Feb 1, 2022, 11:47 AM IST
ಕಾರವಾರ(ಫೆ.01): ಒಂದೆಡೆ ಹೆಕ್ಟೇರ್‌ಗೂ ಹೆಚ್ಚು ವಿಸ್ತಾರವಾದ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಗಾರ್ಡನ್. ಇನ್ನೊಂದೆಡೆ ಪಟ ಪಟನೇ ರೆಕ್ಕೆ ಬಡಿಯುತ್ತಾ ಹೂವಿಂದ ಹೂವಿಗೆ ಹಾರಿ ಮಕರಂದ ಹೀರುತ್ತಿರುವ ಪತಂಗಗಳು. ಮತ್ತೊಂದೆಡೆ ಈ ಸುಂದರ ಚಿಟ್ಟೆಗಳ ಹಾರಾಟ ಕಣ್ತುಂಬಿಕೊಳ್ಳುತ್ತಿರುವ ಪ್ರವಾಸಿಗರು. ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಗೋಟೆಗಾಳಿಯಲ್ಲಿ.
ಹೌದು, ಅರಣ್ಯ ಇಲಾಖೆ ಹಾಗೂ ಎನ್‌ಪಿಸಿಐಎಲ್ ಕೈಗಾದ ಸಿಎಸ್ಆರ್ ಅನುದಾನದಲ್ಲಿ ಸುಮಾರು ಒಂದು ಹೆಕ್ಟೇರ್ ಪ್ರದೇಶದಲ್ಲಿ ಚಿಟ್ಟೆಗಳಿಗಾಗಿಯೇ ಚಿಟ್ಟೆ ಪಾರ್ಕ್ ನಿರ್ಮಾಣ ಮಾಡಲಾಗಿದ್ದು, ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಸಮೃದ್ಧವಾಗಿರುವ ಪರಿಸರದಲ್ಲಿ ಹೇರಳವಾಗಿರುವ ಚಿಟ್ಟೆಗಳಿಗೆ ಉತ್ತಮ ವಾಸಸ್ಥಾನ ಕಲ್ಪಿಸುವ ಹಾಗೂ ಅವುಗಳಿಗೆ ಪೂರಕವಾದ ಆಹಾರವನ್ನು ಒದಗಿಸುವ ನಿಟ್ಟಿನಲ್ಲಿ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಅಲ್ಲದೇ, ಗಾರ್ಡನ್ ನಲ್ಲಿ ಚಿಟ್ಟೆಗಳ ಪ್ರಮುಖ ಆಹಾರ ಸಸ್ಯಗಳಾದ ತೇರಿನ ಹೂವು, ಪೆಂಟಾಸ್, ಮಿಲ್ಕ್ ಫೀಡ್, ಗೊಂಡೆ ಸೇರಿದಂತೆ 20ಕ್ಕೂ ಅಧಿಕ ಬಗೆಯ ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ಹೀಗಾಗಿ, ಪ್ರಮುಖ ಚಿಟ್ಟೆ ಪ್ರಭೇದಗಳಾದ ಆ್ಯಂಗ್ಲೆಡ್ ಪಿರೋಟ್, ಗ್ರೇ ಕೌಂಟ್, ಪಿಕೋಕ್ ಫೆನ್ಸಿ, ಗ್ರೇ ಫೆನ್ಸಿ, ಎಲ್ಲೋ ಫೆನ್ಸಿ, ಕ್ಲೇನ್ ಟೈಗರ್, ಸ್ಟ್ರೈಲ್ ಟೈಗರ್, ಸ್ಟ್ರೈಪ್ಡ್ ಬ್ಲ್ಯೂನಂತಹ ಅನೇಕ ಜಾತಿಯ ಚಿಟ್ಟೆಗಳು ಇಲ್ಲಿ ಕಾಣಿಸಿಕೊಳ್ಳುತ್ತಿದೆ. ಈ ಭಾಗದಲ್ಲಿ ಉತ್ತಮ ವಾತಾವರಣ ಇರುವ ಕಾರಣ ಇದೆಲ್ಲವೂ ಸಾಧ್ಯವಾಗಿದೆ ಎನ್ನುತ್ತಾರೆ ಅಧಿಕಾರಿಗಳು.
