Shivamogga: ಕೊನೆಗೂ ತುಮರಿಗೆ ಬಂತು ಆ್ಯಂಬುಲೆನ್ಸ್, ಮಾತು ಉಳಿಸಿಕೊಂಡ ಶಾಸಕ

Jan 11, 2022, 4:32 PM IST

 ಶಿವಮೊಗ್ಗ (ಜ. 11):  ಸಾಗರ ತಾಲೂಕಿನ ಕರೂರು ಮತ್ತು ಬಾರಂಗಿ ಹೋಬಳಿಯ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದ 108 ಆಂಬುಲೆನ್ಸ್ ಸೇವೆ ಸ್ಥಗಿತಗೊಂಡು ಇಲ್ಲಿನ ಜನ ತುಂಬಾ ಕಷ್ಟ ಅನುಭವಿಸುವಂತಾಗಿತ್ತು.  ತುರ್ತು ಸಂದರ್ಭದಲ್ಲಿ 108 ಸೇವೆ ಲಭ್ಯವಿಲ್ಲದೇ ಹಿನ್ನೀರಿನ 8 ಪಂಚಾಯತ್ ವ್ಯಾಪ್ತಿಯ ಸುಮಾರು 20 ಸಾವಿರ ಜನರಿಗೆ ಇಲ್ಲ ತುರ್ತು ಸೇವೆ ಸಿಗದಂತಾಗಿತ್ತು. 

Shivamogga:ಕೇಳುವವರೇ ಇಲ್ಲ ಶರಾವತಿ ಹಿನ್ನೀರಿನ ದ್ವೀಪವಾಸಿಗಳ ಗೋಳು!

ಸುಮಾರು ಒಂದು ತಿಂಗಳ ಹಿಂದಿನಿಂದ ಅಂಬ್ಯುಲೆನ್ಸ್ ವಾಹನ ಕೆಟ್ಟು ನಿಂತಿತ್ತು.   ದುರಸ್ತಿ ಕಾಣದೇ ಸೇವೆಯೇ ಸ್ಥಗಿತಗೊಂಡಿತ್ತು. ಅಂಬ್ಯಲೆನ್ಸ್ ಇಲ್ಲದ ಕಾರಣಕ್ಕೆ ಆಗಬಾರದ ಅನಾಹುತಗಳೂ ನಡೆದು ಹೋದುವು. ಒಂದು ಘಟನೆಯಲ್ಲಿ  ಹಸುಗೂಸು ಕಣ್ಣು ಬಿಡುವ ಮೊದಲೇ ಇಹಲೋಕ ಯಾತ್ರೆ ಮುಗಿಸಿದರೆ, ಮತ್ತೊಂದು ಘಟನೆಯಲ್ಲಿ ಅಪಘಾತದಲ್ಲಿ ಗಾಯಗೊಂಡ ಇಬ್ಬರನ್ನು ಸಾಗರ ಅಸ್ಪತ್ರೆಗೆ ಸಾಗಿಸಲು ಜನ ಪರದಾಡಬೇಕಾಯಿತು. ಇದರಿಂದಾಗಿ ಕರೂರು ಹೋಬಳಿಯ ಜನತೆ ಹೊಸ ಅಂಬ್ಯುಲೆನ್ಸ್ ಗಾಗಿ ಪ್ರತಿಭಟನೆ ನಡೆಸಿದ್ದರು. ಶಾಸಕರು ತಾತ್ಕಾಲಿಕವಾಗಿ ವೆಂಟಿಲೇಟರ್ ಇಲ್ಲದ ಅಂಬ್ಯುಲೆನ್ಸ್ ನೀಡಿದ್ದರೂ ಜನ ಅದನ್ನು ನಿರಾಕರಿಸಿದ್ದರು,  ಹೊಸ ಅಂಬ್ಯುಲೆನ್ಸ್ ಬೇಕು ಎಂದು ಆಗ್ರಹಿಸಿದ್ದ ಹಿನ್ನೆಲೆ, ಶಾಸಕ ಹಾಲಪ್ಪ  ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು.

ಈಗ ಶರಾವತಿ ನದಿ ಹಿನ್ನೀರಿನ ಪ್ರದೇಶದಲ್ಲಿ ವಾಸಿಸುವ ಜನರ ಹೋರಾಟಕ್ಕೆ ಪ್ರತಿಫಲ ಸಿಕ್ಕಿದೆ. ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಇಲ್ಲಿನ ಜನರಿಗೆ  ಕೊಟ್ಟ ಮಾತನ್ನು  ಉಳಿಸಿಕೊಂಡಿದ್ದಾರೆ. ಊರಿಗೆ ಹೊಚ್ಚ ಹೊಸ 108  ಅಂಬ್ಯುಲೆನ್ಸ್ ಬಂದಿದೆ.  ಸಾಗರ ತಾಲೂಕಿನ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 108 ಮಂಜೂರಾಗಿದ್ದು,  ನೂತನವಾದ ಸುಸಜ್ಜಿತ, ಅತ್ಯಾಧುನಿಕ 108 ಆಂಬುಲೆನ್ಸ್ ವಾಹನಕ್ಕೆ ಶಾಸಕರು ಚಾಲನೆ ನೀಡಿದ್ದಾರೆ.