ಅವಕಾಶ ನೀಡುತ್ತೇವೆ. ಕನ್ನಡ ಕವನಗಳ ವಾಚನಕ್ಕೆ ಅವಕಾಶ ಇಲ್ಲ ಎಂದಾಗ ವಿನಯ್‌ ಅವರಿಗೆ ಕನ್ನಡದಲ್ಲಿಯೂ ಈ ರೀತಿಯ ಕಾರ್ಯಕ್ರಮ ಮಾಡಬೇಕು ಎನ್ನುವ ಮನಸಾಗುತ್ತದೆ. ಆ ಬಯಕೆ ಅಲ್ಲಿಗೇ ನಿಲ್ಲದೇ ಕಾರ್ಯಕ್ರಮದ ಆಯೋಜಕರನ್ನು ಭೇಟಿಯಾಗಿ, ಅವರ ಕಾರ್ಯಕ್ರಮಗಳ ಸ್ವರೂಪವನ್ನು ತಿಳಿದುಕೊಂಡು ಅದನ್ನು ಕನ್ನಡದಲ್ಲಿ ಅನುಷ್ಠಾನವನ್ನೂ ಮಾಡುತ್ತಾರೆ.

ಕನ್ನಡ ಕಟ್ಟಿದವರು: ಸರ್ಕಾರಿ ಶಾಲೆಗಳಿಗೆ ಮರುಜೀವ ನೀಡಿದ ಉತ್ಸಾಹಿ ಅನಿಲ್ ಶೆಟ್ಟಿ

ಶೇ. 80 ಮಂದಿ ಐಟಿಯವರೇ

ಎರಡೂವರೆ ವರ್ಷದಿಂದ ಇಲ್ಲಿಯವರೆಗೂ ಕಹಳೆಯಲ್ಲಿ ಅತಿ ಹೆಚ್ಚಾಗಿ ತೊಡಗಿಸಿಕೊಂಡಿರುವುದು ಬೆಂಗಳೂರಿನ ಐಟಿ ಮಂದಿಯೇ. ಅವರಲ್ಲಿ ಇರುವ ಸಾಹಿತ್ಯದ ಬಗೆಗಿನ ತುಡಿತಕ್ಕೆ ಒಂದು ಸಮರ್ಥವಾದ ವೇದಿಕೆಯನ್ನು ಕೊಡುವ ಪ್ರಯತ್ನವನ್ನು ಕಹಳೆ ಮಾಡುತ್ತಾ ಬಂದಿದೆ. ವರ್ಷ ಪೂರ್ತಿ ಜಾಗೃತವಾಗಿ ಇದ್ದುಕೊಂಡು ನವೀನವಾದ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಹಿರಿಯ ಮತ್ತು ಕಿರಿಯ ಸಾಹಿತಿಗಳ ನಡುವೆ ಪ್ರೀತಿಯ ಸೇತುವೆಯೊಂದನ್ನು ಕಟ್ಟುತ್ತಲೇ ಬಂದಿದ್ದಾರೆ.

ನಮ್ಮ ಈ ಕಾರ್ಯಕ್ಕೆ ತುಂಬಾ ಮಂದಿ ಸಹಾಯ ಮಾಡಿದ್ದಾರೆ. ನಾಡಿನ ಹಿರಿಯ ಸಾಹಿತಿಗಳು ಬಂದು ಮಾರ್ಗದರ್ಶನ ಮಾಡಿದ್ದಾರೆ. ಅವರ ಮಾರ್ಗದರ್ಶನದಲ್ಲಿಯೇ ಸಾಗಿ ಬಂದ ನಾವುಗಳು ಇಂದು ಸಮಕಾಲೀನ ಯುವ ಬರಹಗಾರರ ಆಲೋಚನೆಗಳಿಗೆ ವೇದಿಕೆ ಒದಗಿಸಿಕೊಡುವ, ಅವರಲ್ಲಿರುವ ಪ್ರತಿಭೆಯನ್ನು ಹೆಕ್ಕಿ ತೆಗೆದು ಎಲ್ಲರಿಗೂ ತೋರಿಸುವ ಪ್ರಯತ್ನ ಮಾಡುತ್ತಿದ್ದೇವೆ.- ವಿನಯ್‌ ಕುಮಾರ್‌ ಸಜ್ಜನಾರ್‌, ಕಹಳೆ ಸಂಸ್ಥಾಪಕ

