Dec 17, 2021, 10:20 PM IST
ಶಿವಮೊಗ್ಗ (ಡಿ. 17): ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ (shivamogga) ನೋಡೋಕೆ ಸ್ವರ್ಗ. ಆದರೆ, ಇಲ್ಲಿ ಶರಾವತಿ ಹಿನ್ನೀರಿನ (Sharavathi Backwaters ) ದ್ವೀಪವಾಸಿಗಳ ಜೀವನ ನಿತ್ಯ ನರಕ. ಪ್ರತಿ ಸೌಲಭ್ಯ ಪಡೆಯಲು ಇಲ್ಲಿನ ಹೋರಾಟ ಮಾಡೋದು ಅನಿವಾರ್ಯವಾಗಿಬಿಟ್ಟಿದೆ. ಕಳೆದ 25 ದಿನದಿಂದ 108 ಆ್ಯಂಬುಲೆನ್ಸ್ (Ambulance) ಸೇವೆ ಸ್ಥಗಿತಗೊಂಡು ನಿನ್ನೆ ತಡರಾತ್ರಿ ಗರ್ಭಿಣಿ , ಅಪಘಾತದ ಗಾಯಾಳು ಸಂಕಷ್ಟ ಎದುರಿಸಿದ್ದಾರೆ. ಸಾಗರ ತಾಲೂಕಿನ ತುಮರಿ (Tumari) ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ 108 ಆ್ಯಂಬುಲೆನ್ಸ್ ಸೇವೆ ಹಾಳಾಗಿ ಅಂದಾಜು 1 ತಿಂಗಳಾಗುತ್ತಾ ಬಂದಿದ್ದರೂ, ಇಲ್ಲಿಯವರೆಗೂ ಸರಿಹೋಗುವ ಲಕ್ಷಣ ಕಂಡಿಲ್ಲ. ಇದರ ಪರಿಣಾಮವಾಗಿ ತುರ್ತು ಸೇವೆಗೆ ಆ್ಯಂಬುಲೆನ್ಸ್ ಅನ್ನೇ ನೆಚ್ಚಿಕೊಂಡಿರುವ 8 ಪಂಚಾಯತ್ ವ್ಯಾಪ್ತಿಯ 20 ಸಾವಿರಕ್ಕೂ ಅಧಿಕ ಜನರ ಕಷ್ಟ ಹೇಳತೀರದಾಗಿದೆ.
Shivamogga Infrastructure Issue: : 108 ಆ್ಯಂಬುಲೆನ್ಸ್ ಕೊರತೆ : ಶರಾವತಿ ಹಿನ್ನೀರು ಜನರ ಗೋಳಿಗೆ ಕೊನೆ ಎಂದು?
ಸಂಜೆ 6 ಗಂಟೆಗೆ ಲಾಂಚ್ ಸ್ಥಗಿತಗೊಂಡರೆ, ಇಡೀ ತಾಲೂಕಿನ ನರನಾಡಿಯೇ ಕಡಿದಂತಾಗುತ್ತದೆ. ಇದರಿಂದಾಗಿ ತುರ್ತು ಸಂದರ್ಭಗಳಲ್ಲಿ ಸಾಗರ (Sagar) ತಾಲೂಕು ಆಸ್ಪತ್ರೆಗೆ ಹೋಗಬೇಕೆಂದಿದ್ದಲ್ಲಿ ನಿಟ್ಟೂರು-ಹೊಸನಗರ ಅಥವಾ ಕೋಗಾರ್- ಕಾರ್ಗಲ್ ಮೂಲಕ ಹಿನ್ನೀರ ವಾಸಿಗಳು ಸಾಗರ ತಲುಪಬೇಕಿದೆ. ಕೆಲ ದಿನದ ಹಿಂದೆ ಇಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಇಡೀ ಹಿನ್ನೀರಿನ ವಾಸಿಗಳು ಪರದಾಟ ನಡೆಸಿದ್ದರೆ, ಅದೇ ಸಮಯದಲ್ಲಿ ಚದರವಳ್ಳಿಯ ಚೈತ್ರಾ ಎನ್ನುವ ಹೆಂಗಸಿಗೆ ಹೆರಿಗೆಯಾಗಿದ್ದರಿಂದ ಆಸ್ಪತ್ರೆಗೆ ಸಾಗಿಸಲು ಹರಸಾಹಸ ಪಡಲಾಗಿತ್ತು. ಆ ಕಾರಣದಿಂದಾಗಿ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುಸಜ್ಜಿತವಾಗಿರುವ 108 ಆ್ಯಂಬುಲೆನ್ಸ್ ನೀಡಬೇಕೆಂದು ಸ್ಥಳೀಯ ಜನರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಅದರೊಂದಿಗೆ ಕೇಂದ್ರದಲ್ಲಿ ಕೆಲ ವೈದ್ಯಕೀಯ ಸೇವೆಗಳನ್ನೂ ಹೆಚ್ಚಿಸುವಂತೆ ಜನರು ಆಗ್ರಹ ಮಾಡಿದ್ದಾರೆ.