Passport: ಪಾಸ್‌ಪೋರ್ಟ್ ಅಗತ್ಯವಿಲ್ಲದೆ ಜಗತ್ತು ಸುತ್ತುವ ಪವರ್‌ ಇರೋ ಆ ಮೂವರು!

Published : Oct 29, 2025, 08:27 PM IST
passport

ಸಾರಾಂಶ

ಜಗತ್ತಿನಲ್ಲಿ ಕೇವಲ ಮೂವರು ಮಾತ್ರ ಪಾಸ್‌ಪೋರ್ಟ್ (Passport) ಇಲ್ಲದೆ ಅಂತರರಾಷ್ಟ್ರೀಯ ಪ್ರಯಾಣ ಮಾಡಬಲ್ಲರು. ಅವರ ಸಾರ್ವಭೌಮ ಸ್ಥಾನಮಾನದಿಂದಾಗಿ, ಪಾಸ್‌ಪೋರ್ಟ್‌ಗಳನ್ನು ಅವರ ಹೆಸರಿನಲ್ಲಿ ನೀಡಲಾಗುವುದರಿಂದ ಅವರಿಗೆ ಅದರ ಅಗತ್ಯವಿರುವುದಿಲ್ಲ.

ಜಗತ್ತಿನ ಅತ್ಯಂತ ದೊಡ್ಡ ಶಕ್ತಿ ಯಾವುದು- ಸಂಪತ್ತು, ಮಿಲಿಟರಿ ಶಕ್ತಿ ಅಥವಾ ಪ್ರಯಾಣದ ಸ್ವಾತಂತ್ರ್ಯ? ಪ್ರಯಾಣದ ವಿಷಯಕ್ಕೆ ಬಂದರೆ, ಭೂಮಿಯ ಮೇಲಿನ ಕೇವಲ ಮೂರು ಜನರು ಮಾತ್ರ ಪಾಸ್‌ಪೋರ್ಟ್ (Passport) ಇಲ್ಲದೆ ಜಗತ್ತನ್ನು ಸುತ್ತಾಡಬಹುದು. ಹೌದು. ಈ ಮೂವರಿಗೆ ಪಾಸ್‌ಪೋರ್ಟ್ ಅಗತ್ಯವಿಲ್ಲ! ಅವರು ಯುನೈಟೆಡ್ ಕಿಂಗ್‌ಡಮ್‌ನ ರಾಜ ಚಾರ್ಲ್ಸ್ III, ಜಪಾನ್‌ನ ಚಕ್ರವರ್ತಿ ನರುಹಿಟೊ ಮತ್ತು ಸಾಮ್ರಾಜ್ಞಿ ಮಸಾಕೊ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅಥವಾ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರಂತಹ ಪ್ರಬಲ ನಾಯಕರು ಸಹ ಪ್ರಯಾಣಕ್ಕೆ ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ಅವಲಂಬಿಸಿದ್ದಾರೆ. ಆದರೆ ಈ ಮೂವರು ರಾಜಮನೆತನದವರು ಎಲ್ಲೆಡೆ ವೀಸಾ- ಮುಕ್ತ ಪ್ರವಾಸವನ್ನು ಆನಂದಿಸುತ್ತಾರೆ. ಇದು ಅವರ ವಿಶೇಷ ರಾಜ ಸವಲತ್ತು.

ಬ್ರಿಟನ್‌ನಲ್ಲಿರುವ ನಿಯಮ ಆಸಕ್ತಿದಾಯಕ. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಪಾಸ್‌ಪೋರ್ಟ್‌ಗಳನ್ನು ರಾಜನ ಹೆಸರಿನಲ್ಲಿ ನೀಡಲಾಗುತ್ತದೆ. ಅಲ್ಲಿರುವುದು ʼಹಿಸ್ ಮೆಜೆಸ್ಟಿಯ ಪಾಸ್‌ಪೋರ್ಟ್ʼ ಎಂದು ಹೇಳುತ್ತಾರೆ. ಇದರರ್ಥ ರಾಜ ಚಾರ್ಲ್ಸ್ III ಗೆ ಪ್ರಯಾಣಿಸಲು ಪಾಸ್‌ಪೋರ್ಟ್ ಅಗತ್ಯವಿಲ್ಲ. ಏಕೆಂದರೆ ಅವರು ದೇಶದ ಸಾರ್ವಭೌಮ. ಅವರ ಮಾತೇ ಕಾನೂನು. ರಾಣಿ ಎಲಿಜಬೆತ್ II ಕೂಡ ಎಂದಿಗೂ ಪಾಸ್‌ಪೋರ್ಟ್ ಹೊಂದಿರಲಿಲ್ಲ. 2023ರಲ್ಲಿ ಚಾರ್ಲ್ಸ್ ಪಟ್ಟಾಭಿಷೇಕದ ನಂತರ, ಈ ವಿಶೇಷ ಸವಲತ್ತು ಚಾರ್ಲ್ಸ್‌ರದಾಯಿತು.