ಇಷ್ಟೆಲ್ಲಾ ಮಾಡುತ್ತಾರೆ

* ಪ್ರತಿ ವರ್ಷ ಯುಗಾದಿ ವೇಳೆ ಕಥಾ ಸ್ಪರ್ಧೆ ಆಯೋಚನೆ ಮಾಡಿ, 30 ಮಂದಿಗೆ ಪ್ರಶಂಸನಾ ಪತ್ರ, ಒಬ್ಬರಿಗೆ ಕಹಳೆ ಕಥಾ ಪ್ರಶಸ್ತಿ.

* ದೀಪಾವಳಿ ವೇಳೆ ಕವಿತಾ ಸ್ಪರ್ಧೆ ಮಾಡಿ 30 ಮಂದಿಗೆ ಪ್ರಶಂಸನಾ ಪತ್ರ, ಒಬ್ಬರಿಗೆ ಕಹಳೆ ಕವಿತೆ ಪ್ರಶಸ್ತಿ.

* ಐಟಿವರಿಗೆ ಹೇಗೆ ಬರೆಯಬೇಕು, ಏನು ಬರೆಯಬೇಕು ಎನ್ನುವುದನ್ನು ತಿಳಿಸಲು ಕಹಳೆ ಕಟ್ಟೆವೇದಿಕೆಯ ಮೂಲಕ ಹಿರಿಯ ಸಾಹಿತಿಗಳೊಂದಿಗೆ ಚರ್ಚೆ, ಸಂವಾದ ಕಾರ್ಯಕ್ರಮ ಏರ್ಪಡಿಸುವುದು.

ಕನ್ನಡ ಕಟ್ಟಿದವರು:ಮಕ್ಕಳಲ್ಲಿ ಕನ್ನಡಪ್ರೇಮ ಅರಳಿಸುತ್ತಿರುವ ಗುಂಗರಮಳೆ ಮುರಳಿ!

* ಕಹಳೆ ಕಾರ್ಯಾಗಾರ ಎನ್ನುವ ವೇದಿಕೆಯ ಮೂಲಕ ಸಿನಿಮಾ ಬರವಣಿಗೆ, ನಾಟಕ ರಚನೆಗಳ ಕುರಿತು ಕ್ಷೇತ್ರ ಪರಿಣಿತರಿಂದ ಸೂಕ್ತ ತರಬೇತಿ ಕೊಡಿಸುವುದು.

* ಕವಿ ದನಿ ಎನ್ನುವ ಕಾರ್ಯಕ್ರಮದ ಮೂಲಕ ತಾವೇ ಬರೆದ ಕವಿಗಳನ್ನು ಓದುವುದು, ಓದಿ ರೆಕಾರ್ಡ್‌ ಮಾಡಿ ಕಳಿಸಿಕೊಟ್ಟದ್ದನ್ನು ಸೋಷಲ್‌ ಮೀಡಿಯಾಗಳಲ್ಲಿ ಹಂಚುವ ಕಾರ್ಯ.

* ಪುಸ್ತಕ ಪ್ರೀತಿ ಎಂಬ ಪರಿಕಲ್ಪನೆಯಲ್ಲಿ ತಾವು ಓದಿದ ಪುಸ್ತಕದ ಬಗ್ಗೆ ಎರಡು ನಿಮಿಷ ಮಾತನಾಡಿ ರೆಕಾರ್ಡ್‌ ಮಾಡಿ ಕಳಿಸಿದರೆ ಅದನ್ನು ಎಲ್ಲೆಡೆ ಹಂಚುವುದು..

