Karwar: ರಿಡ್ಲೆ ಕಡಲಾಮೆಗಳ ಅಪರೂಪದ ವಿಡಿಯೋ ಕ್ಯಾಮೆರಾದಲ್ಲಿ ಸೆರೆ

Feb 22, 2022, 12:30 PM IST

ಕಾರವಾರ(ಫೆ.22):  ಅಪರೂಪದ ರಿಡ್ಲೆ ಜಾತಿಯ ಕಡಲಾಮೆಗಳು ಮೊಟ್ಟೆ ಇಡುವ ಪ್ರದೇಶವೆಂದು ಗುರುತಿಸಲ್ಪಟ್ಟಿರುವ ಕಾಸರಕೋಡ ಟೊಂಕ ವ್ಯಾಪ್ತಿಯಲ್ಲಿ ಇದೀಗ ಮತ್ತೆ ರಿಡ್ಲೆ ಜಾತಿಯ ಕಡಲಾಮೆಯೊಂದು 250ಕ್ಕೂ ಹೆಚ್ಚು ಮೊಟ್ಟೆ ಇಟ್ಟು ಮರಳಿನಲ್ಲಿ ಸಂರಕ್ಷಣೆ ಮಾಡುತ್ತಿರುವ ಅಪರೂಪದ ದೃಶ್ಯವನ್ನು ಮೀನುಗಾರರು ಸೆರೆಹಿಡಿದಿದ್ದಾರೆ.

ಇತ್ತೀಚೆಗೆ ಚೆನ್ನೈನ ಎನ್ ಸಿ ಎಸ್ ಸಿಎಮ್ ಎಂಬ ಕರಾವಳಿ ಸಂಶೋಧನಾ ಸಂಸ್ಥೆಯು ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿಯ ದಾವೆಯಲ್ಲಿ ಉದ್ದೇಶಿತ ವಾಣಿಜ್ಯ ಬಂದರು ನಿರ್ಮಾಣ ಯೋಜನಾ ಪ್ರದೇಶದಲ್ಲಿ ಕಡಲಾಮೆಗಳು ಬಂದು ಹೋಗಿರುವ, ಮೊಟ್ಟೆ ಇಡುವ ಬಗೆಗಿನ ಕುರುಹು ಅಥವಾ ಅದರ ಅವಶೇಷಗಳ ಕುರುಹುಗಳು ಕಂಡುಬಂದಿಲ್ಲ ಎಂದಿತ್ತು. ಈ ಬಗ್ಗೆ ಸಂಸ್ಥೆ ನಡೆಸಿದ ಸಮೀಕ್ಷೆಯನ್ನು ಉಲ್ಲೇಖಿಸಿ ಬಂದರು ನಿರ್ಮಾಣ ಕಂಪೆನಿಗೆ ಅನುಕೂಲಕರವಾಗುವಂತೆ ಉಚ್ಛ ನ್ಯಾಯಾಲಯಕ್ಕೆ ತನ್ನ ವರದಿಯನ್ನು ಸಲ್ಲಿಸಲಾಗಿದೆ ಅನ್ನೋ ಆರೋಪ ಕೂಡಾ ಕೇಳಿ ಬಂದಿತ್ತು. 

Shivamogga Riots: ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ ಸ್ವಾಮಿ, ಹರ್ಷನ ತಾಯಿ ಕಣ್ಣೀರು

ಇನ್ನು ವಾಣಿಜ್ಯ ಬಂದರು ನಿರ್ಮಾಣ ಯೋಜನಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಲು ರಸ್ತೆ ನಿರ್ಮಾಣ ಕಾರ್ಯ ಆರಂಭಿಸುವ ಸಂದರ್ಭದಲ್ಲಿ ಈ ಕಡಲತೀರದಲ್ಲಿ ಕಡಲಾಮೆಗಳು ಮೊಟ್ಟೆ ಇಡುತ್ತವೆ ಎಂದು ಮೀನುಗಾರರು ಸಹಾಯಕ ಆಯುಕ್ತರ ಗಮನ ಸೆಳೆದಿದ್ದರು. ಆದರೂ, ರಸ್ತೆ ನಿರ್ಮಾಣ ಕಾಮಗಾರಿ ಮಾತ್ರ ಮುಂದುವರಿದಿತ್ತು. ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳು ಕಡಲಾಮೆಗಳ ಮೊಟ್ಟೆಯಿಟ್ಟಿರುವ ಪ್ರದೇಶದಲ್ಲಿ ಮೊಟ್ಟೆಗಳನ್ನು  ಸಂರಕ್ಷಣೆ ಮಾಡುವ ಕೆಲಸವನ್ನು ಸ್ಥಳೀಯರ ಸಹಕಾರದಿಂದ ನಡೆಸುತ್ತ ಬಂದಿದೆ. 

ಈ ಒಂದು ತಿಂಗಳ ಅವಧಿಯಲ್ಲಿ ಈ ಭಾಗದಲ್ಲಿ 9ಕ್ಕೂ ಹೆಚ್ಚು ಕಡಲಾಮೆಗಳು ಇಟ್ಟಿರುವ ಸುಮಾರು2000ಕ್ಕೂ ಹೆಚ್ಚು ಮೊಟ್ಟೆಗಳ ಸಂರಕ್ಷಣೆಗೆ ಸ್ಥಳೀಯ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. ಅಲ್ಲದೇ, ಒಂದು ತಿಂಗಳ ಅವಧಿಯಲ್ಲಿ ಮೂರಕ್ಕೂ ಹೆಚ್ಚು ರಿಡ್ಲೆ ಜಾತಿಯ ಕಡಲಾಮೆಗಳು ರಕ್ತಸಿಕ್ತ ಅವಸ್ಥೆಯಲ್ಲಿ ಇಲ್ಲಿನ ಕಡಲತೀರದಲ್ಲಿ ಸಾವನ್ನಪ್ಪಿದ್ದವು. ಈ ಎಲ್ಲಾ ಕಾರಣಗಳಿಂದ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ವಾಣಿಜ್ಯ ಬಂದರು ಯೋಜನೆಗಾಗಿ ಸಿಆರ್ ಝೆಡ್ ನಿಯಮಗಳನ್ನು ಉಲ್ಲಂಘಿಸಿ ಇಲ್ಲಿನ ಕಡಲ ತೀರದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು. ಕಡಲಾಮೆಗಳು ಮೊಟ್ಟೆ ಇಡುವ ಕಡಲತೀರದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಬಾರದು ಎಂದು ಸ್ಥಳೀಯ ಮೀನುಗಾರರು ಬಂದರು ಒಳನಾಡು ಜಲ ಸಾರಿಗೆ ಇಲಾಖೆ ಮತ್ತು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.