ಜಪಾನ್‌ನಲ್ಲೂ ಇದೇ ರೀತಿಯ ನಿಯಮವಿದೆ. ಚಕ್ರವರ್ತಿ ನರುಹಿಟೊ ಮತ್ತು ಸಾಮ್ರಾಜ್ಞಿ ಮಸಾಕೊ ಜಪಾನಿನ ಸಂವಿಧಾನದ ಅಡಿಯಲ್ಲಿ ವಿಧ್ಯುಕ್ತ ಸಾರ್ವಭೌಮರು. ಸರ್ಕಾರ ಅವರಿಗೆ ಪಾಸ್‌ಪೋರ್ಟ್‌ಗಳನ್ನು ನೀಡುವುದಿಲ್ಲ. ಬದಲಾಗಿ ಅವರು ರಾಜತಾಂತ್ರಿಕ ಶಿಷ್ಟಾಚಾರಗಳ ಅಡಿಯಲ್ಲಿ ಪ್ರಯಾಣಿಸುತ್ತಾರೆ. ಉದಾಹರಣೆಗೆ 2019 ರಲ್ಲಿ ನರುಹಿಟೊ ಅವರ ಪಟ್ಟಾಭಿಷೇಕದ ನಂತರ ಅವರ ಮೊದಲ ವಿದೇಶ ಪ್ರವಾಸ ಯುಕೆಗೆ ನಡೆಯಿತು. ಅಲ್ಲಿ ಅವರನ್ನು ಪಾಸ್‌ಪೋರ್ಟ್-ವೀಸಾ ಇತ್ಯಾದಿ ದಾಖಲೆಗಳಿಲ್ಲದೆ ಸ್ವಾಗತಿಸಲಾಯಿತು.

ಈ ಸಾರ್ವಭೌಮರು 190ಕ್ಕೂ ಹೆಚ್ಚು ದೇಶಗಳನ್ನು ಪ್ರವೇಶಿಸಬಹುದು. ಏಕೆಂದರೆ ಈ ಎಲ್ಲ ರಾಷ್ಟ್ರಗಳು ದ್ವಿಪಕ್ಷೀಯ ಒಪ್ಪಂದಗಳನ್ನು ಹೊಂದಿವೆ. ಇವರು ಅಧಿಕೃತ ಭೇಟಿಗಳು, ಸಮಾರಂಭಗಳು ಅಥವಾ ರಾಜತಾಂತ್ರಿಕ ಉದ್ದೇಶಗಳಿಗಾಗಿ ಮಾತ್ರ ವಿದೇಶಕ್ಕೆ ಹೋಗುತ್ತಾರೆ. ಈ ರಾಜ ಸವಲತ್ತುಗಳು ಪ್ರಯಾಣವನ್ನು ಮೀರಿವೆ. ರಾಜತಾಂತ್ರಿಕ ವಿನಾಯಿತಿಯನ್ನು ಸಹ ಇವರು ಆನಂದಿಸುತ್ತಾರೆ. ಅಂದರೆ ಅವರನ್ನು ಯಾವುದೇ ದೇಶದಲ್ಲಿ ಬಂಧಿಸಲು ಅಥವಾ ತನಿಖೆ ಮಾಡಲು ಸಾಧ್ಯವಿಲ್ಲ.

ಉದಾಹರಣೆಗೆ, 2024ರಲ್ಲಿ ಸಾಮ್ರಾಜ್ಞಿ ಮಸಾಕೊ ಅವರ ಯುರೋಪ್ ಭೇಟಿಯ ಸಮಯದಲ್ಲಿ, ಫ್ರಾನ್ಸ್ ಯಾವುದೇ ವೀಸಾ ಪರಿಶೀಲನೆಗಳಿಲ್ಲದೆ ಅವರಿಗೆ ವಿಶೇಷ ರಕ್ಷಣೆ ನೀಡಿತು. ಅದೇ ರೀತಿ ರಾಜ ಚಾರ್ಲ್ಸ್ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದಾಗ, ಅವರನ್ನು ವಿಮಾನ ನಿಲ್ದಾಣದಲ್ಲಿಯೇ ರೆಡ್-ಕಾರ್ಪೆಟ್ ಸಮಾರಂಭದೊಂದಿಗೆ ಸ್ವಾಗತಿಸಲಾಯಿತು.

