ಶಿವಮೊಗ್ಗದ ಸಕ್ರೆಬೈಲು ಆನೆ ಶಿಬಿರದ 'ಬಾಲಣ್ಣ' ಆನೆಯು ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ದಸರಾ ಮೆರವಣಿಗೆಗೂ ಮುನ್ನ ಕಾಲುನೋವಿಗೆ ನೀಡಿದ ಔಷಧಿಯ ಅತಿಯಾದ ಡೋಸ್‌ನಿಂದಾಗಿ ಆನೆಯ ಕಿವಿ ಕೊಳೆಯಲು ಆರಂಭಿಸಿದೆ.
ಶಿವಮೊಗ್ಗ (ಅ.22): ರಾಜ್ಯದ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ಸಕ್ರೆಬೈಲು ಆನೆ ಶಿಬಿರದಲ್ಲಿ ಆನೆ 'ಬಾಲಣ್ಣ' ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಆನೆಗೆ ನೀಡಿದ ಔಷಧಿಗಳ ಓವರ್‌ಡೋಸ್ ಮತ್ತು ವೈದ್ಯಕೀಯ ನಿರ್ಲಕ್ಷ್ಯವೇ ಈ ದುಸ್ಥಿತಿಗೆ ಕಾರಣ ಎಂದು ತಿಳಿದುಬಂದಿದೆ. ಆನೆಯ ಪರಿಸ್ಥಿತಿ ಕುರಿತು ಮಾಹಿತಿ ಬಹಿರಂಗವಾಗುತ್ತಿದ್ದಂತೆ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ಬಾಲಣ್ಣನನ್ನು ಶಿಬಿರದಿಂದ ಕಾಡಿನೊಳಗೆ ರಹಸ್ಯವಾಗಿ ಸ್ಥಳಾಂತರಿಸಿ, ಗುಟ್ಟಾಗಿ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ.
ಕಾಲು ನೋವಿಗೆ ಚುಚ್ಚುಮದ್ದು, ಕಿವಿಗೆ ಕಂಟಕ:
ಕರುಣಾಜನಕ ಸ್ಥಿತಿಯಲ್ಲಿರುವ ಆನೆ ಬಾಲಣ್ಣನ ಕಥೆ ನಿಜಕ್ಕೂ ಮನಕಲಕುವಂತಿದೆ. ಶಿವಮೊಗ್ಗದಲ್ಲಿ 18 ದಿನಗಳ ಹಿಂದೆ ನಡೆದ ಅದ್ಧೂರಿ ದಸರಾ ಮೆರವಣಿಗೆಯಲ್ಲಿ ಬಾಲಣ್ಣ ಹೆಜ್ಜೆ ಹಾಕಿತ್ತು. ಆದರೆ, ಮೆರವಣಿಗೆಗೂ ಮುನ್ನವೇ ಆನೆ ತೀವ್ರವಾದ ಕಾಲು ನೋವಿನಿಂದ ಬಳಲುತ್ತಿತ್ತು. ಈ ನೋವಿಗೆ ಚಿಕಿತ್ಸೆ ನೀಡಲು ನಿವೃತ್ತ ಪಶು ವೈದ್ಯರೊಬ್ಬರು ಬಾಲಣ್ಣನಿಗೆ ಆ್ಯಂಟಿ ಬಯೋಟಿಕ್ ಇಂಜೆಕ್ಷನ್ ನೀಡಿದ್ದಾರೆ. ಇದರ ಬಳಿಕ ದಸರಾ ಮೆರವಣಿಗೆ ತಾಲೀಮು ನಡೆಸುವಾಗ ಆನೆಯ ಮುಖ ಹಾಗೂ ಕಿವಿ ಉಬ್ಬಿ, ಕೊಳೆತ ಸ್ಥಿತಿ ತಲುಪಿದೆ.
