Uttara Kannada: ಸರ್ಕಾರಕ್ಕೆ ಸಡ್ಡು: ಬಲಿಷ್ಠ ಬ್ರಿಡ್ಜ್‌ ನಿರ್ಮಿಸಿದ ಗ್ರಾಮಸ್ಥರು..!

Jan 17, 2022, 12:59 PM IST

ಕಾರವಾರ(ಜ.17):  ಕಳೆದ ಬಾರಿ ಬೃಹತ್ ಸೇತುವೆ ಉರುಳಿಬಿದ್ದ ನಂತರ ತುಂಬಿ ಹರಿಯುವ ನದಿಯನ್ನು ಬೋಟ್ ಮೂಲಕವೇ ದಾಟುತ್ತಿದ್ದ ಈ ಊರಿನ ಗ್ರಾಮಸ್ಥರು ಕೊನೆಗೂ‌ ತಮ್ಮ ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಂಡು ಬಲಿಷ್ಠ ಗ್ರಾಮ ಸೇತುವನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಹೌದು, ನಾವು ಮಾತನಾಡುತ್ತಿರೋದು ಗುಳ್ಳಾಪುರದ ವಿಚಾರ. ಅಂಕೋಲಾ, ಯಲ್ಲಾಪುರ ಹಾಗೂ ಶಿರಸಿಯನ್ನು ಸಂಪರ್ಕಿಸುವ ಪ್ರಮುಖ ಪ್ರದೇಶ ಇದಾಗಿದ್ದು, ಯಲ್ಲಾಪುರ ಹಾಗೂ ಅಂಕೋಲಾದ ಗಡಿಭಾಗವಾಗಿರುವ ಕೈಗಡಿಯೆಂಬ ತೀರಾ ಕುಗ್ರಾಮಕ್ಕೆ‌ ಗುಳ್ಳಾಪುರದ ಮೂಲಕವೇ ಸಾಗಬೇಕಾಗಿದೆ.‌ ಕಳೆದ ಬಾರಿ ಕಾಣಿಸಿಕೊಂಡ ಭಾರೀ ಪ್ರವಾಹದಿಂದಾಗಿ ಗಂಗಾವಳಿ ನದಿಗೆ ಅಡ್ಡಲಾಗಿ ಕಟ್ಟಲಾದ ರಾಜ್ಯ ಹೆದ್ದಾರಿ ಸಂಪರ್ಕಿಸುವ ಗುಳ್ಳಾಪುರದ ಸೇತುವೆಯೇ ನೀರಿನಲ್ಲಿ ಕೊಚ್ಚಿಹೋಗಿತ್ತು. 

ಶಾಸಕಿ ರೂಪಾಲಿ ನಾಯ್ಕ್, ಸಚಿವ ಶಿವರಾಮ ಹೆಬ್ಬಾರ್ ಹಾಗೂ ಇತರ ಸಚಿವರು ಮತ್ತು ಕೈಗಡಿಗೆ ಭೇಟಿ ನೀಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಈ ಸ್ಥಳವನ್ನು ವೀಕ್ಷಿಸಿ ಹೊಸ ಸೇತುವೆ ಮಾಡಿಸಿಕೊಡುವ ಆಶ್ವಾಸನೆ ನೀಡಿದ್ದರು. ಆದರೂ, ಇಲ್ಲಿನ ಜನರಿಗೆ ಮುರಿದ ಸೇತುವೆ ಮತ್ತೆ ಶೀಘ್ರದಲ್ಲಿ ನಿರ್ಮಾಣವಾಗುವ ಸಾಧ್ಯತೆಗಳು ಕಂಡಿರಲಿಲ್ಲ. 

Covid 19 Spike: ರಾಜ್ಯದ 6 ಜಿಲ್ಲೆಗಳಲ್ಲಿ ಸೋಂಕು ಏರಿಕೆ: 1 ರಿಂದ 9ನೇ ತರಗತಿ ಬಂದ್!

ಸಚಿವ ಶಿವರಾಮ ಹೆಬ್ಬಾರ್ ರಾಜ್ಯ ಸರಕಾರದ ನೆರೆ ಪರಿಹಾರದ‌ ಅನುದಾನದಡಿ 20 ಲಕ್ಷ ರೂ. ನೀಡಿದ್ದರಾದ್ರೂ, ಹಳೇಯ ರೀತಿಯ ಕಾಂಕ್ರೀಟ್ ಸೇತುವೆ ಬೇಕಂದ್ರೆ 60 ಲಕ್ಷ ರೂ.ನಿಂದ 1 ಕೋಟಿ ರೂ.ವರೆಗೆ ಅನುದಾನ ಬೇಕಿತ್ತು.‌ ಆದರೆ, ಸದ್ಯಕ್ಕೆ ಸಚಿವರು ಒದಗಿಸಿದ 20ಲಕ್ಷ ರೂ. ಅನುದಾನ ಹಾಗೂ ತಮ್ಮ ಹಣವನ್ನು ಕೂಡಾ ವ್ಯಯಿಸಿದ ಜನರು ತಾವೇ ಶ್ರಮ ವಹಿಸಿಕೊಂಡು ಅತ್ಯುತ್ತಮ ಹಾಗೂ ಬಲಿಷ್ಠ ಸೇತುವೆ ನಿರ್ಮಾಣ ಮಾಡಿದ್ದಾರೆ.