ಜಪಾನ್‌ನಲ್ಲಿ ಚಕ್ರವರ್ತಿಯನ್ನು "ಟೆನ್ನೋ" ಎಂದು ಕರೆಯಲಾಗುತ್ತದೆ. ಅವರು ದೇವರುಗಳ ವಂಶಸ್ಥರು ಎಂದು ನಂಬಲಾಗಿದೆ. ಇದು ಅವರಿಗೆ ಪವಿತ್ರ ಮತ್ತು ದೈವಿಕ ಸ್ಥಾನಮಾನ ನೀಡುತ್ತದೆ. ಬ್ರಿಟನ್‌ನಲ್ಲಿ ರಾಜನೇ ರಾಷ್ಟ್ರದ ಮುಖ್ಯಸ್ಥ. ಇದು ಎಲ್ಲಾ ಕಾಮನ್‌ವೆಲ್ತ್ ರಾಷ್ಟ್ರಗಳಲ್ಲಿ ಮಾನ್ಯ. ಪಾಸ್‌ಪೋರ್ಟ್ ಇಲ್ಲದೆ ಪ್ರಯಾಣಿಸುವ ನಿಜವಾದ ಸವಲತ್ತು ಯುಕೆ ಮತ್ತು ಜಪಾನ್‌ನಂತಹ ರಾಜಮನೆತನದ ಕುಟುಂಬಗಳಿಗೆ ಮಾತ್ರ ಸೇರಿದೆ.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂತರರಾಷ್ಟ್ರೀಯ ಪ್ರಯಾಣಕ್ಕಾಗಿ ಲೈಸೆಜ್-ಪಾಸರ್ ಎಂಬ ವಿಶೇಷ ದಾಖಲೆಯನ್ನು ಬಳಸುತ್ತಾರಂತೆ. ಅದನ್ನು ಪಾಸ್‌ಪೋರ್ಟ್ ಬದಲಿ ಎಂದು ಪರಿಗಣಿಸಲಾಗುತ್ತದೆ. ಆದರೆ ಇದು ನಿಜವಾದ ಪಾಸ್‌ಪೋರ್ಟ್-ಮುಕ್ತ ಪ್ರವೇಶವಲ್ಲ.

ಭಾರತದಲ್ಲಿ ಹೇಗೆ?

ಭಾರತದಲ್ಲಿ ನಿಯಮಗಳು ಸಂಪೂರ್ಣವಾಗಿ ಭಿನ್ನವಾಗಿವೆ. ರಾಷ್ಟ್ರಪತಿ ದ್ರೌಪದಿ ಮುರ್ಮು ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿದ್ದಾರೆ. ಆದರೆ ಅವರಿಗೂ ಅಂತರರಾಷ್ಟ್ರೀಯ ಪ್ರಯಾಣಕ್ಕಾಗಿ ವೀಸಾ ಅಗತ್ಯವಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ತಮ್ಮ 100 ಕ್ಕೂ ಹೆಚ್ಚು ವಿದೇಶ ಪ್ರವಾಸಗಳಲ್ಲಿ ವೀಸಾ ಮೂಲಕ ಹೋಗಿದ್ದಾರೆ.

ಜಪಾನ್‌ ಚಕ್ರವರ್ತಿಯ ಎಲ್ಲಾ ಅಧಿಕೃತ ಪ್ರವಾಸಗಳನ್ನು ಜಪಾನಿನ ವಿದೇಶಾಂಗ ಸಚಿವಾಲಯ ನಿರ್ವಹಿಸುತ್ತದೆ. ಆತಿಥೇಯ ದೇಶವು ರಾಜತಾಂತ್ರಿಕ ಶಿಷ್ಟಾಚಾರವನ್ನು ನೋಡಿಕೊಳ್ಳುತ್ತದೆ. ಯುನೈಟೆಡ್ ಕಿಂಗ್‌ಡಮ್‌ನ ರಾಜನ ಭೇಟಿಗಳನ್ನು ಯೋಜಿಸುವುದು ಮತ್ತು ಆಯೋಜಿಸುವುದು ವಿದೇಶಾಂಗ ಕಚೇರಿ. 2025ರಲ್ಲಿ ಜಪಾನ್‌ ಚಕ್ರವರ್ತಿ ನರುಹಿಟೊ ಅವರು ಭಾರತ ಭೇಟಿ ನೀಡಲಿದ್ದಾರೆ. ಸಂಪ್ರದಾಯದ ಪ್ರಕಾರ ಅವರು ಪಾಸ್‌ಪೋರ್ಟ್ ಇಲ್ಲದೆಯೇ ಆಗಮಿಸುತ್ತಾರೆ.

 

PREV
Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್