‘ಬೇಗ್ ಒಬ್ಬ ಅವಕಾಶವಾದಿ ರಾಜಕಾರಣಿ, ಪಕ್ಷದ ಕ್ರಮ ಸರಿ’

Jun 19, 2019, 3:54 PM IST

ಬೆಂಗಳೂರು (ಜೂ.19): ಕಾಂಗ್ರೆಸ್‌ನಿಂದ ರೋಷನ್ ಬೇಗ್ ಅಮಾನತ್ತು ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಕಾಂಗ್ರೆಸ್‌ನ ಇತರ ನಾಯಕರು ರೋಷನ್ ಬೇಗ್ ವಿರುದ್ಧದ ಶಿಸ್ತುಕ್ರಮವನ್ನು ಸಮರ್ಥಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಕೃಷ್ಣ ಭೈರೇಗೌಡ,  ರೋಷನ್ ಬೇಗ್ ಒಬ್ಬ ಅವಕಾಶವಾದಿ ರಾಜಕಾರಣಿ, ಅವರನ್ನು ಮಂತ್ರಿ ಮಾಡಿರುತ್ತಿದ್ದರೆ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಹತಾಶೆಯಿಂದ ಪಕ್ಷದ ವರಿಷ್ಠರ ಮೇಲೆ ನಿರಾಧಾರ, ಕೀಳು ಮಟ್ಟದ ಆರೋಪಗಳನ್ನು ಮಾಡಿದ್ದಾರೆ. ಬೇಗ್ ವಿರುದ್ಧ ಪಕ್ಷದ ಕ್ರಮ ಸರಿಯಾಗಿದೆ ಎಂದು ಹೇಳಿದರು.

ಕಳೆದ ಲೋಕಸಭೆ ಚುನಾವಣೆ ಫಲಿತಾಂಶ ಬಳಿಕ ರೋಷನ್ ಬೇಗ್ ಪಕ್ಷದ ನಾಯಕರ ವಿರುದ್ಧ ಸಾರ್ವಜನಿಕವಾಗಿ ವಾಗ್ದಾಳಿ ನಡೆಸಿದ್ದರಲ್ಲದೇ, ಪ್ರಧಾನಿ ಮೋದಿಯನ್ನು ಹೊಗಳಲು ಆರಂಭಿಸಿದ್ದರು. ತಮ್ಮ ವರ್ತನೆಯಿಂದ ಕಾಂಗ್ರೆಸ್‌ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ಬೇಗ್, ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದರು.