ವಿಶೇಷವಾಗಿರುತ್ತೆ ಲಂಬಾಣಿ ತಾಂಡದ ಬೆಳಕಿನ ಹಬ್ಬ! ದೀಪಾವಳಿಯಲ್ಲಿ ಬಂಜಾರ ಯುವತಿಯರದ್ದೇ ಮೇಲುಗೈ!

Nov 13, 2023, 10:49 AM IST


ಬಂಜಾರ ಸಮುದಾಯದಲ್ಲಿ ದೀಪಾವಳಿ ಯುವತಿಯರ ಹಬ್ಬವಾಗಿದೆ. ಮದುವೆಯಾಗದ ಕನ್ಯೆಯರು ತಾಂಡಾದ ಎಲ್ಲರ ಮನೆಗಳಿಗೆ ತೆರಳಿ ಅಲ್ಲಿ ದೀಪಗಳನ್ನು(Deepavali) ಬೆಳಗಿಸುವುದು ಪದ್ಧತಿಯಾಗಿದೆ. ಮಣ್ಣಿನ ದೀಪದ ಆರತಿ ಹಿಡಿದುಕೊಂಡು ಮನೆ ಮನೆಗೆ ಹೋಗಿ ಹಾಡು ಹಾಡುತ್ತಾರೆ. ಆ ಮನೆಯವರು ಕನ್ಯೆಯರನ್ನ ಸ್ವಾಗತಿಸಿ ದೀಪದ ತಟ್ಟೆಗೆ  ಹಣ ಹಾಕುತ್ತಾರೆ. ತಾಂಡಾದ ಮುಖ್ಯ ಸ್ಥಳ ಸೇವಾಲಾಲ್ ದೇವಾಲಯದ(Sevalal temple) ಎದುರು ಕನ್ನೆಯರು, ಮಹಿಳೆಯರು ತಮ್ಮ ಸಂಪ್ರದಾಯ ಬದ್ಧ ಹಾಡು ಹೇಳುತ್ತಾ ನೃತ್ಯ ಮಾಡಿ ಸಂಭ್ರಮಿಸುತ್ತಾರೆ. ಅಷ್ಟೆ ಅಲ್ಲದೇ ಮದುವೆ ಫಿಕ್ಸ್ ಆಗಿರುವ  ಯುವತಿಯರನ್ನ ತಬ್ಬಿಕೊಂಡು ಅಳುವುದು  ರೂಡಿಯಲ್ಲಿದೆ. ದೀಪಾವಳಿಯ ಪಾಡ್ಯದ ದಿನ  ತಾಂಡ  ಮಹಿಳೆಯರು(Women) ಹಸುವಿನ ಸಗಣಿಯಿಂದ ಪಂಚ ಪಾಂಡವರ ಮೂರ್ತಿಗಳನ್ನ ತಯಾರಿಸುತ್ತಾರೆ. ಮನೆಯ ಅಂಗಳದಲ್ಲಿ ರಂಗೋಲಿ ಹಾಕಿ‌, ಫಸಲಿನ ಹೂವುಗಳನ್ನ ತಂದು ಅಲಂಕರಿಸಿ ಪೂಜಿಸಲಾಗುತ್ತದೆ. ಹೀಗೆ ಸಗಣಿಯಿಂದ‌ ಮಾಡಿದ ಪಾಂಡವರಿಗೆ  ಮೊಸರು ಹಾಕಿ ನೈವೇದ್ಯ ಅರ್ಪಿಸುತ್ತಾರೆ. ದೀಪದ ಆರತಿ‌ ಮೂಲಕ ಇಡೀ ಲಂಬಾಣಿ(Lambni) ಜನಾಂಗವು ಸ್ವಾಗತಿಸುವುದು ಹಬ್ಬದ ಆಚರಣೆಗಳಲ್ಲಿ ಮತ್ತೊಂದು ವೈಶಿಷ್ಟ್ಯ. 15 ದಿನಗಳ‌ ಹಿಂದಿನಿಂದಲೆ ದೀಪಾವಳಿ ಹಬ್ಬಕ್ಕೆ ತಯಾರಿ ಶುರುವಾಗುತ್ತೆ. ಪ್ರತಿನಿತ್ಯ ಸಂಜೆ ಲಂಬಾಣಿ‌ ಸಮುದಾಯದ ಹೆಂಗಳೆಯರೆಲ್ಲ ಸೇವಲಾಲ್ ದೇವಸ್ಥಾನದಲ್ಲಿ ಜಮಾಯಿಸ್ತಾರೆ. ತಾಂಡಗಳಲ್ಲಿನ ಮನೆತನದ ನವ ಯುವತಿಯರಿಗೆ ತಮ್ಮ ಪಾರಂಪರಿಕ ನೃತ್ಯ, ಹಾಡು, ಬಟ್ಟೆಯ ಮೇಲೆ ಕಸೂತಿ ಕಲಿಸುತ್ತಾರೆ. 15 ದಿನಗಳ ಬಳಿಕ ಹಬ್ಬದ ದಿನ ದೇವಸ್ಥಾನದಲ್ಲಿ ಕಸೂತಿ ಮಾಡಿದ್ದ ಬಟ್ಟೆಯನ್ನೇ ಧರಿಸುತ್ತಾರೆ.

ಇದನ್ನೂ ವೀಕ್ಷಿಸಿ:   ಈ ದೀಪಾವಳಿಗೆ ಗ್ರಹಗಳಿಂದಲೇ ಸಿಗಲಿದೆ ಭರ್ಜರಿ ಗಿಫ್ಟ್‌! ಯಾವ ರಾಶಿಗೆ ದೊರೆಯಲಿದೆ ಚಕ್ರವರ್ತಿ ಯೋಗ ?