Dec 6, 2023, 12:00 PM IST
ಚಿತ್ರದುರ್ಗ(ಡಿ.06): ಅದೊಂದು ಸರ್ಕಾರಿ ಗೋಮಾಳ. ಆದ್ರೆ ನಗರಸಭೆ ಅಧಿಕಾರಿಗಳು ಹಾಗೂ ರಿಯಲ್ ಎಸ್ಟೇಟ್ ಏಜೆಂಟರು ಶಾಮೀಲಾಗಿ 9 ಎಕರೆ ಜಮೀನನ್ನು ಕಬಳಿಸಲು ಸ್ಕೆಚ್ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು. ಆಕ್ರೋಶಗೊಂಡ ಗ್ರಾಮಸ್ಥರು ಜಮೀನನ್ನು ಉಳಿಸಲು ಹೋರಾಟಕ್ಕಿಳಿದಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.
ಅಲ್ಲಲ್ಲಿ ಗಿಡ ಗಂಟಿಗಳು.. ಅದರ ಮಧ್ಯೆ ಅಲ್ಲೋಮದು ಇಲ್ಲೊಂದು ಟೆಂಟ್ಗಳು.. ಮತ್ತೊಂದ್ಕಡೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ... ಇದು ಚಿತ್ರದುರ್ಗ ನಗರಕ್ಕೆ ಹೊಂದಿಕೊಂಡೇ ಇರುವ ಪಿಳ್ಳೇಕೆರೆನಹಳ್ಳಿ ಗ್ರಾಮದಲ್ಲಿ ಕಂಡು ಬಂದ ದೃಶ್ಯ.. ಚಿತ್ರದುರ್ಗ ನಗರದಕ್ಕೆ ಹೊಂದಿಕೊಂಡಿರೋ ಈ ಗ್ರಾಮದಲ್ಲಿ ನಿವೇಶನದ ಬೆಲೆ ಗಗನಕ್ಕೇರಿದೆ. ಇದೇ ಕಾರಣಕ್ಕೆ ಇಲ್ಲಿನ ಸರ್ಕಾರಿ ಗೋಮಾಳದ ಮೇಲೆ ರಿಯಲ್ ಎಸ್ಟೇಟ್ ದಂಧೆಕೋರರು ಕಣ್ಣಿಟ್ಟಿದ್ದಾರೆ...ಇದು ಇಲ್ಲಿನ ಗ್ರಾಮಸ್ಥರನ್ನು ರೊಚ್ಚಿಗೆಬ್ಬಿಸಿದೆ.
ಬಳ್ಳಾರಿ: ದಶಕಗಳಿಂದ ಉಳಿಮೆ ಮಾಡಿಕೊಂಡು ಬಂದಿದ್ದ ಜಮೀನು ಕೈತಪ್ಪುವ ಆತಂಕ!
ಇಲ್ಲಿನ ಒಂಬತ್ತು ಎಕರೆ ವಿಸ್ತೀರ್ಣದ ನಗರಸಭೆ ಜಮೀನನ್ನು ಕಬಳಿಸಲು ಸ್ಕೆಚ್ ಹಾಕಿರುವ ಕೆಲ ದಂಧೆಕೋರರು, ತಮ್ಮ ಹೆಸರಿಗೆ ಖಾತೆ ಮಾಡಿಕೊಂಡಿದ್ದಾರೆ. ಈ ಅಕ್ರಮಕ್ಕೆ ನಗರಸಭೆ ಅಧಿಕಾರಿಗಳು ಸಾಥ್ ನೀಡಿದ್ದಾರೆ. ಜಮೀನಿನ, ಇ-ಸ್ವತ್ತು ಮಾಡಿಸಲು, ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ. ಹೀಗಾಗಿ ಆಕ್ರೋಶಗೊಂಡ ಗ್ರಾಮಸ್ಥರು, ನಮ್ಮ ಜೀವ ಬೇಕಾದ್ರೆ ಬಿಡ್ತೀವಿ. ಆದ್ರೆ ಸರ್ಕಾರಿ ಜಾಗ ಕಬಳಿಸಲು ಬಿಡಲ್ಲ ಅಂತ ಹೋರಾಟಕ್ಕಿಳಿದಿದ್ದಾರೆ. ನಮ್ಮ ಗ್ರಾಮದ ಜಾಗದ ಮೇಲೆ ನಮಗೂ ಹಕ್ಕಿದೆ. ಈ ಜಾಗವನ್ನು ಸರ್ಕಾರಿ ಶಾಲೆ ಕಟ್ಟಲು ನೀಡಿ. ರುದ್ರಭೂಮಿಗೆ ಮೀಸಲಿಡಿ ಎಂದು ಆಗ್ರಹಿಸಿದ್ದಾರೆ.
ಕಡು ಬಡವರಿಗೆ ಹಣ ಕೊಟ್ರು ಒಂದು ಅಡಿ ಜಾಗವನ್ನು ಹೆಚ್ಚಾಗಿ ನೀಡಲು ನಗರಸಭೆ ಮೀನಾಮೇಷ ಎಣಿಸುತ್ತೆ.. ಅಂಥದ್ರಲ್ಲಿ ಈಗ ಉಳ್ಳವರ ಹೆಸರಿಗೆ ಅಧಿಕಾರಿಗಳು ಸರ್ಕಾರಿ ಜಮೀನು ಖಾತಾ ಮಾಡಿಕೊಡ್ತಿದ್ದಾರೆ.. ಇದಕ್ಕೆ ನಾವು ಅವಕಾಶ ಕೊಡಲ್ಲ.. ಈ ಜಾಗವನ್ನು ಗ್ರಾಮದ ರುದ್ರ ಭೂಮಿಯಾಗಿ ಪರಿವರ್ತಿಸಿ.. ಇಲ್ಲ ಸ್ವಂತ ಮನೆಯಿಲ್ಲದೇ ದಶಖಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿರುವ ನಿರ್ಗತಿಕರಿಗೆ ಈ ಜಾಗವನ್ನು ಕೊಡಿ ಎಂದು ಗ್ರಾಮಸ್ಥರು ಗುಡಿಸಲು ಹಾಕಿಕೊಂಡು ಪ್ರತಿಭಟಿಸುತ್ತಿದ್ದಾರೆ.
ಚಿತ್ರದುರ್ಗದಲ್ಲಿನ ಸರ್ಕಾರಿ ಗೋಮಾಳಗಳು ರಿಯಲ್ ಎಸ್ಟೇಟ್ ದಂಧೆಕೋರರ ಪಾಲಾಗ್ತಿವೆ. ಈ ಅಕ್ರಮಕ್ಕೆ ನಗರಸಭೆ ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳು ಸಾಥ್ ನೀಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಜಿಲ್ಲಾಡಳಿತ ಎಚ್ಚೆತ್ತು ಈ ಅಕ್ರಮಕ್ಕೆ ಬ್ರೇಕ್ ಹಾಕಿ ಸರ್ಕಾರಿ ಜಾಗವನ್ನು ಉಳಿಸಲು ಮುಂದಾಗಬೇಕಿದೆ.