ವೈದ್ಯರ ಅಸಮರ್ಪಕ ಚಿಕಿತ್ಸೆಯಿಂದ ಅನಾಹುತ:
ನೋವು ಉಲ್ಬಣಗೊಂಡ ಬಳಿಕ ಬಿಡಾರದ ಗುತ್ತಿಗೆ ಆಧಾರಿತ ವೈದ್ಯ ಮುರಳಿ ಹಾಗೂ ಟ್ರೈನಿಂಗ್ ಪಶು ವೈದ್ಯಕೀಯ ವಿದ್ಯಾರ್ಥಿಗಳು ಆನೆಗೆ ಚಿಕಿತ್ಸೆ ನೀಡಿದ್ದಾರೆ. ಈ ಇಬ್ಬರು ವೈದ್ಯರು ಆನೆ ಬಾಲಣ್ಣನಿಗೆ ಎರಡು ಬಾರಿ ಓವರ್‌ಡೋಸ್ ಇಂಜೆಕ್ಷನ್ ನೀಡಿದ ಪರಿಣಾಮವಾಗಿ ರಿಯಾಕ್ಷನ್ ಉಂಟಾಗಿದೆ. ಇದೇ ಕಾರಣದಿಂದಾಗಿ ಬಾಲಣ್ಣನ ಕಿವಿ ಕೊಳೆಯಲು ಪ್ರಾರಂಭಿಸಿದೆ. ಒಂದೆಡೆ ಕಾಲು ನೋವು, ಮತ್ತೊಂದೆಡೆ ಕೊಳೆಯುತ್ತಿರುವ ಕಿವಿಯ ಬಾಧೆಯಿಂದ ಬಾಲಣ್ಣ ಅಕ್ಷರಶಃ ನರಕಯಾತನೆ ಅನುಭವಿಸುತ್ತಿದೆ. ಈ ಮೂಕ ಪ್ರಾಣಿಯ ಮೌನರೋಧನೆಗೆ ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ವೈದ್ಯರ ಯಡವಟ್ಟೇ ಕಾರಣ ಎಂಬ ಆರೋಪಗಳು ಕೇಳಿಬಂದಿವೆ.
ಮಾಹಿತಿ ಸೋರಿಕೆ ಬಳಿಕ ಅಧಿಕಾರಿಗಳ ಕಳ್ಳಾಟ:
ಆನೆ ಬಾಲಣ್ಣನ ದುಸ್ಥಿತಿ ಮತ್ತು ವೈದ್ಯರ ನಿರ್ಲಕ್ಷ್ಯದ ಮಾಹಿತಿ ಮಾಧ್ಯಮಗಳಿಗೆ ಸೋರಿಕೆಯಾಗುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ತಮ್ಮ ಯಡವಟ್ಟನ್ನು ಮುಚ್ಚಿಟ್ಟುಕೊಳ್ಳಲು ಅವರು ತಕ್ಷಣವೇ ಬಾಲಣ್ಣನನ್ನು ಬಚ್ಚಿಡುವ ಕೆಲಸ ಮಾಡಿದ್ದಾರೆ. ಸುವರ್ಣನ್ಯೂಸ್ ಕ್ಯಾಮೆರಾಗಳು ಸಕ್ರೆಬೈಲು ಆನೆ ಶಿಬಿರಕ್ಕೆ ಎಂಟ್ರಿ ಆಗ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು, ಬಾಲಣ್ಣನನ್ನು ತಕ್ಷಣ ಕಾಡಿನೊಳಗೆ ಶಿಫ್ಟ್ ಮಾಡಿದ್ದಾರೆ.
ಇನ್ನು ಆನೆ ಕ್ಯಾಂಪ್‌ನಲ್ಲಿ ಸುವರ್ಣ್ ನ್ಯೂಸ್ ವರದಿಗಾರರು ಬಾಲಣ್ಣ ಆನೆಯನ್ನು ತೋರಿಸುವಂತೆ ವರದಿಗಾರರು ಕೇಳಿದಾಗ, ಆರ್‌ಎಫ್‌ಓ ವಿನಯ್ ಕುಮಾರ್ ಅವರು ಹಿಂಜರಿಕೆ ತೋರಿದ್ದಾರೆ. ಆನೆ ತೋರಿಸಿ ಎಂದರೆ ಹಾರಿಕೆ ಉತ್ತರ ನೀಡುತ್ತಿದ್ದ ಅಧಿಕಾರಿಗಳ ಕಳ್ಳಾಟ ಬಟಾಬಯಲಾಗಿದೆ. ವೈದ್ಯಕೀಯ ಲೋಪದಿಂದ ಗಾಯಗೊಂಡ ಆನೆಯನ್ನು ರಹಸ್ಯವಾಗಿ ಕಾಡಿನಲ್ಲಿರಿಸಿ ಗುಟ್ಟಾಗಿ ಚಿಕಿತ್ಸೆ ನೀಡುವ ಅಧಿಕಾರಿಗಳ ಈ ನಡೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆನೆಯ ಸ್ಥಿತಿ ಗಂಭೀರವಾಗಿದ್ದು, ತಕ್ಷಣವೇ ಸೂಕ್ತ ಚಿಕಿತ್ಸೆ ನೀಡಲು ತಜ್ಞ ವೈದ್ಯರ ತಂಡವನ್ನು ನಿಯೋಜಿಸಬೇಕೆಂದು ಪ್ರಾಣಿಪ್ರಿಯರು ಒತ್ತಾಯಿಸಿದ್ದಾರೆ.