Mar 1, 2022, 10:49 AM IST
ದಕ್ಷಿಣ ಕನ್ನಡ (ಮಾ. 01): ಮುಂದೊಂದು ದಿನ ದೆಹಲಿಯ ಕೆಂಪುಕೋಟೆಯ ಮೇಲೆ ಭಗವಾ ಧ್ವಜ (ಕೇಸರಿ) ಹಾರಿಸುತ್ತೇವೆ ಎಂದಿರುವ ಹಿರಿಯ ಬಿಜೆಪಿ ಮುಖಂಡ, ಗ್ರಾಮೀಣಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ದೇಶಾದ್ಯಂತ ಭಾರೀ ಸದ್ದು ಮಾಡಿತ್ತು. ಸಚಿವ ಈಶ್ವರಪ್ಪ ಅವರ ಹೇಳಿಕೆಯನ್ನು ಖಂಡಿಸಿ ಅವರನ್ನು ವಜಾಗೊಳಿಸುವಂತೆ ಕಾಂಗ್ರೆಸ್ ಆಗ್ರಹಿಸಿತ್ತು. ಸಚಿವ ಈಶ್ವರಪ್ಪ ಹೇಳಿಕೆ ವಿವಾದ ಇನ್ನು ಹಚ್ಚಹಸಿರಾಗಿರುವಾಗಲೇ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಶಿವಮೊಗ್ಗದ ಹರ್ಷ ಹತ್ಯೆ ಖಂಡಿಸಿ ಹಿಂದೂ ಜನಜಾಗೃತಿ ಸಮಿತಿ ನಡೆಸಿದ ಪ್ರತಿಭಟನೆಯಲ್ಲಿ ಮಾತಾನಡಿದ ಹರೀಶ್ ಪೂಂಜಾ "ಕಾಂಗ್ರೆಸ್ ಷಡ್ಯಂತ್ರ, ಪ್ರೇರಣೆ ಮತ್ತು ಕುಮ್ಮಕ್ಕಿನಿಂದ ಹಿಂದೂ ಕಾರ್ಯಕರ್ತನ ಹತ್ಯೆಯಾಗಿದೆ. ಕೆಂಪುಕೋಟೆ ಮೇಲೆ ಭಗದ್ವಜ ಹಾರಿಸ್ತೀವಿ ಅಂತ ಈಶ್ವರಪ್ಪ ಹೇಳಿದ್ರು ಅನ್ನೋ ಕಾರಣಕ್ಕೆ ಅಧಿವೇಶನ ಮೊಟಕುಗೊಳಿಸಿದ್ರು. ಆದ್ರೆ ಬೆಳ್ತಂಗಡಿಯ ಈ ಸಭೆಯಲ್ಲಿ ಬೆಳ್ತಂಗಡಿ ಶಾಸಕನಾಗಿ ನಾನು ಹೇಳ್ತೀನಿ, ಕೆಂಪು ಕೋಟೆಯ ಮೇಲೆ ಭಗವದ್ವಜ ಹಾರಿಸಿಯೇ ಸಿದ್ದ ಈ ಹಿಂದೂ ಸಮಾಜ" ಎಂದು ಹೇಳಿದ್ದಾರೆ. ತುಳು ಭಾಷೆಯಲ್ಲಿ ಹರೀಶ್ ಪೂಂಜಾ ಮಾಡಿದ ಭಾಷಣದ ತುಣುಕು ಈಗ ವೈರಲ್ ಆಗುತ್ತಿದೆ.
ಇದನ್ನೂ ಓದಿ: Flag Row: ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸ್ತೀವಿ ಎಂದಿಲ್ಲ: ಈಶ್ವರಪ್ಪ
"ಕೆಂಪುಕೋಟೆಯ ಮೇಲೆ ಭಗವಧ್ವಜ ಹಾರಿಸೋದು ರಾಷ್ಟ್ರಧ್ವಜದ ಕೆಳಗೆ. ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜದ ಕೆಳಗೆ ಭಗವಾಧ್ಬಜ ಹಾರಿಸೋದನ್ನ ಯಾವ ಪಕ್ಷ ದಿಂದಲೂ ತಪ್ಪಿಸೋದಕ್ಕೆ ಸಾಧ್ಯವೇ ಇಲ್ಲ. ಇದು ಭಾರತೀಯ ಜನತಾ ಪಾರ್ಟಿ ಮತ್ತು ಹಿಂದೂ ಸಮಾಜದ ಸಂಕಲ್ಪ. ದೇಶಕ್ಕೆ ಸ್ವಾತಂತ್ರ್ಯ ಸಿಗಲು ಬಾಲಗಂಗಾಧರ ತಿಲಕರು ಭಗವಧ್ಬಜ ಎದುರಿಟ್ಟು ಹೋರಾಟ ಮಾಡಿದ್ರು. ಅದಕ್ಕೂ ಮೊದಲು ಹಿಂದೂ ಸಮಾಜದ ಶಕ್ತಿಯಾಗಿದ್ದ ಶಿವಾಜಿ ಮಹಾರಾಜರ ಶಕ್ತಿಯೂ ಭಗವಧ್ವಜ" ಎಂದು ಪೂಂಜಾ ಹೇಳಿದ್ದಾರೆ.