- ನೆರೆ ಸಂತ್ರಸ್ತರ ಕಣ್ಣೀರು, ಅವಕಾಶವಿದ್ರು ಪರಿಹಾರ ನೀಡದ ಜಿಲ್ಲಾಡಳಿತ
- ಕಳೆದ ಮೂರು ವರ್ಷಗಳಿಂದ ಮಳೆಗೆ ಮನೆ ಬಿದ್ದು ಕಂಗಾಲಾಗಿರುವ ಕುಟುಂಬ
- ಅಧಿಕಾರಿಗಳ ನಿರ್ಲಕ್ಷಕ್ಕೆ 5 ಲಕ್ಷದ ಬದಲು ಸಿಕ್ಕಿದ್ದು 50 ಸಾವಿರ ಪರಿಹಾರ ಮಾತ್ರ!
ಧಾರವಾಡ (ಡಿ. 10): ಕಳೆದ ಮೂರು ವರ್ಷಗಳಿಂದ ಬಾರಿ ಬಾರಿ ಮಳೆಗೆ ನೆರೆ ಸಂತ್ರಸ್ಥರು (Flood Victims) ಸೋತು ಸುಣ್ಣವಾಗಿದ್ದಾರೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರು ನೆರೆ ಸಂತ್ರಸ್ತರಿಗೆ, ಮನೆ ಕಳೆದುಕೊಂಡವರಿಗೆ ಮನೆಗಳನ್ನ ಕೊಡಲು ಎ,ಬಿ,ಸಿ ಕೆಟಗೇರಿ ಅಂತ ವಿಭಜನೆ ಮಾಡಿ ಪರಿಹಾರವನ್ನ ಕೊಡುವ ವ್ಯವಸ್ಥೆ ತಂದಿದ್ದರು. ಆದರದು ಪ್ರಯೋಜನಕ್ಕೆ ಬರುತ್ತಿಲ್ಲ.
ಸಿಎಂ ಸ್ವಂತ ಜಿಲ್ಲೆಯಲ್ಲಿ (Dharwad) ಮಹಿಳೆಯೊಬ್ಬಳು ಮನೆಯಿಲ್ಲ ವಾಸ ಮಾಡಲಿಕ್ಕೆ ಎಂದು ಕಣ್ಣೀರು ಹಾಕಿದ್ದಾಳೆ. 2019 ರಲ್ಲಿ ಮಳೆಗೆ ಬಿದ್ದಿರುವ ಪಾಳು ಮನೆಯಲ್ಲಿ ವಾಸ ಮಾಡುತ್ತಿರುವ ಬಡ ಕುಟುಂಬಗಳು ಸರಕಾರದ ಪರಿಹಾರದ ಆಯ್ಕೆ ಪ್ರಕಾರ "ಎ" ಗ್ರೇಡ್ ಆಗಬೇಕಿತ್ತು, ಆದರೆ 'ಸಿ' ಗ್ರೇಡ್ ಹಾಕಿ ಕೇವಲ 50 ಸಾವಿರ ಪರಿಹಾರ ಕೊಟ್ಟು ಕೈ ಕಟ್ಟಿ ಕುಳಿತ ಜಿಲ್ಲಾಡಳಿತದ ವಿರುದ್ದ ಹಿಡಿಶಾಪವನ್ನ ಹಾಕುತ್ತಿದ್ದಾರೆ. ಪಾಳು ಬಿದ್ದ ಮನೆಯಲ್ಲಿ ವಾಸ ಮಾಡುತ್ತಿರುವ ಸಂತ್ರಸ್ಥ ಮಹಿಳೆ, ಚಂದ್ರಶೇಖರ ಚೌಡಿಮನಿ, ನೀಲವ್ವ ಸಲಕಿ, ಪ್ರಭು ಬಡಿಗೇರ ,ಮೂರು ಕುಟುಂಬಗಳು ಸದ್ಯ ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣ ವಾಗಿದೆ.
ಹೆಚ್ಚಿನ ಪರಿಹಾರಕ್ಕಾಗಿ ಸರಕಾರದ ಮೊರೆ ಹೊದ ಬಡ ಕುಟುಂಬಗಳಿಗೆ ಯಾವುದೇ ಪ್ರಯೋಜನ ಆಗಿಲ್ಲ. ಅಧಿಕಾರಿಗಳು ಈ ಗ್ರಾಮದತ್ತ ಸುಳಿದಿಲ್ಲ, ಅಧಿಕಾರಿಗಳ ನಿರ್ಲಕ್ಷಕ್ಕೆ 5 ಲಕ್ಷ ಪರಿಹಾರ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ನಮ್ಮ ಮನೆಯಲ್ಲಿ 7 ಜನ ವಾಸ ಮಾಡುತ್ತಿದ್ದೆವೆ, ಮಳೆ ಬಂದ್ರೆ ಎಲ್ಲಿ ಹೋಗೋಣ ಎಂದು ಗಳಗಳನೆ ಅತ್ತ ಮಹಿಳೆ ಕಣ್ಣೀರಿಟ್ಟಿದ್ದಾಳೆ.