* ಕಹಳೆ ಕನ್ನಡ ಓಪನ್‌ ಮೈಕ್‌ ಎನ್ನುವ ಸುಂದರ ಪರಿಕಲ್ಪನೆಯಡಿಯಲ್ಲಿ ಸಾಹಿತ್ಯಕ ಮನಸ್ಸುಗಳನ್ನು ಒಂದು ಕಡೆ ಸೇರಿಸುವುದು, ಅಲ್ಲಿ ಅವರ ಪ್ರತಿಭೆಯನ್ನು ಅನಾವರಣ ಮಾಡಲು ವೇದಿಕೆ ಮಾಡಿಕೊಡುವುದು.

ಹೀಗೆ ಹೇಳುತ್ತಾ ಹೋದರೆ ಕಹಳೆ ಮಾಡುತ್ತಿರುವ ಕನ್ನಡ ಕಟ್ಟುವ ಕೆಲಸ ಬೆಳೆಯುತ್ತಾ ಹೋಗುತ್ತದೆ. ಜೊತೆಗೆ ಇಷ್ಟಕ್ಕೆ ಇವರು ಸೀಮಿತವಾಗದೇ ತಲೆಯ ತುಂಬ ಮತ್ತಷ್ಟುಭಿನ್ನ ಭಿನ್ನ ಐಡಿಯಾಗಳನ್ನು ಇಟ್ಟುಕೊಂಡು ಅದರ ಸಾಕಾರಕ್ಕೆ ಮುಂದಿನ ಹೆಜ್ಜೆಗಳನ್ನು ಇಡುತ್ತಿದ್ದಾರೆ ಕೂಡ.

ಕನ್ನಡ ಕಟ್ಟಿದವರು: ಕನ್ನಡಕ್ಕಾಗಿ ಕೈ ಎತ್ತಿದ ಮೈಸೂರಿನ ತ್ಯಾಗರಾಜ!

ಸಿನಿಮಾ, ಸಂಗೀತ, ಕ್ರೀಡೆ ಹೀಗೆ ಎಲ್ಲವನ್ನೂ ಕಲಿಸುವುದಕ್ಕೆ ಒಂದೊಂದು ಸಂಸ್ಥೆಗಳು ಇವೆ. ಆದರೆ ಬರವಣಿಗೆಯ ಕ್ರಮವನ್ನು ಹೇಳಿಕೊಡುವುದಕ್ಕಾಗಿ ಇದೇ ರೀತಿ ಒಂದು ಶಸಕ್ತ ವೇದಿಕೆ ಬೇಕಿದೆ. ಇದಕ್ಕಾಗಿ ನಾವು ನಮ್ಮಿಂದಾಗುವಷ್ಟುಪ್ರಯತ್ನವನ್ನು ಮಾಡುತ್ತಿದ್ದೇವೆ ಎನ್ನುವ ವಿನಯ್‌ ಅವರು ಯುವ ಮನಸ್ಸುಗಳಿಗೆ ಬರಹದ ಪಟ್ಟನ್ನು ಕಲಿಸುವುದಕ್ಕಾಗಿ ಒಂದು ಇನ್‌ಸ್ಟಿಟ್ಯೂಟ್‌ ಅನ್ನೇ ಕಟ್ಟಬೇಕು ಎನ್ನುವ ಕನಸಿಟ್ಟುಕೊಂಡಿದ್ದಾರೆ.

