Ankola: ಉರೂಸ್‌ನಲ್ಲಿ ಜಾತಿ, ಧರ್ಮ ಭೇದ ಮರೆತು ಸೇರಿದ ಸಾವಿರಾರು ಜನ

Feb 19, 2022, 12:15 PM IST

ಅಂಕೋಲಾ(ಫೆ.19):  ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದ ಜೈಹಿಂದ್ ಹೈಸ್ಕೂಲ್ ಪಕ್ಕದಲ್ಲಿರುವ ಸೈಯ್ಯದ್ ಹಸನ್ ಶಾ‌ ಖಾದ್ರಿ ದರ್ಗಾದಲ್ಲಿ ಮೂರು ದಿನಗಳ‌ ಕಾಲ ನಡೆದ ಉರುಸ್ ಹಿಂದೂ- ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿ ನೆರವೇರಿದೆ.‌ ದರ್ಗಾದಲ್ಲಿ ನಡೆದ ಉರೂಸ್‌ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದು, ಇದರಲ್ಲಿ ಕೇವಲ ಮುಸ್ಲಿಮರಷ್ಟೇ ಅಲ್ಲದೇ, ಹಿಂದೂಗಳೂ ಕೂಡಾ ಸೇರಿಕೊಂಡದ್ದು ವಿಶೇಷವಾಗಿತ್ತು. 

ದರ್ಗಾದಲ್ಲಿ ಮುಸ್ಲಿಮರೊಂದಿಗೆ ಹಿಂದೂಗಳೂ ಕೂಡ ಹರಕೆಯಾಗಿ ಚಾದರ್‌ಗಳನ್ನು ಹೊದಿಸಿದರು. ರಾತ್ರಿ ನಡೆದ ಅನ್ನಸಂತರ್ಪಣೆಯಲ್ಲೂ ಜಾತಿ, ಧರ್ಮ ಭೇದ ಮರೆತು ಸಾವಿರಾರು ಜನ ಪಾಲ್ಗೊಂಡು ಭಾವೈಕ್ಯತೆ ಮೆರೆದಿದ್ದಾರೆ. 

Hijab Row: ಹಿಜಾಬ್ ತೆಗೆದು ಕ್ಲಾಸ್‌ಗೆ ಹೋಗಿ, ಶಾಂತಿ ಮಂತ್ರ ಜಪಿಸಿದ ಅಂಜುಮನ್ ಸಂಸ್ಥೆ

ಇನ್ನು ಉರುಸ್ ಅಂಗವಾಗಿ ಅಂಕೋಲಾ ಪಟ್ಟಣದಲ್ಲಿ ಮುಸ್ಲಿಮರಿಂದ ಮೆರವಣಿಗೆ ನಡೆಯಿತು. ಈ ವೇಳೆ ಹಿಂದೂಗಳು ಕೂಡ ಮೆರವಣಿಗೆ ವೇಳೆ ಕೈಮುಗಿದು ಪ್ರಾರ್ಥಿಸಿದರು. ದರ್ಗಾದಲ್ಲಿ ಅಗರಬತ್ತಿ ಹಚ್ಚಿ, ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಹಿಂದೂ- ಮುಸ್ಲಿಂ ಎಂಬ ಭೇದ ಭಾವ ಸೃಷ್ಟಿಯಾಗಿರುವ ಇತ್ತೀಚಿನ ದಿನಗಳಲ್ಲಿ ಅಂಕೋಲಾದಲ್ಲಿ ನಡೆದ ಈ ಉರೂಸ್ ಎಲ್ಲರನ್ನೂ ಒಗ್ಗೂಡಿಸುವ ಕಾರ್ಯ ಮಾಡಿರುವುದು ಮಾದರಿಯೇ ಸರಿ.