Bidar: ಮೈಲಾರ ಮಲ್ಲಣ್ಣ ದೇವಸ್ಥಾನದ ಅಭಿವೃದ್ಧಿಗೆ ಅಧಿಕಾರಿಗಳೇ ಕಂಟಕ..!
ಕಾರವಾರ- ಬೆಳಗಾವಿ ರಾಜ್ಯ ಹೆದ್ದಾರಿ ಸಾಗುವ ಗೊಟೆಗಾಳಿ ಬಳಿ ಈ ಚಿಟ್ಟೆ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಈ ಹಿಂದೆ ಈ ಪ್ರದೇಶ ಗಿಡಗಂಟಿಗಳಿಂದ ತುಂಬಿದ್ದ ಪಾಳು ಬಿದ್ದ ಪ್ರದೇಶವಾಗಿತ್ತು. ಆದರೆ ಇದೀಗ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಚಿಟ್ಟೆಗಳಿಗೋಸ್ಕರವೇ ಇಲ್ಲಿ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಅಲ್ಲದೇ, ಜನರು ಈ ಸೊಬಗನ್ನು ಸವಿಯಲೂ ಅನುಕೂಲವಾಗುವಂತೆ ವಾಕಿಂಗ್ ಪಾಥ್, ಕುಳಿತುಕೊಳ್ಳಲು ಆಸನ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಪಾರ್ಕ್ ಗೆ ಸ್ಥಳೀಯರು ಮಾತ್ರವಲ್ಲದೇ, ಪ್ರವಾಸಿಗರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇನ್ನು ಚಿಟ್ಟೆಗಳು ಹೇರಳವಾಗಿರುವ ಈ ಪ್ರದೇಶದಲ್ಲಿ ಇದೀಗ ಪಾರ್ಕ್ ನಿರ್ಮಾಣದಿಂದ ಅವುಗಳಿಗೆ ಒಂದಿಷ್ಟು ಅನುಕೂಲವಾಗಲಿದೆ. ಅವುಗಳ ಸಂತಾನೋತ್ಪತ್ತಿ, ಆಹಾರ ಕ್ರಮ ಇದರಿಂದ ಸಹಕಾರಿಯಾಗುವ ಭರವಸೆ ಇದೆ. ಅಲ್ಲದೇ, ಕಾಡುಗಳು ಆರೋಗ್ಯವಾಗಿದ್ದರೇ ಚಿಟ್ಟೆಗಳು ಹೇರಳವಾಗಿರುತ್ತವೆ ಎನ್ನುತ್ತಾರೆ ಚಿಟ್ಟೆಗಳ ಕುರಿತು ಸಂಶೋಧನೆ ನಡೆಸಿದವರು.
ಒಟ್ಟಿನಲ್ಲಿ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ನಿರ್ಮಾಣಗೊಂಡಿರುವ ಚಿಟ್ಟೆ ಪಾರ್ಕ್ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಹೆದ್ದಾರಿ ಪಕ್ಕದಲ್ಲಿಯೇ ಪಾರ್ಕ್ ಇರುವ ಕಾರಣ ನೋಡುಗರಿಗೆ ಹೆಚ್ಚು ಅನುಕೂಲಕರವಾಗಿದ್ದು, ರಾಜ್ಯ ಹಾಗೂ ಹೊರ ರಾಜ್ಯದ ಜನರು ಕೂಡಾ ಆರಾಮವಾಗಿ ಈ ಸ್ಥಳಕ್ಕೆ ಭೇಟಿ ನೀಡಿ ಸಮಯ ಕಳೆದು ಪ್ರಕೃತಿಯ ಸೊಬಗು ಅನುಭವಿಸಬಹುದಾಗಿದೆ.