ಸೂಪರ್‌ ಮಿನಿಟ್‌ ಸಹಾಯ

ಪ್ರಾರಂಭದ ಒಂದೂವರೆ ವರ್ಷ ತನ್ನ ಸ್ವಂತ ಹಣವನ್ನು ಖರ್ಚು ಮಾಡಿ ಕಹಳೆ ಕಟ್ಟಿದ ವಿನಯ್‌ ಅವರಿಗೆ ಮುಂದೆ ನೆರವಾಗಿ ಬಂದದ್ದು ಕಲ​ರ್‍ಸ್ ಕನ್ನಡ ವಾಹಿನಿ ನಡೆಸುವ ಸೂಪರ್‌ ಮಿನಿಟ್‌ ಕಾರ್ಯಕ್ರಮ. ಹೀಗೊಂದು ಒಳ್ಳೆಯ ಕಾರ್ಯಕ್ರಮ ಮಾಡುತ್ತಿದ್ದೀರಿ, ನೀವು ಒಮ್ಮೆ ಬಂದು ಸೂಪರ್‌ ಮಿನಿಟ್‌ನಲ್ಲಿ ಭಾಗಿಯಾಗಿ ಎಂದು ಕರೆ ಬಂದಮೇಲೆ ವಿನಯ್‌ ಅಲ್ಲಿಗೆ ಹೋಗಿ ಬರೋಬ್ಬರಿ 2 ಲಕ್ಷ ರುಪಾಯಿ ಗೆದ್ದು ಬಂದಿದ್ದಾರೆ. ಹೀಗೆ ಬಂದ ಸಂಪೂರ್ಣ ಹಣವನ್ನು ಕಹಳೆಯ ಅಭಿವೃದ್ಧಿಗಾಗಿಯೇ ಮೀಸಲಿಟ್ಟಿದ್ದಾರೆ ವಿನಯ್‌.

ಕನ್ನಡ ಕಟ್ಟಿದವರು: ಗಡಿಭಾಗದಲ್ಲಿ ಕನ್ನಡದ ಕಂಪು ಹರಡಿದ ಸಿದ್ಧಸಂಸ್ಥಾನ ಮಠ!

ನನಗೆ ಉತ್ಸಾಹ ತುಂಬುವ ಗಳಿಗೆ

ಕಹಳೆ ನನ್ನ ಪಾಲಿಗೆ ಪ್ರತಿನಿತ್ಯವೂ ಉತ್ಸಾಹ ತುಂಬುವ ತಾಣ. ನಾವು ಮಾಡಿದ ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ನನಗೆ ಭಿನ್ನವಾದ ಅನುಭವಗಳಾಗಿವೆ. ಒಮ್ಮೆ ಕರ್ನಾಟಕದಿಂದ ಮುಂಬೈಗೆ ಮದುವೆಯಾಗಿ ಹೋಗಿದ್ದ ಹೆಣ್ಣು ಮಗಳು ತಾನು ಬರೆದಿದ್ದ ಎಲ್ಲಾ ಕವಿತೆಗಳನ್ನು ನಮ್ಮ ವೇದಿಕೆಯಲ್ಲಿ ಹಂಚಿಕೊಂಡು ಸಾರ್ಥಕ ಭಾವವನ್ನು ವ್ಯಕ್ತಪಡಿಸಿದರು. ಮತ್ತೊಬ್ಬರು ಬಾಲ್ಯದಲ್ಲಿ ಏಕಾಪಾತ್ರಾಭಿನಯ ಮಾಡುತ್ತಿದ್ದು, ಆಮೇಲೆ ಸುಮ್ಮನಾಗಿದ್ದರು. ನಮ್ಮ ಕಹಳೆ ಬಗ್ಗೆ ತಿಳಿದು ನಮ್ಮ ವೇದಿಕೆಯಲ್ಲಿ ಬಂದು ಏಕಪಾತ್ರಾಭಿನಯ ಮಾಡಿದರು, ಅದಕ್ಕೆ, ಅವರ ಪ್ರತಿಭೆಗೆ ಇಡೀ ಸಭಾಂಗಣವೇ ಇದ್ದು ನಿಂತು ಚಪ್ಪಾಳೆ ತಟ್ಟಿತು. ಈ ರೀತಿಯ ಸಣ್ಣ ಸಣ್ಣ ಘಟನೆಗಳು ನಮ್ಮ ಶಕ್ತಿಯನ್ನು ಹೆಚ್ಚಿಸಿವೆ. ಇನ್ನಷ್ಟುಮುಂದೆ ಸಾಗಲು ಇಂಧನದಂತೆ ಕೆಲಸ ಮಾಡುತ್ತಿವೆ’ ಎನ್ನುತ್ತಾರೆ ವಿನಯ್‌.

 

click me!